ಸೋಮವಾರ, ಮೇ 16, 2022
24 °C

ಪ್ರಶ್ನೆ-ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಶೇಖರ್

ನಾನು ಕನ್ನಡ ಮಾಧ್ಯಮದಲ್ಲಿ ಬಿ.ಎ. ಮಾಡಿದ್ದೇನೆ. ಪಿ.ಜಿ.ಸಿ.ಇ.ಟಿ. ನಲ್ಲಿ 15200ನೇ ರ‌್ಯಾಂಕ್ ಪಡೆದಿದ್ದೇನೆ. ಎಂ.ಬಿ.ಎ. ಮಾಡಲು ಕಷ್ಟವಾಗುತ್ತದೆಯೇ? ದಯಮಾಡಿ ಸಲಹೆ ಕೊಡಿ.

 ನೀವು ಬಿ.ಎ. ಪದವಿಯಲ್ಲಿ ಕಲಿತ ವಿಷಯಗಳಿಗಿಂತ ಎಂ.ಬಿ.ಎ. ಪದವಿಯಲ್ಲಿ ಕಲಿಯ ಬೇಕಿರುವ ವಿಷಯಗಳು ತುಂಬಾ ಭಿನ್ನವಾಗಿರುತ್ತವೆ. ಆದ್ದರಿಂದ ಎಂ.ಬಿ.ಎ ಪದವಿಯನ್ನು ಗಳಿಸಲು ನೀವು ಸಾಕಷ್ಟು ಆಸಕ್ತಿ ವಹಿಸಿ ಶ್ರಮಪಟ್ಟು ಕಲಿಯುವ ಅವಶ್ಯಕತೆ ಇರುತ್ತದೆ. ಆದರೆ ಇದು ಅಸಾಧ್ಯವಾದುದೇನೂ ಅಲ್ಲ. ಏಕಾಗ್ರತೆಯಿಂದ ಶ್ರಮಪಟ್ಟು ಪ್ರಯತ್ನಿಸಿ. ಗೆಲವು ನಿಮ್ಮದಾಗುತ್ತದೆ.

ವಿನೋದ್ ಪಿ

ನಾನು 12ನೇ ತರಗತಿ ಓದಿದ್ದೇನೆ. ಅನಾರೋಗ್ಯದ ಕಾರಣದಿಂದ ಪರೀಕ್ಷೆ ಬರೆಯಲಾಗಲಿಲ್ಲ. ಆದರೆ ರಸಾಯನಶಾಸ್ತ್ರದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದೇನೆ. ಈಗ ಬರುವ ವರ್ಷದಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುತ್ತಿದ್ದೇನೆ. ಅಂತೆಯೇ ಪ್ರಾಯೋಗಿಕ ಪರೀಕ್ಷೆಯನ್ನೂ ಬರೆಯುತ್ತಿದ್ದೇನೆ. ರಸಾಯನಶಾಸ್ತ್ರದ ರೆಕಾರ್ಡ್ ಈಗಾಗಲೇ ಮೌಲ್ಯಮಾಪನವಾಗಿದೆ. ಉಳಿದ ರೆಕಾರ್ಡ್‌ಗಳು ಮೌಲ್ಯಮಾಪನವಾಗಿಲ್ಲ. ಪರೀಕ್ಷಾ ಸಮಯದಲ್ಲಿ ಅವುಗಳನ್ನು ಪ್ರಕಟಪಡಿಸುತ್ತೇನೆ. ಹೀಗಿರುವುದರಿಂದ ನಾನು ಮತ್ತೆ ರಸಾಯನಶಾಸ್ತ್ರದ ರೆಕಾರ್ಡ್ ಬರೆಯಬೇಕೇ? ಮತ್ತೆ ಮೌಲ್ಯಮಾಪನ ಮಾಡುತ್ತಾರೆಯೇ? ದಯಮಾಡಿ ಮಾರ್ಗದರ್ಶನ ನೀಡಿ.


