ಸೋಮವಾರ, ಮೇ 23, 2022
30 °C

ಫುಟ್‌ಬಾಲ್: ಎಚ್‌ಎಎಲ್‌ಗೆ ಪ್ರಯಾಸದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸತೀಶ್ ಕುಮಾರ್ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಎಚ್‌ಎಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ.ಬಿಡಿಎಫ್‌ಎ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ಎಚ್‌ಎಎಲ್ ತಂಡ 1-0 ಗೋಲಿನಿಂದ ಸಿಐಎಲ್ ತಂಡವನ್ನು ಮಣಿಸಿತು.ಪಂದ್ಯದ ಏಕೈಕ ಗೋಲನ್ನು 71ನೇ ನಿಮಿಷದಲ್ಲಿ ಸತೀಶ್ ತಂದಿತ್ತರು. ಆದರೆ ಗೋಲು ಗಳಿಸಬಹುದಾಗಿದ್ದ ಹಲವು ಅವಕಾಶಗಳನ್ನು ಉಭಯ ತಂಡಗಳು ಹಾಳು ಮಾಡಿಕೊಂಡವು. ದಾಳಿಗೆ ಹೆಚ್ಚು ಒತ್ತು ನೀಡಿ ಆಡಿದ ಸಿಐಎಲ್ 9ನೇ  ನಿಮಿಷದಲ್ಲಿ ಅಂತಹ ಒಂದು ಅವಕಾಶ ಕಳೆದುಕೊಂಡಿತು. ಮನೋಜ್ ನೀಡಿದ ಪಾಸ್‌ಅನ್ನು ನಿಖರವಾಗಿ ಗುರಿ ಸೇರಿಸುವಲ್ಲಿ ಪ್ರತೀಪ್ ಯಶಸ್ವಿಯಾಗಲಿಲ್ಲ.11ನೇ ನಿಮಿಷದಲ್ಲಿ ಎಚ್‌ಎಎಲ್‌ನ ವಿನೋದ್ ಕುಮಾರ್ ಸೃಷ್ಟಿಸಿಕೊಟ್ಟ ಅವಕಾಶವೊಂದರಲ್ಲಿ ಆರ್.ಸಿ.ಪ್ರಕಾಶ್ ಎಡವಿದರು.ಇದು ಈ ತಂಡದ ಅಭಿಮಾನಿಗಳಲ್ಲಿ ತುಂಬಾ ನಿರಾಸೆಗೆ ಕಾರಣವಾಯಿತು. ಅತ್ಯುತ್ತಮ ಅವಕಾಶಗಳನ್ನು ಇವರು ಅನೇಕ ಬಾರಿ ಕಳೆದುಕೊಂಡರು. ಸಿಐಎಲ್ ಕೂಡ ಹಲವು ಬದಲಾವಣೆ ಮಾಡಿತು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ. ಎದುರಾಳಿ ಪಡೆಯ ರಕ್ಷಣಾ ಕೋಟೆಯನ್ನು ಕೆಡವಲು ಅವರಿಗೆ ಭಾರಿ ಕಷ್ಟವಾಯಿತು.ಅನುಚಿತ ಪದಗಳನ್ನು ಬಳಸಿದ್ದಕ್ಕೆ ಎಚ್‌ಎಎಲ್ ಗೋಲ್ ಕೀಪರ್ ಅಮರ್ ದೇವ್‌ಗೆ ರೆಫರಿ ಎಲಂಗೊವನ್ ಹಳದಿ ಕಾರ್ಡ್ ನೀಡಿದರು. ಈ ಆಘಾತದ ಜೊತೆಗೆ 52ನೇ ನಿಮಿಷದಲ್ಲಿ ಲಭಿಸಿದ್ದ ಪೆನಾಲ್ಟಿ ಅವಕಾಶದಲ್ಲಿ ನಿರಾಶೆ ಅನುಭವಿಸಿತು.

 

ಆ ಅವಕಾಶವನ್ನು ತಪ್ಪಿಸಿದ್ದು ಸಿಐಎಲ್‌ನ ಗೋಲ್‌ಕೀಪರ್ ಎನ್.ವೆಂಕಟೇಶ್. 72ನೇ ನಿಮಿಷದಲ್ಲಿ ವಿಜಯಿ ತಂಡದ ಕಾರ್ತಿಗೇಯನ್ ಗಾಯಗೊಂಡರು. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಯಿತು.

ಪಂದ್ಯದ ಕೊನೆಯ ನಿಮಿಷ ಪಂದ್ಯ ತುಂಬಾ ಆಸಕ್ತಿ ಸೃಷ್ಟಿಸಿತು. ಆದರೆ ಚೆಂಡನ್ನು ಗುರಿ ಸೇರಿಸಲು ಉಭಯ ಆಟಗಾರರಿಗೆ ಸಾಧ್ಯವಾಗಲಿಲ್ಲ.ಡಿವೈಎಸ್‌ಎಸ್‌ಗೆ ಗೆಲುವು: ಡಿವೈಎಸ್‌ಎಸ್ ತಂಡದವರು `ಎ~ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಗೆದ್ದರು. ಈ ತಂಡದವರು 4 -2 ಗೋಲುಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಂಡವನ್ನು ಪರಾಭವಗೊಳಿಸಿದರು.ಡಿವೈಎಸ್‌ಎಸ್ ತಂಡದ ಹರೀಶ್ (38ನೇ ಹಾಗೂ 49ನೇ ನಿ.), ಎಂ.ಬಂಡಾರಿ (70ನೇ ನಿ.) ಮತ್ತು ಸುನಿಲ್ (80ನೇ ನಿ.) ಗೋಲು ತಂದಿತ್ತರು. ಆರ್‌ಬಿಐ ತಂಡದ ಜಯಶೀಲನ್ (53ನೇ ನಿ.) ಹಾಗೂ ಸಂತೋಷ್ (60ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಡಿವೈಎಸ್‌ಎಸ್ ದಾಳಿಗೆ ಒತ್ತು ನೀಡಿ ಆಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.