ಶನಿವಾರ, ಜೂನ್ 12, 2021
24 °C

ಪ್ರಶ್ನಾತೀತ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರುಗಳ ಸಾಲು... ಸಾಲು... ಕಿವಿಗೆ ಅಪ್ಪಳಿಸುವ ಪೊಲೀಸ್ ಸೈರನ್. ಮುಂದಿನ ಕಾರಿನಿಂದ ವಯೋವೃದ್ಧ ವ್ಯಕ್ತಿ ಇಳಿಯುತ್ತಿದ್ದಂತೆ ಜನರು  ಮುಗಿಬೀಳುತ್ತಾರೆ. ಕೂಡಲೇ `ಸ್ಟೆನ್‌ಗನ್~ ಹಿಡಿದ `ಎಸ್‌ಪಿಜಿ~ ಸಿಬ್ಬಂದಿ ಜಾಗೃತರಾಗುತ್ತಾರೆ. ಗುಂಪಿನಿಂದ ಅವರನ್ನು ಬಿಡಿಸಿಕೊಂಡು ವೇದಿಕೆ ಹತ್ತಿಸುತ್ತಾರೆ. ಜೈಕಾರಗಳು ಮೊಳಗುತ್ತವೆ. ನೆರೆದಿದ್ದವರನ್ನು ಉದ್ದೇಶಿಸಿ ಭಾಷಣ ಮಾಡುವ ಹಿರಿಯ ಮನುಷ್ಯ ಪುನಃ ಕಾರು ಹತ್ತಿ ಮುಂದಿನ ಹಾದಿ ಹಿಡಿಯುತ್ತಾರೆ.ಅವರೇ ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್! ಎತ್ತರದ ಸದೃಢ ಶರೀರ, ಮೊಳದುದ್ದದ ಬಿಳಿ ಗಡ್ಡ, ಕನ್ನಡಕ, ತಲೆಗೆ ನೀಲಿ ಟರ್ಬನ್. 84ವರ್ಷದ ಬಾದಲ್ ನವಯುವಕರಂತೆ ತಿರುಗಾಡುತ್ತಾರೆ. ಅವರ ಕಂಚಿನ ಕಂಠದಿಂದ ಮಾತುಗಳು ಸ್ಪಷ್ಟವಾಗಿ ಹೊರಬರುತ್ತವೆ. ಬಹುಶಃ ಅಧಿಕಾರವೆಂಬ `ಹುಲಿ ಸವಾರಿ~ ಅವರನ್ನು ಮಾನಸಿಕ-ದೈಹಿಕವಾಗಿ ಇನ್ನೂ `ಸಮರ್ಥ~ವಾಗಿರುವಂತೆ ಮಾಡಿರಬಹುದೇನೋ. ಆರೂವರೆ ದಶಕಗಳ ಸಕ್ರಿಯ ರಾಜಕಾರಣದ ಬಳಿಕವೂ ಅವರ ದೇಹ ದಣಿದಿಲ್ಲ!ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವ ಬಾದಲ್ ಮಲಗುವುದು ರಾತ್ರಿ 12ಕ್ಕೆ. ಚುನಾವಣೆ ಸಮಯದಲ್ಲಂತೂ ರಾಜ್ಯದ ಉದ್ದಗಲಕ್ಕೂ ಬಿಡುವಿಲ್ಲದೆ ಓಡಾಡಿದ್ದಾರೆ. ನೂರಾರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ್ದಾರೆ. ಸಿಖ್ಖರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದಾರೆ, ಎದುರಾಳಿಗಳು ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಇವರ ಈ ಪರಿಶ್ರಮ ಪಂಜಾಬ್ ಇತಿಹಾಸವನ್ನೇ ಬದಲಾಯಿಸಿದೆ. ಸತತ ಎರಡನೇ ಬಾರಿಗೆ ಶಿರೋಮಣಿ ಅಕಾಲಿ ದಳ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡಿದೆ.ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದೇ ಪಕ್ಷ ಸತತ ಎರಡನೇ ಸಲ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ಮತದಾರರ ಒಮ್ಮೆ ಅಕಾಲಿ ದಳವನ್ನು ಆಯ್ಕೆ ಮಾಡಿದರೆ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಚುನಾಯಿಸಿದ್ದಾರೆ. ಈ ಸಲದ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕ್ಯಾಪ್ಟನ್. ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಆಗುತ್ತಾರೆಂದು ಮಾಧ್ಯಮಗಳ ಮತಗಟ್ಟೆ ಸಮೀಕ್ಷೆ ಹಾಗೂ ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ, ಈ ಭವಿಷ್ಯ ಸುಳ್ಳಾಯಿತು. ಅಕಾಲಿದಳ- ಬಿಜೆಪಿ ಮೈತ್ರಿಕೂಟದ ಮೇಲೆ ಮತದಾರರು ಪುನಃ ವಿಶ್ವಾಸ ವ್ಯಕ್ತಮಾಡಿದ್ದಾರೆ.ಪ್ರಕಾಶ್‌ಸಿಂಗ್ ಬಾದಲ್ ಹೊಸ ಇತಿಹಾಸ ಬರೆದಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ಆಗಿ ಐದನೇ ಇನಿಂಗ್ಸ್ ಆರಂಭಿಸಲಿದ್ದಾರೆ. ಇದೇ 14 ರಂದು ಅವರ ಪ್ರಮಾಣ ವಚನ ಸಮಾರಂಭ. ಅಕಾಲಿದಳ ಅಧ್ಯಕ್ಷ ಉಪ ಮುಖ್ಯಮಂತ್ರಿ ಸುಖ್‌ಬೀರ್‌ಸಿಂಗ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ಪ್ರಕಾಶ್‌ಸಿಂಗ್ ದೂರ ಸರಿಯಬಹುದು ಎಂಬ ಊಹಾಪೋಹಗಳಿಗೆ ಸದ್ಯಕ್ಕೆ ತೆರೆಬಿದ್ದಿದೆ. ಬಹುತೇಕ ಇದು ಬಾದಲ್ ಅವರ ಕೊನೆಯ ಇನಿಂಗ್ಸ್ ಎಂದೇ ಸಿಖ್ ಸಮುದಾಯ ಭಾವಿಸಿದೆ.ಬಾದಲ್ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದು ಮೂರು ದಶಕಗಳ ಹಿಂದೆ. ಇದುವರೆಗೆ ನಾಲ್ಕು ಸಲ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಪ್ರಬಲ ಜಾಟ್ ಸಿಖ್ ಸಮುದಾಯಕ್ಕೆ ಸೇರಿದ ಪ್ರಕಾಶ್‌ಸಿಂಗ್ ಹುಟ್ಟಿದ್ದು 1927ರಲ್ಲಿ. ಮಾಲ್ವ ಪ್ರಾಂತ್ಯದ ಅಬುಲ್ ಖುರಾನ ಗ್ರಾಮದಲ್ಲಿ. ತಂದೆ ರಘುರಾಜ್ ಸಿಂಗ್ ಕೃಷಿಕರು. ತಾಯಿ ಸುಂದರಿ ಕೌರ್. 1959ರಲ್ಲಿ ಸುರೀಂದರ್ ಕೌರ್ ಅವರನ್ನು ಕೈಹಿಡಿದರು. ಇಬ್ಬರು ಮಕ್ಕಳು. ಪುತ್ರ ಸುಖ್‌ಬೀರ್. ಪುತ್ರಿ ಪ್ರಣೀತ್. ಕಳೆದ ವರ್ಷ ಪತ್ನಿ ತೀರಿಕೊಂಡಿದ್ದಾರೆ.