ಒಂದು ಬಾರಿ ಮೌಲ್ಯಮಾಪನ ಆದಾಗ ಅದರಲ್ಲಿ ಗಳಿಸಿರುವ ಅಂಕಗಳನ್ನು ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಗಣನೆಗೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ನೀವು ರಸಾಯನಶಾಸ್ತ್ರದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವಾಗ ಈ ಹಿಂದೆ ಮೌಲ್ಯಮಾಪನಗೊಂಡಿರುವ ರೆಕಾರ್ಡ್‌ನ್ನು ಅಧ್ಯಾಪಕರಿಗೆ ತೋರಿಸಿ ಮತ್ತು ಉಳಿದ ವಿವರಗಳಾದ- ಪರೀಕ್ಷೆ ತೆಗೆದುಕೊಂಡ ವರ್ಷ, ಗಳಿಸಿದ ಅಂಕಗಳು ಇತ್ಯಾದಿ ವಿವರಗಳನ್ನೂ ಅವರ ಗಮನಕ್ಕೆ ತನ್ನಿ.

ಇಮ್ರೋನ್

ನಾನು ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ. ಮಾಡಿದ್ದೇನೆ. ಈಗ ತಳಿಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಬೇಕೆಂದಿದ್ದೇನೆ. ಇದಕ್ಕೆ ಭವಿಷ್ಯವಿದೆಯೇ? ದಯಮಾಡಿ ಮಾರ್ಗದರ್ಶನ ನೀಡಿ.


ಬಿ.ಎಸ್ಸಿ. ಕೃಷಿ ವಿಜ್ಞಾನ ಪದವಿಯ ನಂತರ ಸ್ನಾತಕೋತ್ತರ ಪದವಿಯನ್ನು ಪಡೆಯುವಾಗ ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಭವಿಷ್ಯ ಇದೆ ಎನ್ನುವ ವಿಚಾರದಲ್ಲಿ ಸಲಹೆಯನ್ನು ಅದೇ ವಿಭಾಗದ ಪ್ರಾಧ್ಯಾಪಕರಿಂದ ಪಡೆಯುವುದು ಸೂಕ್ತ.

ಗಾನವಿ ರಾಜನ್

ನಾನು ಮಾಹಿತಿ ವಿಜ್ಞಾನ ವಿಷಯದಲ್ಲಿ ಗುಬ್ಬಿಯಲ್ಲಿ  ಮೊದಲ ವರ್ಷದ ಬಿ.ಇ. ಮಾಡುತ್ತಿದ್ದೇನೆ. ಈಗ ತುಮಕೂರಿನ ಮತ್ತೊಂದು ತಾಂತ್ರಿಕ ವಿದ್ಯಾಲಯಕ್ಕೆ ಬದಲಾವಣೆ ಮಾಡಿಕೊಳ್ಳಬಹುದೇ? ದಯಮಾಡಿ ಸಲಹೆ ಕೊಡಿ.


ಒಂದು ತಾಂತ್ರಿಕ ವಿದ್ಯಾಲಯದಿಂದ ಮತ್ತೊಂದು ತಾಂತ್ರಿಕ ವಿದ್ಯಾಲಯಕ್ಕೆ ಬದಲಾವಣೆ ಮಾಡಿಕೊಳ್ಳಲು ಪರಸ್ಪರ ಇಬ್ಬರು ವಿದ್ಯಾರ್ಥಿಗಳು ಒಪ್ಪಿಕೊಂಡರೆ ಮಾತ್ರ ಸಾಧ್ಯ.

ಯತೀಶ್ ಎಂ.ಜಿ.

ನಾನು ಈಗ ದ್ವಿತೀಯ ಪಿ.ಯು. ಪಿ.ಸಿ.ಎಂ.ಇ. ಮಾಡುತ್ತಿದ್ದೇನೆ. ಸಿ.ಇ.ಟಿ. ಕೂಡ ತೆಗೆದುಕೊಳ್ಳುತ್ತೇನೆ. ನನಗೆ ಎಂ.ಬಿ.ಎ ಮಾಡುವ ಆಸೆ. ಅದಕ್ಕೆ ನಾನು ಶೇಕಡಾವಾರು ಎಷ್ಟು ಅಂಕ ಪಡೆಯಬೇಕು ತಿಳಿಸಿ. ಜೊತೆಗೆ ಓದಿನ ಕಡೆಗೆ ನನ್ನ ಏಕಾಗ್ರತೆಯನ್ನು ಹೆಚ್ಚಿಸುವ ವಿಧಾನ ತಿಳಿಸಿ ಮಾರ್ಗದರ್ಶನ ನೀಡಿ.


