ಬುಧವಾರ, ಜುಲೈ 15, 2020
25 °C

ಬಡಮಕ್ಕಳ ಬೆಳಕಿನ ಭಾರತಿ

ಮಾಲತಿ Updated:

ಅಕ್ಷರ ಗಾತ್ರ : | |

ಬಡಮಕ್ಕಳ ಬೆಳಕಿನ ಭಾರತಿ

ಸಂಜೆ 6 ಗಂಟೆ ಆಯಿತೆಂದರೆ ಸಾಕು, ಶ್ರೀರಾಮಪುರದ ಸಾಂದೀಪನಿ ವಿದ್ಯಾಭವನದಲ್ಲಿ ದೀಪಗಳು ಹೊತ್ತಿಕೊಳ್ಳುತ್ತವೆ. ಅದರ ಹಿಂದೆಯೇ ಹೈಸ್ಕೂಲ್ ಹುಡುಗ, ಹುಡುಗಿಯರ ಕಲರವ, ಒಕ್ಕೊರಲಿನ ಪ್ರಾರ್ಥನೆ. ಅದೇ ಸಮಯಕ್ಕೆ ಸರಿಯಾಗಿ 80 ವರ್ಷದ ‘ಯುವತಿ’ ಪದ್ಮಾವತಮ್ಮ ಆಟೋದಲ್ಲಿ ಬಂದಿಳಿಯುತ್ತಾರೆ. ತರಗತಿ ಪ್ರವೇಶಿಸಿ ಚಾಕ್‌ಪೀಸ್ ಕೈಗೆತ್ತಿಕೊಳ್ಳುತ್ತಾರೆ. ಕಪ್ಪು ಹಲಗೆಯ ಮೇಲೆ ಚಕಚಕ ಗಣಿತ ಸೂತ್ರಗಳು ಮೂಡುತ್ತವೆ. ಈ ಪದ್ಮಾವತಿ ಮೇಡಂ ಸದಾಶಿವನಗರದ ಸ್ಟೆಲ್ಲಾ ಮೇರಿಸ್ ಕಾನ್ವೆಂಟ್‌ನಲ್ಲಿ 35 ವರ್ಷಗಳಿಗಿಂತ ಹೆಚ್ಚು ಕಾಲ ಗಣಿತ ಬೋಧಿಸಿದವರು.ಇದೇ ಸಮಯಕ್ಕೆ ಸರಿಯಾಗಿ ಅತ್ತ ದೇವಯ್ಯ ಪಾರ್ಕ್ ಬಳಿ ಇರುವ ಪಾಲಿಕೆ ಬಾಲಿಕೆಯರ ಪ್ರೌಢಶಾಲೆ ಆವರಣದಲ್ಲಿ ಪಿಯುಸಿ, ಬಿಕಾಂ ವಿದ್ಯಾರ್ಥಿಗಳು ತದೇಕಚಿತ್ತದಿಂದ ಪಾಠ ಆಲಿಸುತ್ತಿರುತ್ತಾರೆ. ವಿಜಯ ಕಾಲೇಜು, ಆರ್‌ವಿ ಕಾಲೇಜುಗಳಿಂದ ನಿವೃತ್ತರಾದ ಪ್ರಾಧ್ಯಾಪಕರು, ಎಂಇಎಸ್ ಕಾಲೇಜಿನಲ್ಲಿ ಪಾಠ ಮಾಡುವ ಶಿಕ್ಷಕರು, ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರು, ಭವ್ಯ ಭವಿಷ್ಯಕ್ಕೆ ಮುಖಮಾಡಿರುವ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುತ್ತಿರುತ್ತಾರೆ.ಇದು ಒಂದು, ಎರಡು ವರ್ಷಗಳಿಂದ ನಡೆಯುತ್ತಿರುವ ತರಗತಿಯಲ್ಲ. ನಿಸ್ವಾರ್ಥ ಸೇವಕರು ಕಟ್ಟಿರುವ ‘ಸೇವಾ ಭಾರತಿ’ ಸಂಘಟನೆ ಕಳೆದ 25 ವರ್ಷಗಳಿಂದ ಈ ಕೈಂಕರ್ಯ ನಡೆಸಿಕೊಂಡು ಬರುತ್ತಿದೆ. ಇದು ಒಂದು ರೀತಿಯಲ್ಲಿ ಉಚಿತ  ಮನೆಪಾಠ ಇದ್ದಂತೆ. ಈ ಉಚಿತ ತರಗತಿಯ ಪ್ರಯೋಜನ ಪಡೆಯುವವರಲ್ಲಿ ಶೇ 80ರಷ್ಟು ವಿದ್ಯಾರ್ಥಿಗಳು ಕೊಳೆಗೇರಿ ವಾಸಿಗಳ ಕುಟುಂಬದಿಂದ ಬಂದವರು. ಆಟೋ ಚಾಲಕರು, ಮೆಕ್ಯಾನಿಕ್, ಪ್ಲಂಬರ್ ಕೆಲಸ ಮಾಡುವವರು, ಗಾರೆ ಕೆಲಸಗಾರರ ಮಕ್ಕಳೆಲ್ಲ ‘ಸೇವಾ ಭಾರತಿ’ ತರಗತಿಯ ಫಲಾನುಭವಿಗಳು.ಸೇವಾ ಭಾರತಿ ಹುಟ್ಟು ಹೇಗೆ?

