ಸೋಮವಾರ, ಮೇ 25, 2020
27 °C

ಬಂದ್ ವಿರೋಧಿಸಿ ಪಿವಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ರಾಜ್ಯ ಬಿಜೆಪಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವುದನ್ನು ಖಂಡಿಸಿ ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಪಟಾಪಟ್ ನಾಗರಾಜ್, ಬಿಜೆಪಿ ಜನಹಿತಕ್ಕಾಗಿ ಬಂದ್ ನಡೆಸಿಲ್ಲ. ಸರ್ಕಾರದ ರಕ್ಷಣೆಗಾಗಿ ಬಂದ್ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಸಂಘಟನೆ ವಿಭಾಗೀಯ ಅಧ್ಯಕ್ಷ ಜೈಭೀಮ್ ವೆಂಕಟೇಶ್, ಜಿಲ್ಲಾ ಅಧ್ಯಕ್ಷ ತಿಮ್ಮರಾಜು, ನಗರ ಘಟಕದ ಅಧ್ಯಕ್ಷ ಲೋಕೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ರಘು, ಶೆಟ್ಟಿಹಳ್ಳಿ ನಾಗರಾಜು, ರಾಜಪ್ಪ, ಅಜಿತ್, ಸುಬ್ರಹ್ಮಣಿ, ಪರಮೇಶ್ ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ರಾಜ್ಯಪಾಲರ ಕ್ರಮ ಸರಿ: ಜಸ್ಟೀಸ್ ಫೋರಂನ ವಕೀಲರಿಗೆ ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಸಂವಿಧಾನದತ್ತವಾದ ಅಧಿಕಾರವಾಗಿದೆ ಎಂದು ಪ್ರಜಾವಿಮೋಚನಾ ಚಳವಳಿ (ಸಮತಾವಾದ) ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನೇಕಲ್ ಕೃಷ್ಣಪ್ಪ ಹಾಗೂ ನಗರ ಘಟಕದ ಅಧ್ಯಕ್ಷ ಆರ್.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಬಿಜೆಪಿ ಕರ್ನಾಟಕ ಬಂದ್‌ಗೆ ಕರೆ ನೀಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿರುವುದು ಖಂಡನೀಯ. ಮುಖ್ಯಮಂತ್ರಿಗಳು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಪ್ರತಿಭಟನೆಗೊಂದು ಪ್ರತಿಭಟನೆ: ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪಿ.ವಿ.ಸಿ ಸಂಘಟನೆ ಕಾರ್ಯಕರ್ತರು ವೃತ್ತದ ಮತ್ತೊಂದು ಭಾಗದಲ್ಲಿ ರಾಜ್ಯ ಸರ್ಕಾರ ಬಂದ್ ಕರೆ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.  ಪ್ರತಿಭಟನೆಯ ಜಗಲ್‌ಬಂಧಿಯಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತು ತಹಶೀಲ್ದಾರ್ ಹಾಗೂ ಪೊಲೀಸರು ಪಿ.ವಿ.ಸಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆಯನ್ನು ಅಲ್ಲಿಂದ ತೆರಳಲು ಮನವೊಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.