 ಎಂ.ಬಿ.ಎ ಪ್ರವೇಶಕ್ಕೆ ಕನಿಷ್ಠ ಅರ್ಹತೆಯಾಗಿ ನೀವು ಯಾವುದಾದರೂ ಒಂದು ವಿಭಾಗದಲ್ಲಿ ಅಂದರೆ ವಿಜ್ಞಾನ, ವಾಣಿಜ್ಯ, ಕಲಾವಿಭಾಗ, ತಾಂತ್ರಿಕ ವಿಜ್ಞಾನ ಇತ್ಯಾದಿ ಯಾವುದಾದರೂ ಒಂದು ಪದವಿಯನ್ನು ಪಡೆದಿರಬೇಕು. ಆದ್ದರಿಂದ ಪದವಿ ಪೂರ್ವಶಿಕ್ಷಣದ ನಂತರ ಮೊದಲು ಒಂದು ಮೂಲಭೂತ ಅವಶ್ಯಕತೆಯಾದ ಪದವಿಯನ್ನು ನಿಮಗೆ ಆಸಕ್ತಿ ಇರುವ ವಿಷಯದಲ್ಲಿ ಗಳಿಸುವುದರ ಕಡೆಗೆ ಗಮನ ಕೊಡಬೇಕು. ಏಕಾಗ್ರತೆಗೆ ಮೂಲಭೂತವಾಗಿ ಬೇಕಾದ ಅವಶ್ಯಕತೆಗಳೆಂದರೆ, ಸಾಧನೆಗೆ ದೃಢನಿರ್ಧಾರ ಮತ್ತು ಪ್ರಶಾಂತ ವಾತಾವರಣ. ಏನನ್ನಾದರೂ ಸಾಧಿಸಲೇಬೇಕೆಂಬ ಛಲ ಇದ್ದರೆ, ಅದಕ್ಕೆ ಬೇಕಾದ ಪರಿಶ್ರಮದ ಅರಿವು ತಾನಾಗಿಯೇ ಮೂಡುತ್ತದೆ. ಪೂರಕವಾಗಿ ಪ್ರಶಾಂತ ವಾತಾವರಣದಲ್ಲಿ ಅಭ್ಯಾಸ ಮಾಡಿದರೆ ಏಕಾಗ್ರತೆ ತಾನಾಗಿಯೇ ಬರುತ್ತದೆ.

ಅಭೀಷ್ಠ ನಾಯಕ್

ನಾನು ಬಿ.ಕಾಂ ಮುಗಿಸಿದ್ದೇನೆ. ನನಗೆ ಫೈನಾನ್ಸ್ ವಿಷಯದಲ್ಲಿ ಎಂ.ಬಿ.ಎ ಮಾಡಲೋ ಅಥವಾ ಐ.ಸಿ.ಡಬ್ಲು.ಎ. ಮಾಡಲೋ ಎಂಬ ವಿಚಾರದಲ್ಲಿ ಗೊಂದಲವಿದೆ. ಕೆಲವರು ಎಂ.ಬಿ.ಎ. ಗೆ ಭವಿಷ್ಯವಿಲ್ಲ ಎನ್ನುತ್ತಾರೆ ಮತ್ತೆ ಕೆಲವರು ಐ.ಸಿ.ಡಬ್ಲು.ಎ. ತುಂಬಾ ಕಷ್ಟ; ಮೊದಲು ಎಂ.ಬಿ.ಎ ಮಾಡು ಎನ್ನುತ್ತಾರೆ. ಏನು ಮಾಡುವುದೋ ತೋಚುತ್ತಿಲ್ಲ. ದಯಮಾಡಿ ಸಲಹೆ ಕೊಡಿ.


