ಗುರುವಾರ , ಮೇ 6, 2021
23 °C

ಪ್ರಶ್ನೆ - ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಜೀತ, ರಾಜೇಂದ್ರನಗರ, ಶಿವಮೊಗ್ಗ

* ನಾನು ಬಿ.ಸಿ.ಎ. ಅನ್ನು ಶೇ 90 ಅಂಕಗಳಿಸಿ ಪಾಸ್ ಮಾಡಿದ್ದೇನೆ. ಮದುವೆಯಾಗಿ ಮಗು ಆದರೂ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡು ಡಿಗ್ರಿ ಮುಗಿಸಿದ್ದೇನೆ.ಐ.ಎ.ಎಸ್ ಮಾಡುವ ಗುರಿ ಇದೆ. ಆದರೆ ಎಲ್ಲರೂ ಸರ್ಕಾರಿ ಕೆಲಸ ಬಿಡಬೇಡ ಎಂದು ಹೇಳುತ್ತಾರೆ. ಕೆಲಸವನ್ನು ಮಾಡಿಕೊಂಡು ಓದಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಒಳ್ಳೆಯ ಕೋಚಿಂಗ್ ಸೆಂಟರ್, ಜೊತೆಗೆ ಲೇಡಿಸ್ ಹಾಸ್ಟೆಲ್ ಸೌಲಭ್ಯ ಎಲ್ಲಿದೆ ತಿಳಿಸಿ ಹಾಗೂ ನಾನು ಯಾವ ವಿಷಯವನ್ನು ತೆಗೆದುಕೊಂಡರೆ ಅನುಕೂಲ ತಿಳಿಸಿ.
 ನೀವು ಸಾಕಷ್ಟು ಅಡೆತಡೆಗಳಿದ್ದರೂ ಉತ್ತಮ ಶ್ರೇಣಿಯಲ್ಲಿ ಡಿಗ್ರಿ ಮುಗಿಸಿರುವುದು ಅಭಿನಂದನೀಯ.  ನಿಮ್ಮ ಪತ್ರದಿಂದ ನೀವು ಗುರಿಸಾಧಿಸಬಲ್ಲಿರಿ ಎಂದು ನನಗೆ ಅನಿಸುತ್ತದೆ. ನಿಮಗೆ ಮನೆಯಲ್ಲಿ ಆರ್ಥಿಕ ಅನುಕೂಲ ಇದ್ದರೆ ಹಾಗೂ ಬೇರೆ ತೊಂದರೆಗಳಿಲ್ಲದಿದ್ದರೆ ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು.ಆದರೆ ಇದು ಆಯ್ಕೆ ಪರೀಕ್ಷೆಯಾದ್ದರಿಂದ ಸಾಕಷ್ಟು ತಾಳ್ಮೆ ಹಾಗೂ ಪ್ರಯತ್ನ ಬೇಕಾಗುತ್ತದೆ. ಬಿ.ಸಿ.ಎ. ಮಾಡಿರುವುದರಿಂದ ಈಗಿರುವ ಕೆಲಸಕ್ಕಿಂತ ಇನ್ನೂ ಉತ್ತಮ ಕೆಲಸ ಸಿಗುವುದು ಕಷ್ಟವೇನಿಲ್ಲ.

 

ಬೆಂಗಳೂರು, ಮೈಸೂರು ಸೇರಿದಂತೆ ಕೆಲವು ದೊಡ್ಡ ಊರುಗಳಲ್ಲಿ ಕೋಚಿಂಗ್ ಸೆಂಟರ್‌ಗಳು ಇರುತ್ತವೆ. ಲೇಡಿಸ್ ಹಾಸ್ಟೆಲ್ ಸೌಕರ್ಯ ಸಹ ಸಿಗುತ್ತದೆ. ವಿಷಯಗಳ ಆಯ್ಕೆ ಬಗ್ಗೆ ನೀವೇ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಅಶ್ವಿನಿ, ಕುಂದಾಪುರ