‘ಸೇವಾ ಭಾರತಿ’ ಹತ್ತಾರು ಕಾರ್ಯಕರ್ತರ ಒಗ್ಗಟ್ಟಿನ ಫಲ. ಆದರೆ, ಸಂಘಟನೆಯ ಹುಟ್ಟಿಗೆ ಕಾರಣರಾದವರು ರಮಾನಂದ. ಶೃಂಗೇರಿ ಮೂಲದ ರಮಾನಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗದಲ್ಲಿ ಇದ್ದವರು. ವಾರಾನ್ನ ಮಾಡಿಕೊಂಡು ಕಡುಕಷ್ಟದಿಂದ ಶಿಕ್ಷಣ ಪೂರೈಸಿದವರು. ಮೊದಲಿನಿಂದಲೂ ಸಮಾಜಸೇವೆಯತ್ತ ತುಡಿತ ಇದ್ದೇ ಇತ್ತು. ಬೇರೇನೋ ಮಾಡುವ ಬದಲು ಮನೆಪಾಠಕ್ಕೆ ಹೋಗಲು ಆರ್ಥಿಕ ಚೈತನ್ಯವಿಲ್ಲದ ಬಡ ವಿದ್ಯಾರ್ಥಿಗಳಿಗೆ ಉಚಿತ ತರಗತಿ ನಡೆಸುವ ಕನಸು ಕಂಡರು.ಈ ಆಸೆಗೆ ನೀರೆರೆದವರು ಶೇಷಾದ್ರಿಪುರಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿ.ವೈ. ಸೋಮಯಾಜುಲು. ಉಚಿತ ತರಗತಿ ನಡೆಸಲು ರಮಾನಂದರಿಗೆ ಮಾರ್ಗರ್ದಶನ ನೀಡಿದರು.25 ವರ್ಷಗಳ ಹಿಂದೆ 1986ರಲ್ಲಿ ಶೇಷಾದ್ರಿಪುರಂನ ಹಳೆಯ ಕಟ್ಟಡವೊಂದರಲ್ಲಿ ಸೇವಾ ಭಾರತಿ ತರಗತಿಗಳು ಆರಂಭಗೊಂಡವು. ಮೊದಲಿಗೆ 8,9 ಮತ್ತು 10ನೇ ತರಗತಿಯ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿತ್ತು. ಆನಂತರ ಅದನ್ನು ಪಿಯುಸಿ ವಿಜ್ಞಾನ ಮತ್ತು ಬಿಕಾಂ ತರಗತಿಗಳಿಗೂ ವಿಸ್ತರಿಸಲಾಯಿತು. ಈಗ  ಎಂಟು ವರ್ಷಗಳಿಂದ ಶೇಷಾದ್ರಿಪುರಂನಲ್ಲಿ ತರಗತಿಗಳು ನಡೆಯುತ್ತಿಲ್ಲ. ಶ್ರೀರಾಮಪುರದ ಸಾಂದೀಪನಿ ವಿದ್ಯಾಭವನದಲ್ಲಿ ಹೈಸ್ಕೂಲ್ ಮತ್ತು ದೇವಯ್ಯ ಪಾರ್ಕ್‌ನ ಪಾಲಿಕೆ ಬಾಲಿಕೆಯರ ಪ್ರೌಢಶಾಲೆಯಲ್ಲಿ ಪಿಯುಸಿ ಮತ್ತು ಬಿಕಾಂ ತರಗತಿಗಳು ನಡೆಯುತ್ತಿವೆ. ಪ್ರಸ್ತುತ ಸಾವಿರ ವಿದ್ಯಾರ್ಥಿಗಳು ತರಗತಿಯ ಪ್ರಯೋಜನ ಪಡೆಯುತ್ತಿದ್ದಾರೆ.