ಗುರುವಾರ , ಮಾರ್ಚ್ 23, 2023
31 °C

ಪ್ರಶ್ನೆ - ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೃಜನ, ತುಮಕೂರು.

*ನಾನು ಎಷ್ಟೇ ಶ್ರಮವಹಿಸಿದರೂ 25ಕ್ಕೆ 23 ಕ್ಕಿಂತ ಹೆಚ್ಚು ಅಂಕ ಬರುತ್ತಿಲ್ಲ. ತಂದೆಯವರಿಗೆ ವರ್ಗವಾದ ಕಾರಣ ಹತ್ತನೇ ತರಗತಿಯಲ್ಲಿ ಹೊಸ ಶಾಲೆಗೆ ಸೇರಿದ್ದೇನೆ. ನಾನು ಪಬ್ಲಿಕ್ ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸಬಹುದು. ಟ್ಯೂಷನ್‌ಗೆ ಸಹಾ ಹೋಗುತ್ತಿದ್ದೇನೆ. ಉತ್ತರಿಸಿ.ಒಬ್ಬ ಅನುಭವೀ ಶಿಕ್ಷಕನಾಗಿ 25ಕ್ಕೆ 23 ಗಳಿಸಿದವರು ತುಂಬಾ ಜಾಣರು ಎಂದು ನನ್ನ ಭಾವನೆ. ಶಾಲೆ ಯಾವುದೇ ಇರಲಿ, ಟ್ಯೂಷನ್‌ಗೆ ಹೋಗಲಿ ಬಿಡಲಿ ನಿನಗೆ ಉತ್ತಮ ಅಂಕಗಳು ಬಂದೇ ಬರುತ್ತವೆ. ಈಗ ಮನಸ್ಸಿಟ್ಟು ಅಭ್ಯಾಸ ಮಾಡುತ್ತಿದ್ದೀಯ. ಇದನ್ನು ಮುಂದುವರಿಸು.ಇನ್ನು ನಿನ್ನಂತಹವರಿಗೆ ಹಾಗೂ ದೊಡ್ಡವರಿಗೂ ಹೇಳಬೇಕಾದ ವಿಚಾರವೊಂದಿದೆ. ಅಂಕಗಳಷ್ಟೇ ಮನುಷ್ಯನ ಎಲ್ಲ ವಿಧವಾದ ಸಾಮರ್ಥ್ಯಗಳನ್ನೂ ಸರಿಯಾಗಿ ಅಳೆಯುವ, ಅಳತೆ ಪಟ್ಟಿ ಅಲ್ಲ. ಅದಕ್ಕೂ ಒಂದು ಇತಿ ಮಿತಿ ಇದೆ. ನಮ್ಮಲ್ಲಿ ವಿದ್ಯಾರ್ಥಿಗಳನ್ನು ಅಳೆಯಲು ಬೇರೆಯ ಮಾನದಂಡ ಇಲ್ಲದಿರುವುದರಿಂದ ಇದನ್ನೇ ಅನುಸರಿಸುತ್ತಿದ್ದೇವೆ ಅಷ್ಟೇ. ಪ್ರಾಯಶಃ ನಿನಗಿಂತ ಕಿರಿಯರು ಹತ್ತನೇ ತರಗತಿಗೆ ಬರುವ ವೇಳೆಗೆ ಈ ಪದ್ಧತಿ ಬದಲಾಗಿ, 91 ರಿಂದ 100ರ ವರೆಗಿನ ಎಲ್ಲರೂ ಒಂದೇ ಗ್ರೇಡಿನಲ್ಲಿ ಸೇರಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಅಂಕ, ರ್ಯಾಂಕುಗಳಿಂದ ಮುಕ್ತಿಹೊಂದಿ ಮಕ್ಕಳು ಸಹಜವಾಗಿ ಕಲಿಯಬಲ್ಲ ಕಾಲ ಬೇಗ ಬರಲಿ.

ಎಂ ಸಂತೋಷ್, ಶಿವಮೊಗ್ಗ.

*ನಾನು ಬಿ.ಬಿ.ಎಂ. ಮೂರನೇ ಸೆಮಿಸ್ಟರ್‌ನಲ್ಲಿದ್ದು ನಂತರ ಎಲ್.ಎಲ್.ಬಿ., ಎಂಬಿಎ ಎರಡು ಕೋರ್ಸುಗಳನ್ನು ಮಾಡಬೇಕೆಂದಿದ್ದೇನೆ. ಮೊದಲು ಯಾವುದನ್ನು ಮಾಡಲಿ ಎಂಬ ಗೊಂದಲದಲ್ಲಿದ್ದೇನೆ. ಎಲ್.ಎಲ್.ಬಿ.ಯಲ್ಲಿ ಕ್ರಿಮಿನಲ್ ಅಥವಾ ಸಿವಿಲ್ ಅಭ್ಯಾಸ ನಡೆಸಲೇ, ಎಂ.ಬಿ.ಎ. ನಲ್ಲಿ ಲೇಬರ್ ಫೈನಾನ್ಸ್, ಅಕೌಂಟ್ಸ್, ಬ್ಯಾಂಕಿಂಗ್, ಇನ್ಸೂರೆನ್ಸ್ ಯಾವುದನ್ನು ಆರಿಸಿಕೊಳ್ಳಲಿ.

