ಶನಿವಾರ, ಮೇ 8, 2021
20 °C
ಪಾಕಿಸ್ತಾನದ ಕ್ರಮಕ್ಕೆ ಧ್ವನಿ ಎತ್ತದ ಕಾಂಗ್ರೆಸ್

ಪ್ರಧಾನಿ ವಿರುದ್ಧ ಸಂಸದ ಜೋಶಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಭಾರತೀಯ ಸೈನಿಕರನ್ನು ಪಾಕಿಸ್ತಾನದವರು ಸೆರೆ ಹಿಡಿದು ಅವರ ರುಂಡವನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರೂ ಈ ದೇಶದ ಪ್ರಧಾನಿಗೆ ಅವರ ವಿರುದ್ಧ ಗಟ್ಟಿ ಧ್ವನಿಯಿಂದ ಮಾತನಾಡುವ ಶಕ್ತಿಯೇ ಇಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕೇಂದ್ರದಲ್ಲಿರುವ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದಾಗಿ ಭಾರತೀಯ ಸೈನಿಕರು ನೆರೆ ರಾಜ್ಯಗಳ ಹಾವಳಿಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ನಕ್ಸಲ್‌ರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದರೂ ಈ ದೇಶದ ಪ್ರಧಾನಿ ಕೈಕಟ್ಟಿಕೊಂಡು ಕುಳಿತಿದ್ದಾರೆ. ಇಂಥ ದುರಾಡಳಿತವನ್ನು ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮುಕ್ತಿ ನೀಡಿ ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿ ಸಾರಥ್ಯದ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರಬೇಕಿದೆ' ಎಂದು ಹೇಳಿದರು.`ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವೋಟುಗಳು ಒಡೆದುಹೋಗಿವೆ. ಆದರೆ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಿದ ಜನಪರ ಯೋಜನೆಗಳು ಮತದಾರರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಆದರೆ, ಕೆಲ ವ್ಯಕ್ತಿಗಳ ಆಂತರಿಕ ಕಚ್ಚಾಟದಿಂದ ಬಿಜೆಪಿ ಈ ಬಾರಿ ಸೋಲು ಅನುಭವಿಸಿದೆ. ಮತದಾರರು ಯಾವಾಗಲೂ ಒಂದೇ ರೀತಿ ಮತ ಹಾಕುತ್ತಾರೆ ಎಂಬುದನ್ನು ಹೇಳಲಿಕ್ಕಾಗದು, ಆದರೆ, ಮುಂದೆ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಅಂದರೆ ಐದು ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತೇನೆ ಎಂಬುದರ ಬಗ್ಗೆ ಅವರಿಗೇ ಅನುಮಾನವಿದೆ. ಇದನ್ನೆಲ್ಲ ನೋಡಿದರೆ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.`ಈ ಹಿಂದೆ ಯಾವ ಸರ್ಕಾರವೂ ಮಾಡದಂತಹ ಹಗರಣಗಳಲ್ಲಿ ಸಿಲುಕಿಕೊಂಡಿರುವ ಕೇಂದ್ರದ ಕಾಂಗ್ರೆಸ್ ಸರ್ಕಾರ, ಸುಮಾರು ್ಙ 1.76 ಸಾವಿರ ಕೋಟಿ 2ಜಿ  ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿದೆ. ್ಙ 1.76 ಸಾವಿರ ಕೋಟಿ ಎಂದರೆ ರಾಜ್ಯ ಸರ್ಕಾರ ಈ ಹಣದಲ್ಲಿ ಎರಡು ಬಾರಿ ಬಜೆಟ್ ಮಂಡನೆ ಮಾಡುತ್ತಿತ್ತು. ಇಂಥ ಹಗರಣದಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರ ಭಾಗಿಯಾಗಿದೆ. ಈ ಹಿಂದೆ ಆರು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ಮಾಡಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಒಂದೇ ಒಂದು ಕಪ್ಪು ಚುಕ್ಕೆಯನ್ನೂ ಹೊಂದಿಲ್ಲ' ಎಂದರು.`ಈ ರಾಜ್ಯದ ನೂತನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರೂ ಕೂಡ ಕೇಂದ್ರದಲ್ಲಿರುವ ತಮ್ಮ ಕಾಂಗ್ರೆಸ್ ಸರ್ಕಾರದ ಹಾದಿಯನ್ನೇ ಹಿಡಿದು ಹೊರಟಿದ್ದಾರೆ. ಬಿಪಿಎಲ್ ಕಾರ್ಡ್‌ನವರಿಗೆ ಜೂನ್ 1 ರಿಂದ 1 ರೂಪಾಯಿ ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಇದೂವರೆಗೂ 1 ರೂಪಾಯಿ ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡುತ್ತಿಲ್ಲ. ಎಪಿಎಲ್ ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡಲಾಗುವುದಿಲ್ಲ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಲ್ಲದೇ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಘೋಷಣೆ ಮಾಡಿದ ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಅಣ್ಣಿಗೇರಿ ತಾಲ್ಲೂಕುಗಳನ್ನು ಇದೂವರೆಗೆ ಅಧಿಕೃತ ತಾಲ್ಲೂಕುಗಳು ಎಂದು ಘೋಷಣೆ ಮಾಡದೆ ಇರುವುದು ವಿಪರ್ಯಾಸವೇ ಸರಿ' ಎಂದರು.ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಶಿವಾನಂದ ಅಂಬಡಗಟ್ಟಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಷಣ್ಮುಖ ಗುರಿಕಾರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.`ಸಂವಿಧಾನ ವಿರೋಧಿ ಆಡಳಿತ'

`ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆಯ್ಕೆ ಮಾಡಿದ ಕೆಲವು ಸಿಂಡಿಕೇಟ್ ಸದಸ್ಯರು ಹಾಗೂ ಅಕಾಡೆಮಿ ಸದಸ್ಯರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಜಾ ಮಾಡಿರುವುದು ಸರಿಯಾದ ಕ್ರಮವಲ್ಲ. ಇಂಥ ನಿರ್ಧಾರವನ್ನು ತೆಗೆದುಕೊಂಡಿರುವ ರಾಜ್ಯ ಸರ್ಕಾರ ಸಂವಿಧಾನ ವಿರೋಧಿಯಾದ ಆಡಳಿತವನ್ನು ನಡೆಸುತ್ತಿದೆ' ಎಂದು ಸಂಸದ ಪ್ರಹ್ಲಾದ ಜೋಶಿ ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.