ಆರಂಭದಲ್ಲಿ ರಮಾನಂದ ಅವರ ಗೆಳೆಯರ ಬಳಗಕ್ಕೆ ಸೇರಿದ ಬ್ಯಾಂಕ್ ನೌಕರರು, ಸರ್ಕಾರಿ ನೌಕರರು ಉಚಿತ ತರಗತಿಗಳಿಗೆ ಪಾಠ ಮಾಡುತ್ತಿದ್ದರು. ತರಗತಿಯ ಜನಪ್ರಿಯತೆಯನ್ನು ಕಂಡು ಸ್ಟೆಲ್ಲಾ ಮೇರಿಸ್ ಹೈಸ್ಕೂಲ್ ಶಿಕ್ಷಕರು, ಶೇಷಾದ್ರಿಪುರಂ ಕಾಲೇಜು, ವಿಜಯಾ ಕಾಲೇಜು, ಎಂಇಎಸ್ ಕಾಲೇಜು ಶಿಕ್ಷಕರು ಸ್ವಯಂ ಇಚ್ಛೆಯಿಂದ ಬೋಧಿಸಲು ಮುಂದೆ ಬಂದರು.ಅತ್ಯುತ್ತಮ ಶಿಕ್ಷಣ ತಜ್ಞರೆಂದು ವಿದೇಶದಲ್ಲೂ ಹೆಸರು ಗಳಿಸಿರುವ ಡಾ. ಗುರುರಾಜ ಕರ್ಜಗಿ ಸೇವಾ ಭಾರತಿಯಲ್ಲಿ ಎರಡು ವರ್ಷಗಳ ಕಾಲ ಪಿಯುಸಿ ವಿದ್ಯಾರ್ಥಿಗಳಿಗೆ ರಸಾಯನ ಶಾಸ್ತ್ರ ಬೋಧಿಸಿದ್ದಾರೆ. ಪದ್ಮಾವತಿ ಮೇಡಂ, ಗಣಿತವೆಂದರೆ ಬೆದರುವ ಹೈಸ್ಕೂಲ್ ಮಕ್ಕಳ ಮುಖದಲ್ಲಿ ನಗು ಮೂಡಿಸುತ್ತಾರೆ. ಈ ಇಳಿ ವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ಆಟೋದಲ್ಲಿ ಬಂದು ಪಾಠ ಹೇಳುತ್ತಾರೆ. ಬಿಕಾಂ ತರಗತಿಗೆ ವಿಜಯಾ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹರೀಶ್ ಅಕೌಂಟ್ಸ್ ಹೇಳಿಕೊಡುತ್ತಾರೆ. ಎಂಇಎಸ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಉಷಾ, ಇನ್‌ಕಮ್ ಟ್ಯಾಕ್ಸ್ ಕಲಿಸುತ್ತಾರೆ. ಇದೇ ತರಗತಿಯಲ್ಲಿ ಕಲಿತು ವೈದ್ಯರಾಗಿರುವ ಡಾ. ಅರುಣ್ ಜೀವಶಾಸ್ತ್ರದ ಪಾಠ ಹೇಳಿಕೊಡುತ್ತಾರೆ.