ಬುಧವಾರ, ಜೂಲೈ 8, 2020
29 °C

ಪ್ರತಿಪಕ್ಷಗಳ ಬಣ್ಣ ಬಯಲು ಮಾಡುವೆ-ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಪಕ್ಷಗಳ ಬಣ್ಣ ಬಯಲು ಮಾಡುವೆ-ಸಿ.ಎಂ

ಬೆಂಗಳೂರು: `ವಿಧಾನಮಂಡಲದ ಅಧಿವೇಶನವನ್ನು ಬಹಿಷ್ಕರಿಸಿರುವ ಪ್ರತಿಪಕ್ಷಗಳ ಉದ್ದೇಶವನ್ನು ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರ ಮುಂದಿಡುತ್ತೇನೆ~ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಹೇಳಿದರು.ವಿಧಾನ ಪರಿಷತ್ತಿನಲ್ಲಿ 2011-12ನೇ ಸಾಲಿನ ವಿವಿಧ ಇಲಾಖೆಗಳ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಹುಪಾಲು ಸಮಯವನ್ನು ಪ್ರತಿಪಕ್ಷಗಳು ಹಾಗೂ ರಾಜ್ಯಪಾಲರ ವಿರುದ್ಧ ಟೀಕೆ ಮಾಡುವುದಕ್ಕಾಗಿಯೇ ಬಳಸಿಕೊಂಡರು.`ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಬಾರದು ಎಂಬ ಏಕೈಕ ಉದ್ದೇಶದಿಂದಲೇ ಪ್ರತಿಪಕ್ಷಗಳು ಅಧಿವೇಶನಕ್ಕೆ ಬಹಿಷ್ಕಾರ ಹಾಕಿವೆ~ ಎಂದು ಆರೋಪಿಸಿದ ಅವರು, `ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸುವುದರ ಜತೆಗೆ, ಸದನದಲ್ಲಿ ಸಮರ್ಥ ಉತ್ತರ ನೀಡಲು ಸರ್ಕಾರ ಸಿದ್ಧವಿತ್ತು. ಈ ಹಿಂದಿನ ಸರ್ಕಾರಗಳ ಸಾಧನೆಗಳನ್ನು ಪ್ರತಿಪಕ್ಷಗಳು ಹೋಲಿಕೆ ಮಾಡಲು ಕೂಡ ಅವಕಾಶವಿತ್ತು. ಆದರೆ, ಕುಂಟು ನೆಪ ಹೇಳಿ ಅಧಿವೇಶನ ಬಹಿಷ್ಕರಿಸಿರುವುದರಿಂದ ಪ್ರತಿಪಕ್ಷಗಳಿಗೆ ಪ್ರಜಾತಂತ್ರ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದಂತಾಗಿದೆ~ ಎಂದು ಟೀಕಿಸಿದರು.

