ಬುಧವಾರ, ಜೂನ್ 16, 2021
28 °C

ಪ್ರತ್ಯೇಕ ಅಪಘಾತ: ಇಬ್ಬರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ನಾಗರಬಾವಿ ಸರ್ವಿಸ್ ರಸ್ತೆ ಮತ್ತು ಬನಶಂಕರಿ ವರ್ತುಲ ರಸ್ತೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.

ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಕೀಲರೊಬ್ಬರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಗರಬಾವಿ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮರಿಯಪ್ಪನಪಾಳ್ಯ ಬಳಿಯ ಜನತಾ ಕಾಲೊನಿ ಆರನೇ ಅಡ್ಡರಸ್ತೆ ನಿವಾಸಿ ರಾಮಲಿಂಗೇಗೌಡ ಎಂಬುವರ ಪತ್ನಿ ಪ್ರತಿಮಾ (26) ಮೃತಪಟ್ಟವರು. ಅವರು, ಪತಿ ಮತ್ತು 11 ತಿಂಗಳ ಗಂಡು ಮಗು ಮನೀಷ್ ಆರ್.ಗೌಡ ಜತೆ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ದಂಪತಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ರಸ್ತೆಯ ಬಲ ಭಾಗಕ್ಕೆ ಬಿದ್ದ ಪ್ರತಿಮಾ ಮೇಲೆ ಅದೇ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ರಾಮಲಿಂಗೇಗೌಡ ಮತ್ತು ಅವರ ಮಗುವಿಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣ: ಬನಶಂಕರಿ ವರ್ತುಲ ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಬಳಿ ಸೋಮವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು ಆಂಧ್ರಪ್ರದೇಶದ  ರಮೇಶ್ (21) ಎಂಬುವರು  ಮೃತಪಟ್ಟಿದ್ದಾರೆ.

ನಾಯಂಡಹಳ್ಳಿಯ ಫ್ಲೈವುಡ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಕಾರ್ಖಾನೆಯ ಸಮೀಪವೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಊಟ ಮಾಡಲು ದ್ವಿಚಕ್ರ ವಾಹನದಲ್ಲಿ ಹೋಟೆಲ್‌ಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಲಾರಿ ಚಾಲಕ, ರಮೇಶ್ ಅವರನ್ನು ಹಿಂದಿಕ್ಕುವ ಯತ್ನದಲ್ಲಿ ಅವರಿಗೆ ವಾಹನ ಗುದ್ದಿಸಿದ. ಈ ವೇಳೆ ಕೆಳಗೆ ಬಿದ್ದ ಅವರ ಮೇಲೆ ಲಾರಿಯ ಹಿಂದಿನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರು. ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಭರಣ ಕಳವು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ದುಷ್ಕರ್ಮಿಗಳು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳವು ಮಾಡಿರುವ ಘಟನೆ ಹನುಮಂತನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.