ಸೋಮವಾರ, ಜೂನ್ 14, 2021
27 °C

ಪ್ರವೇಶಪತ್ರದಲ್ಲಿ ಜಾತಿ; ಎಸ್‌ಎಫ್‌ಐ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಪ್ರವೇಶ ಪತ್ರದಲ್ಲಿ ಜಾತಿ ನಮೂದಿಸಿರುವ ಕ್ರಮ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಪ್ರವೇಶ ಪತ್ರಗಳು ಕೇವಲ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಮಾತ್ರ ಬೇಕು. ಅವುಗಳಲ್ಲಿ ವಿದ್ಯಾರ್ಥಿಗಳ ಸಮಗ್ರ ಮಾಹಿತಿ ಒದಗಿಸಬಾರದು. ನೋಂದಣಿ, ಕೊಠಡಿ ಸಂಖ್ಯೆಗೆ ಮಾತ್ರ ಪ್ರವೇಶಪತ್ರ ಸೀಮಿತವಾಗಿರಬೇಕು. ಆದರೆ, ಈ ಬಾರಿ ಅದರಲ್ಲಿ ಜಾತಿ ನಮೂದಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರವೇಶ ಪತ್ರದಲ್ಲಿ ಜಾತಿ ನಮೂದಿಸುವುದರಿಂದ ಕೊಠಡಿ ಮೇಲ್ವಿಚಾರಕರು, ಉಪನ್ಯಾಸಕರು ಸ್ವಜಾತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬಗ್ಗೆ ಮೃದು ಧೋರಣೆ ತಾಳುವ ಸಾಧ್ಯತೆ ಇದೆ. ಅವರಿಗೆ ನಕಲು ಮಾಡಲು ಸಹಕರಿಸಬಹುದು ಅಥವಾ ತಮ್ಮ ಜಾತಿ ಅಲ್ಲ ಎನ್ನುವ ಕಾರಣಕ್ಕೆ ಅನಗತ್ಯ ಕಿರುಕುಳ ನೀಡಬಹುದು ಎಂದು ಆರೋಪಿಸಿದರು.ಇಂತಹ ಬೆಳವಣಿಗೆಯಿಂದ ಮುಂದೆ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಜಾತಿ ಆಧಾರದ ಮೇಲೆ ವಿಂಗಡಿಸಿ, ಅವಮಾನ ಮಾಡುವ ಸಾಧ್ಯತೆ ಇದೆ. ರಾಜ್ಯದ ಇತಿಹಾಸದಲ್ಲೇ ಬಿಜೆಪಿ ಸರ್ಕಾರ ಇಂತಹ ಕೆಟ್ಟ ಪರಂಪರೆಗೆ ಬುನಾದಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಾತಿ ನಮೂದಿಸಿರುವ ಪ್ರವೇಶ ಪತ್ರಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮುಂದೆ ಸುಡುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ, ನೀಡಿರುವ ಪ್ರವೇಶ ಪತ್ರ ರದ್ದುಪಡಿಸಿ ಹೊಸ ಪ್ರವೇಶ ಪತ್ರ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪರೀಕ್ಷೆ ಬಹಿಷ್ಕರಿಸಲು ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕಲ್ಲಹಳ್ಳಿ, ಮುಖಂಡರಾದ ಎಸ್.ಕೆ. ಶರಣಪ್ಪ, ಎಂ. ಕುಮಾರ್, ಶಶಿಧರ ನಾಯ್ಕ, ಹಾಲೇಶ್ ಕಮಲಾಪುರ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.