ನಿವೇಶನ ವಾಪಸು: ಸಿಎಂ ಸವಾಲು
`ಜಿ~ ಕೆಟಗಿರಿಯಲ್ಲಿ ಈ ಹಿಂದೆ ಎರಡು-ಮೂರು ನಿವೇಶನ ಪಡೆದಂತಹ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ನಿವೇಶನಗಳನ್ನು ಹಿಂತಿರುಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು.`ನನ್ನ ಮಗನಿಗೆ ಮುಖ್ಯಮಂತ್ರಿಗಳ ಕೋಟಾದಡಿ `ಜಿ~ ಕೆಟಗಿರಿಯಲ್ಲಿ ನಿವೇಶನ ನೀಡಿದ್ದಕ್ಕೆ ಪ್ರತಿಪಕ್ಷಗಳು ಬೊಬ್ಬೆ ಹೊಡೆದವು. ಧಾರಾವಾಹಿ ರೀತಿ ದಾಖಲೆ ಪತ್ರ ಬಿಡುಗಡೆ ಮಾಡಿದವು. ಕೂಡಲೇ ನನ್ನ ಮಗನ ನಿವೇಶನವನ್ನು ವಾಪಸ್ ನೀಡಿದೆ. ಇದೇ ರೀತಿ `ಜಿ~ ಕೆಟಗರಿಯಲ್ಲಿ ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು 2-3 ನಿವೇಶನ ಪಡೆದಿಲ್ಲವೇ? ಈ ರೀತಿ ಪಡೆದ ನಿವೇಶನಗಳನ್ನು ಪ್ರತಿಪಕ್ಷಗಳ ಶಾಸಕರು ವಾಪಸ್ ನೀಡುವಂತೆ ಈ ಸದನದ ಮೂಲಕ ನಾನು ಸವಾಲು ಹಾಕುತ್ತೇನೆ~ ಎಂದರು. `ಮೈಸೂರಿನಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು 45-46 ನಿವೇಶನಗಳನ್ನಾಗಿ ಪರಿವರ್ತಿಸಿ ಅಪ್ಪ- ಮಕ್ಕಳೇ ಹಂಚಿಕೊಂಡರು. ಅವರೇನು ಅದನ್ನು ವಾಪಸ್ ಕೊಡುತ್ತಾರೆಯೇ?~ ಎಂದೂ ಯಡಿಯೂರಪ್ಪ ಯಾರ ಹೆಸರನ್ನೂ ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.ಅಲ್ಲದೆ, `ಈ ಹಿಂದೆ ಸ್ವಾರ್ಥಕ್ಕಾಗಿ ಡಿನೋಟಿಫೈ ಮಾಡಿದಂತಹ ಜಾಗವನ್ನು ಕೂಡ ವಾಪಸ್ ನೀಡಲು ಪ್ರತಿಪಕ್ಷಗಳ ಮುಖಂಡರು ಸಿದ್ಧರಿದ್ದಾರೆಯೇ~ ಎಂದು ಪ್ರಶ್ನಿಸಿದರು.`ನಮ್ಮಲ್ಲಿ ಪ್ರಾಣಕ್ಕೆ ಪ್ರಾಣ ಕೊಡುವ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ, ಮಾಜಿ ಮುಖ್ಯಮಂತ್ರಿಗೆ ದಾಖಲೆ ಪತ್ರಗಳನ್ನು ತಲುಪಿಸುವ ಅಧಿಕಾರಿಗಳೂ ಇದ್ದಾರೆ~ ಎಂದು ಆರೋಪಿಸುವ ಮೂಲಕ ಸರ್ಕಾರಿ ದಾಖಲೆ ಪತ್ರ ಸೋರಿಕೆಯಾಗುವ ಸಂಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