* ನಾನು ಪ್ರಥಮ ಬಿ.ಕಾಂ.ನಲ್ಲಿ ಓದುತ್ತಿದ್ದು, ಸಿ.ಎ. ಅಥವಾ ಎಂ.ಬಿ.ಎ. ಮಾಡುವ ತೀರ್ಮಾನವಿದೆ. ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಯುತ್ತಿಲ್ಲ. ಗೊಂದಲದಲ್ಲಿದ್ದೇನೆ. ಸಿ.ಎ. ಮಾಡಿದರೆ ಮುಂದೆ ಉದ್ಯೋಗ ಬೇಗ ಸಿಗಬಹುದೇ?ನಾವು ತುಂಬಾ ಬಡವರು, ಯಾವ ಯಾವ ಪುಸ್ತಕಗಳನ್ನು ಓದಿ ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ದಯವಿಟ್ಟು ದಾರಿ ತೋರಿ. ದ್ವಿತೀಯ ಪಿ.ಯು.ಸಿ.ಯಲ್ಲಿ ಶೇಕಡ 81 ಅಂಕ ಪಡೆದಿರುತ್ತೇನೆ.  ಸಿ.ಎ. ಪರೀಕ್ಷೆ ಮಾಡಬೇಕಾದರೆ ಬಿ.ಕಾಂ. ನಂತರ ಎರಡು ಹಂತಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಒಬ್ಬ ಹಿರಿಯ ಆಡಿಟರ್ ಬಳಿ ಮೂರು ವರ್ಷ ಕೆಲಸ ಮಾಡಿ ಅನುಭವ ಗಳಿಸಿಕೊಳ್ಳುವುದು ಕಡ್ಡಾಯ.ಪರೀಕ್ಷೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬರೆದು ಮುಗಿಸಿಕೊಳ್ಳಲು ಅವಕಾಶವಿದೆ. ಸಿ.ಎ. ಮಾಡಿದವರಿಗೆ ನೌಕರಿಗಳು ಸುಲಭವಾಗಿ ಸಿಗುತ್ತವೆ ಅಥವಾ ಖಾಸಗಿಯಾಗಿಯೂ ಪ್ರಾಕ್ಟೀಸ್ ಮಾಡಬಹುದು.ಎಂ.ಬಿ.ಎ. ಎರಡು ವರ್ಷದ ಕೋರ್ಸ್, ಇದನ್ನು ಓದಲು ಆಯ್ಕೆ ಮಾಡಿಕೊಂಡ ಸಂಸ್ಥೆಯ ಹೆಸರು ಸಹಾ ನೌಕರಿ ಗಳಿಕೆಗೆ ಬಹಳ ಮುಖ್ಯವಾಗಿರುತ್ತದೆ. ಆದರೆ ಸ್ವಂತ ಅರ್ಹತೆ ಮತ್ತು ವೃತ್ತಿಪರತೆಯಿಂದ ಯಾವುದೇ ಕೋರ್ಸ್ ಅನ್ನು ಓದಿದರೂ ಮುಂದೆ ಬರುವುದು ಸಾಧ್ಯ. ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ ದಿನ ನಿತ್ಯದ ಸುದ್ದಿ ಹಾಗು ವಿಶೇಷ ಸಂಗತಿಗಳನ್ನು ಮಾಧ್ಯಮಗಳಿಂದ ಸಂಗ್ರಹಿಸಿ. ಬೇರೆ-ಬೇರೆ ವಿಷಯಾವಾರು ವಿಂಗಡಿಸಿಕೊಂಡು ಪುಸ್ತಕದಲ್ಲಿ ಬರೆದುಕೊಳ್ಳುತ್ತಾ ಹೋಗಿ.ಇದನ್ನು ಆಗಾಗ್ಗೆ ಓದುತ್ತಿರಿ, ಜೊತೆಗೆ ಸ್ವಾರಸ್ಯಕರ ವಿಚಾರಗಳು  ಯಾವುದೇ ಮೂಲದಿಂದ ಸಿಕ್ಕಿದರೂ ದಾಖಲು ಮಾಡಿಕೊಳ್ಳಿ. ನಿಮ್ಮ ಆಸಕ್ತಿಯನ್ನು ನೀವು ಓದಿರುವ ವಿಷಯವಲ್ಲದೆ, ಇತರ ಕ್ಷೇತ್ರಗಳಿಗೂ ವಿಸ್ತರಿಸಿಕೊಳ್ಳಿ. ಇಂಟರ್‌ನೆಟ್ ನಿಮಗೆ ಅನುಕೂಲಕರವಾಗಬಹುದು.ಮಾರುಕಟ್ಟೆಯಲ್ಲಿ ಸಿಗುವ ಪುಸ್ತಕಗಳು ಪ್ರಯೋಜನಕರವಾದರೂ ಅದೊಂದನ್ನೇ ನಂಬಿಕೊಳ್ಳಬೇಡಿ. ಇಂದು ಜ್ಞಾನದ ವಿಸ್ತಾರ ವಿಪರೀತವಾಗಿ ಹೆಚ್ಚುತ್ತಿರುವುದರಿಂದ ಪರೀಕ್ಷೆಗಳನ್ನು ಪಾಸ್ ಮಾಡಬೇಕಾದರೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಉತ್ತಮ ಮಾರ್ಗ.

