ಗುರುವಾರ , ಮೇ 6, 2021
33 °C

ಬಂಡೀಪುರ ರಾಷ್ಟ್ರೀಯ ಉದ್ಯಾನವನ: ಪರಿಸರ ಸೂಕ್ಷ್ಮ ವಲಯ ಪಟ್ಟಿಗೆ

ಮನೋಜ್‌ಕುಮಾರ್ ಗುದ್ದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹುಲಿ ಯೋಜನೆ ಜಾರಿಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು `ಪರಿಸರ ಸೂಕ್ಷ್ಮ ವಲಯ~ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿ ಆದೇಶ ಹೊರಡಿಸಿದೆ.ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, `ಹುಲಿ ಯೋಜನೆ~ಯ ನಿರ್ದೇಶಕರೂ ಆಗಿರುವ ಬಿ.ಜೆ.ಹೊಸಮಠ ಅವರು ಕಳೆದ ಜೂನ್ 30ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ವನ್ಯಜೀವಿ ವಿಭಾಗದ ಉಪ ಮಹಾನಿರೀಕ್ಷಕರಾದ ಪ್ರಕೃತಿ ಶ್ರೀವಾಸ್ತವ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.ಪ್ರಸ್ತಾವನೆ ಅಂಗೀಕರಿಸಿರುವ ಸಚಿವಾಲಯ ಇತ್ತೀಚೆಗಷ್ಟೇ ಈ ಘೋಷಣೆ ಮಾಡಿದ್ದು, ಕೇಂದ್ರದ ಗೆಜೆಟ್‌ನಲ್ಲಿ ಪ್ರಕಟಿಸುವುದಷ್ಟೇ ಬಾಕಿ ಉಳಿದಿದೆ. ಈ ಕುರಿತ ಪತ್ರವನ್ನು ಸಚಿವಾಲಯವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ವಾರದ ಹಿಂದೆಯೇ ರವಾನಿಸಿದೆ ಎಂದು ಅರಣ್ಯ ಭವನದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತದಾದ್ಯಂತ ಇರುವ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಸೂಕ್ಷ್ಮವಲಯಗಳನ್ನಾಗಿ ಮಾಡಬೇಕಿದೆ. ಆದರೆ ತಿಳಿವಳಿಕೆ ಕೊರತೆ ಇರುವ ಈ ಉದ್ಯಾನವನಗಳ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದಾಗಿ ಈ ಪ್ರಕ್ರಿಯೆ ರಾಜ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ `ಗೋವಾ ಪ್ರತಿಷ್ಠಾನ~ ಸಂಸ್ಥೆಯು ದೇಶದ ಅಭಯಾರಣ್ಯಗಳನ್ನು ಸೂಕ್ಷ್ಮ ವಲಯಗಳನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ 2004ರಲ್ಲಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾಡುಗಳು ಮತ್ತು ವನ್ಯಜೀವಿಗಳ ರಕ್ಷಣೆಯ ಉದ್ದೇಶದಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯ ಅರಣ್ಯಗಳನ್ನು `ಪರಿಸರ ಸೂಕ್ಷ್ಮ ವಲಯ~ಗಳನ್ನಾಗಿ ಘೊಷಣೆ ಮಾಡಬೇಕು ಎಂದು 4 ಡಿಸೆಂಬರ್, 2006ರಲ್ಲಿ ನೀಡಿದ ತೀರ್ಪು ನೀಡಿತ್ತು.ರಾಜ್ಯದ್ದೇ ವಿಳಂಬ: ಈ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಕೇಂದ್ರ ಪರಿಸರ ಸಚಿವಾಲಯವು `ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು, ಘೋಷಣೆಗೆ ಪೂರಕವಾಗಿ ಪ್ರಸ್ತಾವನೆ ಸಲ್ಲಿಸಬೇಕು~ ಎಂದು ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಹರಿಯಾಣ, ಗುಜರಾತ್, ಮಿಜೋರಾಂ, ಮೇಘಾಲಯ, ಅಸ್ಸಾಂ, ಗೋವಾ ರಾಜ್ಯಗಳು ಇದಕ್ಕೆ ಸ್ಪಂದಿಸಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಆದರೆ ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳು ತಕ್ಷಣಕ್ಕೆ ಸ್ಪಂದಿಸಿರಲಿಲ್ಲ.ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಮತ್ತೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ ಸಚಿವಾಲಯದ ಮೂಲಕ ಉಳಿದ ರಾಜ್ಯಗಳಿಗೆ ಕಳುಹಿಸಿತು. ಆ ನಂತರವಷ್ಟೇ ಕರ್ನಾಟಕ ಸರ್ಕಾರ ಮೊದಲ ಪ್ರಯತ್ನವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೂ ಈ ಮಾನ್ಯತೆ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು.ಏನು ಉಪಯೋಗ?: ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ನಿರ್ವಹಣಾ ಸಮಿತಿ ಸದಸ್ಯ ಸಂಜಯ್ ಗುಬ್ಬಿ, `ಈಗಾಗಲೇ ಇರುವ ರೆಸಾರ್ಟ್‌ಗಳು ಹಾಗೆಯೇ ಮುಂದುವರೆಯಲಿದೆ. ಆದರೆ ಇನ್ನು ಮುಂದೆ ರೆಸಾರ್ಟ್‌ಗಳ ಸ್ಥಾಪನೆ ಅಥವಾ ಕಾರ್ಖಾನೆಗಳ ಸ್ಥಾಪನೆ, ಗ್ರಾನೈಟ್ ಗಣಿಗಾರಿಕೆಗಳನ್ನು ನಿಯಂತ್ರಿಸಲಾಗುತ್ತದೆ~ ಎಂದರು.ಮೊದಲಿನ ಮಾರ್ಗದರ್ಶಿ ಸೂತ್ರದ ಪ್ರಕಾರ, ಈ ಸೂಕ್ಷ್ಮ ವಲಯ ಘೊಷಣೆ ಮಾಡಿದ ವ್ಯಾಪ್ತಿಯಿಂದ 10 ಕಿ.ಮೀ.ಗಳವರೆಗೆ ಯಾವುದೇ ಮಾನವ ಚಟುವಟಿಕೆಗಳನ್ನು ನಡೆಸಬಾರದು ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತಗೊಂಡ ಮಾರ್ಗದರ್ಶಿಗಳನ್ವಯ ಪ್ರದೇಶದಿಂದ ಪ್ರದೇಶಕ್ಕೆ ಮಾನವ ಚಟುವಟಿಕೆಗಳ ವ್ಯತ್ಯಾಸವನ್ನು ಗುರುತಿಸಿ 2, 4 ಕಿ.ಮೀ.ವರೆಗೆ ಸಡಿಲಿಕೆ  ನೀಡಲಾಗಿದೆ.

 

ಎಲ್ಲ ಅಭಯಾರಣ್ಯಗಳು ಈ ಪಟ್ಟಿಗೆ
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮಾದರಿಯಲ್ಲೇ ಇತರ ಅಭಯಾರಣ್ಯಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಸೇರಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶೀಘ್ರದಲ್ಲಿಯೇ ನಾಗರಹೊಳೆ ಅಭಯಾರಣ್ಯವನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲು ಮನವಿ ಸಲ್ಲಿಸಲಿದ್ದೇವೆ. ಈ ಮಾನ್ಯತೆಯಿಂದ ತಮ್ಮ ಜೀವನಕ್ಕೆ ಧಕ್ಕೆಯಾಗುತ್ತದೆ ಎಂದು ಗ್ರಾಮಸ್ಥರು ಭಯ ಪಡಬೇಕಿಲ್ಲ. ಈ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಲಿದೆ. ಜನರ ಸುರಕ್ಷೆಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿಗಳನ್ನು, ಅದರಲ್ಲೂ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

-ಬಿ.ಕೆ.ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.