ಸೋಮವಾರ, ಮೇ 17, 2021
22 °C

ಪ್ರಯಾಣ ದರ ಹೆಚ್ಚಳ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಡೀಸೆಲ್ ದರ ಹೆಚ್ಚಾದರೆ ಖಾಸಗಿ ಬಸ್ಸಿನ ಪ್ರಯಾಣ ದರವನ್ನು ಹೆಚ್ಚಿಸಲಾಗುವುದು ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಹೇಳಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಇದರಿಂದ ಬಸ್‌ಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ರಸ್ತೆಗಳು ಕಳಪೆಯಾಗಿರುವ ಜೊತೆಗೆ ಗುಡ್ಡಗಾಡು ಪ್ರದೇಶವೇ ಹೆಚ್ಚಾಗಿವೆ. ಪರವಾನಿಗೆ ಇಲ್ಲದೇ ಹಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದು, ಇದರಿಂದ ಖಾಸಗಿ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಡೀಸೆಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ಮುಂದಾಗಿವೆ. ಆದರೆ ನಮಗಿರುವ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳುವ ಅವರು ನಮಗೆ ಮಾತ್ರ ಹೊರ ಜಿಲ್ಲೆಯಲ್ಲಿ ಸಂಚರಿಸುವ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.ಜಿಲ್ಲೆಯ ನಾಪೋಕ್ಲು, ಪೊನ್ನಂಪೇಟೆ, ವಿರಾಜಪೇಟೆ, ಕೊಡ್ಲಿಪೇಟೆ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ಮೂಲಸೌಲಭ್ಯಗಳ ಕೊರತೆಯನ್ನು ನೀಗಿಸುವಂತೆ ಒತ್ತಾಯಿಸಿದರು.ಖಾಸಗಿ ಬಸ್‌ನಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಹಾಗೂ ಅಂಗವಿಕಲರಿಗೆ ಶೇ 50 ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.

ನಗರದ ಆರ್‌ಟಿಒ ಕಚೇರಿಯ ಸ್ಥಳಾಂತರಿಸುವ ಮೊದಲು ನೂತನ ಕಚೇರಿಯಲ್ಲಿ ಮೂಲ ಸೌಲಭ್ಯ ಒದಗಿಸಬೇಕು. ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಮೊದಲು ಅಲ್ಲಿಗೆ ತೆರಳುವ ಮಾರ್ಗವನ್ನು ಖಾಸಗಿ ಬಸ್ ಮಾಲೀಕರಿಗೆ ತಿಳಿಸಬೇಕು ಎಂದರು. ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಬೋಪಣ್ಣ, ಕಾರ್ಯದರ್ಶಿ ನಂದ ಪೂಣಚ್ಚ, ನಿರ್ದೇಶಕರಾದ ಜನಾರ್ಧನ್, ಯೋಗೇಶ್, ಮನ್ಸೂರ್ ಅಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.