ಮಂಗಳವಾರ, ಮಾರ್ಚ್ 2, 2021
31 °C
ಅಂಕದ ಪರದೆ

ಪ್ರಯೋಗಾತ್ಮಕ ರಂಗದ ‘ಸ್ವಕಲೆಕ್ಟಿವ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಯೋಗಾತ್ಮಕ ರಂಗದ ‘ಸ್ವಕಲೆಕ್ಟಿವ್’

ಹುಟ್ಟಿ ವರುಷವಾಗಿದ್ದರೂ ರಂಗಪ್ರಿಯರು ಹರುಷ ಪಡುವಷ್ಟು ಪ್ರಯೋಗಗಳನ್ನು ಮಾಡಿರುವ ‘ಸ್ವಕಲೆಕ್ಟಿವ್’ ರಂಗ ತಂಡ ಮೂಲತಃ ಪ್ರಯೋಗಶೀಲತೆಯನ್ನೇ ನೆಚ್ಚಿಕೊಂಡಿರುವ ವಿಶಿಷ್ಟ ರಂಗ ತಂಡ. ಸ್ವಕೇಂದ್ರಿತ ನೆಲೆಯಿಂದ ಸಮುದಾಯ ಕೇಂದ್ರಿತ ನೆಲೆಗೆ ಸಾಗಬೇಕೆಂಬ ಆಶಯ ಈ ತಂಡದ್ದು. ಹೆಸರಿಗೆ ತಕ್ಕಂತೆ ಇಲ್ಲಿರುವ ಸದಸ್ಯರೂ ವಿವಿಧ ಸಮುದಾಯ, ವಿಭಾಗಗಳಿಂದ ಬಂದವರೇ. ಅನ್ಯಜ್ಞಾನೀಯ ಶಿಸ್ತುಗಳ ಮೂಲಕ ರಂಗದ ಮೇಲೆ ವಿಭಿನ್ನ ಪ್ರಯೋಗಗಳನ್ನು ಮಾಡುವ ಹಂಬಲವುಳ್ಳ ಯುವ ಮನಸ್ಸುಗಳು ಇಲ್ಲಿ ಒಟ್ಟುಗೂಡಿವೆ.ಶಾಸ್ತ್ರೀಯ ಸಂಗೀತ, ನೃತ್ಯ, ಚಿತ್ರಕಲೆ, ತಂತ್ರಜ್ಞಾನ, ಗಣಿತ ವಿಜ್ಞಾನ, ರಂಗಭೂಮಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎಂಟು ಯುವ ಮನಸ್ಸುಗಳು ರೂಪಿಸಿರುವ ಸ್ವಕಲೆಕ್ಟಿವ್ 2014ರ ಏಪ್ರಿಲ್‌ನಿಂದ ಇದುವರೆಗೆ ಮೂರು ವಿಭಿನ್ನ ನೆಲೆಯ ನಾಟಕಗಳನ್ನು ರಂಗದ ಮೇಲೆ ತಂದಿದೆ. ಮುಂದಿನ ದಿನಗಳಲ್ಲಿ ನಾಲ್ಕು ವಿಶಿಷ್ಟ ಪ್ರಯೋಗಗಳನ್ನು ರಂಗಕ್ಕೆ ತರುವ ಹಂಬಲವುಳ್ಳ ತಂಡ, ಈ ನಿಟ್ಟಿನಲ್ಲಿ ಈಗಾಗಲೇ ನಿರಂತರ ಅಭ್ಯಾಸದಲ್ಲಿ ತೊಡಗಿಕೊಂಡಿದೆ.ಕಥಕ್ ನೃತ್ಯಾಭ್ಯಾಸದಲ್ಲಿ ತೊಡಗಿರುವ ಮಮತಾ ಬಿಸ್ಟ್, ಛಾಯಾಗ್ರಾಹಕಿ ಅನಿತಾ ಗಾಂಧಿ, ಲೇಖಕ ಅಮಿತ್ ಭುವನ್‌, ಗಾಯಕ ಹಾಗೂ ಗಿಟಾರ್ ವಾದಕ ಸೌರಭ್‌ ಸಿನ್ಹಾ, ವಾಸ್ತುಶಿಲ್ಪಿ ಮನೋಜ್ಞಾ, ರಂಗಕಲಾವಿದ ಅಕ್ಷಯ್‌ ಗಾಂಧಿ, ಭರತನಾಟ್ಯ, ಕಥಕ್ಕಳಿ ಕಲಾವಿದ ಹಾಗೂ ಗಣಿತಜ್ಞ ಆನಂದ್ ಸತೀಂದ್ರನ್‌ ಹೀಗೆ ವಿವಿಧ ಕಲೆ ಮತ್ತು ಕ್ಷೇತ್ರಗಳಲ್ಲಿ ಸಾಧನೆಯಲ್ಲಿ ನಿರತವಾಗಿರುವವರು ಸ್ವಕಲೆಕ್ಟಿವ್ ತಂಡದಲ್ಲಿ ತೊಡಗಿಕೊಂಡಿದ್ದಾರೆ.