ಭಾನುವಾರ, ಜನವರಿ 26, 2020
29 °C
ಪರಿಸರ ಅಧಿಕಾರಿ ಭೀಮ್‌ಸಿಂಗ್‌ ಗೌಗಿ ಅಭಿಮತ

ಪ್ಲಾಸ್ಟಿಕ್‌ ಪುನರ್ಬಳಕೆಯಿಂದ ಮಾಲಿನ್ಯ ನಿಯಂತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಪರಿಸರದ ಬಗೆಗಿನ ಕಾಳಜಿ ಕಣ್ಮರೆಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಅದನ್ನು ಸಂರಕ್ಷಿಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಲು ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧವಾಗಬೇಕು. ಇಲ್ಲದಿದ್ದರೆ ಪುನರ್ಬಳಕೆಯಾಗಬೇಕು. ಇಲ್ಲವೇ ಸಮರ್ಪಕ ರೀತಿಯಲ್ಲಿ ವಿಲೇವಾರಿಯಾಗಬೇಕು’ ಎಂದು ಪರಿಸರ ಅಧಿಕಾರಿ ಭೀಮ್‌ಸಿಂಗ್‌ ಗೌಗಿ ಅಭಿಪ್ರಾಯಪಟ್ಟರು.ನಗರದ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಗುರುವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ವಿಜ್ಞಾನ ಕೇಂದ್ರ ಹಾಗೂ ಹಾಗೂ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ ಪುನರ್ಬಳಕೆ ಕುರಿತು

ಪ್ರಾತ್ಯಕ್ಷಿಕೆ ಮತ್ತು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.‘ಇಂದು ಎಲ್ಲ ವಸ್ತುಗಳು ಪ್ಲಾಸ್ಟಿಕ್‌ ಮಯವಾಗಿದೆ. ಬಹುತೇಕರು ಸಾಮಗ್ರಿಗಳನ್ನು ತರಲು ಬಟ್ಟೆ ಚೀಲಗಳನ್ನು ಉಪಯೋಗಿಸದೆ

ಪ್ಲಾಸ್ಟಿಕ್‌ ಚೀಲಗಳ ಮೊರೆ ಹೋಗಿದ್ದಾರೆ. ಪ್ರತಿ ಸೆಕೆಂಡಿಗೂ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಪರಿಸರದ ಮೇಲೆ ಪ್ರತಿನಿತ್ಯ ದುಷ್ಪರಿಣಾಮ ಉಂಟಾಗಿ ಮಾಲಿನ್ಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮಕ್ಕಳು ತಮ್ಮ ಪೋಷಕರಿಗೆ ಬಟ್ಟೆ ಚೀಲಗಳಲ್ಲೇ ದಿನನಿತ್ಯ ಸಾಮಗ್ರಿ ತರಲು ತಾಕೀತು ಮಾಡಬೇಕಿದೆ. ಪ್ಲಾಸ್ಟಿಕ್‌ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.ಕೆಲವು ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ನಿಂದ ಉಪಯೋಗ ಆಗಿದೆ. ಅದೇ ರೀತಿ ದುಷ್ಪರಿಣಾಮವೂ ಬೀರಿ ಪರಿಸರ ಹಾಳು ಮಾಡಿದೆ. ಈ ಬಗ್ಗೆ ಚಿಂತಿಸದಿದ್ದರೆ ಅನೇಕ ರೋಗಗಳಿಗೆ ನಾವುಗಳೇ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರಾಂಶುಪಾಲ ಡಾ.ಎಚ್‌.ಕೆ.ಎಸ್‌. ಸ್ವಾಮಿ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನೀಡಿ, ಚಳಿಗಾಲದಲ್ಲಿ ಸಂಜೆ ಹೊತ್ತು

