ಮಂಗಳವಾರ, ಜೂನ್ 15, 2021
27 °C

ಪ್ರತಿಭೆಗೆ ಸಂದ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮಗೆ ಕನ್ನಡದ ಅಪ್ಪು ಗೊತ್ತು. ಆದರೆ ಬೆಂಗಾಳಿ ಸಿನಿಮಾ ಪ್ರಿಯರಿಗೆ ಅಪ್ಪು ಅಂದರೆ ಅವರ ಕಣ್ಣ ಮುಂದೆ ನಿಲ್ಲುವುದು ಸತ್ಯಜಿತ್ ರಾಯ್ ಅವರ `ಅಪ್ಪು~. ಕನ್ನಡದ ಅಪ್ಪುವಿನ ಅಪ್ಪಾಜಿ (ಡಾ. ರಾಜ್‌ಕುಮಾರ್) ಅವರಿಗೆ 1995ರಲ್ಲಿ ಸಂದಿದ್ದ ಗೌರವ ಬೆಂಗಾಳಿಯ ಸತ್ಯಜಿತ್ ರಾಯ್ ಅವರ `ಅಪ್ಪು~ವಿಗೂ ಈಗ ಸಲ್ಲುತ್ತಿದೆ ಎಂದರೆ ಅದು ನಿಜಕ್ಕೂ ಖುಷಿಯ ವಿಷಯ. ಹೌದು, ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಶ್ರೇಷ್ಠರಿಗೆ ಕೊಡ ಮಾಡುವ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಈ ವರ್ಷ ಬೆಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿಯವರಿಗೆ ಸಂದಿದೆ.ಬೆಂಗಾಳಿ ಸಿನಿಮಾ ಎಂದರೆ ಬಂಗಾಳದ ಹೊರಗೆ ಜೀವಿಸುವ ಹೆಚ್ಚು ಜನರಿಗೆ ಸತ್ಯಜಿತ್ ರಾಯ್ ಥಟ್ಟನೆ ಕಣ್ಣ ಮುಂದೆ ಬರುತ್ತಾರೆ. ಆದರೆ ಅವರಿಗೆ ಈ ಸೌಮಿತ್ರ ಚಟರ್ಜಿ ಯಾರು ಎಂಬ ಪ್ರಶ್ನೆ ಕಾಡಿದರೂ ಕಾಡಬಹುದು.ಸತ್ಯಜಿತ್ ರಾಯ್ ನಿಮಗೆ ಗೊತ್ತು ಎಂದಾದರೆ ಅವರ ಹೆಚ್ಚು ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ (ನಾಯಕನಾಗಿ) ನಟಿಸುತ್ತಿದ್ದ ನಟರೇ ಸೌಮಿತ್ರ ಚಟರ್ಜಿ. ಅವರು ಹುಟ್ಟಿದ್ದು 1935 ಜನವರಿ 19 ರಂದು ಪಶ್ಚಿಮ ಬಂಗಾಳದ ನದಿಯಾ ಎಂಬ ಜಿಲ್ಲೆಯಲ್ಲಿರುವ ಕೃಷ್ಣನಗರ ಎಂಬ ಪುಟ್ಟ ಪಟ್ಟಣದಲ್ಲಿ. ಬೆಂಗಾಳಿ ಸಾಹಿತ್ಯದಲ್ಲಿ ಎಂಎ. ಪದವಿ ಪಡೆದ ಸೌಮಿತ್ರ ಚಟರ್ಜಿ ಅವರು ಸೇರಿಕೊಂಡಿದ್ದು ಆಕಾಶವಾಣಿಯ ಉದ್ಗೋಷಕರಾಗಿ. ಮೊದಮೊದಲು ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸುತ್ತಿದ್ದ ಸೌಮಿತ್ರ ಚಟರ್ಜಿ ಅವರು ಸಿನಿಮಾಗಳಲ್ಲಿ ಅಭಿನಯಿಸಲು ಶುರುಮಾಡಿದ್ದು 1959 ರಲ್ಲಿ.

