ಬುಧವಾರ, ಏಪ್ರಿಲ್ 21, 2021
25 °C

ಫುಟ್‌ಬಾಲ್: ಬ್ರೆಜಿಲ್-ಮೆಕ್ಸಿಕೊ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಪಿ/ಐಎಎನ್‌ಎಸ್): ಬಲಿಷ್ಠ ಬ್ರೆಜಿಲ್ ಹಾಗೂ ಮೆಕ್ಸಿಕೊ ತಂಡಗಳು ಒಲಿಂಪಿಕ್ಸ್ ಪುರುಷರ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಶನಿವಾರ ಪೈಪೋಟಿ ನಡೆಸಲಿವೆ.ಈ ಪಂದ್ಯ ವೆಂಬ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಫುಟ್‌ಬಾಲ್‌ನಲ್ಲಿ ಹಲವು ಸಾಧನೆಗಳಿಗೆ ಕಾರಣವಾಗಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಚಿನ್ನದ ಪದಕ ಗೆದ್ದಿಲ್ಲ.ರಿವಾಲ್ಡೊ, ರಾಬೆರ್ಟೊ ಕಾರ್ಲೊಸ್, ರೊನಾಲ್ಡೊ ಹಾಗೂ ರೊನಾಲ್ಡಿನೊ ಅವರಂತಹ ಆಟಗಾರರು ಇದ್ದಾಗಲೂ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.ಆದರೆ ಈ ಬಾರಿ ಆ ನಿರಾಸೆಯನ್ನು ಹೋಗಲಾಡಿಸುವ ವಿಶ್ವಾಸದಲ್ಲಿ ಬ್ರೆಜಿಲ್ ತಂಡವಿದೆ. ನೇಮರ್ ಅವರಂಥ ಆಟಗಾರರನ್ನು ಒಳಗೊಂಡಿರುವ ಈ ತಂಡ ಚೊಚ್ಚಲ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.ಬ್ರೆಜಿಲ್ 1988ರಲ್ಲಿ ಫೈನಲ್ ತಲುಪಿತ್ತು. ಆದರೆ 1-2ರಲ್ಲಿ ಸೋವಿಯತ್ ಒಕ್ಕೂಟದ ಎದುರು ನಿರಾಸೆ ಅನುಭವಿಸಿತ್ತು. ಆ ತಂಡದಲ್ಲಿ ರೊಮಾರಿಯೊ ಹಾಗೂ ಬೆಬೆಟೊ ಅವರಂತಹ ಶ್ರೇಷ್ಠ ಆಟಗಾರರು ಇದ್ದರು. ಆ ಬಳಿಕ ಇದೇ ಮೊದಲ ಬಾರಿ ಫೈನಲ್‌ನಲ್ಲಿ ಆಡುತ್ತಿದೆ.ಪೀಲೆ ಉಪಸ್ಥಿತಿ: ಫುಟ್‌ಬಾಲ್ ದಂತಕತೆ ಪೀಲೆ ಈ ಪಂದ್ಯವನ್ನು ವೀಕ್ಷಿಸಲು ಆಗಮಿಸಲಿದ್ದಾರೆ. ಬ್ರೆಜಿಲ್ ಮೂರು ಬಾರಿ ವಿಶ್ವ ಚಾಂಪಿಯನ್ ಆಗಲು ಪೀಲೆ ಕಾರಣರಾಗಿದ್ದರು.`ಒಲಿಂಪಿಕ್ಸ್‌ನಲ್ಲಿ ಬ್ರೆಜಿಲ್ ಚಿನ್ನ ಗೆದ್ದಿಲ್ಲ ಎಂದು ಜನರು ಹೇಳುತ್ತಾರೆ. ನಾನು 17 ವರ್ಷ ವಯಸ್ಸಿನಲ್ಲಿದ್ದಾಗಲೇ ವಿಶ್ವಕಪ್‌ನಲ್ಲಿ ಆಡಲು ಶುರು ಮಾಡಿದೆ. ನಾನು ವೃತ್ತಿಪರ ಆಟಗಾರನಾದೆ ಆ ಸಮಯದಲ್ಲಿ ವೃತ್ತಿಪರ ಆಟಗಾರರು ಒಲಿಂಪಿಕ್ಸ್ ನಲ್ಲಿಆಡುತ್ತಿರಲಿಲ್ಲ. ಈಗ ಸ್ಥಿತಿ ಹಾಗಿಲ್ಲ.

 

ಆದ್ದರಿಂದ ಚಿನ್ನ ಗೆಲ್ಲಲು ಸಮಯ ಈಗ ಬಂದಿದೆ. ಚಿನ್ನದ ಪದಕದೊಂದಿಗೆಯೇ  ನಾವು ಬ್ರೆಜಿಲ್‌ಗೆ ಹಿಂತಿರುಗಬೇಕು. ಏಕೆಂದರೆ ನಮ್ಮ ಸಾಧನೆಗಳ ಪಟ್ಟಿಯಲ್ಲಿ ಇದರ ಅನುಪಸ್ಥಿತಿ ಕಾಡುತ್ತಿದೆ~ ಎಂದು ಪೀಲೆ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.