ಯುವ ರಂಗಕರ್ಮಿ ಶ್ರೀಕಾಂತ್ ರಾವ್ ಅವರ ಸಂಘಟನೆಯಲ್ಲಿ ಆರಂಭವಾದ ಸ್ವಕಲೆಕ್ಟಿವ್, ಕ್ರಿಯೇಟಿವ್ ಥಿಯೇಟರ್ ಸಹಯೋಗದಲ್ಲಿ ಪ್ರಯೋಗಿಸಿದ ‘ನಗುವಾಗ ನಕ್ಕು...’ (ರಚನೆ ಮತ್ತು ನಿರ್ದೇಶನ: ಶ್ರೀಕಾಂತ್ ರಾವ್) ಸಾಫ್ಟ್‌ವೇರ್ ಜಗತ್ತಿನ ಆಧುನಿಕ ಹೆಣ್ಣು ಕವಿತೆಗಳ ಮೂಲಕ ತನ್ನ ಜೀವನವನ್ನು ಪ್ರಶ್ನಿಸುವ ವಿಶಿಷ್ಟ ರಂಗ ಪ್ರಯೋಗ.ಆಧುನಿಕ ಹೆಣ್ಣಿನ ಕನಸುಗಳು ಮತ್ತು ಆಕೆಯ ತಾಯಿಯ ಆಕಾಂಕ್ಷೆಗಳ ಸುತ್ತ ಕಥೆ ಹೆಣೆದಿರುವ ಈ ನಾಟಕದಲ್ಲಿ ಸಮಕಾಲೀನ ನೃತ್ಯ ಪ್ರಕಾರವನ್ನು ಅರ್ಥಪೂರ್ಣವಾಗಿ ಮೇಳೈಸಲಾಗಿದೆ. ಹಿರಿಯ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್ ಅವರ ಜತೆ ರಾಜಶ್ರೀ, ವಿನಯ್‌ಕುಮಾರ್, ವೀಣಾ ಬಸವರಾಜಯ್ಯ ಮತ್ತು ಅಕ್ಷಯ್ ಗಾಂಧಿ ಈ ನಾಟಕದ ಪ್ರಮುಖ ಪಾತ್ರಧಾರಿಗಳು.ತಂಡ ಪ್ರಯೋಗಿಸಿರುವ ‘ಕಾವಡ್‌ ಕಥಾ– ಮಾಯಾ’ ನಾಟಕ ಮೂಲತಃ ರಾಜಸ್ತಾನಿ ಜನಪದ ಕಥಾ ಹಂದರ ಹೊಂದಿದೆ. ರಾಜಸ್ತಾನಿ ಮೌಖಿಕ ಕಥನ ಪರಂಪರೆಯ ಮುಂದುವರಿದ ಭಾಗವೆಂಬಂತೆ ರೂಪಿಸಲಾಗಿರುವ ಈ ನಾಟಕ, ಒಂದು ಕಥೆಯಿಂದ ಮತ್ತೊಂದು ಕಥೆಗೆ ಜಿಗಿಯುವ ವಿಶಿಷ್ಟ ನಿರೂಪಣಾ ಶೈಲಿಯನ್ನು ಹೊಂದಿದೆ. ಒಂದು ಕಥೆಯು ಮತ್ತೊಂದು ಕಥೆಯೊಂದಿಗೆ ಸಂಬಂಧ ಪಡೆಯುತ್ತಲೇ ನಾಟಕದ ಭಾಗವಾಗುತ್ತಾ ಹೋಗುವುದು ಈ ಪ್ರದರ್ಶನದ ವಿಶೇಷತೆ. ಪಾರ್ವತಿ ಓಂ ಮತ್ತು ಆನಂದ್‌ ಸತೀಂದ್ರನ್ ಇಬ್ಬರೇ ನಿರ್ವಹಿಸಿರುವ ‘ಸೈಲೆನ್ಸ್‌’ ನಾಟಕದಲ್ಲಿ ಆರ್‌.ಕೆ. ಲಕ್ಷ್ಮಣ್‌ ಅವರ ವ್ಯಂಗ್ಯಚಿತ್ರಗಳನ್ನು ಬಳಸಲಾಗಿದೆ.ಮುಂದಿನ ಯೋಜನೆ