 

ಅವರ ಮೊದಲ ಚಿತ್ರ ಸತ್ಯಜಿತ್ ರಾಯ್ ನಿದೇರ್ಶನದ ~ಅಪ್ಪು ಸಂಸಾರ~. ಈ ಚಿತ್ರದ ನಂತರ ಸೌಮಿತ್ರ ಚಟರ್ಜಿಯವರು ಸತ್ಯಜಿತ್ ರಾಯ್ ಅವರ ನೆಚ್ಚಿನ ನಟ ಆಗಿಬಿಟ್ಟರು. ರಾಯ್ ಅವರ ಹದಿನೈದು ಸಿನಿಮಾದಲ್ಲಿ ಚಟರ್ಜಿಯವರು ನಟಿಸಿರುವುದೇ ಅದಕ್ಕೆ ಸಾಕ್ಷಿ.

 ಎಪ್ಪತ್ತೆಂಟಕ್ಕೆ ಕಾಲಿಟ್ಟಿರುವ ಚಟರ್ಜಿಯವರು ಇಂದಿಗೂ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸುತ್ತಾರೆ.ಸಿನಿಮಾ ಮೇಲೆ ಚಟರ್ಜಿ ಅವರಿಗೆ ಅಪಾರ ಪ್ರೀತಿ. ಅವರ ಸಿನಿಮಾ ಅಸಕ್ತಿಗೆ ದೊಡ್ಡ ನಮಸ್ಕಾರ ಹೇಳಬೇಕು ಅನ್ನಿಸುತ್ತದೆ. ಅವರ ಲವಲವಿಕೆ, ಆರೋಗ್ಯ ಇಂದಿನ ಪೀಳಿಗೆಯ ನಟರನ್ನು ನಾಚಿಸುವಂತಹುದು ಎಂದರೆ ಅತಿಶಯೋಕ್ತಿಯಾಗದು. 1959ರಿಂದ ಇಂದಿನವರೆಗೂ ಅವರು ಐವತ್ತೆಂಟು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಅರ್ಧದಷ್ಟು ಚಿತ್ರಗಳು 70ರ ದಶಕದಲ್ಲಿ ತಯಾರಾದವು.ಕ್ರಿಕೆಟ್‌ನಲ್ಲಿ ನಮ್ಮ ದ್ರಾವಿಡ್ ಮತ್ತು ಸಚಿನ್ ಸಮಕಾಲೀನರಾಗಿದ್ದರೂ ಸಚಿನ್ ಅವರಿಗೆ ಸಿಕ್ಕ ಪ್ರಚಾರ ದ್ರಾವಿಡ್‌ಗೆ ಸಿಗಲಿಲ್ಲ ಎನ್ನುವ ಹಾಗೆ 60, 70 ಮತ್ತು 80ರ ದಶಕದಲ್ಲಿ ಬೆಂಗಾಳಿಯ ಚಲನಚಿತ್ರ ರಂಗದಲ್ಲಿ ನಟ ಸಾರ್ವಭೌಮರಾಗಿ ಬೆಳೆದು ನಿಂತಿದ್ದ ಉತ್ತಮ್ ಕುಮಾರ್ ಅವರಿಗೆ ಸಿಕ್ಕ ಪ್ರಚಾರ ಚಟರ್ಜಿಯವರಿಗೆ ಸಿಗಲಿಲ್ಲವೇನೋ.ಉತ್ತಮ್ ಕುಮಾರ್ ಹೀರೋ ಇಮೇಜ್‌ನಿಂದ ಬಂಗಾಳಿಗಳ ಮನದಲ್ಲಿ ಆರಾಧ್ಯ ನಟನಂತೆ ನಿಂತಿದ್ದರೆ, ಚಟರ್ಜಿಯವರು ಒಬ್ಬ ಜನ ಸಾಮಾನ್ಯನಂತಹ ನಾಯಕನ ಪಾತ್ರಗಳಿಗೆ ಜೀವ ತುಂಬುತ್ತಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಒಂದು ರೀತಿಯಲ್ಲಿ ಅವರು ಬಂಗಾಳಿ ಚಿತ್ರರಂಗದ ದಂತ ಕಥೆ. ಅದ್ಭುತ ವ್ಯಕ್ತಿತ್ವ ಅವರದು. ಅದಕ್ಕೆ ಸಾಕ್ಷಿ ಎನ್ನುವಂತೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಅವರಿಗೆ ಸಂದಿದೆ.ಬೆಂಗಾಳಿಯಲ್ಲಿ ದಾದಾ ಎಂದರೆ ಅಣ್ಣ ಎಂದರ್ಥ. ನಾವು ರಾಜ್‌ಕುಮಾರ್ ಅವರನ್ನು ರಾಜಣ್ಣ, ಅಣ್ಣಾವ್ರ ಎಂದು ಕರೆಯುವಂತೆ ಸೌಮಿತ್ರರನ್ನು ಸೌಮಿತ್ರದಾ ಎಂದು ಜನ ಕರೆಯುತ್ತಾರೆ. ಸೌಮಿತ್ರ ಚಟರ್ಜಿ ಎಂದರೆ ಬಹಳಷ್ಟು ಬೆಂಗಾಳಿಗಳಿಗೆ ಏನ್ಸಿಯೆಂಟ್ ಫೆಲುದಾ (ಪ್ರಾಚೀನ ಫೆಲುದಾ).

