ಭಾನುವಾರ, ಮೇ 16, 2021
22 °C

ಬಂಧುಗಳ ಕಣ್ಣೀರ ಕೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಹೈಕೋರ್ಟ್ ಬಳಿ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಬಂಧುಗಳ ಕಣ್ಣೀರು ಕೋಡಿಯಾಯಿತು. ಬರಸಿಡಿಲಿನಂತೆ ಬಂದೆರಗಿದ ಸ್ಫೋಟದ ಸುದ್ದಿಯಿಂದ ದುಃಖ ಹೆಪ್ಪುಗಟ್ಟಿತ್ತು. ಮಾತುಗಳು ಹೊರಡದೆ ಮೌನ ಆವರಿಸಿತ್ತು. ದುರಂತಕ್ಕೆ ತಮ್ಮ ಬಂಧುಗಳು  ಬಲಿಯಾದರೆ ಎಂದು ಖಚಿತಪಡಿಸಿಕೊಳ್ಳಲು ಕೆಲವರು ಪರದಾಡಿದರು.ಕೋರ್ಟ್‌ಗೆ ಹೋಗಿ ಬರುವುದಾಗಿ ಹೇಳಿ ಮನೆ ಬಿಟ್ಟ ಕೆಲವರು ಹಿಂತಿರುಗಲಿಲ್ಲ. ಬದಲಿಗೆ ಸಾವಿನ ಸುದ್ದಿ ಎರಗಿ ಬಂದಿತ್ತು. ತಡ ಮಾಡದೆ ಕುಟುಂಬದ ಸದಸ್ಯರು, ಬಂಧುಬಳಗ ನ್ಯಾಯಾಲಯ, ಆಸ್ಪತ್ರೆಗೆ ದೌಡಾಯಿಸಿದರು. ಎಲ್ಲರ ಕಣ್ಣಿಗೆ ಕತ್ತಲು ಆವರಿಸಿತ್ತು. ಮುಂದೇನು  ಎಂದು ತೋಚದೆ ರೋದಿಸುತ್ತಿದ್ದರು. ತಡೆದಷ್ಟೂ ಕಣ್ಣೀರು... ಇನ್ನು ಹಲವರು `ಕೋರ್ಟ್‌ಗೆ ಹೋದ ನಮ್ಮವರು ಎಲ್ಲಿ?~ ಎಂದು ಪರದಾಡಿದರು. ಸಿಕ್ಕಸಿಕ್ಕ ಕಡೆ ಹುಡುಕಾಡಿದರು. ಎದುರಿಗೆ ಬಂದವರನ್ನು ವಿಚಾರಿಸಿದರು.10.15ರ ಸಮಯ. ನ್ಯಾಯಾಲಯದ ವಾಹನ ನಿಲುಗಡೆ ಪ್ರದೇಶದಲ್ಲಿ ನಿಂತಿದ್ದೆ. ಭಾರಿ ಸದ್ದು ಕೇಳುತ್ತಿದ್ದಂತೆ ಬಾಂಬ್ ಎಂದು ಮನವರಿಕೆಯಾಯಿತು. 10 ಮೀಟರ್ ದೂರವಿದ್ದ ಗೇಟ್‌ಗೆ ಓಡಿಬಂದೆ. ಸುಮಾರು 25- 30 ಜನ ರಕ್ತದ ಮಡುವಿನಲ್ಲಿ ಬಿದ್ದಿದ್ದರು.  ಕೈ ಕಾಲುಗಳು ಮುರಿದಿದ್ದವು. ಕೆಲವರು ಒದ್ದಾಡುತ್ತಿದ್ದರು.ವ್ಯಕ್ತಿಯೊಬ್ಬನ ಭುಜವೇ ಕಾಣುತ್ತಿರಲಿಲ್ಲ. ನನ್ನಂತೆ ಧಾವಿಸಿ ಬಂದ ಹಲವರ ಜತೆಗೂಡಿ ಸಿಕ್ಕಸಿಕ್ಕ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದೆ. 15- 20 ನಿಮಿಷಗಳಲ್ಲಿ ಪೊಲೀಸ್ ವಾಹನಗಳು ಬಂದವು~ ಎಂದು ವಕೀಲ ಆರ್.ಪಿ. ಲೂತ್ರ `ಪ್ರಜಾವಾಣಿ~ ಗೆ ತಿಳಿಸಿದರು.`ಗಾಯಾಳುಗಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಘಟನೆ ನಡೆದಿದ್ದು ಜನರಿಗೆ ಪಾಸುಗಳನ್ನು ವಿತರಿಸುವ ಕೌಂಟರ್ ಬಳಿ. ಈ ಗೇಟ್ ಬಳಿ ಸಿಸಿಟಿವಿ ಇಲ್ಲ. ಲೋಹ ಶೋಧಕವೂ ಇಲ್ಲ. ಸೂಕ್ತ ಭದ್ರತಾ ವ್ಯವಸ್ಥೆ ಇದ್ದರೆ ಈ ದುರ್ಘಟನೆ ನಡೆಯುತ್ತಿರಲ್ಲಿಲ್ಲವೇನೋ?~ ಎಂದು ಅವರು ಅಭಿಪ್ರಾಯ ವ್ಯಕಪಡಿಸಿದರು.~ನಾನೆಂದು ಜೀವನದಲ್ಲಿ ಇಂಥ ಘಟನೆ ನೋಡಿರಲಿಲ್ಲ. ಇದು ಮೊದಲ ಸಲದ ಅನುಭವ. ಕೆಲವೇ ಮೀಟರ್ ದೂರದಲ್ಲಿ ನಿಂತಿದ್ದ ನಾನು ಪಾಣಾಪಾಯದಿಂದ ಪಾರಾದ ಅದೃಷ್ಟವಂತ. ಘಟನೆಗೆ ಬರೀ ಹತ್ತು ನಿಮಿಷಗಳ ಮೊದಲು ಮೂವರು ಕಕ್ಷಿಗಾರರಿಗೆ ಪಾಸ್ ಕೊಡಿಸಲು ಕೌಂಟರ್‌ಗೆ ಹೋಗಿದ್ದೆ~ ಎಂದು ವಿವರಿಸಿದರು.

ಎರಡು ದಶಕಗಳಿಂದ ವಕೀಲರಾಗಿ ಕೆಲಸ ಮಾಡುತ್ತಿರುವ ಲೂತ್ರ ಅವರ ಬಿಳಿ ಪ್ಯಾಂಟಿಗೂ ರಕ್ತ ಮೆತ್ತಿಕೊಂಡು ದುರಂತವನ್ನು ಸಾರಿ ಹೇಳುವಂತಿತ್ತು.64 ವರ್ಷದ ಎ.ಎಲ್. ಅಗ್ನಿಹೋತ್ರಿ ಸ್ಫೋಟದಿಂದ ಪಾರಾದ ಮತ್ತೊಬ್ಬ ಅದೃಷ್ಟವಂತ ವಕೀಲ. ~ನನ್ನ ಕಕ್ಷಿಗಾರರಿಗೆ ಪಾಸ್ ಕೊಡಿಸಿ ಒಳ ಪ್ರವೇಶಿಸುತ್ತಿದ್ದಂತೆ ಸ್ಫೋಟ ಸಂಭವಿಸಿತು. ಕೆಲವು ಸೆಕೆಂಡ್ ತಡವಾಗಿದ್ದರೂ ಹೆಣವಾಗಿರುತ್ತಿದ್ದೆ. ನಾನು ನೋಡಿದ ಕೆಲವರು ಕ್ಷಣಾರ್ಧದಲ್ಲಿ ಸ್ಫೋಟಕ್ಕೆ ಬಲಿಯಾದರು~ ಎಂದು ದುಃಖಿಸಿದರು.`ಸ್ಫೋಟದ ವೇಳೆ ಪಾಸು ಪಡೆಯಲು ಸುಮಾರು 200 ಜನ ಸರದಿಯಲ್ಲಿ ನಿಂತಿದ್ದರು. ನಿಜಕ್ಕೂ ಇದೊಂದು ಕರಾಳ ದಿನ~ ಎಂದು ಅಗ್ನಿಹೋತ್ರಿ ವಿಷಾದಿಸಿದರು. ಸ್ಫೋಟದಲ್ಲಿ ಗಾಯಗೊಂಡಿರುವ ~ಪಿಐಎಲ್~ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಕಾರ್ಯಕರ್ತ ರಾಹುಲ್ ಗುಪ್ತಾ ಬಳಿಯೇ ಸ್ಫೋಟ ಸಂಭವಿಸಿದೆ. ಅವರ ಕೈಗೂ ಗಾಯಗಳಾಗಿದ್ದು ಅವರಿಗೆ ಸ್ವಲ್ಪವೇ ದೂರದ್ಲ್ಲಲ್ಲಿ ಬಹಳಷ್ಟು ಜನ ಬಿದ್ದು ಭೀಕರ ಸ್ಥಿತಿಯಲ್ಲಿ ಒದ್ದಾಡುತ್ತಿದ್ದರು. ಕನಿಷ್ಠ 20 ಜನರಾದರೂ ಸತ್ತಿರಬಹುದು~ ಎಂಬ ಶಂಕೆ ಇವರಿಗೆ.ಹೇಡಿಗಳ ಕೃತ್ಯ: ಪ್ರಧಾನಿ ಸಿಂಗ್ಢಾಕಾ (ಪಿಟಿಐ):