6 ತಿಂಗಳಲ್ಲಿ ವರ್ಚಸ್ಸು ವೃದ್ಧಿ: `ಮುಂದಿನ ಎರಡು ವರ್ಷಗಳಲ್ಲಿ ಅಭಿವೃದ್ಧಿಯೇ ನಮ್ಮ ಮೂಲಮಂತ್ರ. ಇನ್ನು, ಆರು ತಿಂಗಳಲ್ಲಿ ಸರ್ಕಾರದ ವರ್ಚಸ್ಸು ವೃದ್ಧಿಸಲು ಪ್ರಯತ್ನ ಮಾಡುತ್ತೇವೆ. ಪ್ರಗತಿ ಜತೆಗೆ ಸರ್ಕಾರದ ವರ್ಚಸ್ಸು ಕೂಡ ನಮಗೆ ಮುಖ್ಯವಾಗಿದೆ~ ಎಂದು ಹೇಳಿದರು.`ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದ ಸಂದರ್ಭದಲ್ಲಿ ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಸರ್ಕಾರದ ವರ್ಚಸ್ಸಿನ ಬಗ್ಗೆ ಅವರು ಸಮಾಧಾನ ವ್ಯಕ್ತಪಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ಆರು ತಿಂಗಳು ಕಾಲಾವಕಾಶ ಕೊಡಿ. ಜನ ಮೆಚ್ಚುವಂತಹ ಆಡಳಿತ ನೀಡುತ್ತೇವೆ ಎಂದು ಅಡ್ವಾಣಿ ಅವರಿಗೆ ಭರವಸೆ ನೀಡಿ ಬಂದಿದ್ದೇನೆ~ ಎಂದು ಯಡಿಯೂರಪ್ಪ ತಿಳಿಸಿದರು.`ಆಡಳಿತದಲ್ಲಿ ಸುಧಾರಣೆ ತರುವುದಕ್ಕಾಗಿ ಮಂತ್ರಿಗಳು ಕೂಡ ಇನ್ನು ಮುಂದೆ ವಾರದಲ್ಲಿ ಮೂರು ದಿನ ವಿಧಾನಸೌಧದಲ್ಲಿ ಕೂತು ಕೆಲಸ ಮಾಡಬೇಕು. ಇಲ್ಲದಿದ್ದರೆ ನಾನು ಬಿಡೋದಿಲ್ಲ~ ಎಂದು ಅವರು ತಾಕೀತು ಮಾಡಿದರು.ಮಾದರಿ ರಾಜ್ಯ: `ಇನ್ನೆರಡು ವರ್ಷಗಳಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಪ್ರಯತ್ನ ನಡೆಸುತ್ತೇನೆ. ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯವನ್ನು ಒಂದನೇ ಸ್ಥಾನಕ್ಕೆ ಏರಿಸುವುದು ಕೂಡ ನಮ್ಮ ಗುರಿಯಾಗಿದೆ~ ಎಂದು ಘೋಷಿಸಿದರು.`ಮುಂದಿನ ಎರಡು ವರ್ಷಗಳಲ್ಲಿ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುವುದಕ್ಕೆ ನಮ್ಮ ಆದ್ಯತೆ. ತೆರಿಗೆ ಸೋರಿಕೆ ತಡೆಗಟ್ಟುವುದರ ಜತೆಗೆ ಮುಂದಿನ ವರ್ಷ ಒಂದು ಲಕ್ಷ ಕೋಟಿ ರೂಗಳ ಬಜೆಟ್ ಮಂಡಿಸಲು ಪ್ರಯತ್ನ ಮಾಡುತ್ತೇನೆ. ಆಡಳಿತದಲ್ಲಿ ಸುಧಾರಣೆ ತಂದು ಪಾರದರ್ಶಕ ಆಡಳಿತ ಮೂಡಿಸುವುದು ನಮ್ಮ ಗುರಿ. ಹೀಗಾಗಿ, ಇನ್ನೆರಡು ವರ್ಷ ಪ್ರಾಮಾಣಿಕ ಉನ್ನತ ಅಧಿಕಾರಿಗಳನ್ನು ಬದಲಾವಣೆ ಮಾಡುವುದಿಲ್ಲ.ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯ~ ಎಂದು ಎಚ್ಚರಿಕೆ ನೀಡಿದರು.