ಹೀಗೆ ಸೇವಾ ಭಾರತಿಯಲ್ಲಿ ಸೇವೆ ಸಲ್ಲಿಸುವ ನಿಸ್ವಾರ್ಥ ಶಿಕ್ಷಕರ ಪಟ್ಟಿ ದೊಡ್ಡದಿದೆ. ಸೇವಾ ಭಾರತಿ ಕಾರ್ಯಕರ್ತರ ಧನ್ಯವಾದ, ಪಾಠ ಕಲಿತ ವಿದ್ಯಾರ್ಥಿಗಳ ಕೃತಜ್ಞತೆಯೇ ಇವರಿಗೆ ಗೌರವಧನ. ಸೇವಾ ಭಾರತಿಯಲ್ಲಿ ಕಲಿತ ಹಲವರು ಸಮಾಜದಲ್ಲಿ ಎತ್ತರದ ಸ್ಥಾನ ತಲುಪಿದ್ದಾರೆ. ಇಲ್ಲಿ ಕಲಿತ ಬಿಂದು ಈಗ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಉಪನ್ಯಾಸಕಿ. ಮಿನರ್ವ ಮಿಲ್‌ನಲ್ಲಿ ನೌಕರಿ ಮಾಡುತ್ತಿದ್ದ ಗುಡಿಸಲು ವಾಸಿಯೊಬ್ಬರ ನಾಲ್ಕು ಮಕ್ಕಳು ವಿಮಾನದಲ್ಲಿ ಹಾರುವಷ್ಟು ಆರ್ಥಿಕ ಚೈತನ್ಯ ಗಳಿಸಿಕೊಂಡಿದ್ದಾರೆ. ಅವರ ಇಬ್ಬರು ಮಕ್ಕಳು ಎಂಜನಿಯರ್ ಆಗಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇಬ್ಬರು ವೈದ್ಯರು. ಹೀಗೆ ಈ ಸಂಘಟನೆಯಿಂದ ಉಪಕೃತರಾದವರ ಪಟ್ಟಿಯೂ ಉದ್ದವಿದೆ.ಉಚಿತ ತರಗತಿಗಳಲ್ಲದೇ ಆಗಾಗ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿ ವರ್ಷ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರವಾಸ. ಇದಕ್ಕೆಲ್ಲ ಸಹೃದಯ ದಾನಿಗಳ ಸಹಾಯಹಸ್ತ.ಹೈಸ್ಕೂಲ್ ತರಗತಿಗಳಿಗೆ ಕಮಲಾನಗರ, ಕುರುಬರಹಳ್ಳಿ, ಮಹಾಲಕ್ಷ್ಮಿ ಬಡಾವಣೆ, ನಂದಿನಿ ಬಡಾವಣೆಗಳಿಂದಲೂ ಮಕ್ಕಳು ಬರುತ್ತಾರೆ. ಪಿಯುಸಿ, ಬಿಕಾಂ ತರಗತಿಗಳಿಗೆ ಸುಂಕದಕಟ್ಟೆ, ಪೀಣ್ಯ, ನೆಲಮಂಗಲದಿಂದಲೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬರುತ್ತಾರೆ. ಬಿಕಾಂ ತರಗತಿಗಳಿಗೆ ಬೋಧಿಸುವ ಶಿಕ್ಷಕರ ಪಟ್ಟಿಯನ್ನು ನೋಡಿ ಎಂಇಎಸ್ ಕಾಲೇಜಿನಲ್ಲಿ ಓದುತ್ತಿರುವ ಅನುಕೂಲಸ್ಥ ಕುಟುಂಬಗಳ ಮಕ್ಕಳು ಈ ತರಗತಿಗೆ ಬರುತ್ತಿದ್ದಾರೆ.ಹುಡುಗಿಯರಿಗೆ ರಕ್ಷಣೆ...