ನೀವಿನ್ನೂ 3ನೇ ಸೆಮಿಸ್ಟರಿನಲ್ಲಿರುವುದರಿಂದ ಕೋರ್ಸಿನ ಅಂತ್ಯದ ವೇಳೆಗೆ ನಿಮ್ಮ ಹಲವು ಪ್ರಶ್ನೆಗಳಿಗೆ ನಿಮ್ಮಲ್ಲೇ ಉತ್ತರಗಳು ಲಭ್ಯವಾಗುತ್ತವೆ ಎಂದು ನನ್ನ ಅನಿಸಿಕೆ. ನೀವು ಕಾನೂನು ಕ್ಷೇತ್ರಕ್ಕೆ ಪ್ರವೇಶಿಸಬೇಕೆಂದಿದ್ದರೆ ಮೊದಲು ಎಲ್.ಎಲ್.ಬಿ. ಮಾಡಿ ಆಡಳಿತಗಾರರಾಗಬೇಕಾದರೆ ಎಂಬಿಎ ಮಾಡಿ. ಇನ್ನು ವಿಷಯಗಳ ಆಯ್ಕೆ ಪ್ರಶ್ನೆ ಬಂದಾಗ ಯಾವುದಕ್ಕೆ ಅವಕಾಶಗಳು ಚೆನ್ನಾಗಿವೆ ಎನ್ನುವುದರ ಜೊತೆಗೆ ನಿಮ್ಮ ಆಸಕ್ತಿ, ನೀವು ಸೇರಬಯಸಿರುವ ಸಂಸ್ಥೆಯಲ್ಲಿ ಲಭ್ಯವಿರುವ ವಿಷಯಗಳು, ನಿಮ್ಮ ಅನುಕೂಲ ಅನಾನುಕೂಲಗಳು ಇತ್ಯಾದಿಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಗೊಂದಲಗಳನ್ನು ಇಟ್ಟುಕೊಳ್ಳದೆ, ಎರಡೂ ವಿಷಯಗಳ ಬಗ್ಗೆ ತುಲನಾತ್ಮಕವಾಗಿ ವಿಚಾರಿಸಿ, ತೀರ್ಮಾನವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಿ.

ತ್ವಾಹೇರಾ ಗ. ಕೆರೂಡಿ. ತಟ್ಟೇಹಳ್ಳಿ ಹಾವೇರಿ.

*ನಾನು ಒಂದನೆಯ ತರಗತಿಯಿಂದ ಡಿಎಡ್ ವರೆಗೆ ಉರ್ದು ವಿಷಯಗಳಿಂದ ಅಭ್ಯಾಸ ಮಾಡಿದ್ದೇನೆ. ಕನ್ನಡ ಮಾಧ್ಯಮದಲ್ಲಿ ಬಿಎ, ದೂರಶಿಕ್ಷಣ ಮುಗಿಸಿದ್ದೇನೆ. ಉರ್ದುವಿನಿಂದ, ಕನ್ನಡ ಮಾಧ್ಯಮ ತೆಗೆದುಕೊಂಡಿರುವುದರಿಂದ ಉದ್ಯೋಗಾವಕಾಶಗಳು ದೊರೆಯುತ್ತವೆಯೇ? 61%ಗೆ ಬಿ.ಎಡ್., ಸರ್ಕಾರಿ ಸೀಟು ಸಿಗುತ್ತದೆಯೇ?ನೌಕರಿಯ ದೃಷ್ಟಿಯಿಂದ ಹೇಳಬೇಕಾದರೆ ಮಾಧ್ಯಮ ಬದಲಾವಣೆಯಿಂದ ಯಾವ ತೊಂದರೆಯೂ ಇರುವುದಿಲ್ಲ. ನಿಮ್ಮ ಕನ್ನಡವೂ ಚೆನ್ನಾಗಿರುವುದು ನಿಮ್ಮ ಪತ್ರದಿಂದ ವ್ಯಕ್ತವಾಗುತ್ತದೆ. ಈಗ ಬಿ.ಎಡ್. ಸೀಟುಗಳಿಗೆ ಕಾಲೇಜುಗಳ ಹೆಚ್ಚಳದಿಂದ ಅವಕಾಶಗಳು ಚೆನ್ನಾಗಿವೆ. ಶ್ರಮವಹಿಸಿ ಪ್ರಯತ್ನಿಸಿ. ಸಿಗುವ ಸಾಧ್ಯತೆ ಇದೆ.

ಅಂಕಿತಾ ಬಿ. ಸಂಗೇಶ್, ಸೊರಬ.

*ಗುರುಗಳೇ ನಾನು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಕಲಿಯುತ್ತಿದ್ದೇನೆ. ಪ್ರಥಮ ದರ್ಜೆ ದೊರಕುತ್ತಿದೆ. ನನಗೆ ನೆನಪಿನ ಶಕ್ತಿ ಹೆಚ್ಚಾಗಿ ನಿಷ್ಠೆ ಆಸಕ್ತಿಗಳಿಂದ ಓದಲು ಸಲಹೆ ನೀಡಿ. ನನಗೆ ಉತ್ತಮ ಪ್ರಜೆಯಾಗಿ ಪ್ರಾಮಾಣಿಕವಾಗಿ ಬದುಕಲು ಆಸೆ. ನಾನು ಐಎಎಸ್ ಮಾಡಲು ಏನು ಮಾಡಬೇಕು.

