ಸೋಮವಾರ, ಏಪ್ರಿಲ್ 12, 2021
30 °C

ಬದಲಾವಣೆಯತ್ತ ಶಿಕ್ಷಣ ಕ್ಷೇತ್ರ: ತಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ವಿ.ಜಿ. ತಳವಾರ ಅಭಿಪ್ರಾಯಪಟ್ಟರು. ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ವಿಜ್ಞಾನ ಮತ್ತು ಸಮಾಜ ಪ್ರತಿಷ್ಠಾನವು ಗುರುವಾರ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಪ್ರಾಯೋಜಿತ ಗ್ರಾಮೀಣ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಣ ಸುಧಾರಣೆಗೆ ಮಾಹಿತಿ ಸೌಲಭ್ಯದ ಅಂಗವಾಗಿ `8ನೇ ತರಗತಿಯ ದೃಶ್ಯ ಮತ್ತು ವಿಷಯ ಘಟಕ ಮಾಲಿಕೆಗಳ ಪರಿಣಾಮಕಾರಿ ಬಳಕೆ~ ಕುರಿತು ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.`ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಸ್ಫೋಟಕ ಬದಲಾವಣೆಯಿಂದ ಪಠ್ಯಕ್ರಮ, ಬೋಧನಾ ಕ್ರಮ ಹಾಗೂ ವಿದ್ಯಾರ್ಥಿ ಕಲಿಕೆಯಲ್ಲೂ ಬದಲಾವಣೆಗಳಾಗಿವೆ. ಈ ರೀತಿಯ ಬದಲಾವಣೆ ಎಲ್ಲ ಕಡೆ ಆಗುತ್ತಿದ್ದು, ನಗರದ ವಿದ್ಯಾರ್ಥಿಗಳಿಗೆ ಈ ಆಧುನಿಕ ಸೌಲಭ್ಯಗಳು ದೊರೆಯುತ್ತಿವೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನೇಕ ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ಶಿಕ್ಷಕರು ಸಹ ಪರಿಣಾಮಕಾರಿಯಾಗಿ ಪಾಠ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರೊ.ಕೆ.ಸಿದ್ದಪ್ಪ ಹೊರತಂದಿರುವ ಈ ಮಾಲಿಕೆಯು ತುಂಬಾ ಉಪಯುಕ್ತವಾಗಲಿದೆ~ ಎಂದರು.ಮುಖ್ಯ ಅತಿಥಿಗಳಾಗಿದ್ದ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ವಿಜ್ಞಾನದ ಬೆಳವಣಿಗೆ ಅತಿ ವೇಗದಲ್ಲಿ ನಡೆಯುತ್ತಿದೆ. ಅದರ ವೇಗಕ್ಕೆ ಹೆಜ್ಜೆ ಹಾಕಲು ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರು ಸಮರ್ಥರಾಗಿಬೇಕು. ವಿಜ್ಞಾನಿಗಳನ್ನು ತಯಾರು ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ.ಐ.ಸವದತ್ತಿ ಅಧ್ಯಕ್ಷತೆ ವಹಿಸಿದ್ದರು. ಮಾಲಿಕೆಯ ಯೋಜನಾ ನಿರ್ದೇಶಕ ಪ್ರೊ.ಕೆ.ಸಿದ್ದಪ್ಪ, ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ.ಶಾಂತಯ್ಯ ಹಾಜರಿದ್ದರು. ಕಾರ್ಯಾಗಾರದಲ್ಲಿ 60ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.