ಸೋಮವಾರ, ಏಪ್ರಿಲ್ 12, 2021
31 °C

ಪ್ರಶ್ನೆ-ಉತ್ತರ

ಡಾ.ಎಚ್.ಎನ್. ಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

 ವಿನಯ್, ಗಂಗಾವತಿ

*ನಾನು ಡಿಪ್ಲೊಮಾ ಅಂತಿಮ ವರ್ಷದಲ್ಲಿದ್ದೇನೆ. ಪ್ರತಿ ಸೆಮಿಸ್ಟರ್‌ನಲ್ಲೂ ಫಲಿತಾಂಶ ಉತ್ತಮವಾಗಿಯೇ ಬರುತ್ತಿದೆ. ಆದರೆ ಮನೆಯಲ್ಲಿನ ಸಮಸ್ಯೆಗಳ ಕಾರಣದಿಂದ ಮುಂದೆ ಬಿ.ಇ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈಗ ದ್ವಿತೀಯ ಪಿ.ಯು.ಸಿ ಕಲಾ ವಿಭಾಗದಲ್ಲಿ ನೇರವಾಗಿ ಪರೀಕ್ಷೆ ಬರೆದು ನಂತರ ಬಿ.ಎ ಪದವಿ ಪಡೆಯಲು ಸಾಧ್ಯವೇ? ಪದವಿ ಪಡೆಯುವ ಹಂಬಲ ತುಂಬಾ ಇದೆ. ದಯಮಾಡಿ ಮಾರ್ಗದರ್ಶನ ಕೊಡಿ.

ನೀವು ಪ್ರತಿ ಸೆಮಿಸ್ಟರ್‌ನಲ್ಲೂ ಉತ್ತಮ ಅಂಕಗಳನ್ನು ಡಿಪ್ಲೊಮಾ ಓದಿನಲ್ಲಿ ತೆಗೆಯುತ್ತಿರುವುದು ಸಂತೋಷ. ಸದ್ಯಕ್ಕೆ ಬಿ.ಇ ಮಾಡಲು ನಿಮಗೆ ಸಾಧ್ಯವಿಲ್ಲದಿದ್ದರೆ ಉದ್ಯೋಗಕ್ಕೆ ಸೇರಿಕೊಳ್ಳಬಹುದು. ಕೆಲವು ವರ್ಷಗಳ ನಂತರ ಸಂಜೆ ಕಾಲೇಜಿನಲ್ಲಿ ಬಿ.ಇ ಮಾಡಬಹುದು.ನೀವು ಪಿ.ಯು ಮಾಡದೇ ಮುಕ್ತ ವಿಶ್ವವಿದ್ಯಾಲಯಗಳ ಮೂಲಕ ಡಿಗ್ರಿ ಪಡೆಯಬಹುದು. ಆದರೆ ಡಿಗ್ರಿ ಏತಕ್ಕೆ ಎಂಬುದನ್ನು ನೀವು ಸ್ಪಷ್ಟಪಡಿಸಿಕೊಳ್ಳಬೇಕು. ಕುವೆಂಪು ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ನೀವು ಬಿ.ಎಸ್ಸಿ ಸಹ ಮಾಡಬಹುದು. ನಿಮ್ಮ ಆಸಕ್ತಿಯನ್ನು ಗುರುತಿಸಿಕೊಂಡು, ನಿಮ್ಮ ಉದ್ಯೋಗಕ್ಕೂ ಸಹಾಯವಾಗುವ ಮಾರ್ಗದಲ್ಲಿ ಮುಂದುವರಿಯಿರಿ.

ಶೃಜಿತ್, ಚಿಕ್ಕಮಗಳೂರು

*ನಾನು ದ್ವಿತೀಯ ಪಿ.ಯು.ಸಿಯನ್ನು ಕಲಾ ವಿಭಾಗದಲ್ಲಿ ಮುಗಿಸಿದ್ದೇನೆ. ಮುಂದೆ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗುವ ಹಂಬಲ ಇದೆ. ಇದಕ್ಕೆ ಏನು ಮಾಡಬೇಕೆಂಬುದನ್ನು ತಿಳಿಸಿ.

