ಬುಧವಾರ, ಜನವರಿ 22, 2020
17 °C
ಕುಂದಾಪುರ: ಭೂಮಿಯ ಹಕ್ಕಿಗಾಗಿ ಪ್ರತಿಭಟನೆ

ಬಡ ಜನರಿಗೆ ಭೂಮಿ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಜನರಿಂದ ಸಂಗ್ರಹಿಸಲಾದ ಹಣವನ್ನೇ ನೀಡಿ ಹೆಚ್ಚಿನ ಧಾರಣೆಯ ಅಕ್ಕಿಯನ್ನು ನೆರೆಯ ರಾಜ್ಯಗಳಿಂದ ಆಮದು ಮಾಡಿಕೊಂಡು ಕಡಿಮೆ ದರದಲ್ಲಿ ರಾಜ್ಯದ ಜನರಿಗೆ 1 ರೂಪಾಯಿ ದರದಲ್ಲಿ ನೀಡಲಾಗುತ್ತಿದೆ. ಅದರ ಬದಲು ರಾಜ್ಯದಲ್ಲಿನ ಬಡ ರೈತರಿಗೆ ಭೂಮಿ ನೀಡಬೇಕು. ಬಡವರ ಉದ್ಧಾರ ಮಾಡುತ್ತೇವೆಂದು ಹೇಳುವ ಬಂಡವಾಳಶಾಹಿಗಳ ಮತ್ತು ಶ್ರೀಮಂತರ ಪರವಾಗಿರುವ ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳುಹಿಸಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ರಾಜು ಎಂ. ತಳವಾರ್ ಒತ್ತಾಯಿಸಿದರು.ಕುಂದಾಪುರದ ತಹಶೀಲ್ದಾರ್‌ ಕಚೇರಿಯ ಎದುರು ಸೋಮವಾರ ತಾಲ್ಲೂಕು ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಆಶ್ರಯ­ದಲ್ಲಿ ಭೂಮಿಯ ಹಕ್ಕಿಗಾಗಿ ನಡೆದ ಬ್ರಹತ್‌ ಪ್ರತಿ­ಭಟನಾ ಸಭೆಯನ್ನುದ್ದೇಶಿಸಿ ಅವರು ಮಾತ­ನಾಡಿದರು.ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಉದಯ್‌ ಕುಮಾರ ತಲ್ಲೂರ್‌, ದಲಿತರ ಸಮಸ್ಯೆಗಳಿಗೆ ಸ್ಪಂದಿಸ­ಬೇಕಾದ ಅಧಿಕಾರಿಗಳೇ ದಾರಿ ತಪ್ಪಿಸುವ ಕೆಲಸ­ವನ್ನು ಮಾಡುತ್ತಿದ್ದಾರೆ. ಅಮಾಯಕ ದಲಿತ ಮಹಿಳೆ­ಯೊಬ್ಬರಿಗೆ ನ್ಯಾಯಯುತವಾಗಿ ದೊರಕ­ಬೇಕಾದ ಭಡ್ತಿಯನ್ನು ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಅವಕಾಶ ವಂಚನೆ ಮಾಡುತ್ತಿದ್ದಾರೆ. ತಾಲ್ಲೂಕಿನಾದ್ಯಾಂತ ಇರುವ ಡಿ.ಸಿ ಮನ್ನಾ ಭೂಮಿಯನ್ನು ಅರ್ಹ ಅರ್ಜಿದಾರರಿಗೆ ನೀಡಲು ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.ಸಂವಿಧಾನದ ಅನುಚ್ಛೇದ 38 ಹಾಗೂ 39 ರಂತೆ ಪ್ರತಿ ಆಸ್ತಿಯೂ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ನಿಯಮವನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ದಲಿತರಿಗೆ ನೀಡಬೇಕು.ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎನ್ನುವುದು ಸೇರಿದಂತೆ ನೀಡಿರುವ10 ಅಂಶಗಳ ಬೇಡಿಕೆಗಳನ್ನು ಇನ್ನೂ 10 ದಿನಗಳ ಒಳಗೆ ಈಡೇರಿಸದಿದ್ದಲ್ಲಿ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ವಿರುದ್ಧವೂ ಪ್ರಕರಣ ದಾಖಲಿಸ­ಬೇಕಾ­ಗುತ್ತದೆ ಎಂದು ಅವರು ಹೇಳಿದರು.ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಪಿ.ಪಿ.ಪೂಜಾರ್ ಅವರ ಮೂಲಕ ಬೇಡಿಕೆ ಪತ್ರ ನೀಡಲಾಯಿತು. ಪ್ರತಿಭಟನಾ ಸಭೆಯ ಮೊದಲು ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲ­ಕರಾದ ಚಂದ್ರಶೇಖರ ಗುಲ್ವಾಡಿ, ತಾಲ್ಲೂಕು ಸಂಚಾಲಕ ಶೇಖರ ಹಾವಂಜೆ, ಗೋವಿಂದ ಮಾರ್ಗೋಳಿ, ತಾಲ್ಲೂಕು ಸಂಘಟನಾ ಸಂಚಾಲಕ­ರಾದ ವಿಜಯ್.ಕೆ.ಎಸ್., ಶ್ರೀನಿವಾಸ್, ಮಂಜು­ನಾಥ್ ಸಿದ್ದಾಪುರ, ಗೋಪಾಲ್ ವಿ. ವಸಂತ ವಂಡ್ಸೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಮನ್ನಾ ಭೂಮಿಯನ್ನು ದಲಿತರಿಗೆ ನೀಡುವಂತೆ ಆಗ್ರಹಿಸಿ ನಡೆದ ಸಭೆಯಲ್ಲಿ ನಗರದ ಅಂಬೇಡ್ಕರ್‌ ಭವನವನ್ನು ದಲಿತ ಸಮುದಾಯದವರ ಕಾರ್ಯಕ್ರಮಕ್ಕೆ ನೀಡದೆ ಬೇರೆ ಉದ್ದೇಶಕ್ಕೆ ನೀಡಿರುವ ಹಾಗೂ ಸರ್ಕಾರಿ ಉದ್ಯೋಗದಲ್ಲಿರುವ ದಲಿತ  ಮಹಿಳೆಯೊಬ್ಬರಿಗೆ ಭಡ್ತಿ ದೊರಕುವಲ್ಲಿ ಅಸಹಕಾರ ನೀಡಿದ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾದವು.

ಪ್ರತಿಕ್ರಿಯಿಸಿ (+)