ನೀವು ಗಳಿಸಲು ಇಚ್ಛಿಸುವ ಎರಡೂ ಪದವಿಗಳ ಉದ್ದೇಶ ಮತ್ತು ಉದ್ಯೋಗ ಕ್ಷೇತ್ರ ಬೇರೆ ಬೇರೆಯಾಗಿರುತ್ತವೆ. ಆದ್ದರಿಂದ ಮೊದಲು ನಿಮಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇದೆ ಎನ್ನುವುದನ್ನು ಅವಲಂಬಿಸಿ ನೀವು ಗಳಿಸಬೇಕಾದ ಪದವಿ ಯಾವುದೆಂದು ನಿರ್ಧರಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಪದವಿಯನ್ನು ಉತ್ತಮ ದರ್ಜೆಯಲ್ಲಿ ಒಳ್ಳೆಯ ಸಂಸ್ಥೆಯಿಂದ ಪಡೆದರೆ ಭವಿಷ್ಯದ ಬಗ್ಗೆ ಯಾವುದೇ ಆತಂಕ ಇರಬೇಕಾದ ಅವಶ್ಯಕತೆ ಇಲ್ಲ. ಎಲ್ಲಾ ಪದವಿಗಳಿಗೂ ಉದ್ಯೋಗಾವಕಾಶ ಇರುತ್ತದೆ.

ಸಿಂಧು ಎಚ್.ಎಸ್.

ನಾನು ಕನ್ನಡದಲ್ಲಿ ಎಂ.ಎ. ಮಾಡಿಕೊಂಡು ಈಗಷ್ಟೇ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಉಪಾಧ್ಯಾಯಿನಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಬಿ.ಇಡಿ. ಮಾಡಬೇಕೆಂಬ ಹಂಬಲವಿದೆ. ಇದನ್ನು ದೂರಶಿಕ್ಷಣದ ಮೂಲಕ ಮಾಡಬಯಸಿದ್ದೇನೆ. ಇದಕ್ಕಾಗಿ ನಾನು ಸರ್ಕಾರಿ ತರಬೇತಿಯನ್ನು ಆರಿಸಿಕೊಳ್ಳಬೇಕೋ ಅಥವಾ ಖಾಸಗಿ ತರಬೇತಿಯನ್ನು ಆರಿಸಿಕೊಳ್ಳಬೇಕೊ ತಿಳಿಯುತ್ತಿಲ್ಲ. ಆದ್ದರಿಂದ ದಯಮಾಡಿ ಮಾರ್ಗದರ್ಶನ ನೀಡಿ ಮತ್ತು ಈ ಕೋರ್ಸಿಗೆ ಸಂಬಂಧಪಟ್ಟ ಪ್ರವೇಶದ ಬಗ್ಗೆ ಪೂರಕ ಮಾಹಿತಿ ಕೊಡಿ.


ಬಿ.ಇಡಿ. ಪದವಿಯನ್ನು ದೂರಶಿಕ್ಷಣದ ಮೂಲಕ ಗಳಿಸುವುದಾದರೆ ಅದರಲ್ಲಿ ಸರ್ಕಾರಿ ಅಥವಾ ಖಾಸಗಿ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಪದವಿಯನ್ನು ದೂರಶಿಕ್ಷಣದ ಮೂಲಕ ಒಂದು ನಿರ್ದಿಷ್ಟವಾದ ವಿಶ್ವವಿದ್ಯಾಲಯದಿಂದ ಪಡೆಯುತ್ತೀರಿ. ಇತರ ವಿವರಗಳನ್ನು ನೀವು ಆಯ್ಕೆ ಮಾಡಿಕೊಳ್ಳುವ ವಿಶ್ವವಿದ್ಯಾಲಯದ ಅಂತರ್ಜಾಲ ತಾಣದಲ್ಲಿ ಪಡೆದುಕೊಳ್ಳಬಹುದು.

ಜಗದೀಶ್ ಜಿಲ್ಲಿ

ನಾನು ಬಯೋಟೆಕ್ನಾಲಜಿ ವಿಷಯದಲ್ಲಿ ಬಿ.ಎಸ್ಸಿ. ಮಾಡುತ್ತಿದ್ದೇನೆ. ಮುಂದೆ ಕ್ಲಿನಿಕಲ್ ರಿಸರ್ಚ್ ಮತ್ತು ಡ್ರಗ್ ವಿಷಯದಲ್ಲಿ ಎಂ.ಎಸ್ಸಿ. ಮಾಡಬೇಕೆಂದುಕೊಂಡಿದ್ದೇನೆ. ಇದಕ್ಕೆ ಉತ್ತಮ ಭವಿಷ್ಯ ಮತ್ತು ಅವಕಾಶಗಳಿವೆಯೇ? ದಯಮಾಡಿ ತಿಳಿಸಿಕೊಡಿ.


