ಮಂಗಳವಾರ, ಜೂನ್ 22, 2021
28 °C

ಬದುಕಿನ ಅರ್ಥವಂತಿಕೆ ಹೆಚ್ಚಿಸಿಕೊಂಡವನ ಸಾರ್ಥಕ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನನ್ನ ಮಗನನ್ನು ನೋಡಲು ಬರುವುದಿಲ್ಲವೇ?~ಎಂದು  ಅಕ್ಕನ ಮಗಳು ಪ್ರೀತಿಯಿಂದ ಕರೆದಾಗ, `ಅರೆ ನಿನಗೆ  ಯಾವಾಗ ಮಗುವಾಯ್ತು? ಮದುವೆಯಾಗಿದ್ದು ಗೊತ್ತಿತ್ತು. `ನೀನು ಮಗುವಿನ ತಾಯಿಯಾದದ್ದು ಗೊತ್ತಿರಲಿಲ್ಲ~ ಎಂದು ಅಚ್ಚರಿಯಿಂದ ಕೇಳಿದೆ. ನನ್ನ ಅಚ್ಚರಿಗೆ ಅವಳ ಬದುಕಿನ ಕಹಿ ಘಟನೆಯೊಂದು ಕಾರಣವಾಗಿತ್ತು.ಹೌದು, ಅದೊಂದು ರಸ್ತೆ ಅಪಘಾತ. ಅಕ್ಕನ ಮಗಳಿಗೆ ಪೆಟ್ಟಾಗಿತ್ತು. ಪ್ರಜ್ಞೆ ಬಂದಾಗ  ಅವಳ ಮೊಳಕಾಲಿನ ಮಂಡಿ  ಒಡೆದಿತ್ತು. ರಕ್ತದ ಮಡುವಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆ ಸ್ಥಿತಿಯಲ್ಲಿ ಅವಳನ್ನು  ನೋಡುವುದೇ ಕಷ್ಟವಾಗಿತ್ತು. ಅವಳ ಭಾವಿ ಪತಿ ಧೈರ್ಯ ತಂದುಕೊಂಡ. ಅವಳ ಕೊರಳಲ್ಲಿದ್ದ ವೇಲ್‌ಅನ್ನು ಮೊಳಕಾಲಿಗೆ ಕಟ್ಟಿದ.ಧೈರ್ಯಗೆಡದೆ ಆಸ್ಪತ್ರೆಗೆ ಅವಳನ್ನು ದಾಖಲಿಸಿದ. ಸುಮಾರು ಎರಡು ವರ್ಷಗಳವರೆಗೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿದ್ದಳು. ಅವಳ ಸೇವೆಯನ್ನು ಅವನೇ ಮಾಡಿದ. ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತ ಸಣ್ಣ ಮೊತ್ತದ ಸಂಬಳ ಪಡೆಯುತ್ತಿದ್ದ ಈ  ಹುಡುಗ  ಮೂರು ಲಕ್ಷ ರೂ ಮೊತ್ತದ ಆಸ್ಪತ್ರೆ ಬಿಲ್ ಅನ್ನು ತಾನೇ ಪಾವತಿ ಮಾಡಿದ!

ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದ ಅವಳ ಬದುಕಿನ ಯಾತನಾಮಯ ದಿನಗಳವು.ಎಲ್ಲವನ್ನೂ ಮರೆತು ನೋವನ್ನು ನುಂಗಿ ಕಷ್ಟಗಳನ್ನು ಸಹಿಸಿದಳು.

ಮದುವೆಗೆ ಮುನ್ನ ಅಪಘಾತವಾದ್ದರಿಂದ ಅವಳ  ಮದುವೆ ಆಗಬಹುದೇ ಎಂಬ ಅನುಮಾನ ಬಂಧುಗಳಿಗೆ ಇತ್ತು. ಅದೇ ಆತಂಕದಲ್ಲೇ ಅವಳು ಒಂದು ವರ್ಷ ಕಳೆದಳು.

