ಮಂಗಳವಾರ, ಮಾರ್ಚ್ 9, 2021
23 °C
ಹಾಡಹಗಲೆ ರೇಸ್‌ಕೋರ್ಸ್‌ ರಸ್ತೆಯಲ್ಲಿ ಘಟನೆ

ಪ್ರೀತಿ ನಿರಾಕರಣೆ: 12 ಬಾರಿ ಇರಿದು ಮಹಿಳೆ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿ ನಿರಾಕರಣೆ: 12 ಬಾರಿ ಇರಿದು ಮಹಿಳೆ ಕೊಲೆ

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಧನರಾಜ್ (40) ಎಂಬಾತ ಸುನಿತಾ (27) ಎಂಬುವರಿಗೆ ಹಾಡಹಗಲೆ ಚಾಕುವಿನಿಂದ 12 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರು ಟರ್ಫ್‌ ಕ್ಲಬ್‌ ಎದುರು ಗುರುವಾರ ನಡೆದಿದೆ.ತಾವರೆಕೆರೆ ನಿವಾಸಿ ಸುನಿತಾ ಮೂರು ವರ್ಷದಿಂದ ಟರ್ಫ್‌ ಕ್ಲಬ್‌ನ ಟಿಕೆಟ್‌ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆವಲಹಳ್ಳಿ ನಿವಾಸಿ ಧನರಾಜ್‌ ಕಾರು ಚಾಲಕನಾಗಿದ್ದಾನೆ.ಗುರುವಾರ ಎರಡನೇ ಪಾಳಿ­ಯಲ್ಲಿದ್ದ ಸುನಿತಾ, ಬಸ್‌ ಇಳಿದು ಮಧ್ಯಾಹ್ನ 1.45ಕ್ಕೆ ಟರ್ಫ್‌ ಕ್ಲಬ್‌ನ ಮೂರನೇ ದ್ವಾರದ ಬಳಿ ಬರುತ್ತಿ­ದ್ದಾಗ ಹಿಂದಿನಿಂದ ಬಂದಿರುವ ಆರೋಪಿ, ಸುನಿತಾ ಅವರ ಹೊಟ್ಟೆ, ಎದೆ ಮತ್ತು ಕುತ್ತಿಗೆಯ ಭಾಗಕ್ಕೆ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಈ ವೇಳೆ ಸ್ಥಳದಲ್ಲಿದ್ದ ಸಾರ್ವ­ಜನಿಕರು ಆರೋಪಿಯನ್ನು ಹಿಡಿದು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿ­ದ್ದಾರೆ. ಗಾಯಗೊಂಡಿದ್ದ ಸುನಿತಾ ಅವರನ್ನು ಕೂಡಲೇ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸ­ಲಾಯಿತು. ತೀವ್ರ ರಕ್ತಸ್ರಾವವಾಗಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.

ಸುನಿತಾ ಅವರಿಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಅವರಿಗೆ ಏಳು ವರ್ಷದ ಮಗಳಿದ್ದಾಳೆ.

ಧನರಾಜ್‌ಗೆ ಒಂಬತ್ತು ವರ್ಷದ ಹಿಂದೆ ಮದುವೆಯಾಗಿದ್ದು ಎರಡು ಮಕ್ಕಳಿದ್ದಾರೆ. ಧನರಾಜ್‌ ಎರಡು ವರ್ಷದಿಂದ ಸುನಿತಾ ಅವರ ಕುಟುಂಬಕ್ಕೆ  ಪರಿಚಯವಿದ್ದ. ಮೂರು ತಿಂಗಳ ಹಿಂದಿನಿಂದ ಆತ ಸುನಿತಾ ಅವರಿಗೆ ಪ್ರೀತಿಸುವಂತೆ ಒತ್ತಾಯಿ­ಸುತ್ತಿದ್ದ. ಆದರೆ, ಇದಕ್ಕೆ ಒಪ್ಪದ ಅವರು ಧನರಾಜ್‌ ಜತೆಗೆ ಮಾತು ಬಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆ ನಂತರ ಬಹಳಷ್ಟು ಬಾರಿ ಸುನಿತಾ ಅವರನ್ನು ಭೇಟಿಯಾಗಿದ್ದ ಧನರಾಜ್‌, ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಸುನಿತಾ ಆತನಿಗೆ ಬೈಯ್ದು ಕಳಿಸಿದ್ದರು. ಈ ಕಾರಣಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.