 

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:shikshanapv@gmail.comನಿಮ್ಮ ವಯಸ್ಸಿಗೆ ಸಹಜವಾಗಿ ನೀವು ಭಾವನಾಪೂರ್ವಕ ಬರೆದ ಆದರ್ಶಮಯ ಪತ್ರ ಚೆನ್ನಾಗಿದೆ. ನಿಮಗೆ ನೀವು ಏನನ್ನು ಹೇಗೆ ಮಾಡಬೇಕೆಂಬ ಅರಿವಿದೆ. ಹಾಗೇ ಮುಂದುವರಿಯಿರಿ.ಐಎಎಸ್ ಪಡೆಯಲು ಪರೀಕ್ಷೆ ತೆಗೆದುಕೊಳ್ಳಲು ಪದವಿಯ ಅಗತ್ಯವಿದೆಯೇ ಹೊರತು, ಅದಕ್ಕೆ ಕಲಾ ವಿಭಾಗ ಅಡ್ಡಿಯಲ್ಲ. ಈ ಪರೀಕ್ಷೆಯ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಅನೇಕ ವಿವರಗಳು ಪ್ರಕಟವಾಗಿವೆ. ಮುಂದೆಯೂ ಲಭ್ಯವಿದೆ. ಉಪಯೋಗ ಪಡಿಸಿಕೊಳ್ಳಿ.

ರಿನ್ಸಿ, ಮಡಿಕೇರಿ.

*ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ. 90 ಗಳಿಸುತ್ತಿರುವ ನಾನು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಪಾಲಿಟೆಕ್ನಕ್ ಡಿಪ್ಲೊಮಾ ಮಾಡಿ ಕೆಲಸಕ್ಕೆ ಸೇರಬೇಕೆಂದಿದ್ದೇನೆ. ಹೆಚ್ಚು ಬೇಡಿಕೆ ಇರುವ ಕೋರ್ಸು ಯಾವುದು ತಿಳಿಸಿ.ಡಿಪ್ಲೊಮಾ ಮುಗಿಸಲು ನಿಮಗೆ ಮೂರು ವರ್ಷ ಬೇಕು. ಬಿ.ಕಾಂಗೂ ಸಹಾ ಅಷ್ಟೇ ಖರ್ಚಿನ ವಿಚಾರದಲ್ಲಿ ಎರಡೂ ಒಂದೇ. ಆದ್ದರಿಂದ ನೀವು ಬಿ.ಕಾಂ. ಮುಂದುವರಿಸುವುದು ಒಳ್ಳೆಯದು. ಅಲ್ಲಿ ಹೆಚ್ಚಿನ ಅವಕಾಶಗಳಿವೆ. ಇನ್ನು ಡಿಪ್ಲೊಮಾ ಕಲಿಯಬೇಕೆಂಬ ಅಭಿಲಾಷೆ ಇದ್ದರೆ ಅಲ್ಲಿ ವಾಣಿಜ್ಯ ಸಂಬಂಧಿತ ವಿಷಯಗಳೂ ಲಭ್ಯವಿದೆ. ಬೇರೆ ಇತರ ಆಯ್ಕೆಗಳೂ ಉಂಟು.

ರಕ್ಷಿತಾ ರಮೇಶ್,  ಕೊಪ್ಪ.

*ಎರಡನೇ ಪಿಯುಸಿ ವಾಣಿಜ್ಯದಲ್ಲಿರುವ ನನ್ನ ವಿದ್ಯಾಭ್ಯಾಸ ಮುಂದುವರಿಕೆ ಆರ್ಥಿಕ ಕಾರಣಗಳಿಂದ ನಿಲ್ಲಬಹುದಾದ ಪರಿಸ್ಥಿತಿ ಇದೆ. ಉದ್ಯೋಗದ ಭರವಸೆ ಇರುವ ಯಾವ ಕೋರ್ಸನ್ನು ನಾನು ಆಯ್ದುಕೊಳ್ಳಬಹುದು?ನೀವು ಹೇಗಾದರೂ ಪಿಯುಸಿ ಮುಗಿಸಿ. ಕಂಪ್ಯೂಟರ್‌ನಲ್ಲಿ ಈಗಾಗಲೇ ಡಿಸಿಎ ಮಾಡುತ್ತಿರುವುದರಿಂದ ಅದನ್ನೂ ಮುಂದುವರಿಸಿ. ವಾಣಿಜ್ಯ ಹಿನ್ನೆಲೆ ಇದ್ದು ಟ್ಯಾಲಿ ಮುಂತಾದವುಗಳಲ್ಲಿ ಕಲಿತು, ಸ್ವತಂತ್ರವಾಗಿ ಅಕೌಂಟ್ಸ್ ಬರೆಯ ಬಲ್ಲವರಿಗೆ ಇಂದು ಖಾಸಗಿ ರಂಗದಲ್ಲಿ ತುಂಬಾ ಬೇಡಿಕೆ ಇದೆ. ಇದಲ್ಲದೆ ಕಂಪ್ಯೂಟರ್ ಜ್ಞಾನ ಉಳ್ಳವರಿಗೆ ಡಿಟಿಪಿ ಮಾಹಿತಿ ನಿರ್ವಹಣೆ, ಇತ್ಯಾದಿಗಳಲ್ಲಿ ಕೆಲಸ ಲಭ್ಯವಿದೆ. ಇಗ್ನೋ ಮುಂತಾದ ದೂರಶಿಕ್ಷಣ ಸಂಸ್ಥೆಗಳಲ್ಲಿ ಲೈಬ್ರಿರಿಯನ್ ಮುಂತಾದ ಅನೇಕ ಕಡಿಮೆ ಅವಧಿಯ ಕೋರ್ಸುಗಳು ಲಭ್ಯವಿವೆ. ವಿವರಗಳನ್ನು ಇಂಟರ್‌ನೆಟ್‌ನಿಂದ ಪಡೆದುಕೊಳ್ಳಿ.