 

ಏನಿದು ಫೆಲುದಾ? ಸೌಮಿತ್ರ ಚಟರ್ಜಿಯವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತ್ಯಜಿತ್ ರಾಯ್ ಅವರು ಬರೆದಿರುವ ಕಾದಂಬರಿಗಳ ಕಾಲ್ಪನಿಕ ಕಥಾ ನಾಯಕನೇ ಪ್ರದೋಷ್ ಚಂದ್ರ ಮಿತ್ರ ಎಂಬ ಖಾಸಗಿ ಡಿಟೆಕ್ವೀವ್. ಈತ ವಾಸಿಸುವುದು ಕೊಲ್ಕತ್ತಾದ ಬಾಲಿಗಂಜ್‌ನ ರಜನಿ ಸೇನ್ ರೋಡ್‌ನಲ್ಲಿ ಮತ್ತು ಬೆಂಗಾಳಿ ಜನಮಾನಸದಲ್ಲಿ ನೆಲೆಸಿರುವುದು ಫೆಲುದಾ ಎಂಬ ಅಡ್ಡ ಹೆಸರಿನಿಂದ.ಸತ್ಯಜಿತ್ ರಾಯ್ ಅವರು ಬರೆದಿರುವ ಫೆಲುದಾ ಸರಣಿಯ ಕಥೆಗಳು ಒಟ್ಟು ಮೂವತ್ತೈದು ಪುಸ್ತಕಗಳಾಗಿವೆ. ಅವುಗಳಲ್ಲಿ ಕೆಲವು ಚಲನಚಿತ್ರವಾಗಿವೆ. ಸತ್ಯಜಿತ್ ರಾಯ್ ಸ್ವತಃ ನಿರ್ದೇಶಿಸಿದ ಮೊದ ಮೊದಲ ಫೆಲುದಾ ಸಿನಿಮಾಗಳಲ್ಲಿ ಹೀರೋ ಆಗಿದ್ದವರು ಸೌಮಿತ್ರ ಚಟರ್ಜಿ, ಬೆಂಗಾಳಿಗಳ ಪಾಲಿನ ಏನ್ಸಿಯೆಂಟ್ ಫೆಲುದಾ.ಒಬ್ಬ ಜೀಪ್ ಡ್ರೈವರ್ ಆಗಿ, ಗೃಹಸ್ಥನಾಗಿ, ಸಾಮಾನ್ಯ ಪ್ರೇಮಿಯಾಗಿ, ಒಳ್ಳೆಯ ಗೆಳೆಯನಾಗಿ, ಹೀಗೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಕಾಣುವ ಪಾತ್ರಗಳಲ್ಲಿ ಅಭಿನಯಿಸಿರುವ ಚಟರ್ಜಿಯವರ ನಟನೆಯನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಅವರ ಅಭಿನಯಕ್ಕೆ ಅವರೇ ಸಾಟಿ.ಅವರು ಅಭಿನಯಿಸಿರುವ ಹೆಚ್ಚಿನ ಪಾತ್ರಗಳಲ್ಲಿ ನಮ್ಮನ್ನು ನಾವೇ ಕಂಡುಕೊಳ್ಳುವಂತೆ ಮಾಡಿಬಿಡುವ ಮೋಡಿ ಇದೆ. ಅವರ ಅಮೋಘ ಅಭಿನಯಕ್ಕೆ  ಎಷ್ಟೊಂದು ಉದಾಹರಣೆಗಳಿವೆಯಾದರೂ 90ರ ದಶಕದ ಒಂದು ಚಿತ್ರದ ಕುರಿತು ಹೇಳಬೇಕೆಂದರೆ, ನೀವು `ಚಕ್ ದೇ ಇಂಡಿಯಾ~ ಚಿತ್ರದಲ್ಲಿನ ಹಾಕಿ ಕೋಚ್ ಶಾರುಖ್ ಖಾನ್‌ರ ನಟನೆಯನ್ನು ನೋಡಿ ಖುಷಿಪಟ್ಟಿರಬಹುದು.

