ಶನಿವಾರ, ಫೆಬ್ರವರಿ 27, 2021
28 °C

ಬದುಕಿನ ಶಿಲ್ಪಿಗಳು...

ಪೃಥ್ವಿರಾಜ್ ಎಂ.ಎಚ್. Updated:

ಅಕ್ಷರ ಗಾತ್ರ : | |

ಬದುಕಿನ ಶಿಲ್ಪಿಗಳು...

ಸಚಿನ್‌ ಕಾಟೆ

ಸಚಿನ್‌ ಕಾಟೆ ಆರಂಭಿಸಿದ್ದು ಕಾರುಗಳನ್ನು ಬಾಡಿಗೆ ನೀಡುವ ಕಂಪೆನಿ. ಎಲ್ಲಾ ಮಹಾನಗರಗಳಲ್ಲೂ ಗಲ್ಲಿಗೊಂದರಂತೆ ಕಾರು ಬಾಡಿಗೆ ಕೊಡುವ ಸಣ್ಣ ಪುಟ್ಟ ಕಂಪೆನಿಗಳಿರುತ್ತವೆ. ಇದೇನು ಮಹಾನ್‌ ಸಾಧನೆ ಅಂತ ನಿಮಗೆ ಅನ್ನಿಸಿರಬಹುದು! ಆದರೆ ಶೂನ್ಯ ಬಂಡವಾಳದ ಮೂಲಕ ಸಚಿನ್‌ ಸಾಧಿಸಿದ್ದು ಮಹತ್ತರವಾದದ್ದು. 28ರ ಹರೆಯದ ಆ ಯುವಕನ ಸಾಧನೆಯ ಹಿಂದೆ ಪರಿಶ್ರಮ, ತಾಳ್ಮೆ ಮತ್ತು ಬುದ್ಧಿವಂತಿಕೆ ಇತ್ತು.ಸಚಿನ್‌ ಕಾಟೆ ಹುಟ್ಟಿದ್ದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ. ಮನೆಯಲ್ಲಿ ಬಡತನ. ