ಶುಕ್ರವಾರ, ಮಾರ್ಚ್ 5, 2021
23 °C

ಪ್ರವಾಹ ಭೀತಿ: ಭರವಸೆಯಲ್ಲೇ ಉಳಿದ ಶಾಶ್ವತ ಪರಿಹಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಹ ಭೀತಿ: ಭರವಸೆಯಲ್ಲೇ ಉಳಿದ ಶಾಶ್ವತ ಪರಿಹಾರ!

ಸಿದ್ದಾಪುರ: ಮಳೆಗಾಲ ಪ್ರಾರಂಭವಾಗಿದೆ. ಈ ಭಾಗದ ಬೆಳೆಗಾರರಿಗೆ, ರೈತರಿಗೆ ಮಳೆಯ ಪ್ರಮಾಣ ಏರಿದಷ್ಟು ಅಹ್ಲಾದ ತಂದರೆ, ಸಿದ್ದಾಪುರ ಸಮೀಪದ ಕರಡಿಗೋಡು ನೆಲ್ಯಹುದಿಕೇರಿಯ ಅನೇಕ ಕುಟುಂಬಗಳಿಗೆ ಮಳೆ ಆತಂಕ ಮೂಡಿಸುತ್ತದೆ.ಐದಾರು ದಶಕಗಳ ಹಿಂದೆ ಬದುಕನ್ನರಿಸಿಕೊಂಡು ಕೂಲಿ ಕಾರ್ಮಿಕರು  ಕೇರಳ, ತಮಿಳುನಾಡು, ರಾಜ್ಯಗಳಿಂದ ಇಲ್ಲಿಗೆ ಬಂದರಾದರು ನೆಲೆಸಲು ಸೂರಿಲ್ಲದೇ ಕಾವೇರಿ ನದಿ ತೀರಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸಲು ಪ್ರಾರಂಭಿಸಿದರು.ಕಾಲ ಉರುಳಿದಂತೆ ತವರಿಗೂ ಮರಳಲು ಸಾಧ್ಯವಾಗದೇ, ಇಲ್ಲಿ ವಾಸಿಸಲು ಸಾಧ್ಯವಾಗದೇ ಅತಂತ್ರ ಸ್ಥಿತಿಗೆ ತಲುಪಿದರು. ಆಯಾ ಕಾಲಕ್ಕೆ ಗದ್ದುಗೆ ಏರಿದ ರಾಜಕೀಯ ಪಕ್ಷಗಳು, ಮುಖಂಡರು ನೀಡಿದ ಭರವಸೆಗಳು ಇವರನ್ನು ಕೇವಲ ಮತದಾರರನ್ನಾಗಿ ಉಳಿಸಿತೇ ವಿನಾ ಇವರ ಅತಂತ್ರ ಬದುಕಿಗೆ ಮುಕ್ತಿ ದೊರೆಯುವಂತೆ ಮಾಡಿಲ್ಲ.ಇನ್ನು ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಈ ಭಾಗವು ಜಿಲ್ಲಾಡಳಿತಕ್ಕೊಂದು ತಲೆನೋವಾಗಿ ಪರಿಣಮಿಸುತ್ತದೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ತಾತ್ಕಾಲಿಕ ನೆರೆ ಪರಿಹಾರದಲ್ಲಿ ನಿರತರಾಗುವುದು ಪ್ರತೀವರ್ಷವೂ ಒಂದಂಶದ ಕಾರ್ಯಕ್ರಮವಾಗಿಬಿಟ್ಟಿದೆ.ಮಳೆಗಾಲದಲ್ಲಿ ಇಲ್ಲಿನ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಕರಡಿಗೋಡು ಮತ್ತು ನೆಲ್ಯಹುದಿಕೇರಿಯ ಕಾವೇರಿ ನದಿ ಬಗ್ಗಲಲ್ಲಿ ವಾಸಿಸುತ್ತಿರುವ 300ಕ್ಕೂ ಹೆಚ್ಚು ಮನೆಗಳು ನೀರಿನ ಪ್ರವಾಹಕ್ಕೆ ಸಿಲುಕುತ್ತವೆ. ಹೀಗೆ ನೀರಿನ ಪ್ರಮಾಣ ಏರುತ್ತಿದ್ದಂತೆ ದಿಕ್ಕುತೋಚದೇ ಪರದಾಡುವುದು ಇವರ ಮಳೆಗಾಲದ ಕರ್ತವ್ಯವಾಗಿಬಿಟ್ಟಿದೆ.