ಶನಿವಾರ, ಜೂನ್ 19, 2021
21 °C

ಪ್ರಳಯಾಂತಕ ಪುಸ್ತಕ!

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

`ಪ್ರಳಯ ಕುರಿತ ಭಯವನ್ನು ಈ ಪುಸ್ತಕ ಹೋಗಲಾಡಿಸುತ್ತದೆ~ ಎಂದರು ನಿವೃತ್ತ ಡಿಜಿಪಿ ಜೀಜಾ ಹರಿಸಿಂಗ್. ಅವರು ಮಾತನಾಡಿದ್ದು `2012 ದಿ ರಿಯಲ್ ಸ್ಟೋರಿ~ ಆಂಗ್ಲ ಕೃತಿಯ ಕುರಿತು. ಡಿ.ಕೆ.ಹರಿ ಮತ್ತು ಹೇಮಾ ದಂಪತಿ ರಚಿಸಿದ ಪುಸ್ತಕ ಇದು.ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ನಲ್ಲಿರುವ ರಿಲಯನ್ಸ್ ಟೈಮ್‌ಔಟ್‌ನಲ್ಲಿ ಶುಕ್ರವಾರ ಸಂಜೆ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಾಟಾಗಿತ್ತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಪುಸ್ತಕ ಬಿಡುಗಡೆ ಮಾಡಿದರು.ಪ್ರಳಯದ ನೆಪದಲ್ಲಿ ಕಾಲ ದೇಶ ಮೀರಿ ಹಾರುವ ಯತ್ನ ಲೇಖಕರದು. ಮಾಯಾ, ಇಂಕಾ, ಅಜೆಟಿಕ್ ನಾಗರಿಕತೆಗೂ ಸಿಂಧೂ ನಾಗರಿಕತೆಗೂ ಇರುವ ಸಾಮ್ಯತೆ, ಸಾರಿಗೆ ಸಂಪರ್ಕವೇ ಇಲ್ಲದ ಕಾಲದಲ್ಲಿ ನಡೆದ ಖಂಡಾಂತರ ಯಾನ,  ಮಾಯಾ ಪಂಚಾಂಗದ ಕೊನೆ, ದಕ್ಷಿಣ ಅಮೆರಿಕದ ಪಿರಮಿಡ್‌ಗಳಿಗೂ ಪೌರಾತ್ಯ ರಾಷ್ಟ್ರಗಳ ಪಿರಮಿಡ್‌ಗಳಿಗೂ ಇರುವ ಹೋಲಿಕೆ, ವಿವಿಧ ನಾಗರಿಕತೆಗಳ ಲಿಪಿಗಳಲ್ಲಿರುವ ಸಾಮ್ಯತೆ ಕುರಿತು ವಿವರವಾಗಿ ವಿಶ್ಲೇಷಿಸಿದ್ದಾರೆ. ರಾವಣನ ಮಾವ ಮಾಯಾಸುರನಿಗೂ ಮಾಯಾ ನಾಗರಿಕತೆಗೂ ಇರುವ ಸಂಬಂಧವೇನು? ಪ್ರಳಯದ ಕುರಿತು ವಿವಿಧ ನಾಗರಿಕತೆಗಳ ಅಭಿಪ್ರಾಯವೇನು? ಶುಕ್ರಗ್ರಹದ ಸ್ಥಾನಪಲ್ಲಟ, ಸೂಪರ್‌ನೋವಾ, ಗ್ರಹಗಳು ಒಂದೇ ರೇಖೆಯಲ್ಲಿ ಸಂಧಿಸುವಿಕೆ, ಧ್ರುವಗಳ ಪಲ್ಲಟಕ್ಕೂ ಪ್ರಳಯಕ್ಕೂ ಇರುವ ನಂಟು ಎಂಥದ್ದು ಎಂಬುದನ್ನು ಗ್ರಹಿಸಲು ಹೊರಟಿದ್ದಾರೆ.2012 ಡಿಸೆಂಬರ್ 21 ನಿಜಕ್ಕೂ ವಿಶ್ವದ ಕಡೆಯ ದಿನವೇ? ಇದಕ್ಕೆ ಪುರಾವೆಗಳಿವೆಯೇ? 2012ರಿಂದ ಹೊಸ ಶಕೆ ಆರಂಭವಾಗಲಿದೆಯೇ ಎಂಬಂಥ ಕುತೂಹಲಕಾರಿ ಅಂಶಗಳನ್ನು ಪುಸ್ತಕ ಬಿಚ್ಚಿಟ್ಟಿದೆ. ವಿಜ್ಞಾನದ ಜತೆಗೆ ಪುರಾಣವನ್ನು ಬೆರೆಸುವ ಕೃತಿಕಾರರು ಕಂಪ್ಯೂಟರ್ ಯುಗದ ನಂತರ ಜ್ಞಾನಯುಗ ಹುಟ್ಟುತ್ತದೆ ಎಂದು ಭವಿಷ್ಯ ನುಡಿಯುತ್ತಾರೆ.