`ನೀನು ಯಾರ ಮಾತಿಗೂ ಲಕ್ಷ್ಯ ಕೊಡಬೇಡ.ಸಂಪೂರ್ಣ ಗುಣವಾದ ಮೇಲೆ ನಿನ್ನನ್ನೇ ಮದುವೆಯಾಗುತ್ತೇನೆ~ ಎಂಬ ಅವಳ ಭಾವಿ ಪತಿಯ ಪ್ರೀತಿಯ ಭರವಸೆಯಲ್ಲಿ ಬೇಗ ಚೇತರಿಸಿಕೊಂಡಳು. ಮಾನಸಿಕವಾಗಿ, ದೈಹಿಕವಾಗಿ ಗುಣ ಮುಖಳಾದಳು. ವೈದ್ಯರು  ಸಂಪೂರ್ಣ ಆರೋಗ್ಯವಾಗಿದ್ದಾಳೆಂದು ಹೇಳಿದರು. ಅವಳು ಎಂದಿನಂತೆ ನಡೆದಾಡುವಂತಾದ ಮೇಲೆ ಹುಡುಗ ಅವಳನ್ನು ಮದುವೆಯಾದ.ಇದು ಯಾವುದೋ ಕಥೆ, ಕಾದಂಬರಿಯ ಕಲ್ಪನೆಯ ವಿವರಗಳಲ್ಲ. ಮೂರ‌್ನಾಲ್ಕು ವರ್ಷಗಳ ಹಿಂದಿನ ಸತ್ಯ ಘಟನೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಒಂದು ಸಣ್ಣ ಗ್ರಾಮದ ಮಧ್ಯಮ ವರ್ಗದ ಕುಟುಂಬದ  ಯುವತಿಯನ್ನು ಸುಶಿಕ್ಷಿತ ಮನೆತನದ ಪಟ್ಟಣದ ಹುಡುಗನಿಗೆ ಕೊಡುವ ಮಾತುಕತೆಯಾಗಿತ್ತು. ಹಳ್ಳಿಯ ಹುಡುಗಿಯ ತಂದೆ-ತಾಯಿಗಳಿಗೆ ಹಿಗ್ಗೋ-ಹಿಗ್ಗು. ಮಗಳಿಗೆ ಒಳ್ಳೆಯ ಮನೆ ಸಿಕ್ಕಿತು ಎಂಬ ನೆಮ್ಮದಿಯ ಭಾವ.ಬಂಧುಗಳೊಬ್ಬರ ಮದುವೆ ಸಂದರ್ಭದಲ್ಲಿ ಎಲ್ಲರೂ ಇನ್ನೊಂದು ಊರಿಗೆ ಹೊರಟಿದ್ದರು. ಮುಂದೆ ಮದುವೆ ಆಗಲಿದ್ದಾರೆ  ಎಂಬ ಕಾರಣಕ್ಕೆ ಅವರಿಬ್ಬರನ್ನು ಒಟ್ಟಿಗೆ ಮೋಟರ್ ಬೈಕ್‌ನಲ್ಲಿ ಬರಲು ಅನುಮತಿ ನೀಡಿದರು. ಸಂತಸದಿಂದಲೇ ಹೊರಟ ಈ ಜೋಡಿಗೆ ಮುಂದೆ ಆಗಬಹುದಾದ ಅಪಘಾತದ ಅರಿವಿರಲಿಲ್ಲ. ಅವರು ಕಲ್ಪನಾ ಲೋಕದಲ್ಲಿದ್ದರು. ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಒಂದು ವಾಹನ ಅಡ್ಡ ಬಂತು. ಕ್ಷಣದಲ್ಲಿಯೇ  ಅಪಘಾತ ಸಂಭವಿಸಿತು.ಹುಡುಗಿಗೆ ಪೆಟ್ಟಾಯಿತು. ಹುಡುಗ ಹೇಗೋ ಬಚಾವಾದ. ಆದರೆ ಅವನು ಧೈರ್ಯಗೆಡಲಿಲ್ಲ. ತನ್ನ ದೆಸೆಯಿಂದ ಹೀಗಾಯಿತು ಎಂದು ಅವಳ ಜವಾಬ್ದಾರಿಯನ್ನು ತಾನೇ ಹೊತ್ತ. ಅವನ ಮನೆಯವರು `ಕಾಲು ಮುರಿದುಕೊಂಡ ಹುಡುಗಿ~ಯನ್ನು ಬಿಟ್ಟು ಬಿಡು ಎಂದು ಒತ್ತಾಯಿಸಿದರು.  ಮತ್ತೊಬ್ಬಳನ್ನು ಹುಡುಕಿ ಮದುವೆ ಮಾಡುವ ಮಾತಾಡಿದರು. ಆದರೆ ಅವನು ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿಯಲಿಲ್ಲ.

 