ಆರೋಗ್ಯಕ್ಷೇತ್ರ ಪ್ರತಿನಿತ್ಯವೂ, ಎಲ್ಲಾ ಕಾಲದಲ್ಲಿಯೂ ಬೇಕಾದ ಒಂದು ಮೂಲಭೂತ ಅವಶ್ಯಕತೆ. ಆದ್ದರಿಂದ ಈ ವಿಭಾಗದಲ್ಲಿ ಯಾವುದೇ ಪದವಿ ಗಳಿಸಿದರೂ ಉದ್ಯೋಗಾವಕಾಶದ ದೃಷ್ಟಿಯಿಂದ ಭವಿಷ್ಯ ಉಜ್ವಲವಾಗುತ್ತದೆ.

ದತ್ತರಾಜ್, ಬನಶಂಕರಿ, ಬೆಂಗಳೂರು.

ನಾನು ಎರಡನೇ ತರಗತಿಯಲ್ಲಿ ಶಾಲೆಗೆ ಹೊಗುವುದನ್ನು ನಿಲ್ಲಿಸಿಬಿಟ್ಟೆ. ಕಾರಣಾಂತರಗಳಿಂದ ಮುಂದೆ ಶಾಲೆಗೆ ಹೊಗಲು ಸಾಧ್ಯವಾಗಲಿಲ್ಲ. ನನ್ನ ವಯಸ್ಸು ಈಗ 25, ಆದ್ದರಿಂದ ವಯಸ್ಸಿನ ಆಧಾರದ ಮೇಲೆ ಹತ್ತನೇ ತರಗತಿ ಪರಿಕ್ಷೆಗೆ ಸಿದ್ಧನಾಗುತ್ತಿದ್ದೇನೆ. ಮುಂದೆ ಪದವಿ ಮುಗಿಸಿ ಅಥವಾ ಪದವಿಯ ಜೊತೆಯಲ್ಲಿ ಇಂಟಿಗ್ರೇಟೆಡ್ ಎಂ.ಬಿ.ಎ. (ಐ.ಐ.ಪಿ.ಎಮ್.ನಲ್ಲಿ) ಓದುವ ಇಚ್ಛೆ ಇದೆ. ಆದರೆ ಹತ್ತನೇ ತರಗತಿಯ ನಂತರ ಪಿಯುಸಿ ಯನ್ನು ಒಂದೇ ವರ್ಷದಲ್ಲಿ ಮುಗಿಸಿದಲ್ಲಿ ಮುಂದೆ ಎಂ.ಬಿ.ಎ ಪ್ರವೇಶ ಸಮಯದಲ್ಲಿ ಒಂದೇ ವರ್ಷದ ಪಿಯುಸಿ ಓದಿದ್ದರಿಂದ ಏನಾದರು ಅಡೆ ತಡೆ ಎದುರಾಗಲಿದೆಯೇ?  ಈ ಬಗ್ಗೆ ವಿವರವಾಗಿ ತಿಳಿಸಿ.


ಹತ್ತನೇ ತರಗತಿ ಮುಗಿಸಿದ ನಂತರ ಪದವಿಯ ಜೊತೆ ಇಂಟೆಗ್ರೇಟೆಡ್ ಪದವಿಯನ್ನು ಪಡೆಯುಲು ಯಾವುದೇ ನಿರ್ಬಂಧ ಇರುವುದಿಲ್ಲ. ಏಕೆಂದರೆ ಪದವಿಗೆ ಸೇರಲು ಬೇಕಾದ ಕನಿಷ್ಠ ಅರ್ಹತೆ ಎರಡನೇ ಪದವಿಪೂರ್ವ ಶಿಕ್ಷಣವನ್ನು ಮುಗಿಸಿರಬೇಕು. ಅದನ್ನು ಒಂದು ವರ್ಷ ಅಥವಾ ಎರಡು ವರ್ಷದಲ್ಲಿ ಮುಗಿಸಿದ ವಿಷಯ ಪದವಿಗೆ ಸೇರಲು ಅಡ್ಡಿ ಬರುವುದಿಲ್ಲ.

