ಸೋಮವಾರ, ಜೂನ್ 21, 2021
29 °C

ಪ್ರವಾಸೋದ್ಯಮಕ್ಕೆ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಹೊರ ತಂದಿರುವ ಡೈರೆಕ್ಟರಿಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ಖಾಸಗಿ ಹೋಟೆಲೊಂದರಲ್ಲಿ ನಡೆದ ಸಮಾರಂಭದಲ್ಲಿ ಎರಡು ಸಂಪುಟಗಳಲ್ಲಿ ಹೊರ ತಂದಿರುವ ಡೈರೆಕ್ಟರಿಯನ್ನು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರಗೌಡ ಬಿಡುಗಡೆ ಮಾಡಿದರು.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಪುದುಚೆರಿಯ  ಪ್ರಮುಖ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳ ಸಮಗ್ರ ವಿವರದ ಜತೆಗೆ, ಹೋಟೆಲ್- ರೆಸ್ಟೋರೆಂಟ್, ಶಾಪಿಂಗ್ ಮಳಿಗೆಗಳು ಹಾಗೂ ಟ್ರಾವೆಲ್ ಏಜೆನ್ಸಿಗಳ ವಿವರವನ್ನು ಈ ಡೈರೆಕ್ಟರಿ ಒಳಗೊಂಡಿದೆ.

ಆನಂತರ ಮಾತನಾಡಿದ ರಾಮಚಂದ್ರಗೌಡ, `ಉಲ್ಲಾಸದ ಜತೆಗೆ ಆಧ್ಯಾತ್ಮಿಕ, ಭೌಗೋಳಿಕ ದೃಷ್ಟಿಕೋನದಿಂದಲೂ ಪ್ರವಾಸೋದ್ಯಮ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇದನ್ನು ಉದ್ಯಮವಾಗಿ ಬೆಳೆಸುವ ಅಗತ್ಯವಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅಗತ್ಯ ನೆರವು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ~ ಎಂದು ಭರವಸೆ ನೀಡಿದರು.

ಹಾಂಕಾಂಗ್, ಸಿಂಗಾಪುರ ಸೇರಿದಂತೆ ವಿದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ  ಒತ್ತು ನೀಡುತ್ತಿರುವುದನ್ನು `ಟಿ-ಮೈನಸ್~ ಗ್ರೂಪ್‌ನ ಕಾರ್ಪೊರೇಟ್ ಕೋಚ್ ರಾಮ್ ಕೆದ್ಲಾಯ ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಭಾರತದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ, ನಮ್ಮ  ಜನರು ಇಂದಿಗೂ ಕೇವಲ ಐದು ರೂಪಾಯಿ ನೀಡಿ ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡುವಂತಹ ಸ್ಥಿತಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೂ ಪ್ರವಾಸಿ ತಾಣಗಳು ಎಟಕುವಂತೆ ಮಾಡಿದಾಗ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲು ಸಾಧ್ಯವಾಗಲಿದೆ~ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರಾ ಸ್ವಾಗತಿಸಿದರು. ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ತಲ್ಲಂ ಆರ್. ದ್ವಾರಕಾನಾಥ್, ಡೈರೆಕ್ಟರಿಯನ್ನು ಮುದ್ರಿಸಿದ ಪ್ರೊ-ಸಲೂಷನ್ಸ್‌ನ ನಾಗರಾಜ್ ಹೆಗ್ಡೆ ಮಾತನಾಡಿದರು. ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಕೆ. ಶಿವಷಣ್ಮುಗಂ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.