ಕರ್ನಾಟಕ ಸಂಗೀತ ಮತ್ತು ಭರತನಾಟ್ಯ ನೃತ್ಯ ಬಳಸಿ ರೂಪಿಸಲಾಗುತ್ತಿರುವ ‘ತೇರಿಗಾಥಾ’ ಪಾಲಿ ಭಾಷೆಯ ಪದ್ಯಗಳನ್ನು ಒಳಗೊಂಡಿದೆ. ಸಂಗೀತವೇ ಪ್ರಧಾನವಾಗಿರುವ ‘ಧ್ರುಪದ್’ಗೆ ಸಾಜನ್ ಶಂಕರನ್‌ ಅವರ ಸಂಗೀತವಿದ್ದು, ಅಕ್ಷಯ್‌ ಗಾಂಧಿ ನಿರ್ಮಿಸಲಿದ್ದಾರೆ. ‘ರಿಯಾಲಿಟಿ ಇನ್ ಇಮ್ಯಾಜಿನೇಷನ್‌’–ಇದು ನಟ ಮತ್ತು ಗಣಿತಜ್ಞನ ಸಹಯೋಗದಲ್ಲಿ ಕಾಲ್ಪನಿಕ ಜಗತ್ತನ್ನು ರಂಗದ ಮೇಲೆ ತರುವ ಯೋಜನೆ. ಸೋನಂ ಪವಾರ್ ಮತ್ತು ಆನಂದ್‌ ಸತೀಂದ್ರನ್‌ ಈ ಪ್ರದರ್ಶನದ ಕಲಾವಿದರು.ಛಾಯಾಗ್ರಾಹಕಿ ಅನಿತಾ ಗಾಂಧಿ ಅವರ ನೇತೃತ್ವದಲ್ಲಿ ‘ಇನ್‌ ಮೋಷನ್‌’ ಹೆಸರಿನ ಪ್ರದರ್ಶನ ಸಿದ್ಧತೆಯಲ್ಲಿದೆ. ಸೃಜನಾತ್ಮಕ ಮತ್ತು ಪ್ರಯೋಗಾತ್ಮಕತೆಯ ಮೂಲಕವೇ ರಂಗದ ಮೇಲೆ ತಮ್ಮ ಅಸ್ತಿತ್ವ ಕಂಡುಕೊಳ್ಳುವ ತವಕದಲ್ಲಿರುವ ಸ್ವಕಲೆಕ್ಟಿವ್ ಮುಂದಿನ ದಿನಗಳಲ್ಲಿ ಬಹುಜನರನ್ನು ತಲುಪುವ ಆಶಯ ಹೊಂದಿದೆ.***

ಪ್ರಜಾವಾಣಿ ಸಂದರ್ಶನ

‘ಇಲ್ಲಿ ಯಾರೂ ಅಮುಖ್ಯರಲ್ಲ’


ನಾಟಕ ರಚನೆ, ನಿರ್ದೇಶನ ಮತ್ತು ನಟನೆಯಲ್ಲಿ ತೊಡಗಿಕೊಂಡಿರುವ ಶ್ರೀಕಾಂತ್ ರಾವ್ ಸ್ವಕಲೆಕ್ಟಿವ್ ತಂಡದ ಸಂಸ್ಥಾಪಕ ಸದಸ್ಯ.