ರೂಪ, ಗೃಹಿಣಿ.

*19 ವರ್ಷದ ನನಗೆ 5ನೇ ತರಗತಿಯಿಂದ ಮುಂದೆ ಓದಲಾಗಲಿಲ್ಲ. ನಾನು 10ನೇ ತರಗತಿ ಪರೀಕ್ಷೆಗೆ ಖಾಸಗಿಯಾಗಿ ಕಟ್ಟಬಹುದೇ?ಖಂಡಿತವಾಗಿ ಕಟ್ಟಬಹುದು. ನಿಮ್ಮಲ್ಲಿ ಇರುವ ಟಿ.ಸಿ. ಹಾಗೂ ಅಂಕಪಟ್ಟಿಗಳು ನಿಮ್ಮ ಜನ್ಮ ದಿನಾಂಕದ ದಾಖಲೆಗೆ ನೆರವಾಗುತ್ತವೆ. ಯಾವುದಾದರೂ ಸಮೀಪದ ಅಂಗೀಕೃತ ಪ್ರೌಢಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಿ, ಖಾಸಗಿಯಾಗಿ ಪರೀಕ್ಷೆ ಬರೆಯಲು ವಿವರಗಳನ್ನು ಪಡೆಯಬಹುದು.ಈಗಿನ ದಿನಗಳಲ್ಲಿ ಓದನ್ನು ಮುಂದುವರೆಸಲು ಅನುಕೂಲಗಳು ಹೇರಳವಾಗಿವೆ. ದೂರಶಿಕ್ಷಣದ ಮೂಲಕ ವಯಸ್ಸಿನ ಆಧಾರದ ಮೇಲೆ ನೇರವಾಗಿ ಸ್ನಾತಕೋತ್ತರ ಪದವಿ ಗಳಿಸಲೂ ಕೂಡ ಅವಕಾಶಗಳಿವೆ. ಇದಲ್ಲದೆ ತಾಂತ್ರಿಕ ವೃತ್ತಿ ಶಿಕ್ಷಣ, ಕಂಪ್ಯೂಟರ್ ತರಬೇತಿ ಮುಂತಾದವೂ ಲಭ್ಯವಿವೆ. ಇನ್ನೂ ಚಿಕ್ಕವಯಸ್ಸಿನ ನೀವು ಓದಿನಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

ಜನಾರ್ದನ್ ಪಿ., ಬೆಂಗಳೂರು

*ನಾನು ದ್ವಿತೀಯ ಪಿಯುಸಿಯಲ್ಲಿ ಐದು ಸಲ ಕಟ್ಟಿದರೂ ಪಾಸು ಆಗುತ್ತಿಲ್ಲ. ಈ ಸಲ ಕಟ್ಟಿರುತ್ತೇನೆ. ಪಾಸ್ ಆಗುತ್ತದೆಯೊ ಇಲ್ಲವೊ ತಿಳಿಸಿ. ನಾನು ಮುಂದಿನ ವಿದ್ಯಾಭ್ಯಾಸ ಏನು ಮಾಡಿದರೆ ಒಳ್ಳೆಯದು. ಕಲಾ ವಿಭಾಗದ ನಾನು ಐಐಟಿ ಮಾಡಬಹುದೇ?ಮರಳಿ ಯತ್ನ ಮಾಡುತ್ತಿರುವ ನೀವು ಪಾಸಾಗದಿರಲು ಬೇರೆ ಬೇರೆ ಕಾರಣಗಳಿರಬಹುದು. ವಿಷಯಗಳ ಮೂಲಭೂತ ತಿಳುವಳಿಕೆ, ಪರೀಕ್ಷೆಯಲ್ಲಿ ಉತ್ತರಿಸುವ ತಂತ್ರ ಮತ್ತು ಕೌಶಲಗಳು, ನಿಮ್ಮ ಅಭ್ಯಾಸದ ರೀತಿ ನೀತಿಗಳು ಹೀಗೆ ಇರಬಹುದಾದ ಕಾರಣ ಹುಡುಕಿ ಅದಕ್ಕೆ ನಿವಾರಣೋಪಾಯ ಕಂಡುಕೊಳ್ಳಿ. ಈ ಬಾರಿ ಪರೀಕ್ಷೆಗೆ ಕಟ್ಟಿರುವುದರಿಂದ ಸಂಪೂರ್ಣ ಪ್ರಯತ್ನ ಮಾಡಿ ಹಾಗೂ ವಿಫಲರಾದರೆ ಹತಾಶೆ ಬೇಡ. ಉದ್ಯೋಗ ಪಡೆಯಲು ಅನೇಕ ತರಬೇತಿಗಳು ಅನುಕೂಲಗಳು ಇವೆ. ಸ್ವಯಂ ಉದ್ಯೋಗ ಸಹಾ ಅನುಕೂಲವಿದ್ದರೆ ಮಾಡಬಹುದು. ನಿಮ್ಮ ಎಸ್.ಎಸ್.ಎಲ್.ಸಿ. ಆಧಾರದ ಮೇಲೆ ಐ.ಟಿ.ಐ., ಡಿಪ್ಲೊಮಾ ಮಾಡಬಹುದು. ಕಲಾವಿಭಾಗದಲ್ಲಿರುವುದು ಇದಕ್ಕೆ ಅಡ್ಡಿಯಾಗುವುದಿಲ್ಲ.

