ಭಾನುವಾರ, ಜನವರಿ 19, 2020
29 °C

ಬಟ್ಟೆ ಬದಲಿಸಿ ಅವಕಾಶದ ಕದದತ್ತ...

ಡಿ.ಗರುಡ Updated:

ಅಕ್ಷರ ಗಾತ್ರ : | |

ಮೂರು ರ್ಷಗಳ ಹಿಂದಷ್ಟೇ ತೆಳ್ಳಗೆ ಬಳಕುವ ಬಳ್ಳಿಯಂತೆ ಇದ್ದವಳು ಇವಳು. ಆದರೆ ಈಗ ಹಾಗಿಲ್ಲ. ಅಂದು ಸ್ಕರ್ಟ್ ತೊಟ್ಟು ಪುಟ್ಟ ಬಾಲಕಿಯಂತೆ ಮುಗ್ಧತೆಯಿಂದ ನಕ್ಕಿದ್ದಳು. ಕ್ಯಾಮೆರಾದಲ್ಲಿ ಸೆರೆಯಾದ ಅಂದಿನ ಚಿತ್ರ ಇಂದಿಗೂ ಸ್ಮರಣೀಯ. ಅದನ್ನು ತೋರಿಸುತ್ತಾ `ಹೀಗಿದ್ದೆ~ ಎಂದು ಹೇಳುತ್ತಲೇ ತಾನೀಗ ಸಾಕಷ್ಟು ಬದಲಾಗಿದ್ದೇನೆ ಎಂದು ವಿವರಿಸುವ ಪ್ರಯತ್ನ ಮಾಡುವ ಈಕೆಯ ದೇಹ ತೂಕ ಹೆಚ್ಚಿದೆ. ಆದ್ದರಿಂದ ಗ್ಲಾಮರ್ ರೂಪದರ್ಶಿ ಆಗಿಯೇ ಉಳಿಯುವುದು ಕಷ್ಟ ಎನ್ನುವುದನ್ನು ಸ್ಪಷ್ಟವಾಗಿ ಗೊತ್ತಾಗಿದೆ. ಹಾಗಿದ್ದೂ ಧೈರ್ಯದಿಂದ ಮುನ್ನುಗ್ಗುವ ಛಲ ಮನದೊಳಗೆ ಬೆಳೆದು ಹೆಮ್ಮರವಾಗಿದೆ.

ಬಾಲಕಿಯಲ್ಲ ತಾನೀಗ ಎಂದು ನಿರ್ಧರಿಸಿದ ದಿನದಿಂದಲೇ ಪ್ರೌಢತೆಗೆ ಒಗ್ಗಿಕೊಂಡಿದ್ದಾಳೆ. ಬದಲಾದ ತನ್ನ ಪಾತ್ರಕ್ಕೆ ಹೊಂದಿಕೊಳ್ಳುವ ಸೂತ್ರ ಕಂಡುಕೊಂಡಿರುವ ಅಂಜಲಿ ಶರ್ಮಗೆ ಅವಕಾಶಗಳ ಹೊಸ ಬಾಗಿಲು ಕೂಡ ತೆರೆದುಕೊಂಡಿದೆ. ಉದ್ಯಾನನಗರಿಯಲ್ಲಿ ಅವಕಾಶಗಳು ಸೀಮಿತ ಎನ್ನುವುದನ್ನೂ ಅರ್ಥಮಾಡಿಕೊಂಡು ಸೀಮೋಲ್ಲಂಘನ ಕೂಡ ಮಾಡಿದ್ದಾಗಿದೆ.

ಮುಂಬೈನಲ್ಲೊಂದು ಕಾಲು-ಚೆನ್ನೈನಲ್ಲೊಂದು ಕಾಲು ಇಟ್ಟುಕೊಂಡು ಯಾವುದಾದರೊಂದು ಕಡೆ ಗಟ್ಟಿ ನೆಲೆ ನಿಲ್ಲುವ ಕನಸು ಕಟ್ಟಿಕೊಂಡಿದ್ದಾಳೆ. ಮೊದಲ ಹೆಜ್ಜೆಯನ್ನಂತೂ ಇಟ್ಟಾಗಿದೆ. ಪ್ರಿತ್ಯೂಷ್ ಅಗರ್‌ವಾಲ್ ಸಿನಿಮಾದಲ್ಲೊಂದು ಐಟಂ ಡಾನ್ಸ್ ಮಾಡಿ ಮುಗಿಸಿದ್ದಾಳೆ. ಈಗ ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿಯೂ ಅಂಥ ಅವಕಾಶಗಳ ನಿರೀಕ್ಷೆ.

