ಶನಿವಾರ, ಏಪ್ರಿಲ್ 17, 2021
32 °C

ಪ್ರಭಾತ್ ಪಪ್ಪಾಯಿ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಪಪ್ಪಾಯಿ ಹಣ್ಣುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದೇಶದಲ್ಲಿ ಈಗ 72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯಲಾಗುತ್ತಿದೆ. ವರ್ಷಕ್ಕೆ 24 ಲಕ್ಷ ಮೆಟ್ರಿಕ್ ಟನ್ ಹಣ್ಣು ಉತ್ಪಾದನೆ ಆಗುತ್ತಿದೆ.ಪಪ್ಪಾಯಿ ಹಣ್ಣುಗಳಲ್ಲಿ ‘ಎ’ ಹಾಗೂ ‘ಸಿ’ ಜೀವಸತ್ವಗಳು ಹೆಚ್ಚಾಗಿವೆ. ಈಗ ಎಲ್ಲಾ ವರ್ಗಗಳ ಜನರೂ ಪಪ್ಪಾಯಿ ಬಳಸುತ್ತಾರೆ. ಆರ್ಥಿಕ ದೃಷ್ಟಿಯಿಂದಲೂ ಪಪ್ಪಾಯಿ ಬೆಳೆಯುವುದು ಲಾಭದಾಯಕ. ಪಪ್ಪಾಯಿಯಲ್ಲಿ ಸೋಲೊ, ಸನ್‌ಸೋಲೊ, ರೆಡ್‌ಲೇಡಿ, ಪುಸಾ ಡ್ವಾರ್ಫ್, ಕೂರ್ಗ್, ಹನಿಡ್ಯೂ, ಕೋ ಸೀರಿಸ್, ಸೂರ್ಯ ಹೆಸರಿನ ತಳಿಗಳಿವೆ. ಇವಲ್ಲದೆ ಹಲವಾರು ದೇಸಿ ತಳಿಗಳೂ ಇವೆ. ಗುಣಮಟ್ಟದ ಹಣ್ಣು ಕೊಡುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯುತ್ತಲೇ ಇದೆ.ಸಾಮಾನ್ಯವಾಗಿ ಇದುವರೆಗಿನ ಎಲ್ಲಾ ತಳಿಗಳಲ್ಲಿ ಕಂಡು ಬರುವ ಸಮಸ್ಯೆ ಎಂದರೆ ಗಂಡು ಗಿಡಗಳದ್ದು. ಗಂಡು ಗಿಡಗಳು ಫಲ ಕೊಡುವುದಿಲ್ಲ. ಈ ಕಾರಣದಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಉಪಯೋಗಿಸಬೇಕಾಗುತ್ತದೆ. ಅನೇಕ ಸಲ ಗಂಡು ಗಿಡಗಳನ್ನು ಬೆಳೆಸಿದ ನಂತರ ಕಿತ್ತು ಹಾಕುವ ಪರಿಸ್ಥಿತಿ ಬರುತ್ತದೆ.ಇದಕ್ಕೆ ಪರಿಹಾರವಾಗಿ ಬೆಂಗಳೂರಿನ (ಹೆಸರಘಟ್ಟದಲ್ಲಿರುವ) ಭಾರತೀಯ ತೋಟಗಾರಿಕಾ ಸಂಶೋಧಸಂಸ್ಥೆ ‘ಪ್ರಭಾತ’ ಎಂಬ ಹೆಸರಿನ ಸಂಕರ ತಳಿಯನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಈ ತಳಿಯಲ್ಲಿ ಗಂಡು ಗಿಡಗಳು ಇರುವುದಿಲ್ಲ. ಬೆಳೆಸಿದ ಗಿಡಗಳೆಲ್ಲ ಫಲ ಕೊಡುತ್ತವೆ.  ಪ್ರಭಾತ ತಳಿಯ ಹಣ್ಣುಗಳು ಮಧ್ಯಮ ಗಾತ್ರದ್ದಾಗಿದ್ದು ಸುಮಾರು 900-1100 ಗ್ರಾಂ ತೂಕ ಇರುತ್ತವೆ. ಹಣ್ಣಿನ ತಿರುಳು ಆಕರ್ಷಕ ಕಡು ಗುಲಾಬಿ ಬಣ್ಣದಲ್ಲಿರುತ್ತದೆ. ಹಣ್ಣುಗಳು 10ರಿಂದ 12 ದಿನಗಳವರೆಗೆ ಹಾಳಾಗದೆ ಉಳಿಯುತ್ತವೆ. ಹೀಗಾಗಿ ದೂರದ ಊರುಗಳಿಗೆ ಹಣ್ಣುಗಳನ್ನು ಕಳಿಸುವುದು ಸುಲಭ. ಈ ಹಣ್ಣುಗಳು ಅಧಿಕ ಸಕ್ಕರೆ ಹಾಗೂ ಲವಣ ಅಂಶಗಳನ್ನು ಒಳಗೊಂಡಿವೆ.ಸಸ್ಯ ಉತ್ಪಾದನೆ : ಪಪ್ಪಾಯ ಬೀಜಗಳು ಸಾಮಾನ್ಯವಾಗಿ ಉಷ್ಣಾಂಶದಲ್ಲಿ ಅಥವಾ ಬಿಸಿಲಿನಲ್ಲಿ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದರಿಂದ ಬೀಜಗಳನ್ನು ಬೇಗ ಬಿತ್ತನೆ ಮಾಡಬೇಕು. ಬೀಜೋತ್ಪಾದನೆ ನಂತರ ತಕ್ಷಣ ಬೀಜಗಳನ್ನು ಬಿತ್ತಲಾಗದಿದ್ದಲ್ಲಿ ಬೀಜಗಳನ್ನು 100 ಸೆಲ್ಸಿಯಸ್ ತಾಪಮಾನದಲ್ಲಿ ಫ್ರಿಜ್‌ಗಳಲ್ಲಿ ಸ್ವಲ್ಪ ದಿನಗಳವರೆಗೆ ಇಡಬಹುದು. ಬಿತ್ತನೆಗೆ ಮೊದಲು ಬೀಜಗಳನ್ನು 100 ಪಿ.ಪಿ.ಎಮ್ ಜಿಬ್ರಲಿಕ್  ಆಮ್ಲದಲ್ಲಿ 8-10 ಗಂಟೆಗಳವರೆಗೆ ನೆನೆಸಿ ನಂತರ ಬಿತ್ತನೆ ಮಾಡಿದರೆ ಮೊಳಕೆ ಬರುವ ಪ್ರಮಾಣ ಹೆಚ್ಚಾಗುತ್ತದೆ.ಬೇಸಾಯ ಕ್ರಮ : ಒಂದೂವರೆ ಅಡಿ ಉದ್ದ, ಅಗಲ ಮತ್ತು ಆಳದ ಗುಂಡಿಗಳನ್ನು 7x7  ಅಡಿ ಉದ್ದಗಲದ ಅಂತರದಲ್ಲಿ ತೋಡಿ, ಪ್ರತಿ ಗುಣಿಗೆ 2 ಮಂಕರಿ ಕೊಟ್ಟಿಗೆ ಗೊಬ್ಬರ ಹಾಕಿ ಸಸಿಗಳನ್ನು ನಾಟಿ ಮಾಡಬೇಕು. ಶಿಫಾರಸ್ಸು ಮಾಡಿದಂತೆ ಎರಡು ತಿಂಗಳಿಗೊಮ್ಮೆ ಪ್ರತಿ ಗಿಡಕ್ಕೆ 90ಗ್ರಾಂ ಯೂರಿಯಾ, 250ಗ್ರಾಂ ಸೂಪರ್ ಫಾಸ್ಪೇಟ್ ಹಾಗೂ 140ಗ್ರಾಂ ಪೊಟ್ಯಾಶ್ ಗೊಬ್ಬರಗಳನ್ನು ಪ್ರತಿ ವರ್ಷ ಕೊಡಬೇಕು. ಸಾಮಾನ್ಯವಾಗಿ ಚಳಿಗಾಲದಲ್ಲಿ 8-10 ದಿನಗಳಿಗೊಮ್ಮೆ ಹಾಗೂ ಬೇಸಿಗೆಯಲ್ಲಿ ಐದು ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸಬೇಕು. ಬೂದು ರೋಗ, ಬೇರು ಕೊಳೆ ರೋಗ ಮತ್ತು ಹಣ್ಣು ಕೊಳೆ ರೋಗ, ನಂಜು ರೋಗ ಹಾಗೂ ನುಸಿ ಸಾಮಾನ್ಯವಾಗಿ ಪಪ್ಪಾಯಿಯಲ್ಲಿ ಕಂಡುಬರುವ ರೋಗಗಳು. ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಕೀಟ ಹಾಗೂ ರೋಗ ನಿರೋಧಕಗಳನ್ನು ಬಳಸಿ ನಿಯಂತ್ರಿಸಬಹುದು. ಪ್ರಭಾತ್ ತಳಿಯ ಪ್ರತಿ ಗಿಡ 90 ರಿಂದ 100 ಕೆಜಿ ಹಣ್ಣು ಕೊಡುತ್ತದೆ. ಒಂದು ಎಕರೆಗೆ ಸರಾಸರಿ 80 ರಿಂದ 90 ಟನ್ ಇಳುವರಿ ಪಡೆಯಬಹುದು.ಹೆಚ್ಚಿನ ಮಾಹಿತಿಗೆ ಭಾರತೀಯ ತೋಟಗಾರಿಕಾ ಸಂಸ್ಥೆ, ಹೆಸರಘಟ್ಟ, ಬೆಂಗಳೂರು-560089 ಈ ವಿಳಾಸಕ್ಕೆ ಅಥವಾ 080-2846 6420/21/22/23 ಗೆ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.