ಶುಕ್ರವಾರ, ಮೇ 27, 2022
23 °C

ಪ. ಪಂಗಡ ನಿಗಮ ಅಧ್ಯಕ್ಷೆ, ಅಧಿಕಾರಿಗಳ ಭೇಟಿ.ಪರಿಶಿಷ್ಟ ಪಂಗಡದವರ ಸಮಸ್ಯೆ ಆಲಿಸಿ ಯೋಜನೆ ಅನುಷ್ಠಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲ್ಯಾಡಿ(ಉಪ್ಪಿನಂಗಡಿ): ಪರಿಶಿಷ್ಠ ಪಂಗಡದವರ ಕೇರಿ, ಕಾಲೋನಿ, ಮನೆಗಳಲ್ಲಿ ಹತ್ತಾರು ಸಮಸ್ಯೆಗಳಿದ್ದು, ಇವುಗಳನ್ನು ಖುದ್ದು ಆಲಿಸಿ ಯೋಜನೆ ಅನುಷ್ಠಾನ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಡಾ. ಮಂಗಳಾ ಶ್ರೀಧರ್ ತಿಳಿಸಿದರು.ಶನಿವಾರ ಆಲಂತಾಯ ಗ್ರಾಮದ ಶಿವಾರುಮಲೆ ಮಲೆಕುಡಿಯರ ಬಿಡಾರಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಪರಿಶಿಷ್ಟ ವರ್ಗ, ಪಂಗಡದವರಾದ ಮರಾಟಿ ನಾಯಕರು, ಕೊರಗರು ಮಲೆಕುಡಿಯ ಜನಾಂಗದವರು ಅಭಿವೃದ್ಧಿಯಲ್ಲಿ ಬಹಳ ಹಿಂದೆ ಬಿದ್ದಿದ್ದಾರೆ. ಸರ್ಕಾರದಲ್ಲಿ ಇರುವ ಯೋಜನೆಗಳ ಬಗ್ಗೆ ಇವರಿಗೆ ಮಾಹಿತಿ ಇಲ್ಲ. ಕಚೇರಿಗಳಿಗೆ ಹೋಗಿ ತಿಳಿದುಕೊಳ್ಳುವಷ್ಟು ತಿಳಿವಳಿಕೆ, ಧೈರ್ಯ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ಸಮೇತ ಅವರ ಕೇರಿ, ಕಾಲೋನಿ, ಬಿಡಾರಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆ, ಬೇಡಿಕೆಗಳನ್ನು ಆಲಿಸಿ ಅಗತ್ಯ ಪರಿಹಾರ ಕ್ರಮ ಜರಗಿಸಲಾಗುವುದು ಎಂದು ಅವರು ತಿಳಿಸಿದರು.ರಾಜ್ಯದ 10 ಜಿಲ್ಲೆಗಳಲ್ಲಿ ಈಗಾಗಲೇ ಕಚೇರಿ ತೆರೆಯಲಾಗಿದೆ. ಇನ್ನೂ 16 ಜಿಲ್ಲೆಗಳಲ್ಲಿ ಕಚೇರಿ ಮತ್ತು ಸಿಬ್ಬಂದಿ ನೇಮಕ ಮಾಡಲಾಗುವುದು. ಫಲಾನುಭವಿಗಳ ಕೃಷಿ ಭೂಮಿ ಅಭಿವೃದ್ಧಿಗಾಗಿ ನೀರಾವರಿ ವ್ಯವಸ್ಥೆ, ಕೃಷಿ ಭೂಮಿ ಖರೀದಿಗಾಗಿ ಸಹಾಯಧನ, ಮಹಿಳೆಯರಿಗೆ, ವ್ಯಾಪಾರಕ್ಕೆ ಸಾಲ ಮೊದಲಾದ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಶಿವಾರುಮಲೆಯ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ನೆಲ್ಯಾಡಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ ಬಾಣಜಾಲು ಮತ್ತು ಗೋಳಿತೊಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೂವಪ್ಪ ಕರ್ಕೇರ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಗಳಾ ಶ್ರೀಧರ್ ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.ನಿಗಮದ ಆಡಳಿತ ನಿರ್ದೇಶಕ ದೇವರಾಜ್, ದಕ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ದಾಮೋದರ್ ನಾಯ್ಕಾ, ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಸಣ್ಣೇಗೌಡ, ಸಂಶೋಧನಾ ವಿದ್ಯಾರ್ಥಿ ರಾಜಣ್ಣ, ರಾಮಣ್ಣ ಮಲೆಕುಡಿಯ, ಗೋಳಿತೊಟ್ಟು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೊರಗಪ್ಪ ಗೌಡ, ಪ್ರಸಾದ್, ಪಿಡಿಒ ತಿರುಪತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.