‘ಲಂಡನ್‌ ಇಂಟರ್‌ನ್ಯಾಷನಲ್ ಸ್ಕೂಲ್‌ ಆಫ್ ಪರ್ಫಾರ್ಮಿಂಗ್  ಆರ್ಟ್ಸ್‌’ (ಲಿಸ್ಪಾ)ನಲ್ಲಿ ಒಂದು ವರ್ಷದ ಪದವಿ ಪೂರೈಸಿರುವ ಶ್ರೀಕಾಂತ್, ಕೆಲಕಾಲ ಅಲ್ಲಿನ ಕಲಾವಿದರ ಗುಂಪಿನೊಂದಿಗೆ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.‘ಬೆಂಗಳೂರು ಲಿಟ್ಲ್‌ ಥೇಟರ್ ’, ‘ರಂಗ ಶಂಕರ’, ‘ಇಂಡಿಯನ್‌ ಎನ್‌ಸೆಂಬಲ್‌’ನಲ್ಲೂ ತರಬೇತಿ ಪಡೆದಿರುವ ಅವರು, ಕಲರಿಪಯಟ್ಟು ಕಲೆಯ ಜತೆಗೆ ವೀಣಾ ವಾದನವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಅಭಿಷೇಕ್‌ ಮಜುಂದಾರ್, ವೀಣಾ ಬಸವರಾಜಯ್ಯ ಸೇರಿದಂತೆ ಇತರರ ನಾಟಕಗಳಲ್ಲಿ ಅಭಿನಯಿಸಿದ್ದಾರೆ.* ನಿಮ್ಮ ತಂಡ ರೂಪುಗೊಂಡಿದ್ದು ಹೇಗೆ?

ನಾಟಕದ ತರಬೇತಿ ಮುಗಿದ ಮೇಲೆ ಕೆಲವರ ಜತೆ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ಆದರೆ, ಪ್ರಾಯೋಗಿಕ ರಂಗ ಸ್ವರೂಪದಲ್ಲಿ  ಸ್ವಂತ ತಂಡವೊಂದನ್ನು ಕಟ್ಟಬೇಕೆಂಬ ಆಸೆ ಇತ್ತು. ಇದಕ್ಕೆ ಸಮಾನ ಮನಸ್ಕರ ಬೆಂಬಲವೂ ದೊರೆಯಿತು. ಎಲ್ಲರೂ ಒಟ್ಟಾಗಿ ಸೇರಿ ಸ್ವ ಕಲೆಕ್ಟಿವ್ ತಂಡ ಕಟ್ಟಿದೆವು. ತಂಡದಲ್ಲಿ ಎಲ್ಲರೂ ಮುಖ್ಯರು.* ನಿಮ್ಮ ತಂಡದ ವಿಶೇಷತೆ ಏನು?

– ಪ್ರದರ್ಶನ ಕಲೆಯ ಎಲ್ಲಾ ಆಯಾಮಗಳನ್ನೂ ನಾವು ಪ್ರದರ್ಶಿಸುವ ನಾಟಕಗಳಲ್ಲಿ ಬಳಸಲು ಪ್ರಯತ್ನಿಸುತ್ತೇವೆ. ಹಾಗಾಗಿ, ನಮ್ಮ ಪ್ರತಿ ನಾಟಕವೂ ಹೊಸತನದಿಂದ ಕೂಡಿರುತ್ತದೆ. ಮುಖ್ಯವಾಗಿ ನಾವು ಪ್ರಯೋಗಶೀಲತೆಯನ್ನು ಗಮನದಲ್ಲಿಟ್ಟುಕೊಂಡು ರಂಗ ಪ್ರದರ್ಶನಗಳನ್ನು ಮಾಡುತ್ತೇವೆ. ‘ಸೈಲೆನ್ಸ್‌’ ನಾಟಕದಲ್ಲಿ ಕೇವಲ ಎರಡೇ ಪಾತ್ರಗಳಿವೆ. ಆದರೆ, ನಾಟಕ ಎಲ್ಲೂ ಏಕತಾನತೆಯಿಂದ ಕೂಡಿಲ್ಲ. ಬದಲಿಗೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ಇದು ನಮ್ಮ ವಿಶೇಷತೆ.* ತಂಡದ ಖರ್ಚನ್ನು ಹೇಗೆ ನಿಭಾಯಿಸುತ್ತೀರಿ?

ಈ ವಿಷಯದಲ್ಲಿ ನಾವು ಪ್ರೇಕ್ಷಕರ ಮೇಲೆ ಹೆಚ್ಚು ಅವಲಂಬಿತವಾಗಿದ್ದೇವೆ. ಪ್ರಯೋಗಗಳ ತಯಾರಿ ಮತ್ತು ಪ್ರದರ್ಶನಕ್ಕೆ ಎಂಟು ಜನ ಸದಸ್ಯರೂ ಸಮಾನವಾಗಿ ಖರ್ಚುಗಳನ್ನು ಹಂಚಿಕೊಳ್ಳುತ್ತೇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.