ಪ್ಲಾಸ್ಟಿಕ್‌ ಕವರ್‌ಗಳನ್ನು, ರಸ್ತೆಗಳಲ್ಲಿ ವಾಹನಗಳ ಟೈರ್‌ಗಳನ್ನು ಪ್ರತಿಭಟನೆ ವೇಳೆ ಸುಡುವುದು ಹೆಚ್ಚುತ್ತಿದೆ. ಇದರಿಂದಾಗಿ ಹೈಡ್ರೋಕ್ಲೋರಿಕ್‌ ಆಸಿಡ್‌ ಬಿಡುಗಡೆಯಾಗಿ ಪರಿಸರಕ್ಕೆ ಹಾನಿಯಾಗಿ ಕ್ಯಾನ್ಸರ್‌ಗೆ ಕಾರಣವಾಗಲಿದೆ. ಅದನ್ನು ತಡೆಗಟ್ಟಲು ಯುವಸಮೂಹ ಎಚ್ಚೆತ್ತುಕೊಳ್ಳಬೇಕು ಎಂದರು.ಪ್ರಸ್ತುತ ಮಕ್ಕಳಲ್ಲಿ ದೈಹಿಕ ಶ್ರಮ ಇಲ್ಲದಂತಾಗಿದೆ. ಮಕ್ಕಳು ಮನಸ್ಸು ಮಾಡಿದರೆ, ನಿರುಪಯುಕ್ತ ಎಂದು ಬಿಸಾಡುವ ಪ್ಲಾಸ್ಟಿಕ್‌ನಿಂದ ಹಾರ, ವಿಜ್ಞಾನ ಮಾದರಿ, ಗೊಂಬೆ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸಿ ಮನೆ ಸಿಂಗರಿಸಬಹುದು ಎಂದು ಹೇಳಿದರು.

ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಂ.ಆರ್‌.ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ

ಎನ್‌.ಎಸ್‌.ಗುರುಮೂರ್ತಿ, ಪ್ರಾಂಶುಪಾಲ ಪ್ರೊ.ಎಂ.ಟಿ.ಶಂಕರಪ್ಪ ಹಾಜರಿದ್ದರು.ರಾಜಧಾನಿಯಲ್ಲೇ ಅತಿ ಹೆಚ್ಚು

ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ ದಿನಕ್ಕೆ 6,500 ಮೆಟ್ರಿಕ್‌ ಟನ್‌ ತ್ಯಾಜ್ಯ ವಸ್ತು ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಸುಮಾರು 3 ಸಾವಿರ ಮೆಟ್ರಿಕ್‌ ಟನ್‌ ರಾಜಧಾನಿ ಬೆಂಗಳೂರಿನಲ್ಲಿಯೇ ಉತ್ಪತ್ತಿ ಯಾಗುತ್ತಿದ್ದು, ವಿಲೇವಾರಿ ಆಗದೆ ಸಮಸ್ಯೆಯಾಗಿದೆ. ಈ ಕುರಿತು ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ನೀರು ಪೂರೈಕೆಗೆ ಬಳಸುವಂತಹ ಪಿವಿಸಿ ಪೈಪ್‌ಗಳಲ್ಲಿ ಶೇ 38ರಷ್ಟು, ಕೃಷಿ ಇಲಾಖೆಯಲ್ಲಿ ಶೇ 28ರಷ್ಟು, ಚಪ್ಪಲಿ ಬಳಕೆಯಲ್ಲಿ ಶೇ 10ರಷ್ಟು, ಆರೋಗ್ಯ ಇಲಾಖೆಯಲ್ಲಿ ಶೇ 10ರಷ್ಟು, ಮೊಬೈಲ್‌ ಸೇರಿದಂತೆ ಇತರೆ ವಸ್ತುಗಳಲ್ಲಿಯೂ ಪ್ಲಾಸ್ಟಿಕ್‌ ಬಳಸಲಾಗುತ್ತಿದೆ. ಅದನ್ನು ಪುನರ್ಬಳಕೆ ಮಾಡಿದಾಗ ಮಾತ್ರ ಸ್ವಲ್ಪಮಟ್ಟಿಗೆ ಮಾಲಿನ್ಯ ತಡೆಯಲು ಸಾಧ್ಯ.

– ಭೀಮ್‌ಸಿಂಗ್‌ ಗೌಗಿ, ಪರಿಸರ ಅಧಿಕಾರಿ

ಪ್ರತಿಕ್ರಿಯಿಸಿ (+)