ಜಿಲ್ಲಾಡಳಿತ ಇವರಿಗೆ ತಾತ್ಕಾಲಿಕವಾಗಿ ನಿರ್ಮಿಸಿಕೊಡುವ ಗಂಜಿಕೇಂದ್ರಗಳು ಸದ್ಯದ ಪರ್ಯಾಯ ವ್ಯವಸ್ಥೆಯಾದರೂ ಮೊದಲಿನಿಂದಲೂ ಎದ್ದಿರುವ  ಶಾಶ್ವತ ಪರಿಹಾರದ ಕೂಗಿಗೆ ಇನ್ನೂ ಉತ್ತರ ದೊರಕ್ಕಿಲ್ಲ.1999ರಲ್ಲಿ  ಪ್ರವಾಹ ಸಂಭವಿಸಿದಾಗ ಇಲ್ಲಿನವರ ರಕ್ಷಣೆಗೆ ಸೇನೆಯ ಎಂಇಜಿ ವಿಭಾಗ ಕರೆಯಿಸಲಾಗಿತ್ತು. ತ್ವರಿತಗತಿಯಲ್ಲಿ ರಕ್ಷಣಾಕಾರ್ಯ ನಡೆದ್ದರಿಂದ ಪ್ರಾಣಹಾನಿ ತಪ್ಪಿಸಲಾಯಿತ್ತಾದರೂ ಪ್ರವಾಹಕ್ಕೆ ಸಿಲುಕಿ ಕರಡಿಗೋಡಿನಲ್ಲಿ ಮೂವರು ಪ್ರಾಣ ಕಳೆದುಕೊಂಡರು. ಮಳೆಗಾಲದಲ್ಲಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುವುದರಿಂದ ವಿಕೋಪ ಈ ಹಿಂದಿನಂತಯೇ ಮುಂದುವರೆಯುತ್ತಿದೆ.ಒಂದು ತಿಂಗಳ ಹಿಂದೆ ಪುಣೆ ರಾಷ್ಟ್ರೀಯ ವಿಪತ್ತು ನಿರ್ವಹಣಾ    ಪಡೆ (ಎನ್‌ಡಿಆರ್‌ಎಫ್)ನ   ಯೋಧರು ಹಾಗೂ  ವಿರಾಜಪೇಟೆ ತಾಲ್ಲೂಕು ಆಡಳಿತ ಆಗಮಿಸಿ ಪ್ರವಾಹ  ಸಂದರ್ಭ, ಜೀವ ರಕ್ಷಣೆ ಮತ್ತು    ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೆಂಬ ಕುರಿತು ಪ್ರಾತ್ಯಕ್ಷಿಕೆ ಹಾಗೂ ಕಾರ್ಯಗಾ ಹಮ್ಮಿಕೊಂಡಿತ್ತು.ವಾರದ ಹಿಂದಷ್ಟೇ  ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರವಾಹ ಸಂಭವಿಸುವ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗೃತ ಕ್ರಮದ ಬಗ್ಗೆ ಚರ್ಚಿಸಿದ್ದಾರೆ. ಕೆಲ ಪ್ರದೇಶಗಳಿಗೆ ಜನರು ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾರೆ. ಆದರೂ ಜನರ ಆತಂಕ, ಭೀತಿಯು ದಿನ ಉರುಳಿದಂತೆ ಇಮ್ಮಡಿಗೊಳ್ಳುತ್ತಿದೆ.ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು  ನಿವಾಸಿಗಳ ನಡುವೆ ಅನೇಕ ಬಾರಿ ನಡೆದ ಮಾತುಕತೆ ಫಲಪ್ರದವಾಗಿಲ್ಲ. ಕರಡಿಗೋಡಿನ ಅರಣ್ಯದಂಚಿನ ಜಾಗ ಗುರುತಿಸಿ ಸ್ಥಳಾಂತರಿಸಲು ಪ್ರಯತ್ನಿಸಿದರೂ ನಿವಾಸಿಗಳು ನಿರಾಕರಿಸಿದರು. ಪ್ರತೀ ವರ್ಷ ಪ್ರವಾಹ ಪೀಡಿತರಿಗೆ ಪರಿಹಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಾ ಬರಲಾಗುತ್ತಿದೆ. ಆದರೆ, ಶಾಶ್ವತ ಪರಿಹಾರ ಮಾತ್ರ ಇನ್ನೂ ಆಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.