ದೆಹಲಿ ಹೈಕೋರ್ಟ್ ಆವರಣದಲ್ಲಿ ಬುಧವಾರ ಬೆಳಿಗ್ಗೆ ಉಗ್ರರು ನಡೆಸಿರುವ ಬಾಂಬ್ ದಾಳಿಯನ್ನು `ಹೇಡಿಗಳ ಕೃತ್ಯ~ ಎಂದು ಬಣ್ಣಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಉಗ್ರರನ್ನು ದಮನ ಮಾಡುವ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಮನವಿ ಮಾಡಿದ್ದಾರೆ.ಉಗ್ರರ ಹೀನ ಕೃತ್ಯ ಇದಾಗಿದ್ದು, ಭಯೋತ್ಪಾದಕರಿಗೆ ಭಾರತ ತಲೆಬಾಗುವುದಿಲ್ಲ. ಬದಲಾಗಿ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲಾಗುವುದು ಎಂದರು. ಭಯೋತ್ಪಾದನೆ ನಿಗ್ರಹದ ಹಾದಿ ಸುದೀರ್ಘವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಜನರ ಸಹಕಾರ ಅತ್ಯಗತ್ಯ ಎಂದರು. ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬ ಹಾಗೂ ಗಾಯಾಳುಗಳಿಗೆ ಸಾಂತ್ವನ ಹೇಳಿದ ಅವರು, ಘಟನೆ ಕುರಿತಂತೆ ಗೃಹ ಸಚಿವ ಪಿ.ಚಿದಂಬರಂ ಅವರೊಂದಿಗೆ ಮಾತನಾಡಿರುವುದಾಗಿಯೂ ತಿಳಿಸಿದರು.ದೆಹಲಿ ಬಾಂಬ್‌ಸ್ಫೋಟದ ಹಿನ್ನೋಟ14ವರ್ಷಗಳಲ್ಲಿ 15 ಸ್ಫೋಟಸೆಪ್ಟೆಂಬರ್ 06, 2011: ದೆಹಲಿ ಹೈಕೋರ್ಟ್ ಅವರಣದಲ್ಲಿ ಬೆಳಿಗ್ಗೆ ಶಕ್ತಿಶಾಲಿ ಬಾಂಬ್‌ಸ್ಫೋಟ ಸಂಭವಿಸಿ 11ಜನರ ಭೀಕರ ಸಾವು.ಮೇ 25, 2011: ದೆಹಲಿ ಹೈಕೋರ್ಟ್ ಹೊರ ಭಾಗದ ಕಾರು ನಿಲುಗಡೆ ಪ್ರದೇಶದಲ್ಲಿ ಸಣ್ಣ ಸ್ಫೋಟ ಸಂಭವಿಸಿತು. ಯಾವುದೇ ಗಾಯಗಳಾಗಲಿಲ್ಲ.ಸೆಪ್ಟೆಂಬರ್ 27, 2008: ಕುತುಬ್ ಮಿನಾರ್ ಬಳಿಯ ಮೆಹರೂಲಿ ಹೂ ಮಾರುಕಟ್ಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮೃತಪಟ್ಟು 21 ಜನ ಗಾಯಗೊಂಡಿದ್ದರು.ಸೆಪ್ಟೆಂಬರ್ 13, 2008: ದಕ್ಷಿಣ ದೆಹಲಿಯ `ಗ್ರೇಟರ್ ಕೈಲಾಶ್-ಐ~ ಮಾರುಕಟ್ಟೆಯ ಕರೊಲ್ ಬಾಗ್, ಎಂ- ಬಡಾವಣೆಯಲ್ಲಿ 45 ನಿಮಿಷಗಳಲ್ಲಿ ಸಂಭವಿಸಿದ 5 ಸರಣಿ ಸ್ಫೋಟಗಳಲ್ಲಿ 25 ಜನರು ಮೃತಪಟ್ಟು ನೂರಕ್ಕೂ ಹೆಚ್ಚು ಜನರು ಗಾಯಗೊಂಡರು.ಏಪ್ರಿಲ್ 14, 2006:
ಹಳೆಯ ದೆಹಲಿ ಜುಮ್ಮಾ ಮಸೀದಿಯ ಆವರಣದಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ 14 ಜನರು ಗಾಯಗೊಂಡಿದ್ದರು.ಅಕ್ಟೋಬರ್ 29, 2005: ಸರೋಜಿನಿ ನಗರ, ಪಹರಗಂಜ್ ಮಾರುಕಟ್ಟೆ ಮತ್ತು ಗೋವಿಂದಪುರಿ ಪ್ರದೇಶದಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ 59 ಜನರು ಮೃತಪಟ್ಟರು. ಕೆಲವು ವಿದೇಶಿಯರು ಸೇರಿ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಮೇ 22, 2005: ದೆಹಲಿಯ ಎರಡು ಸಿನಿಮಾ ಮಂದಿರಗಳಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಒಬ್ಬ ಮೃತಪಟ್ಟು 60 ಜನರು ಗಾಯಗೊಂಡಿದ್ದರು.ಜೂನ್ 18, 2000: ಕೆಂಪು ಕೋಟೆ ಬಳಿ ಎರಡು ಶಕ್ತಿಶಾಲಿ ಸ್ಫೋಟಗಳಲ್ಲಿ 8 ವರ್ಷದ ಬಾಲಕಿ ಸೇರಿ ಇಬ್ಬರು ಮೃತಪಟ್ಟರು. 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಜುಲೈ 26, 1998: ಅಂತರ ರಾಜ್ಯ ಬಸ್ ನಿಲ್ದಾಣದ ಬಳಿಯ ಕಾಶ್ಮೀರ್ ದ್ವಾರದ ಬಳಿ ಸಂಭವಿಸಿದ ಭಾರಿ ಬಾಂಬ್ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದರು.ಡಿಸೆಂಬರ್ 30, 1997: ಪಂಜಾಬಿ ಬಾಗ್ ಬಳಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಪ್ರಯಾಣಿಕರು ಮೃತಪಟ್ಟು 30 ಜನ ಗಾಯಗೊಂಡಿದ್ದರು.ನವೆಂಬರ್ 30, 1997: ಕೆಂಪುಕೋಟೆ ಪ್ರದೇಶದಲ್ಲಿ ಸಂಭವಿಸಿದ ಅವಳಿ ಸ್ಫೋಟದಲ್ಲಿ ಮೂವರು ಮೃತಪಟ್ಟು 70 ಜನ ಗಾಯಗೊಂಡಿದ್ದರು.ಅಕ್ಟೋಬರ್ 18, 1997: ರಾಣಿಬಾಗ್ ಮಾರುಕಟ್ಟೆಯ ಅವಳಿ ಸ್ಫೋಟದಲ್ಲಿ ಒಬ್ಬ ಮೃತಪಟ್ಟು 23 ಜನರು ಗಾಯಗೊಂಡಿದ್ದರು.ಅಕ್ಟೋಬರ್ 10, 1997: ಶಾಂತಿವನ, ಕೌರಿಯಾಪುಲ ಮತ್ತು ಕಿಂಗ್ಸ್‌ವೇ ಕ್ಯಾಂಪ್ ಪ್ರದೇಶದಲ್ಲಿ ಸಂಭವಿಸಿದ ಮೂರು ಬಾಂಬ್ ಸ್ಫೋಟಗಳಲ್ಲಿ ಒಬ್ಬ ಮೃತಪಟ್ಟು 16 ಜನ ಗಾಯಗೊಂಡಿದ್ದರು.

ಅಕ್ಟೋಬರ್1, 1997: ಸದರ್ ಬಜಾರ್ ಪ್ರದೇಶದಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಮೂವರು  ಗಾಯಗೊಂಡಿದ್ದರು.ಜನವರಿ 9, 1997: ದೆಹಲಿ ಪೊಲೀಸ್ ಕೇಂದ್ರ ಸ್ಥಾನದ ಎದುರು ಸಂಭವಿಸಿದ ಸ್ಫೋಟದಲ್ಲಿ 50 ಜನ ಗಾಯಗೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.