ಸೋಮವಾರ, ಮೇ 17, 2021
21 °C

ಪ್ರತಿದಿನ 2,000 ಮಂದಿ ಕೃಷಿಯಿಂದ ವಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `90ರ ದಶಕದಲ್ಲಿ ನಡೆದ ಉದಾರೀಕರಣದ ಫಲವಾಗಿ ಪ್ರತಿ ದಿನ ಎರಡು ಸಾವಿರ ಮಂದಿ ಕೃಷಿ ತೊರೆಯುತ್ತಿದ್ದಾರೆ. 20 ವರ್ಷಗಳಲ್ಲಿ ಒಟ್ಟು 70 ಲಕ್ಷ ಮಂದಿ ವ್ಯವಸಾಯದಿಂದ ವಿಮುಖರಾಗಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಈ ವಿಮುಖತೆ ಇನ್ನೂ ಮುಂದುವರಿಯಲಿದೆ~ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಆತಂಕ ವ್ಯಕ್ತಪಡಿಸಿದರು.ಕಾರ್ಯನಿರತ ವೃತ್ತಿಪರ ತರಬೇತಿ ಹಾಗೂ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಜೋಸ್ ವೆಟ್ಟಿಕಟ್ಟಿಯಲ್ ಅವರ ಸ್ಮರಣಾರ್ಥ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಉದಾರೀಕರಣದ ಎರಡು ದಶಕಗಳ ತರುವಾಯ ಗ್ರಾಮೀಣ ಭಾರತ~ ವಿಷಯ ಕುರಿತು ಅವರು ಮಾತನಾಡಿದರು.`ದೇಶದಲ್ಲಿ ನಗರಗಳಿಗೆ ವಲಸೆ ಹೋಗುತ್ತಿರುವವರ ಪ್ರಮಾಣ ಅಧಿಕವಾಗಿದೆ. ಜನಗಣತಿ ಹಾಗೂ ರಾಷ್ಟ್ರೀಯ ಮಾದರಿ ಸಮೀಕ್ಷೆಗಳು ದೀರ್ಘಾವಧಿಯ ವಲಸೆಯನ್ನು ಮಾತ್ರ ಗುರುತಿಸುತ್ತಿವೆ. ಹಳ್ಳಿಯಲ್ಲಿದ್ದ ಕೃಷಿಕ ನಾಳೆ ಬೇರೊಂದು ಊರಲ್ಲಿ ಇಟ್ಟಿಗೆ ಹೊರುತ್ತಾನೆ, ಮಹಾನಗರಗಳಲ್ಲಿ ಕೂಲಿ ಮಾಡುತ್ತಾನೆ.ಇಂತಹ ಅಸ್ತಿತ್ವ ರಹಿತ ವಲಸೆಯನ್ನು ಯಾರೂ ಗಮನಿಸುತ್ತಿಲ್ಲ. ನಗರಗಳಿಗೆ ಜನರ ಸಂಚಾರ ಹೆಚ್ಚಾಗಿದೆ. ಜಾರ್ಖಂಡ್‌ನ ಸುಮಾರು ಒಂದರಿಂದ 2 ಲಕ್ಷ ಹದಿಹರೆಯದ ಹುಡುಗಿಯರು ದೆಹಲಿಯಲ್ಲಿ ಇಪ್ಪತ್ನಾಲ್ಕು ಗಂಟೆಯೂ ದುಡಿಯುವಂತಾಗಿದೆ~ ಎಂದರು.