ಗಣೇಶ್ ಭಟ್

ನಾನು ದ್ವಿತೀಯ ಪಿ.ಯು.ಸಿ.ಯಲ್ಲಿ ಫೇಲಾಗಿದ್ದು ಮುಂದಿನ ಪರೀಕ್ಷೆಯಲ್ಲಿ ಪಾಸಾಗುತ್ತೇನೆ. ನಂತರ ತೋಟಗಾರಿಕಾ ವಿಷಯದಲ್ಲಿ ಬಿ.ಎಸ್ಸಿ ಮಾಡಬೇಕೆಂದಿದ್ದೇನೆ. ಇದರಲ್ಲಿ ಒದಗಿಬರುವ ಉದ್ಯೋಗಾವಕಾಶಗಳ ಬಗ್ಗೆ ದಯಮಾಡಿ ತಿಳಿಸಿಕೊಡಿ.

ತೋಟಗಾರಿಕೆಯಲ್ಲಿ ಪದವಿಯನ್ನು ಗಳಿಸಿದರೆ ಉದ್ಯೋಗಾವಕಾಶ ಸಾಕಷ್ಟು ಇರುವುದಿಲ್ಲ. ಆದರೆ ಸ್ವಂತಕ್ಕೆ ತೋಟಗಾರಿಕೆ ಮಾಡುವ ಉದ್ದೇಶ ಇದ್ದರೆ ಈ ಪದವಿ ಹೆಚ್ಚು ಪ್ರಯೋಜನಕಾರಿ ಮತ್ತು ಅರ್ಥಪೂರ್ಣವಾಗಿ ಇರುತ್ತದೆ.

ಸಂಜೀವ್ ಬೆಂಗಳೂರು

ನಾನು ಬಿ.ಎಸ್ಸಿ. ಮುಗಿಸಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಲ್ಲಿ ಬಿ.ಇಡಿ. ಮಾಡಿಕೊಂಡಿದ್ದೇನೆ. ನನಗೆ ಈಗ ಕರ್ನಾಟಕ ಮುಕ್ತವಿಶ್ವವಿದ್ಯಾಲಯದಲ್ಲಿ ಎಂ.ಎ ಮಾಡಬೇಕೆನಿಸಿದೆ. ಮುಕ್ತವಿಶ್ವವಿದ್ಯಾಲಯದಲ್ಲಿ ಮಾಡುವ ಎಂ.ಎ.,  ರೆಗ್ಯುಲರ್ ಎಂ.ಎ.ಗೆ ಸಮವೇ? ದಯಮಾಡಿ ಮಾಹಿತಿಕೊಡಿ.


ಮುಕ್ತ ವಿಶ್ವವಿದ್ಯಾಲಯದಿಂದ ಪಡೆಯುವ ಯಾವುದೇ ಪದವಿ ಬೇರೆ ಪದವಿಗೆ ಸಮನಾಗಿಯೇ ಇರುತ್ತದೆ. ಆದ್ದರಿಂದ ಮಾನ್ಯತೆ ದೃಷ್ಟಿಯಿಂದ ಯಾವುದೇ ತೊಂದರೆ ಇರುವುದಿಲ್ಲ. ಅಂತಹ ಮಾನ್ಯತೆ ಇಲ್ಲದೇ ಹೋದಲ್ಲಿ ಆ ಪದವಿಗೆ ಅರ್ಥವೇ ಇರುವುದಿಲ್ಲ. ಆದ್ದರಿಂದ ನೀವು ಮುಕ್ತವಿಶ್ವವಿದ್ಯಾಲಯದಿಂದ ಪದವಿಯನ್ನು ಗಳಿಸಬಹುದು. ಅದರ ಆಧಾರದ ಮೇಲೆ ಕಾಲೇಜಿನಲ್ಲಿ ಅಧ್ಯಾಪಕರಾಗಿಯೂ ಕೆಲಸ ಮಾಡಬಹುದು.

