ಪ್ರತ್ಯೇಕ ಅಪಘಾತ: ಐವರ ಸಾವು

7

ಪ್ರತ್ಯೇಕ ಅಪಘಾತ: ಐವರ ಸಾವು

Published:
Updated:
ಪ್ರತ್ಯೇಕ ಅಪಘಾತ: ಐವರ ಸಾವು

ಕುಣಿಗಲ್/ತಿಪಟೂರು/ಹುಳಿಯಾರು: ಜಿಲ್ಲೆಯ  ವಿವಿಧ ಕಡೆಗಳಲ್ಲಿ ಗುರುವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ದುರ್ಮರಣಕ್ಕೀಡಾಗಿದ್ದಾರೆ.ಲಾರಿಯೊಂದು ಟ್ರ್ಯಾಕ್ಟರ್ ಮತ್ತು ಆಟೊಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-48ರ ಬಿಳಿದೇವಾಲಯ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.ಪಟ್ಟಣದ ಮದ್ದೂರು ರಸ್ತೆ ನಿವಾಸಿ ಮುಮ್ತಾಜ್‌ಬಾನು (55) ಸ್ಥಳದಲ್ಲೆ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ನಜೀರ್‌ಅಹಮದ್ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಆಟೊ ಚಾಲಕ ಜಾಫರ್ ಅಲಿಖಾನ್ ಹಾಗೂ ಸಯ್ಯದ್ ಗಫಾರ್ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಎಡೆಯೂರು ಕಡೆಯಿಂದ ಬರುತ್ತಿದ್ದ ಲಾರಿಯೊಂದು ಮೊದಲಿಗೆ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ನಂತರ ಆಟೊಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿದ ಕೂಡಲೆ ಸಿಪಿಐ ಬಿ.ಕೆ.ಶೇಖರ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಶವ ಪತ್ತೆ: ತಾಲ್ಲೂಕಿನ ಅಮೃತೂರು ಠಾಣಾ ವ್ಯಾಪ್ತಿಯ ಮಾರ್ಕೋನಹಳ್ಳಿ ಜಲಾಶಯದ ಕಾಲುವೆಯೊಂದರಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಕುತ್ತಿಗೆ ಬಳಿ ಚಾಕುವಿನಿಂದ ಇರಿತದ ಗಾಯಗಳು ಕಂಡುಬಂದಿವೆ. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಿಪಟೂರು: ಇಬ್ಬರ ಸಾವುತಿಪಟೂರು:
ತಾಲ್ಲೂಕಿನಲ್ಲಿ ಬುಧವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಬೈರನಾಯಕನಹಳ್ಳಿ ಸಮೀಪ ಬೈಕ್ ಆಯತಪ್ಪಿ ಉರುಳಿ ಚಾಲಕ ಚಿ.ನಾ.ಹಳ್ಳಿ ತಾಲ್ಲೂಕು ಕಾಮಲಾಪುರ ಹೊಸೂರು ಕಾಲೊನಿ ವಾಸಿ ಬಸವರಾಜು (25) ಸ್ಥಳದಲ್ಲೇ ಮೃತಪಟ್ಟರು. ಜತೆಯಲ್ಲಿದ್ದ ನಾರಾಯಣ ಮತ್ತು ಹರೀಶ್ ಎಂಬುವರು ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮತ್ತೊಂದು ಸಾವು: ಹಾಸನ ರಸ್ತೆ ಲಿಂಗದಹಳ್ಳಿ ಗೇಟ್ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಕುಳಿತಿದ್ದ ಹೊನ್ನೇನಹಳ್ಳಿಯ ಕುಮಾರ್ (24) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಹುಳಿಯಾರು: ಶಿರಸ್ತೇದಾರ್ ಸಾವು

ಹುಳಿಯಾರು:
ಟಯರ್ ಸಿಡಿದ ಕಾರಣ ಬೈಕ್ ಉರುಳಿಬಿದ್ದು ಬೈಕ್ ಹಿಂಬದಿ ಕುಳಿತಿದ್ದ ಜಿಲ್ಲಾ ಸೆಕ್ಷನ್ ಕೋರ್ಟ್‌ನ ಬೆಂಚ್ ಶಿರಸ್ತೇದಾರ ಪಾಡುರಂಗಪ್ಪ (58) ಸಾವಿಗೀಡಾದ ಘಟನೆ ಗುರುವಾರ ಮುಂಜಾನೆ ಪಟ್ಟಣದ ಹೊರವಲಯದ ಕೋಡಿಪಾಳ್ಯದ ಸಮೀಪ ಸಂಭವಿಸಿದೆ.ಮೂಲತಃ ದೊಡ್ಡಎಣ್ಣೇಗೆರೆಯವರಾದ ಪಾಂಡುರಂಗಪ್ಪ ತಿಪಟೂರಿನಲ್ಲಿ ವಾಸವಿದ್ದರು. ಮೃತರು ತಮ್ಮ ಸ್ನೇಹಿತನ ಜತೆ ಹುಳಿಯಾರು ಪಕ್ಕದ ಕುರಿಹಟ್ಟಿ ಗ್ರಾಮಕ್ಕೆ ಹಬ್ಬಕ್ಕೆ ತೆರಳಿ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾದರು ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹಿರಿಯ ನ್ಯಾಯಾಧೀಶ ಜಿ.ಎಂ.ಶೀನಪ್ಪ, ಎಎಸ್‌ಪಿ ಡಾ.ಬೋರಲಿಂಗಯ್ಯ ಭೇಟಿ ನೀಡಿದ್ದರು. ಹುಳಿಯಾರು ಠಾಣೆಯಲ್ಲಿ ದೂರು ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry