ಶುಕ್ರವಾರ, ಮೇ 20, 2022
26 °C

ಬಂಡೀಪುರ: ರಾತ್ರಿ ಸಂಚಾರ ನಿಷೇಧ ರದ್ದತಿಗೆ ಹುನ್ನಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಲಿ ಯೋಜನೆ ಜಾರಿಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು ಈಚೆಗಷ್ಟೇ ಕೇಂದ್ರ ಸರ್ಕಾರ ಸೂಕ್ಷ್ಮ ವಲಯ ಪಟ್ಟಿಗೆ ಸೇರಿಸಿದೆ. ಇದಕ್ಕೂ ಮುನ್ನ ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ ಕೋರ್ಟ್‌ನ ಈ ಕ್ರಮವನ್ನೇ ಪ್ರಶ್ನಿಸುವ ಧಾಟಿಯಲ್ಲಿ ಸಚಿವಾಲಯವು ಪತ್ರವೊಂದನ್ನು ರಾಜ್ಯ ಅರಣ್ಯ ಇಲಾಖೆಗೆ ರವಾನಿಸಿದೆ!ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದರೂ ಕೇರಳ ಸರ್ಕಾರವು, ಬಂಡೀಪುರ ಹುಲಿ ಯೋಜನೆ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿ  ಸಂಖ್ಯೆ 212ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆರವುಗೊಳಿಸಬೇಕೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಓಇಎಫ್) ಮತ್ತು ರಾಜ್ಯ ಅರಣ್ಯ ಇಲಾಖೆಯ ಮೇಲೆ ಒತ್ತಡ ತರುತ್ತಿದೆ. ಇತ್ತೀಚೆಗೆ ಸಚಿವಾಲಯವು ಒಂದು ಪತ್ರ (ನಂ.ಎಫ್.ಸಂಖ್ಯೆ.6-122/2011 ಡಬ್ಲ್ಯೂ ಎಲ್ 1, 26-09-2011) ಮತ್ತು ಈ ಕುರಿತಾಗಿ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚಿಸಲು ಬೇಕಾಗಿರುವ ಟಿಪ್ಪಣಿಯ ಪ್ರತಿಯನ್ನು ಅರಣ್ಯ ಇಲಾಖೆಗೆ ಕಳುಹಿಸಿದೆ.ಕರ್ನಾಟಕ ಹೈಕೋರ್ಟ್ ಸೂಚಿಸಿರುವ ಪರ್ಯಾಯ ರಸ್ತೆಯು ಅರಣ್ಯ ಪ್ರದೇಶ ಹಾಗೂ ಹುಲಿಯೋಜನಾ ಪ್ರದೇಶದೊಳಗೇ ಹೋಗುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ. ಆದರೆ ಸತ್ಯಾಂಶವೆಂದರೆ, ಸೂಚಿಸಲ್ಪಟ್ಟ ಪರ್ಯಾಯ ರಸ್ತೆಯು ನಾಗರಹೊಳೆ ಹುಲಿಯೋಜನಾ ಪ್ರದೇಶದ ಉತ್ತರ ಗಡಿಭಾಗದಲ್ಲಿದೆ ಮತ್ತು ಇದೀಗ ಕೇರಳಕ್ಕೆ ಸಂಪರ್ಕ ಕಲ್ಪಿಸುವ (ರಾ.ಹೆ-212) ಹೆದ್ದಾರಿಯು ಬಂಡೀಪುರ ಹುಲಿಯೋಜನೆ ಪ್ರದೇಶದ ಮಧ್ಯ ಭಾಗದಲ್ಲೇ ಇದೆ. ಈ ವಿಚಾರವು ತೀರ್ಪನ್ನು ನೀಡುವ ಮೊದಲೇ ಹೈಕೋರ್ಟ್ ಸಮಗ್ರ ಚಿಂತನೆ ಮಾಡಿತ್ತು.ಎರಡೂ ರಾಜ್ಯಗಳ ಸಂಪರ್ಕಕ್ಕೆಂದೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 24 ಬಸ್ಸುಗಳನ್ನು ರಾತ್ರಿ ಸಮಯದಲ್ಲಿ ಬಂಡೀಪುರದ ಮೂಲಕ ಬಿಡಲಾಗುತ್ತದೆ ಎನ್ನುವ ಸತ್ಯಾಂಶವನ್ನು ಸಚಿವಾಲಯವು ಮುಚ್ಚಿಟ್ಟಿದೆ. ಇದೇ ರೀತಿ, ಅಂಬುಲೆನ್ಸ್, ಅಗ್ನಿಶಾಮಕದಳ ಮುಂತಾದ ತುರ್ತು ಪರಿಸ್ಥಿತಿಯ ವಾಹನಗಳಿಗೆ ಈ ರಸ್ತೆಯಲ್ಲಿ ರಾತ್ರಿ ಸಂಚಾರ ಮುಕ್ತವಾಗಿದೆ. ರೋಗಿಗಳನ್ನು ಅಥವಾ ಪಾರ್ಥಿವ ಶರೀರಗಳನ್ನು ಸಾಗಿಸುವ ವಾಹನಗಳೊಂದಿಗೆ ಅವರ ಸಂಬಂಧಿಕರನ್ನೊಳಗೊಂಡ ವಾಹನಗಳನ್ನೂ ರಾತ್ರಿ ಸಮಯದಲ್ಲಿ ಹೋಗಲು ಬಿಟ್ಟಿರುವ ಹಲವು ಘಟನೆಗಳನ್ನೂ ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ ಎಂದು ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಆರೋಪಿಸಿವೆ.ರಾಜ್ಯ ಹೈಕೋರ್ಟ್ ಸೂಚಿಸಿರುವ ಪರ್ಯಾಯ ರಸ್ತೆ ಹದಗೆಟ್ಟಿದೆ ಮತ್ತು ಸುತ್ತು ಮಾರ್ಗವಾಗಿದೆ ಎಂದು ಸಚಿವಾಲಯದ ಪತ್ರ ಹೇಳುತ್ತದೆ. ವಾಸ್ತವವಾಗಿ ಪರ್ಯಾಯ ಮಾರ್ಗ 30 ಕಿ.ಮೀ. ಮಾತ್ರ ಹೆಚ್ಚಾಗಿದೆ. ಈ ರಸ್ತೆಯನ್ನು 6 ತಿಂಗಳೊಳಗೆ ಸರಿಪಡಿಸಬೇಕೆಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.ಈ ಕುರಿತು ಮಾತನಾಡಿದ ವೈಲ್ಡ್‌ಲೈಫ್ ಮ್ಯಾಟರ್ಸ್‌ನ ಸದಸ್ಯ ಹರಿ ಸೋಮಶೇಖರ್, `ಸಚಿವಾಲಯವು ತನ್ನ ಪತ್ರದಲ್ಲಿ, ಹೈಕೋರ್ಟ್ ಹೇರಲ್ಪಟ್ಟ ನಿಷೇಧವನ್ನು ತೆರವುಗೊಳಿಸುವುದಕ್ಕಾಗಿ ಪ್ರಕರಣವನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಬೇಕು ಎಂದಿದೆ. ಹುಲಿ ಯೋಜನಾ ಪ್ರದೇಶದೊಳಗಿನ ರಾತ್ರಿ ವಾಹನ ಸಂಚಾರ ನಿಷೇಧಿಸುವಲ್ಲಿ ಮುತುವರ್ಜಿ ವಹಿಸಬೇಕಿದ್ದ ಪರಿಸರ ಮತ್ತು ಅರಣ್ಯ ಸಚಿವಾಲಯವೇ ಈಗ ಹುಲಿಗಳೂ ಸೇರಿದಂತೆ ವನ್ಯಜೀವಿಗಳ ನೆಮ್ಮದಿಯನ್ನೇ ಅಲ್ಲೋಲ ಕಲ್ಲೋಲ ಮಾಡುವಂತಹ ರಾತ್ರಿ ವಾಹನ ಸಂಚಾರಕ್ಕೆ ಒತ್ತಾಸೆ ನೀಡುತ್ತಿರುವುದು ಅಚ್ಚರಿಯೆನಿಸುತ್ತಿದೆ~ ಎಂದರು.ಕರ್ನಾಟಕದ ಮುಖ್ಯಮಂತ್ರಿಗಳು, ಕೇರಳದ ಸಾರಿಗೆ ಸಚಿವರು, ಕೇರಳ ಮತ್ತು ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಹಾಗೂ ಸಾರಿಗೆ ಮತ್ತು ಅರಣ್ಯ ಇಲಾಖೆಗಳ ಮೇಲ್ವರ್ಗದ ಅಧಿಕಾರಿಗಳನ್ನು ಒಳಗೊಂಡು ಈ ಮೊದಲು ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಆದರೂ ರಾತ್ರಿ ಸಂಚಾರವನ್ನು ಮತ್ತೆ ಪ್ರಾರಂಭಿಸಲು ಉನ್ನತ ಹಂತದ ಸಭೆಗಳನ್ನು ನಡೆಸಬೇಕು ಎಂದು ಸಚಿವಾಲಯವೇ ಪತ್ರ ಬರೆದಿರುವುದು ವನ್ಯಜೀವಿ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.ಮೂಲೆಹೊಳೆ ವಲಯದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ 212ನಲ್ಲಿ ಒಂದು ಮರಿಯಾನೆ ಲಾರಿಯಡಿಗೆ ಸಿಕ್ಕಿ ಸಾವನ್ನಪ್ಪಿದೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು, ರಾತ್ರಿ ವಾಹನ ಸಂಚಾರದ ನಿಷೇಧವನ್ನು ಈಗಾಗಲೇ ಇರುವಂತೆ ರಾತ್ರಿ 9ರ ಬದಲು ಸಂಜೆ 6 ಗಂಟೆಯಿಂದಲೇ ಹೇರುವ ಯೋಚನೆ ಮಾಡಬೇಕು ಹರಿ ಸೋಮಶೇಖರ್ ನುಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.