ಎಸ್.ನಾಗರಾಜ, ಬೀದರ.

* ನಾನು ಅಂತಿಮ ಬಿ.ಎ. ಬರೆದಿದ್ದು, ರಾಜ್ಯಶಾಸ್ತ್ರದಲ್ಲಿ ಎಂ.ಎ. ಮಾಡಬೇಕೆಂದಿದ್ದೇನೆ. ರೆಗ್ಯುಲರ್ ಅಥವಾ ದೂರಶಿಕ್ಷಣದ ಮೂಲಕ ಎಂ.ಎ. ಮಾಡಿಕೊಂಡಲ್ಲಿ ಇವೆರಡಕ್ಕೂ ಇರುವ ವ್ಯತ್ಯಾಸವೇನು? ಎಂ.ಎ. ಮಾಡಿದ ನಂತರ ಮುಂದಿನ ವ್ಯಾಸಂಗಕ್ಕೆ ಯಾವ ದಾರಿ ಇದೆ? ಎಂ.ಎ. ಜೊತೆಗೆ ಇತರ ಪದವಿಗಳನ್ನು ಗಳಿಸಿಕೊಳ್ಳಬಹುದೇ ಅದರಿಂದ ತೊಂದರೆ ಇದೆಯೇ? 
ಉದ್ಯೋಗದ ದೃಷ್ಟಿಯಿಂದ ಎರಡು ಕೋರ್ಸುಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ರೆಗ್ಯುಲರ್ ಓದುವವರಿಗೆ ಶಿಕ್ಷಕರ ಮಾರ್ಗದರ್ಶನ, ಗ್ರಂಥಾಲಯ ಮುಂತಾದ ಸೌಲಭ್ಯಗಳು ಹೆಚ್ಚು. ಎಂ.ಎ. ಮಾಡಿದ ನಂತರ ಸಾಂಪ್ರದಾಯಿಕವಾಗಿ ಎಂ.ಫಿಲ್ ಅಥವಾ ಪಿ.ಹೆಚ್.ಡಿ. ಮಾಡಬಹುದು. ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದು.ಇವಲ್ಲದೆ ಇತ್ತೀಚೆಗೆ ಅನೇಕ ವೈವಿಧ್ಯಮಯವಾದ ವೃತ್ತಿಪರ ಕೋರ್ಸುಗಳು ಲಭ್ಯವಿರುತ್ತವೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಒಂದು ಕಡೆ ಓದಲು ಸೇರಿಕೊಂಡ ಮೇಲೆ ಒಂದು ಪದವಿ ಜೊತೆಗೆ ಮತ್ತೊಂದು ಪದವಿ ಮಾಡಲು ಅನುಮತಿ ಸಿಗುವುದಿಲ್ಲ. 

ಕವಿತ, ತುಮಕೂರು.

