ಶನಿವಾರ, ಜೂನ್ 19, 2021
26 °C

ಪ್ರತಿಭಾ ತಾಲೀಮು

ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

ಪ್ರತಿಭಾ ತಾಲೀಮು

ಒಮ್ಮೆ ಪ್ರೀತಿಸುವ, ಇನ್ನೊಮ್ಮೆ ಕೋಪಿಸಿಕೊಳ್ಳುವ ಯುವ ದಂಪತಿ, ಪ್ರೀತಿಯನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟು ಹುಡುಗಿ ಹಿಂದೆ ಅಲೆಯುವ ಹುಡುಗ, ಪದೇ ಪದೇ ಕೆಲಸ ಬದಲಿಸುವ ವ್ಯಕ್ತಿ, ತನಗೆ ಏನು ಬೇಕು ಎಂಬ ಸ್ಪಷ್ಟ ಅರಿವಿಲ್ಲದೇ ಹುಡುಕಾಟದಲ್ಲಿ ತೊಡಗಿದ ಉತ್ಸಾಹಿ ಯುವಕ, ಅವರು ಹೋಗುವೆಡೆಗಳಲ್ಲಿ `ನೀನೇ ಸಾಕಿದ ಗಿಣಿ..~ ಎಂದು ಹಾಡುತ್ತಾ ದುತ್ತನೆ ಎದುರಾಗುವ ಹುಚ್ಚ.ಇಷ್ಟು ಸೀಮಿತ ಪಾತ್ರಗಳನ್ನು ಇಟ್ಟುಕೊಂಡು `ನೀವೂ ಸರದಿಯಲ್ಲಿದ್ದೀರಿ..~ ಕಿರುಚಿತ್ರ ರೂಪಿಸಿದೆ ದರ್ಪಣ ತಂಡ. ಇದರಲ್ಲಿ ಮಹಾನಗರದ ಜಂಜಡದ ಬದುಕಿನಲ್ಲಿ ತಂದೆ ತಾಯಿಗಳಿಂದ ದೂರವಾಗಿ ಬದುಕುತ್ತಿರುವ ಸಣ್ಣಪ್ರಾಯದ ದಂಪತಿಯ ಕತೆ ಹೆಚ್ಚು ಆಪ್ತ ಎನಿಸುತ್ತದೆ.ಏಕತಾನತೆಯಿಂದ ಬೇಸತ್ತು ಥ್ರಿಲ್‌ಗಾಗಿ ಮಿಡಿದು ದುರಂತ ಅಂತ್ಯ ಕಾಣುವ ಈ ಕತೆಯೊಳಗೆ ಭಾವನೆಗಳ ಮಹಾಪೂರವೇ ಇದೆ. ಹುಡುಗಿಯನ್ನು ನೋಡುತ್ತಾ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವ ಯುವಕನ ಕತೆ ಹೊಸತೇನೂ ಅಲ್ಲ.ಆದರೆ ಒಂದು ಕಡೆ ನೆಲೆ ನಿಲ್ಲದೆ ನಿರಂತರವಾಗಿ ಉದ್ಯೋಗ ಬದಲಿಸುವ ವ್ಯಕ್ತಿ ನಮ್ಮ ನಡುವೆಯೂ ಇದ್ದಾನೆ ಎನಿಸದೇ ಇರದು. ಹೀಗೆ ಚಿಕ್ಕ ಕತೆಯನ್ನು ಉತ್ತಮ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ದಾಟಿಸಿದ್ದಾರೆ ನಿರ್ದೇಶಕ ಕೆ ಶ್ರೀ.ನಟ ನಂಜುಂಡ, ಸಂಗೀತ ನಿರ್ದೇಶಕ ಸಾಯಿಕಿರಣ್ ಮತ್ತು ನಿರ್ದೇಶಕ ಕೆ ಶ್ರೀ ಅವರ ಮೂವರ ತಂಡ ದರ್ಪಣ. `ನೀವೂ ಸರದಿಯಲ್ಲಿದ್ದೀರಿ..~ ಕಿರುಚಿತ್ರ ಅವರ ತಾಲೀಮಿನಂಥ ಸಿನಿಮಾ ಎನ್ನಬಹುದು.ಒಂದು ವರ್ಷದ ಹಿಂದೆ ಈ ತಂಡ ಒಂದು ಸಂಪೂರ್ಣ ಸಿನಿಮಾದ ಸ್ಕ್ರಿಪ್ಟ್ ಮಾಡಿದೆ. ಅದಕ್ಕೆ ನಿರ್ಮಾಪಕರು ಸಿಗದೇ ಹೋದಾಗ ಸಣ್ಣದೊಂದು ಕಿರುಚಿತ್ರ ಮಾಡಿ ತಮಗೂ ಸಿನಿಮಾ ಮಾಡಲು ಬರುತ್ತದೆ ಎಂದು ತೋರಿಸಲು ನಿರ್ಧರಿಸಿದೆ. ನಿರ್ಮಾಪಕ ಗೆಳೆಯರ ಸಹಕಾರದಿಂದ ಇದೀಗ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದೆ.`ಈ ಕಿರುಚಿತ್ರದ ಕಾನ್ಸೆಪ್ಟ್‌ಗಿಂತಲೂ ನಮ್ಮ ಉದ್ದೇಶ ನಮಗೂ ಸಿನಿಮಾ ಮಾಡಲು ಬರುತ್ತದೆ ಎಂದು ಹೇಳುವುದು~ ಎನ್ನುತ್ತಾರೆ ನಟ ನಂಜುಂಡ.ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿ ಗಮನಸೆಳೆದ ನಂಜುಂಡ ಅವರಿಗೆ ನಂತರದಲ್ಲಿ ಉತ್ತಮ ಅವಕಾಶಗಳು ಬರಲಿಲ್ಲ. ಅದಕ್ಕೆ ನೊಂದುಕೊಳ್ಳುವ ಅವರು ಪರಭಾಷೆಯಲ್ಲಿ ಅವಕಾಶ ಅರಸಿ ಹೋಗುತ್ತಿರುವುದಾಗಿ ಹೇಳುತ್ತಾರೆ.

