ಭಾನುವಾರ, ಏಪ್ರಿಲ್ 11, 2021
32 °C

ಪ್ರವಾಸೋದ್ಯಮ ಬೆಳೆದರೆ ಸಂಸ್ಕೃತಿಗೆ ಆಪತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಹೆಸರಿನಲ್ಲಿ ಈ ನೆಲದ ಮಣ್ಣಿನ ಮೇಲೆ ಮತ್ತು ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದೆ ಎಂದು ಬರಹಗಾರ ಟಿ.ಸಿ. ತಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಬಾಲಭವನದಲ್ಲಿ ಸೋಮವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ  (ಡಿವೈಎಫ್‌ಐ) 9ನೇ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ `ಜಿಲ್ಲೆಯ ನಿರುದ್ಯೋಗ, ವಲಸೆ, ಕೃಷಿ ಸಮಸ್ಯೆ ಮತ್ತು ಕೊಡಗಿನ ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ?~ ಎನ್ನುವುದರ ಬಗೆಗಿನ ಸಂವಾದದಲ್ಲಿ ಅವರು ಮಾತನಾಡಿದರು.ಪ್ರತಿಯೊಂದು ದೇಶ ಅಥವಾ ಪ್ರದೇಶದ ಸಂಸ್ಕೃತಿಯು ಅಲ್ಲಿನ ಕೃಷಿಯ ಜೊತೆಗೆ ಬೆಸೆದುಕೊಂಡಿರುತ್ತದೆ. ಕೃಷಿಕರಿಗೆ ಹಾಗೂ ಕೃಷಿ ಭೂಮಿಗೆ ಯಾವತ್ತು ಕಂಟಕ ಬರುತ್ತದೆಯೋ ಅಂದೇ ಅಲ್ಲಿನ ಸಂಸ್ಕೃತಿಯು ನಾಶವಾಗಿ ಅಧ್ವಾನವಾಗುತ್ತದೆ ಎಂದು ಅವರು ಹೇಳಿದರು.ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಭರದಲ್ಲಿ ತನ್ನ ಮೂಲಸಂಸ್ಕೃತಿಯನ್ನೇ ಕಳೆದುಕೊಂಡ ಗೋವಾ ಇಂದು ಕಸದ ಕೊಂಪೆಯಾಗಿದೆ. ಕೊಡಗಿನಲ್ಲಿ ಈಗ ಆರಂಭವಾಗಿರುವ ರೆಸಾರ್ಟ್ ಸಂಸ್ಕೃತಿಯನ್ನು ತಡೆಯದೇ ಹೋದರೆ ಮುಂದೊಂದು ದಿನ ನಮ್ಮ ಜಿಲ್ಲೆಯು ಕೂಡ ಗೋವಾ ರೀತಿಯಲ್ಲಿಯೇ ಅವನತಿ ಹೊಂದಲಿದೆ ಎಂದು ವಿಷಾದಿಸಿದರು.ನಮ್ಮ ಮೂಲ ಸಂಸ್ಕೃತಿ ಉಳಿಯಬೇಕಾದರೆ ಮೊದಲು ಇಲ್ಲಿನ ಕೃಷಿಕರು ಹಾಗೂ ಕೃಷಿ ಭೂಮಿಯನ್ನು ರಕ್ಷಿಸಬೇಕು. ಕೃಷಿಕರಿಗೆ ಹಲವು ಸವಲತ್ತುಗಳನ್ನು ನೀಡಬೇಕು, ಆತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ಹೀಗಾದಾಗ ಮಾತ್ರ ಕೃಷಿ ಲಾಭದಾಯಕ ಕೃಷಿಯಾಗಿ ಪರಿಣಮಿಸಲಿದೆ ಎಂದರು.ಕೃಷಿಯೆಡೆ ಯುವಜನತೆ ಆಕರ್ಷಿತರಾದರೆ ನಗರಗಳಿಗೆ ವಲಸೆ ಹೋಗುವುದು ಕೂಡ ತಪ್ಪುತ್ತದೆ, ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗುತ್ತದೆ. ಅದರೊಟ್ಟಿಗೆ ಸ್ಥಳೀಯ ಸಂಸ್ಕೃತಿಯು ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಡಿವೈಎಫ್‌ಐ ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್. ಭರತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಸಮಿತಿಯ ಖಜಾಂಚಿ ರಮೇಶ್ ರೈ, ಉಪಾಧ್ಯಕ್ಷ ಮೋಣಪ್ಪ, ಮಡಿಕೇರಿ ಡಿವೈಎಫ್‌ಐನ ಅಧ್ಯಕ್ಷ ಚಂದನ್, ಕಾರ್ಯದರ್ಶಿ ರತೀಶ್ ಕೆ.ಎಸ್, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ.ರಮೇಶ್, ಇತರರು ಉಪಸ್ಥಿತರಿದ್ದರು.

ಬಂಡವಾಳಷಾಹಿಗಳ ಹುನ್ನಾರ

ವಿದೇಶಿ ಬಂಡವಾಳಷಾಹಿಗಳು ನಮ್ಮ ದೇಶದ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯನ್ನೇ ಛಿದ್ರಗೊಳಿಸಲು ವಿವಿಧ ಮಾರ್ಗಗಳಿಂದ ಹುನ್ನಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ನಡೆದ ಅಣ್ಣಾ ಹಜಾರೆ ಅವರ ಹೋರಾಟವು ಇದರ ಒಂದು ಭಾಗವೇ ಆಗಿದೆ. ಅವರ ಹೋರಾಟದಿಂದ ದೇಶದ ಉದ್ಧಾರ ಸಾಧ್ಯವೇ ಇಲ್ಲ. ಅಣ್ಣಾ ಹಜಾರೆ ಅವರ ಸುತ್ತಮುತ್ತ ಇರುವವರು ವಿದೇಶಿ ಸಂಸ್ಥೆಗಳ ಕೃಪಾಪೋಷಿತರಾದವರೇ.

- ವಿದ್ಯಾಧರ್, ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ

ಸಂವಾದದಲ್ಲಿ ಹೊರಹೊಮ್ಮಿದ ಅಭಿಪ್ರಾಯ

`ಹೊಸ ಚಿಂತನೆ ಬೇಕು~

ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕ್ರಮದಲ್ಲಿ ಬದಲಾವಣೆ ತರಬೇಕಾಗಿದೆ. ಹೊಸ ಚಿಂತನೆಗಳು ನಡೆಯಬೇಕಾಗಿದೆ. ಜೀವನ ಸಾಗಿಸಲು ಬೇಕಾಗುವ ಎಲ್ಲ ಸೌಕರ್ಯಗಳು ನಗರ ಪ್ರದೇಶದಲ್ಲಿ ದೊರೆಯುತ್ತಿದ್ದರೆ, ಗ್ರಾಮೀಣ ಭಾಗಗಳಲ್ಲಿ ಕನಿಷ್ಠ ಮೂಲಸೌಕರ್ಯಗಳು ಕೂಡ ಇಲ್ಲ. ಈ ತಾರತಮ್ಯವ್ನು ನಿವಾರಿಸಬೇಕಾಗಿದೆ.

ಬಿ.ಟಿ. ಪ್ರದೀಪ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಅರಿವು ಮುಖ್ಯ

ಬಡತನ, ನಿರುದ್ಯೋಗ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಜನರಲ್ಲಿರುವ ಅಜ್ಞಾನವೇ ಕಾರಣವಾಗಿದೆ. ಜನರಲ್ಲಿ ಅರಿವು ಮೂಡಿದರೆ ಈ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ.ಜಯಪ್ಪ ಹಾನಗಲ್, ದ.ಸಂ.ಸ ಮುಖಂಡರು`ಸರ್ಕಾರವೇ ಹೊಣೆ~

ಯುವಕರು ನಗರಗಳತ್ತ ವಲಸೆ ಹೋಗುವುದಕ್ಕೆ ಸರ್ಕಾರದ ತಪ್ಪು ನೀತಿಗಳೇ ಕಾರಣ. ಹೀಗಾಗಿ ಕೃಷಿ ಕ್ಷೇತ್ರ ಸಂಪೂರ್ಣವಾಗಿ ದಿವಾಳಿಯಾಗಿದೆ. ವಿದೇಶಿಯ ಬಂಡವಾಳಷಾಹಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ ರಾಜ್ಯದ ಬಿಜೆಪಿ ಸರ್ಕಾರ ಎರಡು ಬಾರಿ ವಿಶ್ವ ಹೂಡಿಕೆದಾರರ ಸಮ್ಮೇಳನವ್ನು ನಡೆಸಿತು. ಅವರು ಕೇಳಿದಷ್ಟು ಕೃಷಿ ಭೂಮಿಯನ್ನು ನೀಡಲು ಸರ್ಕಾರವೇ ಮುಂದೆ ನಿಂತಿದ್ದು ವಿಷಾದಕರ.

ಎಸ್.ವೈ. ಗುರುಶಾಂತು, ಸಿಪಿಎಂ ರಾಜ್ಯ ಸಮಿತಿ ಸದಸ್ಯ`ವಲಸೆಯೇ ಮೂಲ~

ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸದಿದ್ದಲ್ಲಿ ವಲಸೆ ಹೋಗುವುದನ್ನು ತಡೆಯಲು ಸಾಧ್ಯವೇ ಇಲ್ಲ. ವಲಸೆ ಹೋಗುವುದನ್ನು ತಡೆದರೆ ನಿರುದ್ಯೋಗ, ಮೂಲಸೌಕರ್ಯಗಳ ಕೊರತೆ, ಬಡವಾಗುತ್ತಿರುವ ಕೃಷಿ ಸಮಸ್ಯೆ, ಎಲ್ಲವನ್ನೂ ನಿವಾರಿಸಿದಂತೆ.

ಡಾ.ಐ.ಆರ್.ದುರ್ಗಾಪ್ರಸಾದ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.