ಇವರೇನು ಪಾಳೇಗಾರರೇ?: “ `ಭಾಗ್ಯಲಕ್ಷ್ಮಿ~ ಫಲಾನುಭವಿ ತಾಯಂದಿರಿಗೆ ಒಂದು ಸೀರೆ ಕೊಟ್ಟರೂ ಅದಕ್ಕೆ ಪ್ರತಿಪಕ್ಷಗಳು ಅವ್ಯವಹಾರದ ಲೇಪ ಹಚ್ಚುತ್ತಿವೆ. ಒಂದಲ್ಲಾ ಏಳು ಸೀರೆ ಕೊಡುತ್ತೇನೆ. ಅದನ್ನು ಯಾರು ತಡೆಯುತ್ತಾರೋ ನೋಡೋಣ. ಬಡ ಹೆಣ್ಣು ಮಕ್ಕಳಿಗೆ ಒಂದು ಸೀರೆ ಕೊಡುವುದು ಕೂಡ ಅಪರಾಧವೇ?~ ಸರ್ಕಾರದ ಕಾರ್ಯಕ್ರಮಗಳನ್ನು ತಡೆಯಲು ಇವರೇನು ಪಾಳೇಗಾರರೇ?ಬಹುಮತವಿರುವ ಸರ್ಕಾರಕ್ಕೆ ಕಾರ್ಯಕ್ರಮಗಳನ್ನು ನಿರ್ಧರಿಸುವ ಹಕ್ಕಿದೆ. ಅದನ್ನು ಪ್ರಶ್ನಿಸಲು ಇವರ‌್ಯಾರು?ಎಂದು ಹರಿಹಾಯ್ದರು.`ಒಂದು ದೇವಸ್ಥಾನಕ್ಕೆ ಹಣ ಕೊಟ್ಟರೂ ಅದಕ್ಕೂ ಟೀಕೆ. ಹೌದು, ನನಗೆ ದೇವರ ಬಗ್ಗೆ ನಂಬಿಕೆಯಿದೆ. ನೀವು (ಪ್ರತಿಪಕ್ಷಗಳು) ಕೈಬಿಟ್ಟರೂ ಆ ದೇವರ ರಕ್ಷಣೆ ನನಗಿದೆ. ದೇವರು, ಪಕ್ಷದ ರಾಷ್ಟ್ರೀಯ ನಾಯಕತ್ವ, ನನ್ನ ಸಚಿವರು ಹಾಗೂ ಜನರ ರಕ್ಷಣೆಯಿಂದಲೇ ನಾನು ಅಧಿಕಾರದಲ್ಲಿ ಮುಂದುವರಿದಿದ್ದೇನೆ~ ಎಂದು ಹೇಳಿಕೊಂಡರು.`ಮೂರು ವರ್ಷಗಳಲ್ಲಿ ಹಲವು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಪ್ರಕೃತಿ ವಿಕೋಪ, ಪ್ರತಿಪಕ್ಷಗಳ ಅಸಹಕಾರ- ಆಧಾರರಹಿತ ಆರೋಪ, ಶಾಸಕರನ್ನು ಒಡೆದು ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನಡುವೆಯೂ ಸಮಸ್ಯೆಗಳನ್ನು ಮೆಟ್ಟಿ ನಿಂತು ಅಪ್ರತಿಮ ಸಾಧನೆ ಮಾಡಿದ್ದೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ಎಲ್ಲ ತಪ್ಪು- ಒಪ್ಪುಗಳನ್ನು ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ~ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. `ಅಪಪ್ರಚಾರ, ಗೊಂದಲ ಮೂಡಿಸುವುದು ಪ್ರತಿಪಕ್ಷಗಳಿಗೆ ಗೌರವ ತರುವಂಥದ್ದಲ್ಲ. ಇನ್ನೆರಡು ವರ್ಷ ಕಾಯಿರಿ. ಚುನಾವಣಾ ಅಖಾಡಕ್ಕೆ ಇಳಿಯೋಣ. ಎಲ್ಲವೂ ಚುನಾವಣೆಯಲ್ಲಿ ನಿರ್ಧಾರವಾಗಲಿ. ಇನ್ನು ಮುಂದೆ ನಿತ್ಯ ನಿಮ್ಮ ಆಧಾರರಹಿತ ಆರೋಪ ಸಹಿಸಲು ಸಾಧ್ಯವಿಲ್ಲ. ಜನ ಕೂಡ ಸಹಿಸಲಾರರು~ ಎಂದು ಟೀಕಾಪ್ರಹಾರ ನಡೆಸಿದರು. ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳು ರಾಜಭವನ ಹಾಗೂ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಕೇಂದ್ರಕ್ಕೆ ಶಿಫಾರಸು ಮಾಡಿದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ನಡೆದ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.