ಹೆಣ್ಣು ಮಕ್ಕಳ ಕುರಿತು ಸೇವಾ ಭಾರತಿ ಕಾರ್ಯಕರ್ತರು ವಹಿಸುವ ಕಾಳಜಿ ತರಗತಿಗಳ ಜನಪ್ರಿಯತೆ ಹೆಚ್ಚಿಸಿದೆ. ಯಾವುದೇ ತರಗತಿಗೆ ಹೆಣ್ಣು ಮಕ್ಕಳು ಮೊದಲು ಬಂದು ಕುಳಿತುಕೊಳ್ಳಬೇಕು. ಅವರನ್ನು ಮೊದಲು ಬಿಡಲಾಗುತ್ತದೆ. ಪಿಯುಸಿ, ಬಿಕಾಂ ತರಗತಿಗಳನ್ನು ಬಿಟ್ಟಾಗ ಸಂಘಟನೆಯ ಕಾರ್ಯಕರ್ತರು ಸುತ್ತಲಿನ ರಸ್ತೆಗಳಲ್ಲಿ ಒಂದು ಸುತ್ತು ಹೋಗಿ ಬರುತ್ತಾರೆ. ದೂರದ ಪ್ರದೇಶಗಳಿಂದ ಬರುವ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆ ತಲುಪಬೇಕು. ಅದು ನಮ್ಮ ಆದ್ಯತೆ ಎನ್ನುತ್ತಾರೆ ರಮಾನಂದ.ಈ ಉಚಿತ ತರಗತಿಗಳಿಗೆ ಸ್ವಂತ ಕಟ್ಟಡ ಬೇಡವೆ? ಶಾಲೆ, ಕಾಲೇಜು ಕಟ್ಟುವ ಆಲೋಚನೆ ಇದೆಯೇ ಅಂದರೆ ಇಲ್ಲ ಎಂಬ ಸ್ಪಷ್ಟ ಉತ್ತರ. ‘ಸಾಂಸ್ಥಿಕ ರೂಪ ಬಂದೊಡನೆ ಸೇವಾ ಭಾವ ಮಾಯವಾಗಿ, ಅಧಿಕಾರ ದಾಹ, ಸ್ವಾರ್ಥ ತಲೆ ಎತ್ತುತ್ತದೆ. ತರಗತಿಗಳು ಮುಂದುವರಿಯಲಿ. ವಿದ್ಯಾರ್ಥಿಗಳು ಜೀವನದಲ್ಲಿ ಮೇಲೇರಿದರೆ ಸಾಕು, ನಮ್ಮ ಶ್ರಮ ಸಾರ್ಥಕ’ ಎನ್ನುತ್ತಾರೆ ಅವರು.ತರಗತಿ ಕೊನೆಯಲ್ಲಿ ವಿದ್ಯಾರ್ಥಿಗಳ ಕಂಠದಿಂದ ‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ, ಲೋಕಸ್ಸಮಸ್ತಾ ಸುಖಿನೋ ಭವಂತು’ ಎಂಬ ಶ್ಲೋಕ ಮುಸ್ಸಂಜೆಯ ಕತ್ತಲು ಮೀರಿಸುವಂತೆ ಮೊಳಗುತ್ತದೆ. ಅದು ಸೇವಾ ಭಾರತಿಯ ಆಶಯವನ್ನೂ ಧ್ವನಿಸುತ್ತದೆ.

ಸೇವಾ ಭಾರತಿಯ ಸಂಪರ್ಕ ಸಂಖ್ಯೆ: 99007 39392 

                              

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.