ಚಂದ್ರ

ನಾನು 2002ರಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದೆ. ಈಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ - ಎನ್.ಐ.ಒ.ಎಸ್. ನಲ್ಲಿ ದ್ವಿತೀಯ ಪಿ.ಯು.ಸಿ. ಮಾಡುತ್ತಿದ್ದೇನೆ. ಎನ್.ಐ.ಒ.ಎಸ್. ಕೋರ್ಸ್‌ಗೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಾನ್ಯತೆ ಇದೆಯೇ? ನಾನು ಸರ್ಕಾರಿ ಕೆಲಸಗಳನ್ನು ಅರಸಬಹುದೇ? ಕಾಲೇಜಿಗೆ ತೆರಳಿ ಪದವಿ ಗಳಿಸಬಹುದೇ? ಬಿ.ಇ., ಎಂ.ಬಿ.ಬಿ.ಎಸ್., ಬಿ.ಎಸ್ಸಿ., ಎಲ್.ಎಲ್.ಬಿ. ಇನ್ನಿತರ ಕೋರ್ಸುಗಳನ್ನು ಮಾಡಬಹುದೇ? ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯು ಇದನ್ನು ಅಂಗೀಕರಿಸುವುದೇ? ಹೀಗೆ ನನಗೆ ಹಲವಾರು ಗೊಂದಲಗಳಿವೆ. ದಯಮಾಡಿ ಸೂಕ್ತ ಸಲಹೆ ಕೊಟ್ಟು ಮಾರ್ಗದರ್ಶನ ನೀಡಿ.

 ಎನ್.ಐ.ಒ.ಎಸ್. ಸಂಸ್ಥೆಯಿಂದ ಪಡೆಯುವ ಪದವಿಪೂರ್ವ ಶಿಕ್ಷಣಕ್ಕೆ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಮಾನ್ಯತೆ ಇರುತ್ತದೆ. ಆದ್ದರಿಂದ ಇದರ ಆಧಾರದ ಮೇಲೆ ನೀವು ಸರ್ಕಾರಿ ಕೆಲಸವನ್ನೂ ಅರಸಬಹುದು. ಅಂತೆಯೇ ಮುಂದಿನ ವಿದ್ಯಾಭ್ಯಾಸಕ್ಕಾಗಿ ನೀವು ಇಚ್ಛಿಸುವ ಯಾವುದೇ ಪದವಿಗೆ ಬೇಕಾದರೂ ಪ್ರವೇಶವನ್ನು ಪಡೆಯಬಹುದು. ಆದರೆ ಎನ್.ಐ.ಒ.ಎಸ್. ಅಂಕಪಟ್ಟಿಯನ್ನು ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯ ಅಂಕ ಪಟ್ಟಿಗೆ ಹೋಲಿಕೆ ಮಾಡಲಾಗದು.

ಸೂರ್ಯಕಾಂತ ಜಂತಿ

ನಾನು ಬಿ.ಎ. ಮಾಡುತ್ತಿದ್ದೇನೆ. ಮುಂದೆ ನಾನು ಎಂ.ಬಿ.ಎ. ಮಾಡಬಹುದೇ? ಕೆಲವರು ಬಿ.ಎ. ಮಾಡಿದವರಿಗೆ ಎಂ.ಬಿ.ಎ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ತುಂಬಾ ಗೊಂದಲವಾಗುತ್ತಿದೆ. ದಯಮಾಡಿ ಸಲಹೆ ಕೊಡಿ.

 ಬಿ.ಎ. ಪದವಿಯ ನಂತರ ಎಂ.ಬಿ.ಎ. ಪದವಿಯನ್ನು ಗಳಿಸಿದರೆ ಅದಕ್ಕೆ ಬೇಕಾದ ಮಾನ್ಯತೆ ಸಹಜವಾಗಿ ಇರುತ್ತದೆ. ಇಲ್ಲದೇ ಹೋದಲ್ಲಿ ಬಿ.ಎ ಪದವಿಯ ವಿದ್ಯಾರ್ಥಿಗಳಿಗಾಗಿ ಎಂ.ಬಿ.ಎ ಪದವಿಗೆ ಪ್ರವೇಶವನ್ನು ನೀಡಲಾಗದು. ಆದ್ದರಿಂದ ನೀವು ಬಿ.ಎ. ನಂತರ ಎಂ.ಬಿ.ಎ ಪದವಿಯನ್ನು ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.