ಶ್ರೀಧರ, ಬಳ್ಳಾರಿ.

*ನಾನು ಎಸ್.ಎಸ್.ಎಲ್.ಸಿ. ಮುಗಿಸಿ 3 ವರ್ಷಗಳಿಂದ ಎಕ್ಸ್‌ಪೋರ್ಟ್ ಸಂಸ್ಥೆಯ ಸಣ್ಣ ಹುದ್ದೆಯಲ್ಲಿದ್ದೇನೆ. ನಾನು ಡಿಪ್ಲೊಮಾ ಇನ್ ಮಾರ್ಕೆಟಿಂಗ್ ಅಂಡ್ ಎಕ್ಸ್‌ಪೋರ್ಟ್ ಅಂಡ್ ಮ್ಯಾನೇಜ್‌ಮೆಂಟ್ ಇಂತಹ ಕೋರ್ಸುಗಳನ್ನು ದೂರ ಶಿಕ್ಷಣದಲ್ಲಿ ಮಾಡಬಹುದೇ? ನನಗೆ ಬಹಳ ಆಸಕ್ತಿ ಇರುವುದರಿಂದ ಕಾಲೇಜು ವಿವರ ತಿಳಿಸಿ.ನೀವು ತಿಳಿಸಿರುವಂತಹ ಅನೇಕ ಕೋರ್ಸುಗಳು ಲಭ್ಯವಿವೆ. ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿ ಇಗ್ನೋದ ವೆಬ್‌ಸೈಟ್ ಅಥವಾ ಅದರ ಅಂಗೀಕೃತ ಸಂಸ್ಥೆಗಳಿಂದ ವಿವರ ಪಡೆಯಿರಿ. ಇದೂ ಅಲ್ಲದೆ ಪತ್ರಿಕೆಗಳಲ್ಲಿ ಬರುವ ಇತರ ವಿ.ವಿ.ಗಳ ಜಾಹೀರಾತನ್ನೂ ಗಮನಿಸಬಹುದು.

ಚನ್ನಬಸಮ್ಮ ಯು. ಚಿಲುಗೋಡು, ಬಳ್ಳಾರಿ.

