ಶುಕ್ರವಾರ, ಮೇ 7, 2021
19 °C

ಫುಟ್‌ಬಾಲ್: ಸೋಲಿನಿಂದ ಹೊರಬರದ ಎಚ್‌ಎಎಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರಣಿ ಸೋಲಿನ ಸಂಕಷ್ಟದಿಂದ ತಪ್ಪಿಸಿಕೊಂಡು ತವರು ನೆಲದಲ್ಲಿ ಒಂದಾದರೂ ಗೆಲುವು ಪಡೆಯಬೇಕು ಎನ್ನುವ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡದ ಆಸೆ ಈಡೇರಲಿಲ್ಲ. ಈ ಸೋಲಿನ ಸರಪಳಿಗೆ ಈಗ ಮತ್ತೊಂದು ಕೊಂಡಿ ಸೇರ್ಪಡೆಯಾಗಿದೆ ಅಷ್ಟೇ!ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಕ್ಲಬ್ 5-1ಗೋಲುಗಳಿಂದ ಆತಿಥೇಯ ಎಚ್‌ಎಎಲ್ ತಂಡವನ್ನು ಸೋಲಿಸಿತು. ನಾಲ್ಕು ಗೋಲುಗಳನ್ನು ಗಳಿಸಿದ ಮಿಡ್‌ಫೀಲ್ಡರ್ ಜಿಬೆನಿಮ್ ಫ್ರೈಡೆ ಅವರ ಚುರುಕಾದ ಆಟ ಇದಕ್ಕೆ ಕಾರಣವಾಯಿತು.ಮುಂಬೈನ ಫ್ರೈಡೆ 8ನೇ ನಿಮಿಷದಲ್ಲಿ ಗೋಲಿನ  ಖಾತೆ ತೆರೆದರು, ಇದಾದ 13 ನಿಮಿಷಗಳ ನಂತರ ಅಭಿಷೇಕ್ ಯಾದವ್ ಚೆಂಡನ್ನು ಗುರಿ ಸೇರಿಸಿದರು. ಕಳೆದ ಪಂದ್ಯದ `ಹೀರೋ~ ರೋಹಿತ್ ಚಾಂದ್ ನೀಡಿದ್ದ ಪಾಸ್ ಅನ್ನು ಅಜಿತ್ ಕುಮಾರ್ 24ನೇ ನಿಮಿಷದಲ್ಲಿ ಗೋಲಾಗಿ ಪರಿವರ್ತಿಸಿದರು. ವಿರಾಮದ ವೇಳೆಗೆ ಮುಂಬೈ 2-1ರಲ್ಲಿ ಮುನ್ನಡೆ ಗಳಿಸಿತ್ತು. ಪುಣೆ ಎದುರು ಮೂರು ಗೋಲು ಗಳಿಸಿದ್ದ ಮಿಡ್‌ಫೀಲ್ಡರ್ ರೋಹಿತ್ ಈ ಪಂದ್ಯದಲ್ಲಿ ಗೋಲು ಗಳಿಸಲಿಲ್ಲ.ರಕ್ಷಣಾ ವಿಭಾಗದ ಲೋಪ: ವಿರಾಮದ ನಂತರ ಪಿ. ಪ್ರಮೋದ್ ನೇತೃತ್ವದ ಎಚ್‌ಎಎಲ್ ತಂಡದ ರಕ್ಷಣಾ ವಿಭಾಗದ ದೌರ್ಬಲ್ಯ ಮತ್ತೊಮ್ಮೆ ಬಯಲಾಯಿತು. ನೈಜೇರಿಯಾದ ಆಟಗಾರ ಫ್ರೈಡೆ 49, 83 ಹಾಗೂ 87ನೇ ನಿಮಿಷದಲ್ಲಿ ಗೋಲು ಗಳಿಸಿದರು. ಈ ಮೂಲಕ  `ಹ್ಯಾಟ್ರಿಕ್~ ಗೌರವಕ್ಕೂ ಪಾತ್ರರಾದರು.ಇದಕ್ಕೆ ತಿರುಗೇಟು ನೀಡಲು ಎಚ್‌ಎಎಲ್ ಪದೇ ಪದೇ ಯತ್ನಿಸಿ ವಿಫಲವಾಯಿತು. ಆಟಗಾರರ ನಡುವಿನ ಹೊಂದಾಣಿಕೆಯ ಕೊರತೆ ಇದಕ್ಕೆ ಕಾರಣವಾಯಿತು. ಮುಂದೆಯೇ ಚೆಂಡಿದ್ದರೂ ಗುರಿ ಸೇರಿಸಲು ಪರದಾಡಿದ್ದೇ ಇದಕ್ಕೆ ಸಾಕ್ಷಿ. ಈ ಅವಕಾಶ ಮೂರು ಸಲ ಲಭಿಸಿತ್ತು, ಆದರೂ ಒಂದೂ ಗೋಲು ಗಳಿಸಲಾಗಲಿಲ್ಲ. ವಿರಾಮದ ನಂತರ ಪಂದ್ಯ ಆರಂಭವಾಗಿ 10 ನಿಮಿಷ ಕಳೆದಾಗ ಅಜಿತ್ ಕುಮಾರ್ ನೀಡಿದ್ದ ಪಾಸ್ ಅನ್ನು ಸುಲಭವಾಗಿ ಗುರಿ ಸೇರಿಸಬಹುದಿತ್ತು. ಆದರೆ ಈ ಅವಕಾಶವನ್ನು ಮಾಜಿ ನಾಯಕ ಆರ್.ಸಿ. ಪ್ರಕಾಶ್ ಹಾಳು ಮಾಡಿಕೊಂಡರು.ಎಚ್‌ಎಎಲ್ ಈ ಪಂದ್ಯದಲ್ಲಿ ಸೋಲು ಕಂಡರೂ, ಗೋಲ್ ಕೀಪರ್ ಪ್ರಮೋದ್ ಉತ್ತಮ ಪ್ರದರ್ಶನ ನೀಡಿದರು. ಮುಂಬೈ ತಂಡದ ಕ್ಯಾವಿನ್ ಲೊಬೊ ನೆಟ್‌ನ ಸನಿಹವಿದ್ದ ಚೆಂಡನ್ನು ಗುರಿ ಸೇರಿಸಲು ವೇಗವಾಗಿ ಒದ್ದರು. ಆಗ ಎತ್ತರದಲ್ಲಿದ್ದ ಚೆಂಡನ್ನು ತಡೆಯುವಲ್ಲಿ ಪ್ರಮೋದ್ ನಡೆಸಿದ ಯತ್ನ ಎಲ್ಲರ ಗಮನ ಸೆಳೆಯಿತು. ಜೊತೆಗೆ ಚಪ್ಪಾಳೆಯೂ ಲಭಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.