ಎಲ್ಲರನ್ನೂ ಒಪ್ಪಿಸಿ  ಮದುವೆಯಾದ. ತನ್ನ ಹುಡುಗಿಗೆ ಹೊಸ ಬಾಳು ನೀಡಿದ. ಈಗ ಗಂಡು ಮಗುವಿನ ತಂದೆಯೂ ಆಗಿರುವ ಈ ಹುಡುಗ ತನ್ನ ಪ್ರೀತಿಯ ಮಡದಿಗಾಗಿ ಕಾರನ್ನು ಖರೀದಿಸಿದ್ದಾನೆ. ಅವನ ತಂದೆ-ತಾಯಿಗಳಿಗೆ ಸೊಸೆಯ ಮೇಲೆ  ಪ್ರೀತಿ ಇದೆ. ಇಬ್ಬರದು ಅನುರೂಪದ ದಾಂಪತ್ಯ.ಅವನ ವರ್ತನೆ, ಹೃದಯವಂತಿಕೆ ಬಗ್ಗೆ ಮೆಚ್ಚುಗೆಯ ಮಾತಾಡಿದಾಗ `ಇದರಲ್ಲಿ ನನ್ನ ದೊಡ್ಡತನವೇನಿದೆ? ಅವಳ ಮನೆಯವರು ನನ್ನ ಮೇಲೆ ನಂಬಿಕೆ ಇಟ್ಟು ಜೊತೆಯಲ್ಲಿ ಕಳುಹಿಸಿದರು. ನನ್ನ ಜತೆಯಲ್ಲಿ ಇರುವಾಗ ಅಪಘಾತವಾಯಿತು. ಅವಳ ಚಿಕಿತ್ಸೆ ನನ್ನ  ಜವಾಬ್ದಾರಿ ಅಲ್ಲವೇ~ ಎಂದು ಮುಗ್ಧನಂತೆ ಕೇಳುತ್ತ ತನ್ನ ನಡವಳಿಕೆಯನ್ನು ಸಮರ್ಥಿಸಿಕೊಂಡ.`ನನ್ನವಳ ಕಾಲನ್ನೇ ವೈದ್ಯರು ಕತ್ತರಿಸಬಹುದು ಎಂಬ ಭಯವಿತ್ತು. ಹಾಗೆ ಮಾಡುವುದು ಬೇಡ ಎಂದು ವಿನಂತಿಸಿಕೊಂಡೆ. ಕೂಡಿಟ್ಟ ಹಣ ಸಕಾಲಕ್ಕೆ ಉಪಯೋಗಕ್ಕೆ ಬಂತು. ನನ್ನ ಗೆಳೆಯರು ಹಣದ  ಸಹಾಯ ಮಾಡಿದರು. ಸ್ವಲ್ಪ ಸಾಲ ಮಾಡಿದೆ. ಅಂತೂ ಅವಳನ್ನು ಉಳಿಸಿಕೊಂಡೆ ಎಂಬ ಸಂತಸ ನನಗಿದೆ~ ಎಂದು ಅವನು ಭಾವುಕನಾಗಿ ಹೇಳುತ್ತಿದ್ದಾಗ ಅವನ ಮುಖದಲ್ಲಿ ಕಪಟತೆ ಕಾಣಿಸಲಿಲ್ಲ. ಈ ಹುಡುಗ ಅವನ ವಯಸ್ಸಿನ ಅನೇಕರಿಗೆ ಆದರ್ಶ ವ್ಯಕ್ತಿಯಾಗಿದ್ದ.ಎಲ್ಲರಿಗಿಂತ ಭಿನ್ನವಾದ ವ್ಯಕ್ತಿತ್ವವನ್ನು ಈ ಹುಡುಗ ಬೆಳೆಸಿಕೊಂಡಿದ್ದ. ಬೇರೆಯವರ ಬದುಕಿನೊಡನೆ ತನ್ನ ಬದುಕನ್ನು ಹೋಲಿಸಿಕೊಳ್ಳಲಿಲ್ಲ. ತನ್ನ ಹುಡುಗಿ ಕಷ್ಟದಲ್ಲಿದ್ದಾಗ ಅವಳಿಗೆ ಜೊತೆಯಾಗಿ ನಿಂತ. ಅವಳ ಪ್ರೀತಿಯನ್ನು ಅನುಭವಿಸಿದ, ಅದರಲ್ಲಿಯೇ ಸುಖ ಕಂಡ.ಇಂದು ಕ್ಷುಲ್ಲಕ ಕಾರಣಗಳಿಗಾಗಿ ಮದುವೆಗಳು ಮುರಿದು ಬೀಳುತ್ತವೆ. ಪ್ರತಿಯೊಬ್ಬರಿಗೂ ತಮ್ಮ  ಪ್ರತಿಷ್ಠೆಯೇ ಮುಖ್ಯವಾಗುತ್ತಿದೆ. ತಮ್ಮ  ತಪ್ಪುಗಳಿಗೆ ಇನ್ನೊಬ್ಬರನ್ನು ಹೊಣೆ ಮಾಡುವವರೇ ಹೆಚ್ಚು.ಸಣ್ಣ ಕಾರಣಗಳಿಗೆ ಸಂಬಂಧಗಳನ್ನು ಕಳೆದುಕೊಳ್ಳಲು ಮುಂದಾಗುವವರೂ ಇದ್ದಾರೆ. ಎಲ್ಲರೂ ಒಪ್ಪಿ ಆದ ಮದುವೆಗಳೂ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾವಿ ಪತ್ನಿಗೆ ಅಪಘಾತವಾದಾಗ ಅವಳ ಚಿಕಿತ್ಸೆ ಕೊಡಿಸಿ ಮುಂದೆ  ಅವಳನ್ನೇ ಮದುವೆಯಾದ ಈ ಹುಡುಗನಂತಹ ಹೃದಯವಂತರು ಎಷ್ಟು ಮಂದಿ ಸಿಗುತ್ತಾರೆ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.