ಕೃಷಿ ವಿಭಾಗದಲ್ಲಿ ಅಧಿಕಾರಿಯಾಗಲು ನೀವು ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಕೃಷಿ ವಿಜ್ಞಾನದಲ್ಲಿ ಬಿ.ಎಸ್ಸಿ ಅಥವಾ ಎಂ.ಎಸ್ಸಿ ಮಾಡುವುದು ಸೂಕ್ತ. ನಿಮ್ಮ ಆಸಕ್ತಿ ಕೃಷಿ ವಿಜ್ಞಾನದಲ್ಲೋ ಅಥವಾ ಆಡಳಿತದಲ್ಲೋ ಸ್ಪಷ್ಟಪಡಿಸಿಕೊಳ್ಳಿ. ನಿಮಗೆ ಕೃಷಿ ಆಡಳಿತದಲ್ಲಿ ಆಸಕ್ತಿ ಇದ್ದರೆ ಪಿ.ಯು ನಂತರ ಬಿ.ಎ ಮತ್ತು ಎಂ.ಎ ಮುಗಿಸಿ ಅನಂತರ ಕೆ.ಎ.ಎಸ್ ಅಥವಾ ಐ.ಎ.ಎಸ್ ಆಯ್ಕೆ ಪರೀಕ್ಷೆಗಳ ಮೂಲಕ ಆಡಳಿತ ರಂಗ ಸೇರಬಹುದು.

 ಪುರುಷೋತ್ತಮ ಸಿ.ಎ

*ನಾನು ಮಾಹಿತಿ ವಿಜ್ಞಾನದಲ್ಲಿ ಬಿ.ಇ ಓದುತ್ತಿದ್ದೇನೆ. ಪಿ.ಯು.ನಲ್ಲಿ ಎಲೆಕ್ಟ್ರಾನಿಕ್ಸ್ ತೆಗೆದುಕೊಂಡಿದ್ದೆ. ಎಲೆಕ್ಟ್ರಾನಿಕ್ಸ್‌ನಲ್ಲಿ ನನಗೆ ಅತ್ಯಂತ ಆಸಕ್ತಿ ಇದ್ದರೂ ಮಾಹಿತಿ ವಿಜ್ಞಾನವನ್ನು ತೆಗೆದುಕೊಳ್ಳಬೇಕಾಯಿತು. ಇದು ಕಷ್ಟವೆನಿಸಿದರೂ ಓದುತ್ತಿದ್ದೇನೆ. ಇನ್ನೊಂದು ವರ್ಷದಲ್ಲಿ ಬಿ.ಇ ಮುಗಿಯುತ್ತಿದೆ. ನಂತರ ನಾನು ಎಲೆಕ್ಟ್ರಾನಿಕ್ಸ್ ನಲ್ಲಿ ಎಂ.ಎಸ್ಸಿ ಮಾಡಬಹುದೇ?

ನಿಮಗೆ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಶೇಷ ಆಸಕ್ತಿ ಇದ್ದರೆ ಬಿ.ಇ.ನಲ್ಲೂ ಎಲೆಕ್ಟ್ರಾನಿಕ್ಸ್ ಆರಿಸಿಕೊಳ್ಳಬೇಕಾಗಿತ್ತು. ಬಹುಶಃ ಸಿ.ಇ.ಟಿ.ಯಲ್ಲಿ ಉತ್ತಮ ರ‌್ಯಾಂಕ್ ಬರದಿದ್ದರಿಂದ ನಿಮಗೆ ಎಲೆಕ್ಟ್ರಾನಿಕ್ಸ್ ವಿಭಾಗ ಸಿಕ್ಕಿರದಿರಬಹುದು. ನೀವು ಸಿ.ಇ.ಟಿ ಪರೀಕ್ಷೆಯನ್ನು ಇನ್ನೊಮ್ಮೆ ತೆಗೆದುಕೊಂಡು, ರ‌್ಯಾಂಕ್‌ನ್ನು ಉತ್ತಮಪಡಿಸಿಕೊಂಡು ಮತ್ತೊಮ್ಮೆ ಪ್ರಯತ್ನಿಸಬಹುದಿತ್ತು. ಈಗ ತಡವಾಗಿದೆ.

