ಸೋಮವಾರ, ಮೇ 17, 2021
21 °C

ಬಣ್ಣಗಳಲ್ಲಿ ಅದ್ದಿದ ಕನಸು

ಅನುಪಮಾ ಫಾಸಿ Updated:

ಅಕ್ಷರ ಗಾತ್ರ : | |

ಬಳೆಗಾರ ಚನ್ನಯ್ಯನ ನೆನಪು ಕಾಡುವಂತಹ ಬಳೆಗಳ ಸರವನ್ನು ಹೆಗಲ ಮೇಲೆ ಹಾಕಿಕೊಂಡು `ಬಳೆ ಬೇಕೇನವ್ವಾ ಬಳೆ..~ ಎಂದು ಸಡಗರದಿಂದ ಸಾರುತ್ತ ಸಾಗುವ ಬಳೆಗಾರ ಚನ್ನಯ್ಯ.. ಅವನಿಗೆ ತನ್ನ ತವರು ಮನೆಗೆ ಏನನ್ನೋ ಹೇಳಿ ಕಳುಹಿಸುವುದಕ್ಕೆ ಕಾತರಳಾಗಿ ಕಾಯುತ್ತ ಕುಳಿತಿರುವ ತಲೆ ಮೇಲೆ ಸೆರಗುಹೊದ್ದು ಕುಳಿತಿರುವ ಮಹಿಳೆ...

ಅಂತರ್ಜಲ ಕುಸಿದು ಬರಿದಾಗುತ್ತಿರುವ ಬಾವಿಗಳು. ಇಂದು ಬರಿ ನೆನಪಾಗಿರುವ ಬಾವಿಗಳಿಂದ ನೀರು ಸೇದುತ್ತಿರುವ ನೆನಪು ಮರುಕಳಿಸುವಂತೆ  ಬಾವಿಯಿಂದ ನೀರು ಸೇದುತ್ತಿರುವ ಮಹಿಳೆ...

ಹಳ್ಳಿಗಾಡಿನಲ್ಲಿ ದೇವರನ್ನು, ಅಂದರೆ ದೇವಿಯ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಕುಣಿಯುವ ಮತ್ತು ಅದಕ್ಕೆ ತಕ್ಕಂತೆ ತಾಳಗಳನ್ನು ಬಾರಿಸುವ, ಈಗ ಬಹುತೇಕ ನಶಿಸಿಹೋಗಿರುವ ದುರಮುರಗಿಯರು ಎಂದು ಕರೆಯುವ ಒಂದು ಜನಾಂಗದ ಆ ಅದ್ಭುತ ಕಲೆ..

ಉತ್ತರ ಕರ್ನಾಟಕದ ವಿಶಿಷ್ಟ ಜನಾಂಗ ಲಂಬಾಣಿ ಹುಡುಗಿಯರು ಧರಿಸುವ ವಿಶಿಷ್ಟವಾದ ಬಟ್ಟೆಗಳ ಸೊಬಗಿನ ರಂಗು...

ಉತ್ತರ ಕರ್ನಾಟಕದ ದೇಶೀಯ ಕಲೆ ಮೂಡಿಬಂದಿದ್ದು ಕರ್ನಾಟಕ ಚಿತ್ರ ಕಲಾಪರಿಷತ್ತಿನಲ್ಲಿ.

ಮೂಲತಃ ಹಾವೇರಿ ಜಿಲ್ಲೆಯವರಾದ ಕರಿಯಪ್ಪ ಹಂಚಿನಮನಿ, ಕುಮಾರ್ ಎಸ್.ಕಾಟೇನಹಳ್ಳಿ ಮತ್ತು ಶಿವ ಹಾದಿಮನಿ ಅವರ ಕಲಾಕುಂಚದಲ್ಲಿ ಮೂಡಿಬಂದಿರುವ ವಿಶಿಷ್ಟ ಕಲಾಕೃತಿಗಳಿವು.