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ವರ್ಷವೇ ಬಾದಲ್ ರಾಜಕೀಯಕ್ಕೆ ಪ್ರವೇಶ ಮಾಡಿದ್ದು. ಹತ್ತು ವರ್ಷಗಳ ಬಳಿಕ ವಿಧಾನಸಭೆ ಪ್ರವೇಶ. ಮೊದಲ ಸಲ ಸಚಿವರಾಗಿ 1969ರಲ್ಲಿ ನೇಮಕ. ಪಂಚಾಯತ್ ರಾಜ್ ಪಶುಸಂಗೋಪನೆ ಒಳಗೊಂಡಂತೆ ಹಲವು ಖಾತೆಗಳ ನಿರ್ವಹಣೆ. 1972, 1980 ಹಾಗೂ 2002ರಲ್ಲಿ ವಿರೋಧ ಪಕ್ಷದ ನಾಯಕ. 60ರ ದಶಕದಲ್ಲಿ ಸಿಖ್ಖರ ದೊಡ್ಡ ನಾಯಕರಾಗಿ ರೂಪುಗೊಂಡ ಪ್ರಕಾಶ್‌ಸಿಂಗ್ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದರು. ಅನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ಕೃಷಿ- ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ.ದೀರ್ಘ ಕಾಲ ಸೆರೆವಾಸ ಅನುಭವಿಸಿದ ರಾಜಕೀಯ ಮುಖಂಡರು ಯಾರಾದರೂ ಇದ್ದರೆ ಅದು ಪ್ರಕಾಶ್‌ಸಿಂಗ್ ಬಾದಲ್. ನಾಗರಿಕ ಹಕ್ಕು ಹೋರಾಟ, ಪಂಜಾಬ್ ಹಾಗೂ ಪಂಜಾಬಿ ಜನರ ಒಳಿತಿಗಾಗಿ ನಡೆದಿರುವ ಚಳವಳಿಗಳಲ್ಲಿ  ಭಾಗವಹಿಸಿ ಜೈಲುವಾಸ ಅನುಭವಿಸಿದ್ದಾರೆ. 80ರ ದಶಕದ `ಧರ್ಮಯುದ್ಧ ಮೋರ್ಚಾ ಚಳವಳಿ~ಯಲ್ಲೂ ಪಾಲ್ಗೊಂಡಿದ್ದಾರೆ. ಬಾದಲ್ ಅವರದ್ದು ಹೋರಾಟದ ಬದುಕು. ಅವರ ಜೀವಮಾನದ ಹದಿನೇಳು ವರ್ಷಗಳನ್ನು ಅವರು ಜೈಲಿನಲ್ಲಿ ಕಳೆದಿದ್ದಾರೆ. ಸಂವಿಧಾನದ ಪ್ರತಿ ಹರಿದೆಸೆದು ಟೀಕೆಗೆ ಒಳಗಾಗಿದ್ದಾರೆ. ಈ ಪ್ರಮಾದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಅನಂತರ ಸಂವಿಧಾನದ ಹೆಸರಿನಲ್ಲಿ ಮಂತ್ರಿಯಾಗಿ, ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ್ದು ರಾಜಕೀಯ ಜೀವನದ ದೊಡ್ಡ ವಿಪರ್ಯಾಸ.ಪಂಜಾಬಿನಲ್ಲಿ 80ರ ದಶಕದಲ್ಲಿ ತಲೆ ಎತ್ತಿದ ಪ್ರತ್ಯೇಕವಾದಿ ಚಳವಳಿ ಪರಿಣಾಮವಾಗಿ ಅಕಾಲಿ ರಾಜಕಾರಣ ಏಳುಬೀಳುಗಳನ್ನು ಕಂಡಿತು. ಆ ಸಮಯದಲ್ಲಿ ಬಾದಲ್ ದಿಕ್ಕು ತಪ್ಪಿದರೂ ಹತಾಶರಾಗಲಿಲ್ಲ. ಪಕ್ಷ ಕಟ್ಟುವ ಕೆಲಸ ನಿಲ್ಲಿಸಲಿಲ್ಲ. ರಾಜಕೀಯವಾಗಿ ಪ್ರಭಾವ ಹೊಂದಿರುವ  `ಎಸ್‌ಜಿಪಿಸಿ~ ಮೇಲೂ ಹಿಡಿತ ಬಿಗಿಗೊಳಿಸಿದರು.