* ನಾನು ಪಿ.ಯು.ಸಿ ನಂತರ ಕಂಪ್ಯೂಟರ್ ತರಗತಿ ಪಡೆದು  ಮುಗಿಸಿಕೊಂಡು ಒಂದು ಕಚೇರಿಯಲ್ಲಿ ಕೆಲಸ ಮಾಡುತ್ತಾ ಬಿ.ಕಾಂ. 5ನೇ ಸೆಮಿಸ್ಟರ್ ಮುಗಿಸಿರುತ್ತೇನೆ. ಎಂ.ಎ. ಒಂದು ವಿಷಯ ಬಾಕಿ ಇದೆ. ಈಗ ಕಂಡಕ್ಟರ್ ಕೆಲಸ ಮಾಡುತ್ತಿದ್ದೇನೆ. ಮುಂದೆ ದೂರಶಿಕ್ಷಣದಲ್ಲಿ ಯಾವ ಕೋರ್ಸ್ ಮಾಡಬಹುದು? 
 ನೀವು ಮೊದಲು ಈಗಾಗಲೇ ಅರ್ಧವಾಗಿರುವ ಕೋರ್ಸುಗಳನ್ನು ಮುಗಿಸಿಕೊಳ್ಳಿ. ನಿಮ್ಮ ವೃತ್ತಿ ಜೀವನವನ್ನು ಬಿ.ಕಾಂ ಅಥವಾ ಎಂ.ಎ ಈ ಎರಡರಲ್ಲಿ ಯಾವುದರಿಂದ ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿಕೊಳ್ಳಿ.

 

ದೂರಶಿಕ್ಷಣ ನೀಡುವ ಇಗ್ನೊ ಮುಂತಾದ ಅನೇಕ ಸಂಸ್ಥೆಗಳ ವೆಬ್‌ಸೈಟ್ ಗಮಿನಿಸಿದರೆ ವಿಧವಿಧವಾದ ಉತ್ತಮ ಕೋರ್ಸುಗಳು ಲಭ್ಯವಿರುವುದು ತಿಳಿದು ಬರುತ್ತದೆ. ನಿಮ್ಮ ಆಸಕ್ತಿ ಹಾಗೂ ಅನುಕೂಲಗಳನ್ನು ಅನುಸರಿಸಿ ನಿರ್ಧಾರ ತೆಗೆದುಕೊಳ್ಳಿ. ಓದಲು ಇಷ್ಟೊಂದು ಆಸಕ್ತಿ ಇರುವ ನಿಮಗೆ ಅಭಿನಂದನೆಗಳು.

ವೀರಾಜು, ಬಳ್ಳಾರಿ.

* ನಾನು ಶೇಕಡ 71 ಅಂಕ ಗಳಿಸಿ ಎಂ.ಇಡಿ. ಮುಗಿಸಿದ್ದೇನೆ. ಎಂ.ಎ. ಇತಿಹಾಸ ವಿಷಯದಲ್ಲಿ ಮೊದಲ ವರ್ಷ ಶೇಕಡ 65 ಗಳಿಸಿ ಎರಡನೆಯ ವರ್ಷದ ಪರೀಕ್ಷೆ ಬರೆದಿದ್ದೇನೆ. ಈಗ ಪಿ.ಹೆಚ್.ಡಿ. ಮಾಡುವ ಉದ್ದೇಶವಿದೆ. ಯಾವ ವಿಷಯದಲ್ಲಿ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಮಾರ್ಗದರ್ಶನ ನೀಡಿ. ಪಿ.ಎಚ್.ಡಿ.ಗೆ ಆಯ್ಕೆ ಮಾಡಲು ವಿಷಯದ ಬಗ್ಗೆ ಇರುವ ಆಸಕ್ತಿ ಹಾಗೂ ಲಭ್ಯವಿರುವ ಅನುಕೂಲಗಳು ಮುಖ್ಯವಾಗುತ್ತದೆ. ಆದರೆ ಕೇವಲ ಉದ್ಯೋಗದ ದೃಷ್ಟಿಯಿಂದ ಹೇಳಬೇಕೆಂದರೆ ಈ ಎರಡರಲ್ಲಿ ಇತಿಹಾಸ ಮೊದಲ ಆಯ್ಕೆಯಾಗುವುದು ಉತ್ತಮ.ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು: shikshanapv@gmail.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.