ಉದ್ಯಾನನಗರಿಯಲ್ಲಿ ಜಾಹೀರಾತು ರೂಪದರ್ಶಿಯಾಗಿ ಒಂದಿಷ್ಟು ಅವಕಾಶ ಗಿಟ್ಟಿಸಬಹುದು. ಆದರೆ ಅದೇ ಜೀವನಾಧಾರ ಎಂದು ನಂಬಿಕೊಳ್ಳುವುದು ಕಷ್ಟವೆಂದು ಸ್ಪಷ್ಟವಾಗಿ ನುಡಿಯುವ ಅಂಜಲಿ ಈಗ ತನ್ನ ಮೈಮಾಟ ತೋರಿಸಲು `ಯಾಕೆ ಅಂಜಲಿ?~ ಎನ್ನುವಷ್ಟು ಧೈರ್ಯ ಬೆಳೆಸಿಕೊಂಡಿದ್ದಾಳೆ. ಮೊದಮೊದಲು ಸೀರೆ ಬಿಟ್ಟರೆ ಬೇರೆ ಡ್ರೆಸ್ ತೊಟ್ಟುಕೊಳ್ಳುವುದಿಲ್ಲ ಎನ್ನುವಂಥ ಮಡಿವಂತಿಕೆಯಿಂದ ಕೇವಲ ಒಂದೆರಡು ಮುದ್ರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು. `ಸ್ವಲ್ಪ ದಪ್ಪ~ ಎನ್ನುವ ಮಾತುಗಳನ್ನು ಗ್ಲಾಮರ್ ಕ್ಷೇತ್ರದಲ್ಲಿ ಕೇಳಿ ಸುಸ್ತಾದ ನಂತರ ಬದಲಾಯಿತು ಅಂಜಲಿ ಮನಸ್ಸು. ತಾನು ಹೇಗಿದ್ದಾಳೋ ಹಾಗೆ ಒಪ್ಪಿಕೊಳ್ಳುವಂಥ ಪಾತ್ರದ ಸೂತ್ರ ಹಿಡಿದು ಯಶಸ್ಸು ಕಾಣುವ ನಿರ್ಧಾರಕ್ಕೆ ಬಂದಿದ್ದಾಳೆ.

ಸಾದಗಪ್ಪು ವರ್ಣದ ಅಂಜಲಿ `ನನಗೆ ಅಭಿನಯ ಮಾಡುವ ಸಾಮರ್ಥ್ಯವಿದೆ. ಕೇವಲ ಮೈಮಾಟ ತೋರಿಸಿ ಮಾಯವಾಗಲು ನಾನು ಈ ಕ್ಷೇತ್ರಕ್ಕೆ ಬಂದಿಲ್ಲ~ ಎಂದು ದಿಟ್ಟತನದಿಂದ ಪ್ರತಿಕ್ರಿಯಿಸುತ್ತಾಳೆ. `ನಾನು ವರ್ಷದ ಹಿಂದೆ ನನ್ನ ಫೋಟೊ ಪೋರ್ಟ್‌ಫೋಲಿಯೊದಲ್ಲಿ ಕೇವಲ ಸೀರೆ ಉಟ್ಟ ಚಿತ್ರಗಳನ್ನು ಹೊಂದಿದ್ದೆ. ಆಗ ಯಾರೂ ಆ ಫೋಟೋಗಳನ್ನು ನೋಡುವ ಆಸಕ್ತಿ ತೋರಿಸಿರಲಿಲ್ಲ. ಈಗ ಒಂದಿಷ್ಟು ಬೋಲ್ಡ್ ಆಗಿ ಕಾಣಿಸುವ ಚಿತ್ರಗಳಿವೆ~ ಎಂದು ಹೇಳುವಾಗ ಅವಳ ಮೊಗದಲ್ಲಿ ನಗೆ.

ಗುರಿ `ಐಟಂ ಸಾಂಗ್~ ಅಲ್ಲ. ಅದು ಮೊದಲ ಮೆಟ್ಟಿಲು ಮಾತ್ರ. ಅಭಿನಯದಲ್ಲಿ ಪ್ರೌಢತೆ ಸಾಧಿಸಿ ಒಳ್ಳೆಯ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತೇನೆ... ಎಂದು ಮಾತು ಬೆಳೆಸುವ ಅಂಜಲಿ ತನ್ನ ಯೋಚನೆಯಲ್ಲಿ ಆಗಿರುವ ಇತ್ತೀಚಿನ ಬದಲಾವಣೆಗೆ ತಾನೇ ಅಚ್ಚರಿಪಡುತ್ತಾಳೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದು ಅವಳ ಅರಿವಿಗೆ ಬರದೇ ನಡೆದ ಪ್ರಕ್ರಿಯೆ. ಹೇಗಾದರೂ ಅವಕಾಶ ಗಿಟ್ಟಿಸಬೇಕು ಎನ್ನುವ ಆತುರದಲ್ಲಿ ಮನಸ್ಸು ಬದಲಿಸಿದ್ದು ಎಂದು ಖಚಿತವಾಗಿ ಹೇಳದಿದ್ದರೂ, ಸ್ವಲ್ಪ ಯೋಚಿಸಿ `ಇದ್ದರೂ ಇರಬಹುದು~ ಎಂದು ಪೆದ್ದು ನಗೆ ಬೀರುತ್ತಾಳೆ.

ಮೂರು ವರ್ಷಗಳ ಹಿಂದಿದ್ದಂತೆ ಈಗಿಲ್ಲ, ಮುಂದೆಯೂ ಪಾತ್ರ ಬದಲಾವಣೆ ಸಾಧ್ಯವೆಂದು ಹೇಳುವ ನೀಳ ಕಾಯದ ಅಂಜಲಿ ಸದ್ಯಕ್ಕೆ ತೂಕ ಕಡಿಮೆ ಮಾಡಿಕೊಳ್ಳುವ ಯೋಚನೆ ಮಾಡಿಲ್ಲ. ತನ್ನ ಈಗಿನ ದೇಹಾಕಾರದ ಮೇಲೆಯೇ ಅವಳಿಗೆ ವಿಪರೀತ ನಂಬಿಕೆ.

ಪ್ರತಿಕ್ರಿಯಿಸಿ (+)