 

ಕ್ರಿಕೆಟ್ ಬಿಟ್ಟು ಬೇರೆಲ್ಲಾ ಕ್ರೀಡೆಗಳನ್ನು ಕಡೆಗಣಿಸುವ ನಮ್ಮ ದೇಶದ ನಿಲುವನ್ನು ತೋರಿಸುವ ಕನ್ನಡಿಯಂತೆ `ಚಕ್ ದೇ ಇಂಡಿಯಾ~ ಕಂಡಿರಬಹುದು. ಜೊತೆಗೆ ಶಾರುಖ್ ಖಾನ್‌ರ ನಟನೆ ಕೂಡ ಅಚ್ಚು ಮೆಚ್ಚಾಗಿರಬಹುದು. ನೀವೇನಾದರೂ 1986ರಲ್ಲಿ ತೆರೆ ಕಂಡ `ಕೋನಿ~ ಎಂಬ ಬೆಂಗಾಳಿ ಚಿತ್ರವನ್ನು ನೋಡಿದರೆ ಆ ಚಿತ್ರದಲ್ಲಿ ನಾಯಕ ಕೋಚ್ ಬಡ ಹುಡುಗಿಯೊಬ್ಬಳನು ಈಜು ಸ್ಪರ್ಧೆಗೆ ತಯಾರು ಮಾಡಿ ಪ್ರಶಸ್ತಿ ಗೆಲ್ಲಿಸುವ ಪರಿ ನಮ್ಮ ಕನ್ನಡದ `ಚಿನ್ನಾರಿ ಮುತ್ತ~ನನ್ನು ನೆನಪಿಸುತ್ತದೆ. ಸೌಮಿತ್ರ ಚಟರ್ಜಿ ಕೋಚ್ ಪಾತ್ರಕ್ಕೆ ಜೀವ ತುಂಬಿದ್ದಾರೆ.ಅವರ ಇನ್ನೂ ಕೆಲವು ಚಿತ್ರಗಳನ್ನು ಹೆಸರಿಸಬೇಕೆಂದರೆ ಅಭಿಜಾನ್, ಚಾರುಲತಾ, ಬಾಕ್ಸೋ ಬದಲ್, ಅರಣ್ಯೇ ದಿನ್ ರಾತ್ರಿ, ಸೋನಾರ್ ಕೆಲ್ಲಾ ಇತ್ಯಾದಿ. ಈ ಎಲ್ಲ ಚಿತ್ರಗಳಲ್ಲೂ ಸತ್ಯಜಿತ್ ರಾಯ್ ಅವರ ಲಿಂಕ್ ಇದೆ.ಸತ್ಯಜಿತ್ ರಾಯ್ ಮತ್ತು ಸೌಮಿತ್ರ ಚಟರ್ಜಿಯನ್ನು ಬೇರೆ ಬೇರೆಯಾಗಿ ನೋಡುವುದು ಕಷ್ಟ. ಸತ್ಯಜಿತ್ ರಾಯ್ ಅವರಲ್ಲದೆ  ತಪನ್ ಸಿನ್ಹಾ, ಮೃಣಾಲ್ ಸೇನ್, ರಿತುಪರ್ಣೋ ಘೋಷ್, ಗೌತಮ್ ಘೋಷ್ ಮುಂತಾದ ಉತ್ತಮ ನಿರ್ದೇಶಕರ ಚಿತ್ರಗಳಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ ಪ್ರೋರಿಯನ್ ಗ್ಯಾಲೆನ್ಬರ್ಗರ್ ಎಂಬ ಆಸ್ಕರ್ ಪ್ರಶಸ್ತಿ ಪುರಸ್ಕೃತ ಜರ್ಮನ್ ನಿರ್ದೇಶಕರ ಚಿತ್ರದಲ್ಲೂ ನಟಿಸಿದ್ದಾರೆ.ಬೆಂಗಾಳಿ ಭಾಷೆಯ ಚಿತ್ರವಲ್ಲದೇ ದಿ ಬೆಂಗಾಲ್ ನೈಟ್ಸ್ ಎಂಬ ಫ್ರೆಂಚ್ ಚಿತ್ರದಲ್ಲಿ ಇಂಗ್ಲಿಷ್‌ನ ಜನಪ್ರಿಯ ನಟ ಹೂಜ್ ಗ್ರಾಂಟ್ ಅವರ ಜೊತೆ ಅಭಿನಯಿಸಿರುವ ಹೆಗ್ಗಳಿಕೆ ಚಟರ್ಜಿ ಅವರದು.ಚಟರ್ಜಿಯವರು 70ರ ದಶಕದಲ್ಲಿ ತುರ್ತು ಪರಿಸ್ಥಿತಿ ಇದ್ದ ಕಾರಣ ಪದ್ಮಶ್ರೀ ಪುರಸ್ಕಾರ ತಿರಸ್ಕರಿಸಿದ್ದರಂತೆ.  2001ರಲ್ಲಿ ರಾಷ್ಟ್ರೀಯ ಚಲನಚಿತ್ರ ಮಂಡಳಿಯಲ್ಲಿ ಪ್ರಶಸ್ತಿಗಾಗಿ ನಡೆಯುವ ರಾಜಕೀಯವನ್ನು ನೋಡಿ ಬೇಸತ್ತು ಉತ್ತಮ ನಟನೆಗಾಗಿ ಕೊಡಮಾಡುವ ಸ್ಪೆಷಲ್ ಜ್ಯೂರಿ ಪುರಸ್ಕಾರವನ್ನೂ ತಿರಸ್ಕರಿಸಿದ್ದರು.