ರಾಜ್ಯ ವಿಧಾನಸಭೆಗೆ 1992ರಲ್ಲಿ ನಡೆದ ಚುನಾವಣೆಯನ್ನು ಅಕಾಲಿಗಳು ಬಹಿಷ್ಕರಿಸಿದರು. ಆಗ ಕಾಂಗ್ರೆಸ್ ವಿರುದ್ಧ ಅಕ್ರಮ ಮತದಾನದ ಆರೋಪ ಮಾಡಲಾಗಿತ್ತು. ಐದು ವರ್ಷದ ಬಳಿಕ ಬಾದಲ್ ಅಧಿಕಾರಕ್ಕೆ ಬಂದರು. ಅನಂತರ ಅಕಾಲಿಗಳ ನಡುವೆ ಅಧಿಕಾರಕ್ಕಾಗಿ ನಡೆದ ಕಿತ್ತಾಟ ಕೆಟ್ಟ ತಿರುವು ಪಡೆಯಿತು. ಪಕ್ಷ ಇಬ್ಭಾಗವಾಯಿತು. ಹಿರಿಯ ನಾಯಕ ಗುರುಚರಣ್‌ಸಿಂಗ್ ತೋಹ್ರ ಸೇರಿದಂತೆ ಹಲವು ಮುಖಂಡರು ಪಕ್ಷ ತೊರೆದರು. ಅಕಾಲಿ ಜಗಳ ಕಾಂಗ್ರೆಸ್‌ಗೆ ವರವಾಯಿತು. 2002ರಲ್ಲಿ ಬಾದಲ್ ಪಕ್ಷ ನೆಲಕಚ್ಚಿತು. ಕ್ಯಾ. ಅಮರೀಂದರ್ ಮುಖ್ಯಮಂತ್ರಿ ಗದ್ದುಗೆ ಏರಿದರು.ಮುಂದಿನ ಭಾಗ ಏನೆಂದು ಹೇಳಬೇಕಿಲ್ಲ. ಎಲ್ಲವೂ ದ್ವೇಷ- ಸೇಡಿನ ರಾಜಕಾರಣ. ಪ್ರಕಾಶ್‌ಸಿಂಗ್ ಹಗರಣಗಳನ್ನು ಹೆಕ್ಕಿ ತೆಗೆಯುವ ಕೆಲಸಕ್ಕೆ ಅಮರೀಂದರ್ ಕೈ ಹಾಕಿದರು. ಬಾದಲ್ ಮತ್ತು ಅವರ ಕುಟುಂಬ ಭಾರಿ ಭ್ರಷ್ಟಾಚಾರ ಮಾಡಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದೆ ಎಂದು ಆರೋಪಿಸಲಾಯಿತು. ಉಳಿದ ರಾಜಕಾರಣಿಗಳಂತೆ ಬಾದಲ್ ಮುಖಕ್ಕೆ ಕೆಸರು ಬಳಿದುಕೊಂಡರು. ಸ್ವಾರ್ಥ- ಸ್ವಜನಪಕ್ಷಪಾತದ ರಾಜಕಾರಣಕ್ಕೂ ಬಲಿಯಾದರು.ಪ್ರಕಾಶ್‌ಸಿಂಗ್ ಸ್ವಜನಪಕ್ಷಪಾತ ಯಾವ ಮಟ್ಟಕ್ಕೆ ಹೋಯಿತೆಂದರೆ 2007ರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದಲ್ಲಿ ಬಾದಲ್ ಮುಖ್ಯಮಂತ್ರಿ. ಸೋದರ ಗುರುದಾಸ್ ಪುತ್ರ ಮನ್‌ಪ್ರೀತ್ ಹಣಕಾಸು ಮಂತ್ರಿ, ಸೊಸೆ ಹರ್‌ಸಿಮ್ರತ್ ಕೌರ್ ಅವರ ಸೋದರ, ಮತ್ತೊಬ್ಬ ಸಂಬಂಧಿ ಸೇರಿ ಇವರ ಕುಟುಂಬದ ನಾಲ್ವರು ಮಂತ್ರಿಗಳು. ಮರು ವರ್ಷ ಪುತ್ರ ಸುಖ್‌ಬೀರ್‌ಸಿಂಗ್‌ಗೆ ಪಕ್ಷದ ಅಧ್ಯಕ್ಷ ಪಟ್ಟ. ಇದರ ಬೆನ್ನ ಹಿಂದೆಯೇ ಅಪ್ಪನ ಸರ್ಕಾರದಲ್ಲಿ ಮಗ ಉಪ ಮುಖ್ಯಮಂತ್ರಿ! ಅಕಾಲಿದಳ ಸಂಪೂರ್ಣವಾಗಿ ಪ್ರಕಾಶ್‌ಸಿಂಗ್ ಬಾದಲ್ ಕುಟುಂಬದ ಪ್ರೈವೇಟ್ ಕಂಪೆನಿ ಆಗಿಬಿಟ್ಟಿದೆ.ಪ್ರಕಾಶ್‌ಸಿಂಗ್ ಬಾದಲ್ ಅಧಿಕಾರ ವಹಿಸಿಕೊಂಡ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ವಿಚಾರಣೆಗೆ ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ವಿಚಾರಣಾ ಆಯೋಗ ರದ್ದು ಮಾಡಿದ್ದು. ಸಂಪುಟದ ಮೊಟ್ಟಮೊದಲ ಸಭೆಯಲ್ಲೇ ಈ ತೀರ್ಮಾನ ಕೈಗೊಂಡರು. ಕಳಂಕಿತರಾದ ಕೆಲವರನ್ನು ಸಚಿವರಾಗಿ ನೇಮಿಸಿದರು. ಜನ ಈ ಎಲ್ಲ ಬೆಳವಣಿಗೆಗಳನ್ನು ಮರೆತು ಮತ್ತೆ ಅಕಾಲಿದಳವನ್ನು ಬೆಂಬಲಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ರಕಾಶ್‌ಸಿಂಗ್ ಅವರ  ಮೃದು ನಡವಳಿಕೆ, ಹಾಸ್ಯ ಸ್ವಭಾವ, ಸರಳ ವ್ಯಕ್ತಿತ್ವ, ಜನರ ಜತೆ ಬೆರೆಯುವ ಗುಣ. ಎಲ್ಲರನ್ನು ಪ್ರೀತಿ- ವಿಶ್ವಾಸದಿಂದ ಕಾಣುವ ಹೃದಯ ಶ್ರೀಮಂತಿಕೆ. 2012ರ ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ್‌ಸಿಂಗ್ ಬಾದಲ್ ಗೆದ್ದಿದ್ದಾರೆ. ಆದರೆ, ಕುಟುಂಬವನ್ನು ಒಟ್ಟಿಗೆ ಕರೆದೊಯ್ಯುವಲ್ಲಿ ಸೋಲು ಕಂಡಿದ್ದಾರೆ. ಇದುವರೆಗೆ ಜತೆಗಿದ್ದ ಕಿರಿಯ ತಮ್ಮ ಗುರುದಾಸ್ ಅಣ್ಣನ ವಿರುದ್ಧವೇ ಕಣಕ್ಕಿಳಿದು ಸೋತು ಮನೆ ಸೇರಿದ್ದಾರೆ. ಇವರ ಪುತ್ರ ಹಿಂದಿನ ಸರ್ಕಾರದ ಹಣಕಾಸು ಸಚಿವ ಮನ್‌ಪ್ರೀತ್ ದೊಡ್ಡಪ್ಪನಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಕಟ್ಟಿ ಮಣ್ಣು ಮುಕ್ಕಿದ್ದಾರೆ. ಅಕಾಲಿದಳದ ಓಟಕ್ಕೆ ಕಡಿವಾಣ ಹಾಕುವ ಮನ್‌ಪ್ರೀತ್ ಉದ್ದೇಶ ವಿಫಲವಾಗಿದೆ. ಇವರ `ಪಂಜಾಬ್ ಪ್ರಜಾ ಪಕ್ಷ~ (ಪಿಪಿಪಿ) 23 ಕಡೆ ಕಾಂಗ್ರೆಸ್‌ಗೆ ಅಡ್ಡಗಾಲು ಹಾಕಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.ಮನ್‌ಪ್ರೀತ್ ದೊಡ್ಡಪ್ಪನನ್ನು ತೊರೆಯಲು ಅಧಿಕಾರ ಕಿತ್ತಾಟವೇ ಕಾರಣ. ಸುಖ್‌ಬೀರ್ ಅವರಿಗೆ ಅಕಾಲಿದಳದ ಅಧ್ಯಕ್ಷ ಪಟ್ಟ ಕಟ್ಟಲು, ಉಪ ಮುಖ್ಯಮಂತ್ರಿ ಹುದ್ದೆಗೆ ನೇಮಿಸಲು ಮನ್‌ಪ್ರೀತ್ ವಿರೋಧವಿತ್ತು. ಅದನ್ನು ಲೆಕ್ಕಿಸದೆ ಪ್ರಕಾಶ್‌ಸಿಂಗ್ ಮುನ್ನಡೆದಿದ್ದರು. ತಮ್ಮ ಮುಂದಿನ ಉತ್ತರಾಧಿಕಾರಿ ಸುಖ್‌ಬೀರ್ ಎಂದು ಅನಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಪಂಜಾಬಿನ ಮತದಾರರು ಬಾದಲ್ ಕುಟುಂಬದ ಕಲಹ ಲೆಕ್ಕಿಸದೆ ಪ್ರಕಾಶ್‌ಸಿಂಗ್ ಅವರನ್ನು ಬೆಂಬಲಿಸಿದ್ದಾರೆ. ಈಗಂತೂ ಪ್ರಕಾಶ್‌ಸಿಂಗ್ ಪಂಜಾಬಿನ ಪ್ರಶ್ನಾತೀತ ನಾಯಕ. ಇಷ್ಟೊಂದು ಜನಪ್ರಿಯತೆ ಹೊಂದಿದ ರಾಜಕಾರಣಿ ಮತ್ತೊಬ್ಬರಿಲ್ಲ ಎಂದರೆ ಅದು ಅತಿಶಯೋಕ್ತಿ ಅಲ್ಲ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.