ಸೋಮವಾರ, ಮಾರ್ಚ್ 8, 2021
19 °C
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟನೆ

ಪ್ರಾಥಮಿಕ ಮಕ್ಕಳ ಅನುತ್ತೀರ್ಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಥಮಿಕ ಮಕ್ಕಳ ಅನುತ್ತೀರ್ಣಕ್ಕೆ ವಿರೋಧ

ಬೆಂಗಳೂರು: ‘ಕಲಿಕೆಯಲ್ಲಿ ಹಿಂದುಳಿದಿರುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಕೇಂದ್ರದ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರದ ಬೆಂಬಲವಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಮತ್ತೆ ಅದೇ ತರಗತಿಯಲ್ಲಿ ಮುಂದುವರಿಸುವ ಪ್ರಸ್ತಾಪ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ.  ಈ ಬಗ್ಗೆ ಎಲ್ಲ ರಾಜ್ಯಗಳಿಂದ ಸಲಹೆ ಕೇಳಲಾಗಿದೆ. ಕೆಲ ರಾಜ್ಯಗಳು ಸಹಮತ ವ್ಯಕ್ತಪಡಿಸಿವೆ.ಆದರೆ, ಈ ನೀತಿಗೆ ರಾಜ್ಯ ಸರ್ಕಾರ ಬೆಂಬಲ ನೀಡುವುದಿಲ್ಲ. ಇದಕ್ಕೆ ಬದಲಾಗಿ  ಏಳನೇ ತರಗತಿಯ ಮಕ್ಕಳಿಗೆ ಜನವರಿಯಲ್ಲಿ  ಕಲಿಕಾ ಸಾಮರ್ಥ್ಯ ಪರೀಕ್ಷೆ ನಡೆಸಿ, ಹಿಂದುಳಿದಿರುವ ಮಕ್ಕಳಿಗೆ ಮೂರು ತಿಂಗಳ ವಿಶೇಷ ತರಬೇತಿ ನೀಡಿ, ಮುಂದಿನ ತರಗತಿಗೆ ಕಳಿಸುವುದು ಸೂಕ್ತ ಎಂಬ ಸಲಹೆ ನೀಡಲಾಗಿದೆ’ ಎಂದರು.‘ಸರ್ಕಾರಿ ಶಾಲೆಗಳಲ್ಲಿಯೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಒಮ್ಮೆ ಎಲ್‌ಕೆಜಿ, ಯುಕೆಜಿಗೆ ಸೇರಿದ ಮಗುವನ್ನು  ಮತ್ತೆ ಕನ್ನಡ ಶಾಲೆಗಳಿಗೆ ಕಳುಹಿಸಲು ಪೋಷಕರು ಮನಸು ಮಾಡುವುದಿಲ್ಲ. ಹಾಗಾಗಿ ಸರ್ಕಾರಿ ಶಾಲೆಯಲ್ಲಿಯೇ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿ ಮಕ್ಕಳನ್ನು ಅಲ್ಲೇ ಮುಂದುವರಿಸುವಂತೆ ಮಾಡುವುದು ನಮ್ಮ ಉದ್ದೇಶ.   ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತರನ್ನೇ ಬಳಸಬಹುದು’ ಎಂದರು.ಕ್ರಿಮಿನಲ್‌ ಪ್ರಕರಣ ದಾಖಲು: ‘ಶಿಕ್ಷಣ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದು ಅವರು ಹೇಳಿದರು. ಆರ್‌ಟಿಇ ಕಾಯ್ದೆಯಡಿ ಸೀಟು ಪಡೆದ ಮಕ್ಕಳ ಹೆತ್ತವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. ಆದಾಯದ ಬಗ್ಗೆ ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಿದರು.

*

ವಾರದೊಳಗೆ ಶೂ ವಿತರಣೆ

ಒಂದು ವಾರದೊಳಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಶೂ ಖರೀದಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದರು.‘ಪ್ರಾಥಮಿಕ ಶಾಲಾ ಮಕ್ಕಳಿಗೆ ₹250 ಮತ್ತು ಪ್ರೌಢಶಾಲಾ ಮಕ್ಕಳಿಗೆ  ₹275 ರ ದರದಲ್ಲಿ ತಲಾ ಒಂದು ಜೊತೆ ಸೆಮಿ ಕ್ಯಾನ್ವಾಸ್‌ ಶೂ(ಚರ್ಮ ಮತ್ತು ಕ್ಯಾನ್ವಾಸ್‌ ಮಿಶ್ರಿತ) ಖರೀದಿಸುವಂತೆ ಸೂಚನೆ ನೀಡಲಾಗಿದೆ.  ಪ್ರಾಯೋಜಕರು ಸಿಕ್ಕರೆ ವರ್ಷಕ್ಕೆ ಎರಡು ಜೊತೆ ಶೂ ನೀಡುವ ಸ್ವಾತಂತ್ರ್ಯವನ್ನು ಶಾಲೆಗಳಿಗೆ ನೀಡಲಾಗಿದೆ.ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಚರ್ಮದ ಶೂ ಬಳಕೆಗೆ  ಯೋಗ್ಯವಾಗಿಲ್ಲ. ಬೇಸಿಗೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಕ್ಯಾನ್ವಾಸ್‌ ಶೂ ಬಳಸುವುದು ಆರೋಗ್ಯಕರವಲ್ಲ. ಹಾಗಾಗಿ ಸೆಮಿ ಕ್ಯಾನ್ವಾಸ್  ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಯಾ ಪ್ರದೇಶಗಳ ಅಗತ್ಯಗಳಿಗೆ ಅನುಗುಣವಾದ ಶೂ ನೀಡುವ ಬಗ್ಗೆ ಚಿಂತಿಸಲಾಗುವುದು’ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.