ಮುಗ್ಧ ಹೆಣ್ಣುಮಗು ಬಲೂನ್ ಹಿಡಿದು ಆಡಿ ಸಂಭ್ರಮಿಸಿ, ತಾನು ಹೀಗೆ ಎಂದಾದರೂ ಸ್ವತಂತ್ರವಾಗಿ ಆಕಾಶದ್ಲ್ಲಲಿ ಹಾರಿ, ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವಂತೆ ಮೂಡಿ ಬಂದಿರುವ ಕಲಾಕೃತಿ ವಿಶಿಷ್ಟವಾದ ಮೆರುಗನ್ನು ನೀಡುತ್ತದೆ. ಕಥಕ್ಕಳಿ ನೃತ್ಯ, ಕೃಷ್ಣನ ಧ್ಯಾನದಲ್ಲಿ ಲೀನವಾಗಿರುವ ರಾಧೆ, ಕೃಷ್ಣ-ರಾಧಾ ಇಬ್ಬರೂ ತಮ್ಮ ಪ್ರೇಮದಲ್ಲಿ ಒಬ್ಬರನ್ನು-ಇನ್ನೊಬ್ಬರಲ್ಲಿ ಕಾಣುವಂತಹ ದೃಶ್ಯ ಮನವನ್ನು ಅರಳಿಸುತ್ತದೆ.

ತಂಬೂರಿ ನುಡಿಸುತ್ತ ಕೃಷ್ಣನನ್ನು ನೆನೆಯುತ್ತ ತಲ್ಲೆನವಾಗಿರುವ ಮೀರಾಬಾಯಿ, ಹಳ್ಳಿಗಾಡಿನಲ್ಲಿ ಕಟ್ಟಿಗೆ ಹೊತ್ತು ಸಾಗುತ್ತಿರುವ ಮಹಿಳೆ, ನೀರಿನ ಕೊಡವನ್ನು ಸೊಂಟದ ಮೇಲೆ ಇಟ್ಟುಕೊಂಡು ಮನೆಗೆ ಧಾವಂತದಿಂದ ಸಾಗುತ್ತಿರುವ ಮಹಿಳೆ... ಹೀಗೆ ಇಡೀ ಹಳ್ಳಿಗಾಡಿನಲ್ಲಿರುವ ಮಹಿಳೆಯರ ಸ್ಥಿತಿ, ಅವರ ಜೀವನ, ಬದುಕಲ್ಲಿ ಏನೇ ಕಷ್ಟಗಳಿದ್ದರೂ ನುಂಗಿಕೊಂಡು, ಇದ್ದುದರಲ್ಲೇ ಸಂತೋಷ ಕಾಣುವ ಹಳ್ಳಿಗಾಡಿನ ದೇಶೀಯ ಜಾನಪದ ಸಂಸ್ಕೃತಿ ಕಣ್ಣಿಗೆ ಕಟ್ಟುವಂತೆ ಕಲಾವಿದರು ತಮ್ಮ ಕುಂಚದಲ್ಲಿ ಮೇಳೈಸಿದ್ದಾರೆ.

ಸ್ನೇಹಿತರಾದ ಕರಿಯಪ್ಪ ಹಂಚಿನಮನಿ, ಕುಮಾರ್ ಎಸ್. ಕಾಟೇನಹಳ್ಳಿ ಹಾಗೂ ಶಿವ ಹಾದಿಮನಿ ಇವರೆಲ್ಲರೂ ಚಿತ್ರಕಲೆಯನ್ನೇ ವೃತ್ತಿಯಾಗಿಸಿಕೊಂಡು ಬಣ್ಣಗಳಲ್ಲಿ ಕನಸು ಕಟ್ಟುತ್ತ, ಕಾಮನಬಿಲ್ಲು ರೂಪಿಸುತ್ತ ಬದುಕಲ್ಲಿ ಸಾರ್ಥಕತೆಯನ್ನು ಕಂಡವರು.