 

ನೀವು ಓದುತ್ತಿರುವುದನ್ನೇ ಇಷ್ಟಪಡುವುದು ಸೂಕ್ತ. ಬಿ.ಇ ನಂತರ ನಿಮಗೆ ಸಾಧ್ಯವೆನಿಸಿದರೆ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಟೆಕ್ ಮಾಡಲು ಪ್ರಯತ್ನಿಸಬಹುದು ಅಥವಾ ಮುಕ್ತ ವಿಶ್ವವಿದ್ಯಾಲಯಗಳ ಮುಖಾಂತರ ಬಿ.ಎಸ್ಸಿ ಮಾಡಿ ಅನಂತರ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಎಸ್ಸಿ ಮಾಡಬಹುದು.

 ಅನಾಮಧೇಯ, ಚಿತ್ರದುರ್ಗ

*ನಾನು ಸ್ನಾತಕೋತ್ತರ ಪದವಿಯನ್ನು ಗಣಿತ ಶಾಸ್ತ್ರದಲ್ಲಿ ಮಾಡುತ್ತಿದ್ದೇನೆ. ನಂತರ ಪಿಎಚ್.ಡಿ ಮತ್ತು ಬಿ.ಎಡ್ ಎರಡನ್ನೂ ಏಕಕಾಲಕ್ಕೆ ಪ್ರವೇಶ ಪಡೆದು ಓದಲು ಸಾಧ್ಯವೇ? ಇದು ಸೂಕ್ತವೇ? ಅಂತೆಯೇ ಪಿಎಚ್.ಡಿ ಮಾಡುವಾಗ ಪರಿಶಿಷ್ಟ ಜಾತಿ/ ಪಂಗಡದವರಿಗೆ ಕೊಡಲಾಗುವ ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಫೆಲೋಶಿಪ್‌ಗಳ ಬಗ್ಗೆ ಮಾಹಿತಿ ನೀಡಿ.

ಗಣಿತ ಶಾಸ್ತ್ರದಲ್ಲಿ ಪಿಎಚ್.ಡಿ ಮಾಡುವ ಹಂಬಲ ನಿಮಗಿರುವುದನ್ನು ತಿಳಿದು ಸಂತೋಷವಾಯಿತು. ಪಿಎಚ್.ಡಿ ಮಾಡಲು ಯು.ಜಿ.ಸಿ ನಡೆಸುವ ಎನ್.ಇ.ಟಿ/ ಜೆ.ಆರ್.ಎಫ್ ಎಂಬ ಆಯ್ಕೆ ಪರೀಕ್ಷೆಯಲ್ಲಿ ನೀವು ತೇರ್ಗಡೆ ಹೊಂದಬೇಕು. ಅದಕ್ಕೆ ಎಂ.ಎಸ್ಸಿ ನಂತರ ಒಂದೆರಡು ವರ್ಷಗಳ ಅಧ್ಯಯನ ಅಗತ್ಯ. ಈ ಮಧ್ಯೆ ಎನ್.ಇ.ಟಿ.ಗೆ ಸಿದ್ಧತೆ ನಡೆಸುವಾಗಲೇ ನೀವು ಬಿ.ಎಡ್ ಸಹ ಮಾಡಿಕೊಳ್ಳಬಹುದು.

 ಸ್ವಾಮಿ ಎಂ.ಆರ್, ಚಿತ್ರದುರ್ಗ

*ನಾನು ಬಿ.ಎಸ್ಸಿ (ಪಿ.ಸಿ.ಎಂ) ವ್ಯಾಸಂಗ ಮಾಡುತ್ತಿದ್ದು ನನಗೆ ರಸಾಯನ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದೆ. ರಸಾಯನಶಾಸ್ತ್ರಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಹಂಬಲ ಇದೆ. ದಯಮಾಡಿ ಅಂತಹ ಕಂಪೆನಿಗಳು ಹಾಗೂ ಎಂ.ಎಸ್ಸಿ ರಸಾಯನ ಶಾಸ್ತ್ರದ ಬಗ್ಗೆ ಮಾಹಿತಿ ಕೊಡಿ.