`ಉಕ್ಕು ತಯಾರಿಕಾ ಘಟಕಕ್ಕಾಗಿ ಒಡಿಶಾದಲ್ಲಿ ಖಾಸಗಿ ಕಂಪೆನಿಯೊಂದು ಬಡವರ 3800 ಎಕರೆ ಕೃಷಿ ಭೂಮಿಯನ್ನು ಖರೀದಿಸಿತು. ಆದರೆ ಅಲ್ಲಿ ಘಟಕ ಸ್ಥಾಪನೆಯಾಗಲೇ ಇಲ್ಲ. 15 ವರ್ಷಗಳ ಬಳಿಕ ಅದನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಪರಿವರ್ತಿಸಿದ ಕಂಪೆನಿ ಅದನ್ನು ಪ್ರತಿ ಎಕರೆಗೆ 42 ಲಕ್ಷ ರೂಪಾಯಿಯಂತೆ ಬೇರೆ ಉದ್ಯಮಿಗಳಿಗೆ ಮಾರಾಟ ಮಾಡಿತು.ಖಾಸಗಿಯವರ ಬದಲಿಗೆ ಸರ್ಕಾರವೇ ಜಮೀನು ಖರೀದಿಸುವುದಾಗಿ ನೂತನ ಭೂ ಮಸೂದೆ ಸಾರುತ್ತಿದೆ. ಇದು ಸರ್ಕಾರವೇ ದಲ್ಲಾಳಿಯಾಗಿ ಖಾಸಗಿಯವರಿಗೆ ಭೂಮಿ ಒದಗಿಸುವ ಹುನ್ನಾರ. ಎಲ್ಲಾ ವಿಶೇಷ ಆರ್ಥಿಕ ವಲಯಗಳೂ ರಿಯಲ್ ಎಸ್ಟೇಟ್ ವ್ಯವಹಾರವೇ ಆಗಿದೆ~ ಎಂದು ಟೀಕಿಸಿದರು.`ಉದಾರೀಕರಣ ಜಾರಿ ಸಂದರ್ಭದಲ್ಲಿ ಕೇಂದ್ರದ ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಮಾಡಿದ ಐತಿಹಾಸಿಕ ಭಾಷಣದಲ್ಲಿ ಆರ್ಥಿಕ ಸ್ವಾತಂತ್ರ್ಯ ಕಾಪಾಡಲು ಕೆಲವು ತ್ಯಾಗ ಅಗತ್ಯ ಎಂದರು.ಆನಂತರ ಮಹಾನ್ ತ್ಯಾಗಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಕ್ಷಾಮವನ್ನು ಹತ್ತಿಕ್ಕಬೇಕಿದ್ದ ಸರ್ಕಾರ ಕ್ಷಾಮ ಎಂಬ ಪದವನ್ನೇ ತೆಗೆದು ಹಾಕಿತು. ಈಗಲೂ ವಿದರ್ಭ ಪ್ರದೇಶದಲ್ಲಿ 3ರಿಂದ 4 ಲಕ್ಷ ಹೆಣ್ಣುಮಕ್ಕಳಿಗೆ ಮದುವೆ ಮಾಡುವಷ್ಟು ಹಣ ಪೋಷಕರ ಬಳಿ ಇಲ್ಲ. ಅದೇ ಪ್ರದೇಶದಲ್ಲಿ ರಾಜಕಾರಣಿಗಳ ಕುಟುಂಬಕ್ಕೆ ಸೇರಿದ ಎರಡು ಶ್ರೀಮಂತ ಮದುವೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚಾಯಿತು~ ಎಂದು ವ್ಯಂಗ್ಯವಾಡಿದರು.`ಭಾರತ ಹೊಳೆಯುತ್ತಿದೆ (ಇಂಡಿಯಾ ಶೈನಿಂಗ್) ಎನ್ನುವ ಮಾತು ಸುಳ್ಳಲ್ಲ. ಅತಿ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಆದರೆ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶ 134ನೇ ಸ್ಥಾನದಲ್ಲಿದೆ. ಹಸಿವಿನಿಂದ ತೀವ್ರ ಬಳಲುತ್ತಿರುವ 85 ದೇಶಗಳಲ್ಲಿ ಭಾರತದ್ದು 67ನೇ ಸ್ಥಾನ. ಜಿಂಬಾಬ್ವೆಗಿಂತ ಒಂದು ಹೆಜ್ಜೆ ಮಾತ್ರ ನಾವು ಮುಂದಿದ್ದೇವೆ. ಪ್ರತಿ ಮನೆಯಲ್ಲಿಯೂ ಬೆಳ್ಳಿ ಲೋಟದಲ್ಲಿ ಹಾಲು ಕೊಡುವ ಸಂಪ್ರದಾಯ ಕೆಲವು ದಶಕಗಳ ಹಿಂದೆ ರೂಢಿಯಲ್ಲಿತ್ತು. ಆದರೆ ಈಗ ಕೃಷಿಕರ ಮಕ್ಕಳಿಗೇ ಹಾಲು ಲಭಿಸದಂತಹ ಸ್ಥಿತಿ ಉದ್ಭವಿಸಿದೆ~ ಎಂದರು.`ಪ್ರಸ್ತುತ ಪ್ರತಿ ಭಾರತೀಯನಿಗೆ ಸರಾಸರಿ 438 ಗ್ರಾಂ ಆಹಾರ ಲಭಿಸುತ್ತಿದೆ. ಎರಡು ದಶಕಗಳ ಹಿಂದೆ 510 ಗ್ರಾಂ ಆಹಾರ ದೊರೆಯುತ್ತಿತ್ತು. ಆದರೆ ಸರ್ಕಾರ ಮಾತ್ರ ಬಡತನ ಪ್ರಮಾಣ ಕುಸಿಯುತ್ತಿದೆ ಎನ್ನುತ್ತದೆ. ಸರ್ಕಾರ, ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿಯನ್ನು ಸಂತೃಪ್ತಗೊಳಿಸುವ ಉದ್ದೇಶದಿಂದ ಹಣಕಾಸು ಪಂಡಿತರು ಶೇ 19ಕ್ಕೆ ಬಡತನ ಪ್ರಮಾಣ ಕುಸಿದಿದೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ. ವಾಸ್ತವವಾಗಿ ಬಡತನದ ಪ್ರಮಾಣ ಶೇ 38ರಷ್ಟು ಇತ್ತು~ ಎಂದು ವಿವರಿಸಿದರು.`ಮಹಾರಾಷ್ಟ್ರದಲ್ಲಿ ಬಿಸಿಯೂಟಕ್ಕಾಗಿ ಮಕ್ಕಳಿಗೆ ತಲಾ 3 ರೂಪಾಯಿ ನಿಗದಿಪಡಿಸಲಾಗಿದೆ. ತೊಗರಿ ಬೇಳೆ ಪ್ರತಿ ಕೆ.ಜಿ.ಗೆ 100 ರೂಪಾಯಿ ದಾಟಿರುವಾಗ ಸಾಂಬಾರು ಸಹಜವಾಗಿಯೇ ನೀರು ನೀರಾಗುತ್ತದೆ. ಕೆಲವೆಡೆ ಪ್ರೀ ಮಿಕ್ಸ್ ಆಹಾರವನ್ನು ಕಾರ್ಪೊರೇಟ್ ಕಂಪೆನಿಗಳು ನೀಡುತ್ತಿವೆ. ಆದರೆ ಇದು ಎಷ್ಟರ ಮಟ್ಟಿಗೆ ಬಿಸಿಯೂಟವಾದೀತು, ತಾಜಾ ಇದ್ದೀತು ಎಂಬುದು ಪ್ರಶ್ನಿಸಬೇಕಾದ ವಿಚಾರ~ ಎಂದರು.ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಒಡಿಶಾ ರಾಜ್ಯದ ಮಾಹಿತಿ ಆಯುಕ್ತ ಜಗದಾನಂದ, ಸಂಸ್ಥೆಯ ಅಧ್ಯಕ್ಷ ಆಂಟೋನಿ ಕರಿಯಿಲ್, ಉಪಾಧ್ಯಕ್ಷೆ ಕೋಯಿಲಿ ರಾಯ್, ಕಾರ್ಯನಿರ್ವಾಹಕ ನಿರ್ದೇಶಕ ಆಲ್ಬರ್ಟ್ ಜೋಸೆಫ್ ಇತರರು ಕಾರ್ಯಕ್ರಮದಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.