ಮೂಲತಃ ಹಳ್ಳಿಗಾಡಿನ ಪ್ರದೇಶದಿಂದ ಬಂದವರಾದ ಇವರಿಗೆ ಯಾವಾಗಲೂ ನೆನಪಾಗಿ ಕಾಡುವುದು ಕಾಂಕ್ರೀಟ್ ನಗರಗಳಲ್ಲ. ಬದಲಿಗೆ ದೇಶೀಯ ಸಂಸ್ಕೃತಿಯ ಪ್ರತಿರೂಪಕವಾಗಿರುವ ಹಳ್ಳಿಗಾಡು, ಅಲ್ಲಿನ ಜನರ ಬದುಕು-ಬವಣೆಗಳನ್ನು ಕುಂಚದಲ್ಲಿ ಹಿಡಿದಿಡುವ ಪ್ರಯತ್ನವನ್ನು ಹದಿನೈದು ವರ್ಷಗಳಿಂದ ತಮ್ಮ ಕಲೆಯಲ್ಲಿ ಬಿಂಬಿಸುತ್ತ ಬಂದಿದ್ದಾರೆ.

ಈಗ ಹಳ್ಳಿಗಳೂ ತಮ್ಮ ಹಿಂದಿನ ಸೊಗಡನ್ನು ಕಳೆದುಕೊಳ್ಳುತ್ತಿವೆ. ಅವುಗಳು ಸಹ ಇಂದು ಮಿನಿ ನಗರಗಳಾಗುತ್ತಿವೆ. ಆದರೆ, ಕಲಾವಿದನ ಕಲ್ಪನೆಯಲ್ಲಿ ಅರಳುವ ಚಿತ್ರಕಲೆ ಕಾಲಘಟ್ಟದಲ್ಲಿ ನಶಿಸುತ್ತಿರುವ ಎಲ್ಲ ಸಂಸ್ಕೃತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಅಂತಹ ಸಾಕ್ಷಿ ರೂಪವನ್ನು ಈ ಮೂವರು ಸ್ನೇಹಿತರು ಕಲೆಗೆ ಕೊಡುಗೆಯಾಗಿ ನೀಡುತ್ತಿದ್ದಾರೆ.

ಇವರ ಚಿತ್ರಕಲಾ ಪ್ರದರ್ಶನವು ಹಲವು ಕಡೆಯಲ್ಲಿ ನಡೆದಿದೆ. ಹಾವೇರಿ, ಹುಬ್ಬಳ್ಳಿ, ಧಾರವಾಡ. ರಾಷ್ಟ್ರೀಯ ಮಟ್ಟದಲ್ಲಿ ಕೊಲ್ಲಾಪುರ, ಹೈದರಾಬಾದ್, ದೆಹಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಂಗಪುರದಲ್ಲಿ ನಡೆದಿದೆ.

`ನಮ್ಮ ಮೊದಲ ಕನಸು ಮತ್ತು ಕೊನೆಯ ಕನಸು ಒಂದೇ. ಕಲ್ಪನೆ ಮತ್ತು ವಾಸ್ತವ ಎರಡೂ ಬೇರೆ ಬೇರೆಯಾದರೂ ಅವುಗಳ ನಡುವೆ ಒಂದು ಸಣ್ಣ ಸೇತುವೆ ನಿರ್ಮಿಸಬಹುದು. ಅದು ಈ ಬಣ್ಣಗಳಿಂದ ಮಾತ್ರ ಸಾಧ್ಯ. ಅಂತಹ ಕನಸಿನ ಬಣ್ಣಗಳನ್ನು ಎಲ್ಲರಲ್ಲೂ ತುಂಬುವುದೇ ಆಶಯ. ದೇಶೀಯ ಸಂಸ್ಕೃತಿಯನ್ನು ಜನರಲ್ಲಿ ಮರುರೂಪಿಸಿ ಮತ್ತೆ ಅವರನ್ನು ನಮ್ಮತನದತ್ತ ಕೊಂಡೊಯ್ಯುವುದೇ ಮೂಲ ಗುರಿಯಾಗಿದೆ~ ಎಂದು ತಮ್ಮ ಆಶಯ, ಕನಸುಗಳನ್ನು ನಗುಮೊಗದಿಂದ ಬಿಚ್ಚಿಡುತ್ತಾರೆ ಕಲಾವಿದ ಸ್ನೇಹಿತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.