ಬಿ.ಎಸ್ಸಿ ಹಂತದಲ್ಲಿ ರಸಾಯನಶಾಸ್ತ್ರವನ್ನು ಚೆನ್ನಾಗಿ ಅಭ್ಯಾಸ ಮಾಡಿ ಆ ನಂತರ ಆರ್ಗ್ಯಾನಿಕ್/ ಇನಾರ್ಗ್ಯಾನಿಕ್ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿ. ನಿಮಗೆ ಹೆಚ್ಚಿನ ಆಸಕ್ತಿ ಇದ್ದರೆ ಪಿಎಚ್.ಡಿ ಸಹ ಮಾಡಬಹುದು. ಅನಂತರ ಔಷಧಿ ಕಂಪೆನಿಗಳು, ಸಿಮೆಂಟ್ ಕಂಪೆನಿಗಳು, ರಾಸಾಯನಿಕ ಪದಾರ್ಥಗಳನ್ನು ತಯಾರಿಸುವ ಕಾರ್ಖಾನೆಗಳು... ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಿಮಗೆ ಉದ್ಯೋಗಗಳು ವಿಪುಲವಾಗಿ ಸಿಗುತ್ತವೆ.

ಸುಪ್ರೀತಾ ಎಂ. ಕುಂದರನ್,  ಸುಂಕದಹೊಳೆ

*ನಾನು ಬಿ.ಎ (ಎಸ್.ಇ.ಸಿಎ) ಓದುತ್ತಿದ್ದೇನೆ. ನಂತರ ಯಾವ ಕೋರ್ಸ್ ತೆಗೆದುಕೊಳ್ಳಬಹುದು ಮತ್ತು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ನೀವು ಬಿ.ಎ ಓದುವಾಗಲೇ ಕಂಪ್ಯೂಟರ್ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದರೂ ಭೌತಶಾಸ್ತ್ರ ಮತ್ತು ಗಣಿತದ ಜ್ಞಾನವಿಲ್ಲದೆ ಕಂಪ್ಯೂಟರ್ ವಿಜ್ಞಾನದಲ್ಲಿ ಓದನ್ನು ಮುಂದುವರಿಸಲು ಸಾಧ್ಯವಿಲ್ಲ. ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಬಹುದು. ಮುಂದೆ ನಿಮ್ಮ ಉದ್ಯೋಗದ ಸಮಯದಲ್ಲಿ ನೀವು ಈಗ ಪಡೆದಿರುವ ಕಂಪ್ಯೂಟರ್ ಜ್ಞಾನ ನಿಮ್ಮ ನೆರವಿಗೆ ಬರುತ್ತದೆ. ಬಿ.ಎ ನಂತರ ಬಿ.ಎಡ್ ಸಹ ಮಾಡಿ ಶಿಕ್ಷಕ ವೃತ್ತಿ ಕೈಗೊಳ್ಳಬಹುದು.

ವಿಜಯಕಾಂತ,  ಶಿವಮೊಗ್ಗ

*ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ನಂತರ ಮರೈನ್ ಎಂಜಿನಿಯರ್ ಆಗಬಹುದೇ? ಬೆಂಗಳೂರು ಮತ್ತು ಮೈಸೂರಿನಲ್ಲಿ ಒಳ್ಳೆಯ ಆಪ್ಟಿಟ್ಯೂಡ್ ಕೌನ್ಸಿಲರ್‌ಗಳ ವಿಳಾಸವಿದ್ದರೆ ತಿಳಿಸಿ.

