ಶನಿವಾರ, ಜೂಲೈ 11, 2020
28 °C

ಫೆಡರರ್‌ಗೆ ಪ್ರಯಾಸದ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಎಪಿ/ಪಿಟಿಐ): ಎರಡನೇ ಶ್ರೇಯಾಂಕದ ಆಟಗಾರ ಸ್ವಿಜ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಯಾಸಕರ ಗೆಲುವು ಪಡೆದು ಮೂರನೇ ಸುತ್ತಿಗೆ ಪ್ರವೇಶ ಪಡೆದರು.ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್ 6-2, 6-3, 4-6, 4-6, 6-3ರಲ್ಲಿ ಫ್ರಾನ್ಸ್‌ನ 34ನೇ ರ್ಯಾಂಕ್‌ನ ಆಟಗಾರ ಗೈಲ್ಸ್ ಸಿಮೊನ್ ಅವರನ್ನು ಮಣಿಸಿದರು.ಮೊದಲ ಎರಡು ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದ ಫೆಡರರ್ ಮೂರು ಹಾಗೂ ನಾಲ್ಕನೇ ಸೆಟ್‌ನಲ್ಲಿ ಸೋಲು ಅನುಭವಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡು ಮುಂದಿನ ಹಂತ ಪ್ರವೇಶಿಸಿದರು. ಈ ಪೈಪೋಟಿ ಮೂರು ಗಂಟೆ 13 ನಿಮಿಷಗಳ ಕಾಲ ನಡೆಯಿತು. ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ಆಯಂಡಿ ರಾಡಿಕ್ 7-6, 6-2, 6-3ರಲ್ಲಿ ರಷ್ಯಾದ ಇಗೋರ್ ಕುನಿಸ್ತಿನ್ ಮೇಲೂ, ಸರ್ಬಿಯಾದ ನೊವಾಕ್ ಜೊಕೋವಿಕ್ 7-5, 6-7, 6-0, 6-2ರಲ್ಲಿ ಕ್ರೊಯೇಷಿಯಾದ ಇವಾನ್ ದೊಡಿಕ್ ವಿರುದ್ಧವೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 4-6, 6-2, 6-3, 6-4 ರಲ್ಲಿ ಜರ್ಮನಿಯ ಪಿಲಿಪ್ ಕೊಲ್‌ಶ್ರೈಬರ್ ವಿರುದ್ಧವೂ, ಜಪಾನ್‌ನ ಕೀ ನಿಷಿಕೊರಿ 6-4, 6-3, 0-6, 6-3 ರಲ್ಲಿ ಜರ್ಮನಿಯ ಫ್ಲೋರಿಯನ್ ಮೇಯರ್ ಮೇಲೂ ಗೆಲುವು ಪಡೆದು ಮೂರನೇ ಸುತ್ತಿಗೆ ಪ್ರವೇಶಿಸಿದರು.ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯನ್ ಜೋಡಿ 6-3, 3-6, 6-4 ರಲ್ಲಿ ತಮ್ಮ ದೇಶದವರೇ ಆದ ಸ್ಕಾಟ್ ಲಿಪ್ಸಿಕಿ -ರಾಜೀವ್ ರಾಮ್ ಜೋಡಿಯನ್ನು ಮಣಿಸಿತು. ಎರಡನೇ ಶ್ರೇಯಾಂಕದ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ -ಕೆನಡಾದ ಡೇನಿಯಲ್ ನಿಸ್ಟೋರ್ ಜೋಡಿ 6-3, 6-3 ನೇರ ಸೆಟ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್ -ಬೆಂಜಮಿನ್ ಮಿಷೆಲ್ ಜೋಡಿಯನ್ನು ಪರಾಭವಗೊಳಿಸಿತು.ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಕ್ಯಾರೊಲಿನ್ ವೊಜ್‌ನಿಯಾಕಿ ಅವರು 6-1, 6-0ರಲ್ಲಿ ಅಮೆರಿಕಾದ ವಾನಿಯಾ ಕಿಂಗ್ ಅವರನ್ನು ಸುಲಭವಾಗಿ ಮಣಿಸಿದರು. 58 ನಿಮಿಷ ನಡೆದ ಈ ಹಣಾಹಣಿಯಲ್ಲಿ ವೊಜ್‌ನಿಯಾಕಿ ಅವರಿಗೆ ಯಾವುದೇ ಪ್ರಬಲ ಪೈಪೋಟಿ ಎದುರಾಗಲಿಲ್ಲ. ಏಳು ಸಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಬೆಲ್ಜಿಯಂನ ಜಸ್ಟಿನ್ ಹೆನಿನ್ ಅವರು 6-1, 6-3ರಲ್ಲಿ ಇಂಗ್ಲೆಂಡ್‌ನ ಇಲೆನಾ ಬಾಲ್ಟಚಾ ವಿರುದ್ಧ ಸುಲಭ ಗೆಲುವು ಪಡೆದರು.ಮಹಿಳೆಯರ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಅಮೆರಿಕದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ವೀನಸ್ ವಿಲಿಯಮ್ಸ್ 6-7, 6-0, 6-4ರಲ್ಲಿ ಜೆಕ್ ಗಣರಾಜ್ಯದ ಸಾಂಡ್ರಾ ಜಾವ್ಲಾವೋವಾ ಮೇಲೂ, ರಷ್ಯಾದ ಮರಿಯಾ ಶರ್ಪೋವಾ 7-6, 6-3ರಲ್ಲಿ ಫ್ರಾನ್ಸ್‌ನ ವರ್ಜೀನಿಯಾ ರಾಜೋನಾ ವಿರುದ್ಧವೂ, ಇಟಲಿಯ ಫ್ರಾನ್ಸಿಸ್ಕಾ ಶಿಯವೋನ್ 6-3, 5-7, 9-5ರಲ್ಲಿ ಕೆನಡಾದ ರೆಬೆಕಾ ಮಾರಿನೊ ಮೇಲೂ, ಚೀನಾದ ನಾ ಲೀ 6-3, 6-2ರಲ್ಲಿ ರಷ್ಯಾದ ಇವ್ಗೆನಿಯಾ ರಾಬಿನ್ ವಿರುದ್ಧವೂ ಗೆಲುವು ಸಾಧಿಸಿದರು.ರಷ್ಯಾದ ವೆನ್ಸಾ ಮೆನ್ಸೆವಿಯಾ ಅವರು 3-6, 6-3, 6-0 ರಲ್ಲಿ 15ನೇ ಶ್ರೇಯಾಂಕದ ಆಟಗಾರ್ತಿ ಫ್ರಾನ್ಸ್‌ನ ಮೇರಿಯನ್ ಬರ್ಟೊಲಿ ವಿರುದ್ಧ ಅಚ್ಚರಿಯ ಗೆಲುವು ಪಡೆದರು.ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೆಥನಿ ಮಟೆಕ್- ಮೇಘನ್ ಶಾಂಗ್ಸೆಸ್ಸಿ ಜೋಡಿ 6-1, 6-1ರಲ್ಲಿ ಬಲ್ಗೇರಿಯಾದ ಕ್ರಿಸ್ಟನ್ ಫ್ಲಿಪ್ಕ್‌ನೆಸ್-ಉಕ್ರೇನ್‌ನ ಮಾರಿಯಾ ಕೊರ್ತಸೇವಾ ವಿರುದ್ಧ ಜಯ ಪಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.