ಭಾನುವಾರ, ಜೂಲೈ 12, 2020
22 °C

ಪ್ರಜಾಪ್ರಭುತ್ವದ ಮೌಲ್ಯ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾಪ್ರಭುತ್ವದ ಮೌಲ್ಯ ಉಳಿಸಿ

ಚಿತ್ರದುರ್ಗ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಕರೆ ನೀಡಿದರು.

ಬುಧವಾರ ಸಂಜೆ ಕಬೀರಾನಂದಾಶ್ರಮದಲ್ಲಿ ನಡೆದ 81ನೇ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಸ್ಲಾಂ ದೇಶಗಳಾದ ಈಜಿಪ್ಟ್ ಮತ್ತು ಲಿಬಿಯಾದಲ್ಲಿನ ಸರ್ವಾಧಿಕಾರ ಧೋರಣೆಯ ಆಡಳಿತದಿಂದ ಜನ ದಂಗೆ ಎದ್ದಿರುವುದನ್ನು ನಾವು ಕಾಣುತ್ತಿದ್ದೇವೆ. ಸರ್ವಾಧಿಕಾರದ ಆಡಳಿತವನ್ನು ಜನರು ಸಾಕಷ್ಟು ಸಹಿಸಿಕೊಂಡ ನಂತರ ತಿರುಗಿಬಿದ್ದರು. ಆದ್ದರಿಂದ ಪ್ರಜಾತಂತ್ರ ವ್ಯವಸ್ಥೆಯೇ ಅತ್ಯಂತ ಶ್ರೇಷ್ಠವಾದದ್ದು ಎಂದು ನುಡಿದರು.ಪ್ರಜಾತಂತ್ರ ವ್ಯವಸ್ಥೆ ಭಾರತದಲ್ಲಿ ಗಟ್ಟಿಯಾಗಿರುವಷ್ಟು ಯಾವ ದೇಶದಲ್ಲೂ ಇಲ್ಲ. ಇದು ಭಾರತದ್ದು ಯಶಸ್ಸು. ಭಾರತಕ್ಕೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಲು ಹಲವು ಮಹಾನ್ ವ್ಯಕ್ತಿಗಳು ಶ್ರಮಿಸಿದ್ದಾರೆ. ತ್ಯಾಗ, ಬಲಿದಾನದಿಂದ ಪಡೆದಿರುವ ಸ್ವಾತಂತ್ರ್ಯವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ನುಡಿದರು.ದೇಶದ ಐಕ್ಯತೆ, ಸಮಗ್ರತೆ, ಸಂಸ್ಕೃತಿ, ಕಲೆಯನ್ನು ಪೋಷಿಸಿ ಬೆಳೆಸುವ ಉತ್ತಮ ನಾಗರಿಕ ದೇಶ ಎನ್ನುವ ಕೀರ್ತಿ ಭಾರತಕ್ಕೆ ದೊರೆತಿದೆ. ಅಮೆರಿಕ, ರಷ್ಯಾ, ಬ್ರಿಟನ್ ಮುಂತಾದ ದೊಡ್ಡ ರಾಷ್ಟ್ರಗಳು ಸಹ ಭಾರತದತ್ತ ನೋಡುತ್ತಿವೆ ಎಂದು ನುಡಿದರು.ಎಲ್ಲ ಧರ್ಮಗಳು ಸಹ ಸನ್ಮಾರ್ಗ ತೋರುವ ಪ್ರಯತ್ನ ಮಾಡುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ದೇಶದ ಸಂಸ್ಕೃತಿ, ಪರಂಪರೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಣಿಪ್ಪಾಡಿ ಮಾತನಾಡಿ, ಸಾಮರಸ್ಯದ ಬದುಕು ಸಾಗಿಸುವ ಮೂಲಕ ಅಭಿವೃದ್ಧಿ ಸಾಧಿಸಬೇಕು. ಸಾಮರಸ್ಯ ಬೆಳೆಸಿಕೊಂಡು ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.ಬೆಳಗಾವಿ ಜಿಲ್ಲೆ ಇಂಚಲದ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಕೆ. ಮುಕುಡಪ್ಪ, ಮಾಜಿ ಶಾಸಕ ಎ.ವಿ. ಉಮಾಪತಿ, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜು, ಲಿಟ್ಲ್‌ಫೇರಿಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ. ಸಂಜೀವರೆಡ್ಡಿ, ಕಾಂಗ್ರೆಸ್ ಮುಖಂಡ ಮೆಹಬೂಬ್‌ಪಾಷಾ, ಜಿ.ಪಂ. ಸದಸ್ಯರಾದ ಗಿರಿ ಎಂ. ಜಾನಕಲ್, ಡಿ. ರಮೇಶ್, ಎಸ್. ನವೀನ್, ಕೆ.ಎಂ. ವೀರೇಶ್, ಎಂ. ತಿಪ್ಪೇಸ್ವಾಮಿ, ಜಿ. ಬೆನಕಪ್ಪ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಹಂಸಗಾಯತ್ರಿ ಅವರಿಂದ ವೇದ ಘೋಷ ನಡೆಯಿತು. ರಕ್ಮಾ ಸುರೇಶ್ ಪ್ರಾರ್ಥಿಸಿದರು. ಬದರಿನಾಥ್ ಸ್ವಾಗತಿಸಿದರು. ರಮಾದೇವಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.