 

`ಮಿಸ್ಟರಿ~ಯಂಥ ಕತೆ ಹೊಂದಿರುವ 34 ನಿಮಿಷದ ಈ ಕಿರುಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿರುವ ದರ್ಪಣ ತಂಡ ಚಿತ್ರೀಕರಣಕ್ಕೆ ತೆಗೆದುಕೊಂಡ ಕಾಲಾವಕಾಶ ಕೇವಲ 4 ದಿನಗಳು ಮಾತ್ರ. ಚಿತ್ರದಲ್ಲಿ ನಟಿಸಿರುವ ನಂಜುಂಡ, ನಾಜಿಯಾ, ಗಿರೀಶ್ ಭಟ್, ಸುರಭಿ ವಸಿಷ್ಠ, ವಿಜಯ್, ಮಾಲತೇಶ್, ಕಾರ್ತಿಕ್ ಪಾಂಡವಪುರ ಅವರ ಕೆಲಸದಲ್ಲಿ ಶ್ರದ್ಧೆ ಕಾಣುತ್ತದೆ.`ಲೈಫು ಇಷ್ಟೇನೆ~ ಚಿತ್ರದ ನಿರ್ದೇಶಕ ಪವನ್ ಅವರ ಹೋಮ್ ಥಿಯೇಟರ್‌ನಲ್ಲಿ ಕಿರುಚಿತ್ರ ಪ್ರದರ್ಶಿಸುವ ಹಂಬಲ ವ್ಯಕ್ತಪಡಿಸುವ ದಪರ್ಣ ತಂಡ `ಇದು ಕೇವಲ ನಮ್ಮ ತಂಡದ ತಾಲೀಮು. ಇದಕ್ಕಿಂತಲೂ ದೊಡ್ಡ ಕನಸು ನಮಗಿದೆ~ ಎನ್ನುವುದನ್ನು ಮರೆಯುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.