*ನಾನು ಡಿ.ಎಡ್ ಮಾಡಿ ಸಿಇಟಿ ಬರೆದು ಉತ್ತಮ ಅಂಕ ಗಳಿಸಿದ್ದರೂ ಒಂದು ಬಾರಿ ಕೈತಪ್ಪಿ ಹೋಗಿದೆ. ಮತ್ತೆ ತಯಾರಿ ನಡೆದಿದೆ. ನಿಮ್ಮ ಅಂಕಣದಲ್ಲಿ ಪ್ರತಿಯೊಬ್ಬರೂ ಟೆಕ್ನಿಕಲ್ ಕೋರ್ಸುಗಳ ಬಗ್ಗೆ ಕೇಳುವುದರಿಂದ ಕಲಾ ವಿಭಾಗದ ನನಗೆ ಬಹಳ ಬೇಸರವಾಗಿದೆ. ವಾಕ್‌ಚಾತುರ್ಯ ಮುಂದೆ ಓದಬೇಕೆಂಬ ಹಂಬಲ ಇರುವ ನಾನು ಪತ್ರಿಕೋದ್ಯಮ ಓದಬಹುದೇ? ಉದ್ಯೋಗಾವಕಾಶಗಳಿವೆಯೇ? ಕಲಾ ವಿಭಾಗ ಓದಿ ಕೇವಲ ಒಂದನ್ನೇ ನಂಬಿಕೊಂಡು, ಯಾವ ಮಾಹಿತಿಯೂ ಗೊತ್ತಿಲ್ಲದ ನಮ್ಮಂತಹ ವಿದ್ಯಾರ್ಥಿಗಳಿಗೆ ದಾರಿ ದೀಪವಾಗುತ್ತೀರಿ ಎಂದು ಭಾವಿಸಿದ್ದೇನೆ ಗುರುಗಳೇ.ಇದು ಮಾಹಿತಿ ಯುಗ. ಸ್ವಲ್ಪ ಆಸಕ್ತಿ ವಹಿಸಿದರೆ ಮಾಹಿತಿಯ ಮಹಾಪೂರವೇ ನಿಮ್ಮಲ್ಲಿಗೆ ಬರುತ್ತದೆ. ಅನೇಕ ಕಡೆಗಳಲ್ಲಿ ತಾಂತ್ರಿಕ ವಿಭಾಗಕ್ಕೆ ಮಾತ್ರ ಅನುಕೂಲಗಳು ಇರುವುದರಿಂದ ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಇರುವವರೂ ಅನಿವಾರ್ಯವಾಗಿ ಅದನ್ನೇ ಕಲಿಯಬೇಕಾಗುತ್ತದೆ. ಹಾಗೆಂದು ಕಲಾ ಶಿಕ್ಷಣ ಎರಡನೆಯ ದರ್ಜೆಯದು ಎಂಬ ಭಾವನೆಯನ್ನು ನಾನು ಒಪ್ಪುವುದಿಲ್ಲ. ಕಲಿಕೆ ಯಾವುದೇ ಇರಲಿ ಸ್ವಂತ ಪರಿಶ್ರಮದಿಂದ ಮುಂದೆ ಬರಲು ಅವಕಾಶಗಳಿವೆ. ಒಂದು ವಿಭಾಗದಿಂದ ಮತ್ತೊಂದಕ್ಕೆ ಬದಲಾವಣೆಯೂ ಆಸಕ್ತಿ ಇರುವವರಿಗೆ ಸಾಧ್ಯವಾಗುತ್ತದೆ.ಪತ್ರಿಕೋದ್ಯಮದಲ್ಲಿ ಓದಲು ಅನೇಕ ಕಾಲೇಜು ಹಾಗೂ ದೂರ ಶಿಕ್ಷಣದಲ್ಲಿ ತುಂಬಾ ಅವಕಾಶಗಳಿವೆ. ಪ್ರತಿಭೆ, ವೃತ್ತಿಪರತೆ ಇರುವವರನ್ನು ಉದ್ಯೋಗಗಳು ಕೈಬೀಸಿ ಕರೆಯುತ್ತಿವೆ. ಕೇವಲ ವೃತ್ತ ಪತ್ರಿಕೆಗಳು ಮಾತ್ರವಲ್ಲ ಟಿ.ವಿ. ರೇಡಿಯೋ ಮುಂತಾದ ಮಾಧ್ಯಮಗಳು, ಬರವಣಿಗೆ ಪುಸ್ತಕ ಪ್ರಕಾಶಕರು, ಶಿಕ್ಷಣ, ಹೀಗೆ ಹಲವು ಹತ್ತುಕಡೆ ಉದ್ಯೋಗ ಲಭ್ಯ.

ಈ ಅಂಕಣದಲ್ಲಿ ವೃತ್ತಿ ಪರ ತಾಂತ್ರಿಕ ಕೋರ್ಸುಗಳ ಬಗ್ಗೆ ಮಾತ್ರ ಆದ್ಯತೆ ಇರುವುದಿಲ್ಲ. ಇದಕ್ಕೆ ನಿಮಗೆ ಸಿಕ್ಕಿರುವ ಉತ್ತರವೇ ಸಾಕ್ಷಿ.

ವಿವೇಕಾನಂದ. ಎಸ್., ಕಮಲಾನಗರ, ಬೆಂಗಳೂರು.

ಐಟಿಐ ಕಲಿತಿರುವ ನಾನು ಭಾರತ ಸರ್ಕಾರದ ಸೇವೆಯಲ್ಲಿದ್ದೇನೆ. 31 ವರ್ಷದ ನಾನು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂದೆ ಕಲಿಯಲು ಸರ್ಕಾರವು ನನಗೆ ಪ್ರೋತ್ಸಾಹಿಸುತ್ತದೆಯೇ?ನೀವು ಡಿಪ್ಲೊಮಾವನ್ನು ಸಂಜೆ ಕಾಲೇಜುಗಳಲ್ಲಿ ಕಲಿಯಲು ಅವಕಾಶಗಳಿವೆ. ನಿಮ್ಮ ಮೇಲಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ, ಅವರ ಅನುಮತಿ ಪಡೆದುಕೊಂಡು ನಿಮ್ಮ ವೃತ್ತಿಗೆ ಅದು ಬಾಧಕವಾಗದಂತೆ ಕಲಿಕೆ ಮುಂದುವರಿಸಿ. ದೂರಶಿಕ್ಷಣದಲ್ಲೂ ಅನೇಕ ಕೋರ್ಸುಗಳು ಲಭ್ಯವಿವೆ.

ಅಕ್ಷಯ್ ಎಸ್. ರಾವ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು.

ಹತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ನಾನು ವಾಯುಪಡೆಯ ಅಧಿಕಾರಿ ಆಗಬೇಕೆಂದಿದ್ದೇನೆ. ಅದಕ್ಕೆ ಯಾವ ವಿಷಯಗಳನ್ನು ತೆಗೆದುಕೊಂಡು ಓದಬೇಕು. ಬಿ.ಇ. ಮಾಡಬೇಕೇ ತಿಳಿಸಿ.ಅಧಿಕಾರಿಯಾಗಲು ನೀನು ಭೌತಶಾಸ್ತ್ರ ಸೇರಿದಂತೆ ವಿಜ್ಞಾನ ವಿಷಯಗಳಲ್ಲಿ ಪದವಿ ಗಳಿಸಬೇಕು. ಬಿ.ಇ. ಸಹಾ ಉತ್ತಮ. ಪಿ.ಯು.ಸಿ. ಸೇರುವಾಗ ಎನ್.ಸಿ.ಸಿ., ಇರುವ ಕಾಲೇಜಿಗೆ ಸೇರಿಕೊಂಡರೆ, ಅಲ್ಲಿ ಉತ್ತಮ ಸಾಧನೆ ಮಾಡಿ ಸಿ ಸರ್ಟಿಫಿಕೇಟ್ ಪಡೆದುಕೊಂಡರೆ ಆದ್ಯತೆ ಸಿಗುತ್ತದೆ. ವಾಯುಪಡೆಯಲ್ಲಿ ಪೈಲಟ್, ತಾಂತ್ರಿಕ ಅಧಿಕಾರಿ ಮತ್ತು ಇತರ ಅನೇಕ ಸೇವಾ ಕ್ಷೇತ್ರಗಳಿವೆ. ವೈದ್ಯಕೀಯ ಪದವಿ ಪಡೆದವರಿಗೂ ಅವಕಾಶಗಳಿವೆ. ಡಿಗ್ರಿ ಮುಗಿದ ತಕ್ಷಣ, ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ, ಶರೀರಧಾರ್ಢ್ಯತೆಯಿರುವ ಕಿರಿವಯಸ್ಸಿನ ಯುವಕರಿಗೆ ವಾಯುಪಡೆಯಲ್ಲಿ ಒಳ್ಳೆಯ ಅವಕಾಶಗಳಿವೆ. ದೇಶ ಸೇವೆ ಮಾಡಲು ಬಯಸುವ ನಿಮಗೆ ಅಭಿನಂದನೆಗಳು.

ಟಿ. ಎಸ್. ಅಭಿಲಾಷ್, ತುಮಕೂರು.

ಪ್ರಥಮ ಪಿ.ಯು.ಸಿ. ಓದುತ್ತಿರುವ ನನಗೆ ಪೈಲಟ್ ಆಗಬೇಕೆಂಬ ಆಸೆ. ವಿದ್ಯಾರ್ಹತೆ, ದೈಹಿಕ ಸಾಮರ್ಥ್ಯ, ತಗಲುವ ವೆಚ್ಚ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿ.ಸಿವಿಲ್ ಏವಿಯೇಷನ್ ಇಲಾಖೆಯಿಂದ ಅಂಗೀಕೃತವಾದ ಪೈಲೆಟ್ ತರಬೇತಿ ನೀಡುವ ಸಂಸ್ಥೆಗಳ ವಿವರಗಳನ್ನು ನೆಟ್‌ನಿಂದ ಪಡೆಯಬಹುದು. ಪದವಿ ಇದ್ದಲ್ಲಿ ಉತ್ತಮ. ಖಾಸಗಿಯಾಗಿ ಪೈಲಟ್ ಶಿಕ್ಷಣ ಪಡೆಯುವುದು ಸ್ವಲ್ಪ ದುಬಾರಿಯೇ ಸರಿ.

ಮಹೇಶ, ಎಚ್.ಡಿ.ಕೋಟೆ, ಮೈಸೂರು.

ನಾನು ಮೈಸೂರಿನಲ್ಲಿ ಪತ್ರಿಕೋದ್ಯಮ ತೆಗೆದುಕೊಂಡು ಬಿ.ಎ. ಕಲಿಯುತ್ತಿದ್ದೇನೆ. ಟಿ.ವಿ. ಚಾನೆಲ್‌ಗಳಲ್ಲಿ ನಿರೂಪಕನಾಗಲು ಯಾವ ವಿಷಯವನ್ನು ಓದಬೇಕು?ಪತ್ರಿಕೋದ್ಯಮ ಪದವಿಯಿಂದ ಮಾಧ್ಯಮಗಳಲ್ಲಿ ಕೆಲಸ ಮಾಡಲು ಅರ್ಹತೆ ಲಭಿಸುತ್ತದೆ. ಟಿ.ವಿ. ಪರದೆಯ ಹಿಂದೆ ಕೆಲಸ ಮಾಡುವವರೂ ಅನೇಕರು ಇರುತ್ತಾರೆ. ನಿರೂಪಕರಾಗಬೇಕಾದರೆ ಒಳ್ಳೆಯ ಭಾಷಾಜ್ಞಾನ, ವಾಕ್ಚಾತುರ್ಯ, ಸಮಯಪ್ರಜ್ಞೆ, ತಾಳ್ಮೆ, ಮುಂತಾದ ಗುಣಗಳನ್ನು ನೀವು ಬೆಳೆಸಿಕೊಳ್ಳಬೇಕಾಗುತ್ತದೆ. ಮಾಧ್ಯಮದವರು ಅಪೇಕ್ಷಿಸುವ ಮುಖಲಕ್ಷಣ ಹಾಗೂ ಉತ್ತಮ ಧ್ವನಿಯನ್ನೂ ನೀವು ಹೊಂದಿದ್ದರೆ ಅದು ಪ್ಲಸ್ ಪಾಯಿಂಟ್.

ಕವಿತಾ ಎ.ಬಿ., ಹಾವೇರಿ ಜಿಲ್ಲೆ.