 

2004 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ, 2007 ರಲ್ಲಿ ಉತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ, ಜೊತೆಗೆ ಜೀವಮಾನದ ಸಾಧನೆಗಾಗಿ ಇಟಲಿ ದೇಶದ ಪುರಸ್ಕಾರ, ಫ್ರೆಂಚ್ ದೇಶ ಕೊಡಮಾಡುವ `ಆಫೀಸರ್ ದೆಸ್ ಆರ್ಟ್ಸ್ ಎಟ್ ಮೆಟೀಯರ್ಸ್~ ಹೆಸರಿನ ಪ್ರಶಸ್ತಿಯನ್ನು ಪಡೆದಿರುವ ಚಟರ್ಜಿ ಅವರಿಗೆ  ಈಗ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರದ ಗರಿ.

 ಒಬ್ಬ ಅದ್ಭುತ ನಟನಿಗೆ ಇಷ್ಟು ತಡವಾಗಿ ಈ ಪ್ರಶಸ್ತಿ ಸಿಗುತ್ತಿದೆ ಎನ್ನುವ ಕೂಗು ಇತ್ತು.

 

ಕೊನೆಗೂ ಸಿಕ್ಕಿದೆ ಎನ್ನುವುದು ಖುಷಿಯ ಸಂಗತಿ. ಜೊತೆಗೆ ಈ ಪುರಸ್ಕಾರ ಸಲ್ಲಬೇಕಾದವರಿಗೆ ಸಲ್ಲುತ್ತಿರುವುದು ಅದಕ್ಕೆ ಅದರದೇ ಆದ ಬೆಲೆ ಇದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಸೌಮಿತ್ರ ಚಟರ್ಜಿಯವರಿಗೆ ಶುಭವಾಗಲಿ. ಅವರ ನಟನೆ, ಮತ್ತು ವ್ಯಕ್ತಿತ್ವ ಇಂದಿನ ಪೀಳಿಗೆಯ ನಟರಿಗೆ ಆದರ್ಶಪ್ರಾಯವಾಗಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.