ಜೀಜಾ ಮಾತು ಮುಂದುವರಿಸಿದರು. `ಪಿಂಡದೊಳಗೇ ಬ್ರಹ್ಮಾಂಡವಿದೆ~ ಎಂಬ ಸಂಸ್ಕೃತ ಶ್ಲೋಕವನ್ನು ಉದ್ಘರಿಸಿ ಪುಸ್ತಕ ಅದನ್ನು ಚೆನ್ನಾಗಿ ಹಿಡಿದಿಟ್ಟಿದೆ ಎಂದರು. ಪುಸ್ತಕ ರಚಿಸಲು ಬಳಸಿಕೊಂಡ ಚಿತ್ರಗಳು, ನಡೆಸಿದ ಅಧ್ಯಯನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜೀಜಾ ಎರಡು ಬಾರಿ ಪುಸ್ತಕವನ್ನು ಓದಿದ್ದಾರಂತೆ.ಹರಿ ದಂಪತಿ ಪುಸ್ತಕ ರಚನೆಗಾಗಿ ಸುಮಾರು 12ವರ್ಷಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ನಾಗರಿಕತೆಗಳ ಕುರಿತು ವಿಶ್ವದೆಲ್ಲೆಡೆ ಪ್ರಕಟವಾದ ಪುಸ್ತಕಗಳನ್ನು, ಪಂಚಾಂಗಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ.ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಮತ್ತೊಬ್ಬ ಅಧಿಕಾರಿ ಎಸ್.ಟಿ.ರಮೇಶ್, `ಹರಿ ದಂಪತಿ ಜಗತ್ತಿನ ಆಗುಹೋಗುಗಳಿಗೆ ಸಂಬಂಧಿಸಿದ ಇನ್ನೂ ಎಂಟು ಪುಸ್ತಕಗಳನ್ನು ಹೊರತಂದಿದ್ದಾರೆ. ಅವುಗಳನ್ನು ಕುತೂಹಲಕ್ಕಾದರೂ ಒಮ್ಮೆ ಓದಬೇಕು. ಮನುಷ್ಯ ಮತ್ತು ಆತನ ಸುತ್ತಲಿನ ಲೋಕವನ್ನು ಅರಿತುಕೊಳ್ಳಲು ಇವು ಸಹಕಾರಿ~ ಎಂದರು.ಸೃಷ್ಟಿ ವಿಜ್ಞಾನ ಕುರಿತ `ಕ್ರಿಯೇಷನ್~, `ಅಂಡರ್‌ಸ್ಟಾಂಡಿಂಗ್ ಶಿವ~, `ಹಿಸ್ಟಾರಿಕಲ್ ರಾಮ~, `ಅಯೋಧ್ಯಾ ವಾರ್ ಅಂಡ್ ಪೀಸ್~, `ರಾಮಾಯಣ ಇನ್ ಲಂಕಾ~, ಯು ಟರ್ನ್ ಇಂಡಿಯಾ~ ದಂಪತಿಗಳ ಪ್ರಮುಖ ಕೃತಿಗಳು. ಅಂದಹಾಗೆ ಹರಿ ಅವರಿಗೆ ತಮ್ಮ ತಂದೆಯವರ ಕಾಲದಿಂದಲೂ ಜೋತಿಷ್ಯಶಾಸ್ತ್ರದ ಪರಿಚಯವಿದೆ. ಹೇಮಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್.ಪ್ರಳಯ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಳಯ ಕುರಿತ ಪುಸ್ತಕಗಳಂತೂ ನಿರಾಯಾಸವಾಗಿ ಖರ್ಚಾಗುತ್ತವೆ. ಪ್ರಳಯ ಕುರಿತ ಟಿವಿ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚು. ಈ ಬಗ್ಗೆ ಪ್ರಶ್ನಿಸಿದಾಗ, `ಭೀತಿಯನ್ನು ಹುಟ್ಟು ಹಾಕುವುದಕ್ಕಿಂತಲೂ ಕುತೂಹಲವನ್ನು ತಣಿಸುವುದು, ಆ ಮೂಲಕ ವೈಜ್ಞಾನಿಕ ಜಿಜ್ಞಾಸೆಯನ್ನು ಹುಟ್ಟುಹಾಕುವುದು ನಮ್ಮ ಉದ್ದೇಶ.ಹೀಗಾಗಿ ಪುಸ್ತಕ ಖರ್ಚಾಗುವುದು ನಮ್ಮ ಉದ್ದೇಶವಲ್ಲ~ ಎಂದರು ಹರಿ.304 ಪುಟಗಳಲ್ಲಿ, ಸಚಿತ್ರ ವಿವರಣೆ ನೀಡಿರುವ ಪುಸ್ತಕದ ಬೆಲೆ 300 ರೂಪಾಯಿ. ರಿಲಯನ್ಸ್ ಟೈಮ್‌ಔಟ್‌ನ ಎಲ್ಲಾ ಶಾಖೆಗಳಲ್ಲಿ ಪುಸ್ತಕಗಳು ಲಭ್ಯ.

 

-

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.