ಶನಿವಾರ, ಮಾರ್ಚ್ 6, 2021
19 °C
ಗ್ರಂಥಪಾಲಕರ ದಿನಾಚರಣೆಯಲ್ಲಿ ಸಚಿವ ತನ್ವೀರ್‌ ಸೇಠ್‌

ಪ್ರತಿವರ್ಷ 500 ಗ್ರಂಥಾಲಯ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿವರ್ಷ 500 ಗ್ರಂಥಾಲಯ ಸುಧಾರಣೆ

ಬೆಂಗಳೂರು: ‘ಕರ್ನಾಟಕದಲ್ಲಿರುವ 1,777 ಗ್ರಂಥಾಲಯಗಳಲ್ಲಿ ಪ್ರತಿವರ್ಷ 500 ಗ್ರಂಥಾಲಯಗಳನ್ನು ಸುಧಾರಣೆ ಮಾಡುವ ಗುರಿಯನ್ನು ಇಲಾಖೆ ಇಟ್ಟುಕೊಂಡಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಗ್ರಂಥಾಲಯ ಸಚಿವ ತನ್ವೀರ್‌ ಸೇಠ್‌ ಅವರು ತಿಳಿಸಿದರು.ಸಾರ್ವಜನಿಕ ಗ್ರಂಥಾಲಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಮಕ್ಕಳಲ್ಲಿ ಓದುವ ಪ್ರವೃತ್ತಿಯನ್ನು ಹೆಚ್ಚಿಸಲು ಮತ್ತು ಸ್ವ ಉದ್ಯೋಗ ರೂಪಿಸಿಕೊಳ್ಳುವಂತೆ ಮಾಡಲು ಗ್ರಂಥಾಲಯ ಸುಧಾರಣೆ ಅಗತ್ಯ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಪ್ರತಿ ಶಾಲೆಯಲ್ಲಿ ಪುಸ್ತಕ ಕೋಶಗಳನ್ನು ತೆರೆಯಲೂ ಇಲಾಖೆ ನಿರ್ಧರಿಸಿದೆ’ ಎಂದು ಅವರು ಹೇಳಿದರು.‘ಸ್ಥಳೀಯ ಸಂಸ್ಥೆಗಳು ಕೊಡಬೇಕಾಗಿರುವ ಗ್ರಂಥಾಲಯ ಕರಗಳನ್ನು ಬಹಳ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು. ವಸೂಲಾದ ಹಣ ಇಲಾಖೆಗೆ ಬಂದು ಜಮಾ ಆಗಬೇಕು. ಈ ಬಗ್ಗೆ ಪ್ರಧಾನ ಕಾರ್ಯದರ್ಶಿಯವರು ಒಂದು ಸುತ್ತೋಲೆ ಹೊರಡಿಸಬೇಕು’ ಎಂದರು.‘ನಗರ ಕೇಂದ್ರ ಗ್ರಂಥಾಲಯವನ್ನು ಬೆಂಗಳೂರಿನ ಪ್ರವಾಸೋದ್ಯಮ ಸ್ಥಳವನ್ನಾಗಿ ಗುರುತಿಸಬೇಕೆಂದು ಕೋರಿ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ನೂರು ವರ್ಷ ತುಂಬಿದ ನಗರ ಕೇಂದ್ರ ಗ್ರಂಥಾಲಯ ಬೆಂಗಳೂರಿಗೆ ಶೋಭೆ ತರುವಂತಹದ್ದು. ಹಾಗಾಗಿ ನಗರಕ್ಕೆ ಬರುವ ಜನರು ಈ ಸ್ಥಳವನ್ನು ನೋಡಲೇಬೇಕು’ ಎಂದರು.ಕರ್ನಾಟಕ ಗ್ರಂಥಪಾಲಕರ ಸಂಘದ ಅಧ್ಯಕ್ಷ ಪಿ.ವೈ. ರಾಜೇಂದ್ರ ಕುಮಾರ್‌ ಮಾತನಾಡಿ, ‘ಕನ್ನಡ ಪುಸ್ತಕಗಳ ಸಗಟು ಖರೀದಿ ಯೋಜನೆಗೆ ಉತ್ತೇಜನ ನೀಡಬೇಕು ಮತ್ತು ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವವರಿಗೆ ಯಾವುದೇ ರೀತಿಯ ಸೇವಾ ಭದ್ರತೆ ಇಲ್ಲ. ಗ್ರಾ.ಪಂ.ಯಲ್ಲಿರುವ ಗ್ರಂಥಾಲಯನ್ನು ಡಿಜಿಟಲೀಕರಣ ಮಾಡಬೇಕು’ ಎಂದು  ಆಗ್ರಹಿಸಿದರು.ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಶ್ರೀಕಂಠ ಕೂಡಿಗೆ ಅವರು ಮಾತನಾಡಿ, ‘2012ರಲ್ಲಿ ಪ್ರಕಟವಾದ ಪುಸ್ತಕಗಳನ್ನು ನಾವು ಈ ವರ್ಷ ಆಯ್ಕೆ ಮಾಡುತ್ತಿದ್ದೇವೆ. ನಾಲ್ಕು ವರ್ಷ ಹಳೆಯ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡುವುದು ಎಷ್ಟರ ಮಟ್ಟಿಗೆ ಸರಿ. ಹಾಗಾಗಿ ಆಯಾ ವರ್ಷದ ಪುಸ್ತಕಗಳನ್ನು ಆ ವರ್ಷವೇ ಆಯ್ಕೆಯಾಗುವಂತೆ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.ಸಾರ್ವಜನಿಕ ಗ್ರಂಥಾಲಯ ವಿಭಾಗ, ಶೈಕ್ಷಣಿಕ ವಿಭಾಗ ಮತ್ತು ವಿಶೇಷ ಗ್ರಂಥಾಲಯಗಳ ವಿಭಾಗದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ ಒಂಬತ್ತು ಜನರಿಗೆ 2016ನೇ ಸಾಲಿನ ಉತ್ತಮ ಗ್ರಂಥಪಾಲಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.