ಮರೈನ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಮೆಕ್ಯಾನಿಕಲ್ ಎಂಜಿನಿಯರ್‌ಗಳು ಅತ್ಯವಶ್ಯ. ಮರೈನ್ ಎಂಜಿನಿಯರಿಂಗ್‌ನ ಹೃದಯ ಭಾಗವೇ ಮೆಕ್ಯಾನಿಕಲ್ ಎಂಜಿನಿಯರಿಂಗ್. ನೀವು ಬಿ.ಇ ನಂತರ ಮರೈನ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಮಾಡುವುದು ಸೂಕ್ತ.

 ಶೀತಲ್ ಕೆ, ಹುಬ್ಬಳ್ಳಿ

*ನಾನು ಎಸ್ಸೆಸ್ಸೆಲ್ಸಿ ನಂತರ ಡಿಪ್ಲೊಮಾ (ಸಿವಿಲ್) ಮಾಡಿದ್ದೇನೆ. ಮುಂದೆ ದೂರಶಿಕ್ಷಣದ ಮೂಲಕ ಬಿ.ಎಸ್ಸಿ ಮಾಡಬೇಕೆಂದಿದ್ದೇನೆ. ಪಿ.ಯು. ಮಾಡಿಲ್ಲ. ನಾನು ಬಿ.ಎಸ್ಸಿ ಪಡೆಯಬಹುದೇ?

ನೀವು ಪಿ.ಯು. ಮಾಡದಿದ್ದರೂ ದೂರಶಿಕ್ಷಣದ ಮೂಲಕ ಬಿ.ಎಸ್ಸಿ ಮಾಡಲು ಸಾಧ್ಯ. ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗವು ಇಂತಹ ಬಿ.ಎಸ್ಸಿ ಕೋರ್ಸುಗಳನ್ನು ನೀಡುತ್ತಿದೆ. ಹುಬ್ಬಳ್ಳಿಯಲ್ಲಿ ಇದರ ಶಾಖೆಗಳಿವೆಯೇ ಎಂದು ವಿಚಾರಿಸಿ ಮುಂದುವರಿಯಿರಿ.

 ನದಾಫ್ ಎನ್.ಎ, ಕಾರವಾರ

*ನಾನು ದ್ವಿತೀಯ ಪಿ.ಯು.ಸಿ ಓದುತ್ತಿದ್ದು, ಮುಂದೆ ಏರೋನಾಟಿಕ್ಸ್ ವಿಭಾಗದಲ್ಲಿ ಓದುವ ಹಂಬಲ ಇದೆ. ಇದಕ್ಕೆ ಪ್ರವೇಶ ಮತ್ತು ಅದರ ಭವಿಷ್ಯದ ಕುರಿತು ಮಾಹಿತಿ ಕೊಡಿ.

ಕರ್ನಾಟಕದ ಕೆಲವೇ ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಓದಲು ಅವಕಾಶವಿದೆ. ಸಿ.ಇ.ಟಿ.ಯಲ್ಲಿ ನೀವು ಅತ್ಯುತ್ತಮ ರ‌್ಯಾಂಕ್ ಪಡೆದಿದ್ದರೆ ಮಾತ್ರ ನಿಮಗೆ ಅವಕಾಶ. ಒಂದು ವೇಳೆ ಅವಕಾಶ ಸಿಗದಿದ್ದರೂ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಮಾಡಿ ಆನಂತರ ಏರೋನಾಟಿಕಲ್ ಎಂಜಿನಿಯರಿಂಗ್‌ನ್ನು ಎಂ.ಟೆಕ್.ನಲ್ಲಿ ಆರಿಸಿಕೊಳ್ಳಬಹುದು.ಏರೋನಾಟಿಕಲ್ ಎಂಜಿನಿಯರಿಂಗ್ ಕ್ಷೇತ್ರ ಬಹಳ ಮಹತ್ವಪೂರ್ಣದ್ದಾಗಿದ್ದರೂ ಉದ್ಯೋಗಾವಕಾಶಗಳು ಕಡಿಮೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದರೆ ಉದ್ಯೋಗಾವಕಾಶಗಳು ಹೇರಳವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.