ಶುಕ್ರವಾರ, ಏಪ್ರಿಲ್ 23, 2021
27 °C
`ಸತ್ಯ ಮೇವ ಜಯತೇ'ಯಲ್ಲಿ ಪಾಲ್ಗೊಂಡಿದ್ದ ಪ್ರೇಮಿಗಳು

ಪ್ರೇಮಿಸಿ ವಿವಾಹವಾದ ಯುವಕನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಇತ್ತೀಚೆಗೆ ವಿವಾಹ ವಿರೋಧಿಸಿ ಯುವಕನನ್ನು ಹತ್ಯೆ ಮಾಡಿದ ಪ್ರಕರಣವನ್ನು `ದುರದೃಷ್ಟಕರ' ಎಂದು ಬಣ್ಣಿಸಿರುವ ಕೇಂದ್ರ ಸರ್ಕಾರ, ಪ್ರಕರಣದ ವರದಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ.

ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ಆರ್.ಪಿ.ಎನ್.ಸಿಂಗ್ ಅವರು `ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣಗಳ ತಡೆಗೆ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ' ಎಂದು ಹೇಳಿದರು.

ವಿಭಿನ್ನ `ಬಿರಾದಾರಿ'ಗೆ ಸೇರಿದವನನ್ನು ವಿವಾಹವಾಗಿದ್ದಕ್ಕೆ ಹತ್ಯೆಗೊಳಗಾದ ಅಬ್ದುಲ್ ಹಕಿಂ ಅವರ ಪತ್ನಿ  ಮೆಹ್ವಿಷ್, ತನ್ನ ಪತಿಯನ್ನು ತನ್ನ ಕುಟುಂಬದ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಆದರೆ ಪೊಲೀಸರ ಪ್ರಕಾರ, ಇದು ಅಂತರ್ ಜಾತಿ ವಿವಾಹ ವಿರೋಧಿಸಿದವರು ಮಾಡಿದ ಕೊಲೆಯಲ್ಲ. ಏಕೆಂದರೆ ಕೊಲೆಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಯಾರ ಹೆಸರೂ ನಮೂದಾಗಿಲ್ಲ.

ಘಟನೆ ಹಿನ್ನೆಲೆ: ಉತ್ತರ ಪ್ರದೇಶದ ಬಲಂದ್‌ಶಹರ್ ಜಿಲ್ಲೆಯ ಮೆಹ್ವಿಷ್ ಹಾಗೂ ಅಬ್ದುಲ್ ಹಕಿಂ ಎಂಬುವವರು 2010ರಲ್ಲಿ ವಿವಾಹವಾಗಿದ್ದರು. ಮೆಹ್ವಿಷ್  ಮತ್ತು ಹಕಿಂ ಇಬ್ಬರೂ ವಿಭಿನ್ನ `ಬಿರಾದಾರಿ' ಕುಟುಂಬಗಳಿಗೆ ಸೇರಿದವರು. ಹೀಗಾಗಿ ಇವರ ವಿವಾಹಕ್ಕೆ ಇಬ್ಬರ ಕುಟುಂಬದ ಸದಸ್ಯರ ವಿರೋಧವಿತ್ತು.

ಬೇರೆ `ಬಿರಾದಾರಿ'ಗೆ ಸೇರಿದ ಹುಡುಗಿಯನ್ನು ವಿವಾಹವಾದರೆ ಹಕಿಂನನ್ನು ಕೊಲ್ಲುವುದಾಗಿ ಗ್ರಾಮದ `ಜಾತಿ ಪಂಚಾಯಿತಿ'ಯವರು ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ಜೋಡಿ ಮನೆಯಿಂದ ಓಡಿ ಬಂದು ಅಲಿಗಡದ ನ್ಯಾಯಾಲಯದಲ್ಲಿ ಮದುವೆಯಾಗಿ, ನಂತರ ದೆಹಲಿಯಲ್ಲಿ ವಾಸವಿದ್ದರು. ಇಷ್ಟೆಲ್ಲ ನಡೆದ ಮೇಲೂ ಸೂಕ್ತ ಸಮಯದಲ್ಲಿ ಈ ದಂಪತಿಗೆ `ಸಾವಿನ ಶಿಕ್ಷೆ' ನೀಡುವುದಾಗಿ ಜಾತಿ ಪಂಚಾಯಿತಿಯ ನಾಯಕರು ಪುನರುಚ್ಚರಿಸಿದ್ದರು.

ಕೆಲವು ತಿಂಗಳಗಳ ಹಿಂದೆ ಬಾಲಿವುಡ್ ನಟ ಅಮೀರ್ ಖಾನ್ ವಾಹಿನಿಯೊಂದರಲ್ಲಿ ನಡೆಸಿಕೊಟ್ಟ ರಿಯಾಲಿಟಿ ಷೋ `ಸತ್ಯಮೇವ ಜಯತೇ'ಯಲ್ಲಿ ಈ ಹಕಿಂ ದಂಪತಿ ಪಾಲ್ಗೊಂಡು, ಅಂತರ್ಜಾತಿ/ ಅಂತರ್ ಧರ್ಮೀಯ ವಿವಾಹ ಹಾಗೂ ಅದನ್ನು ವಿರೋಧಿಸಿ ನಡೆಯುತ್ತಿರುವ ಹತ್ಯೆಗಳು, ಜಾತಿ ಪಂಚಾಯಿತಿಗಳ ದೌರ್ಜನ್ಯದ ವಿರುದ್ಧ ದನಿ ಎತ್ತಿದ್ದರು.

ಕೆಲವು ತಿಂಗಳಗಳ ಹಿಂದೆ ಹಕಿಂ-ಮೆಹ್ವಿಷ್ ದಂಪತಿ ಹಳ್ಳಿಗೆ ಹಿಂದಿರುಗಿದ್ದರು. ದಂಪತಿ ತಮಗೆ ಹತ್ಯೆಯ ಬೆದರಿಕೆ ಇದೆ ಎಂದು 48 ಬಾರಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸರು ಅದನ್ನು ತಿರಸ್ಕರಿಸ್ದ್ದಿದರು.

`ಕಳೆದ ಗುರುವಾರ ನನ್ನ ಗಂಡ ಔಷಧದ ತರುವ ಸಲುವಾಗಿ ಅಂಗಡಿಗೆ ಹೋದಾಗ ನನ್ನ ಸೋದರ ಸಂಬಂಧಿಗಳು ಆತ ಮೇಲೆ ಎರಗಿದರು. ಸಲ್ಮಾನ್, ಹಕಿಂ ಮೇಲೆ ಗುಂಡು ಹಾರಿಸಿ ಕೊಂದ' ಎಂದು ಮೆಹ್ವಿಷ್ ಹೇಳಿದ್ದಾರೆ.

`ಈಗ ನನ್ನ ಮತ್ತು ನನ್ನ ಮಗಳನ್ನೂ ಕೊಲ್ಲಲು ಜಾತಿ ಪಂಚಾಯಿತಿಯವರು ಆದೇಶ ಹೊರಡಿಸಿದ್ದಾರೆ' ಎಂದು ಮೆಹ್ವಿಷ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.