ನಾನು ಪಿ.ಯು.ಸಿ. ಕಲಿತು ಈಗ ಫಿಸಿಯೋಥೆರಪಿ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ಬಗ್ಗೆ ಕೆಲವರು ಉದ್ಯೋಗ ಅವಕಾಶ ಕಡಿಮೆ ಎನ್ನುತ್ತಿದ್ದಾರೆ. ಗೊಂದಲವಿದೆ ಮಾಹಿತಿ ನೀಡಿ.ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ಯಾರಾ ಮೆಡಿಕಲ್ ಕಾರ್ಯಕರ್ತರ ಬೇಡಿಕೆ ಹೆಚ್ಚಿದೆ. ಪಿಸಿಯೋಥೆರಪಿ ಕಲಿತವರಿಗೆ ಆಸ್ಪತ್ರೆಗಳು, ಕ್ರೀಡಾ ಸಂಸ್ಥೆಗಳು, ಶುಶ್ರೂಷಾ ಕೇಂದ್ರಗಳು ಇಲ್ಲೆಲ್ಲಾ ಅವಕಾಶಗಳಿವೆ. ಸರ್ಕಾರಿ ಸೇವೆಗೂ ಸೇರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಕಲಿತ ಪ್ರತಿಭಾನ್ವಿತ ನಿಪುಣರು ಖಾಸಗಿಯಾಗಿ ವೈದ್ಯರುಗಳಷ್ಟೇ ಹಣ ಸಂಪಾದಿಸುತ್ತಿದ್ದಾರೆ. ಗೊಂದಲ ಬೇಡ. ಚೆನ್ನಾಗಿ ಓದಿ.

ಚನ್ನು ಎಸ್. ಎಚ್.

ನಾನು ಬಿ.ಎ. 5ನೇ ಸೆಮಿಸ್ಟರಿನಲ್ಲಿ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕಂಪ್ಯೂಟರ್ ಅಪ್ಲಿಕೇಷನ್ ಕಲಿಯುತ್ತಿದ್ದೇನೆ. ನನಗೆ ಎಂ.ಎಸ್.ಡಬ್ಲ್ಯು. ಕಲಿಯುವ ಆಸೆ ಇದೆ. ಈ ಕೋರ್ಸಿನ ಬಗ್ಗೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ.ಮಾಸ್ಟರ್ ಆಫ್ ಸೋಷಿಯಲ್ ವರ್ಕ್ ಮಾಡಲು ನೀವು ಕಲಿಯುತ್ತಿರುವ ಸಮಾಜಶಾಸ್ತ್ರ ನೆರವಾಗುತ್ತದೆ. ಇದರಿಂದ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಅವಕಾಶ ಇದೆ. ಸರ್ಕಾರೇತರ ಸಂಸ್ಥೆಗಳಾದ ಎನ್.ಜಿ.ಓ. ಗಳಲ್ಲಿ ನಿಪುಣರಿಗೆ ಹೆಚ್ಚು ಅವಕಾಶಗಳಿವೆ. ನಿಮ್ಮ ಕಂಪ್ಯೂಟರ್ ಜ್ಞಾನವೂ ಸಹಾ ಉದ್ಯೋಗ ಪಡೆಯಲು ಸಹಾಯಕಾರಿ.

ಸುಕನ್ಯ ಎ. ವಿ., ಬೆಂಗಳೂರು.

ನನ್ನ ಮಗಳು ಸೈಕಾಲಜಿ, ಎಕನಾಮಿಕ್ಸ್ ಸೋಷಿಯಾಲಜಿ ತೆಗೆದುಕೊಂಡು ಬಿ.ಎ. ಕಲಿಯುತ್ತಿದ್ದಾಳೆ. ಸೈಕಾಲಜಿಯಲ್ಲಿ ಯಾವುದಕ್ಕೆ ಹೆಚ್ಚು ಸ್ಕೋಪ್ ಇದೆ. ಎಂ.ಬಿ.ಎ. ಕಲಿಯಲು ಏನು ಮಾಡಬೇಕು?ಸೈಕಾಲಜಿಯಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಅನೇಕ ಶಾಖೆಗಳಿವೆ. ಆಸಕ್ತಿ ಇರುವ ವಿಷಯವನ್ನು ಕಲಿತು ಮುಂದೆ ಇನ್ನೂ ಹೆಚ್ಚಿನ ವ್ಯಾಸಂಗ ಮುಂದುವರಿಸಿ. ಸ್ಪೆಷಲೈಸೇಷನ್ ಮಾಡಿಕೊಂಡರೆ ಉದ್ಯೋಗಾವಕಾಶಗಳು ಹೇರಳವಾಗಿವೆ. ಎಂಬಿಎ ಮಾಡಲು ಪದವಿ ಇರಬೇಕು. ನಿಮ್ಮ ಮಗಳು ಆಡಳಿತಾತ್ಮಕ ಕೆಲಸ ಮಾಡಲು ಇಷ್ಟಪಟ್ಟರೆ ಪದವಿಯ ನಂತರ ಮಾಡಬಹುದು. ಸೈಕಾಲಜಿಯಲ್ಲಿ ಒಂದು ಹಂತ ತಲುಪಿದ ನಂತರ ಆಸಕ್ತಿ ಇದ್ದಲ್ಲಿ ಅದನ್ನೂ ಓದಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.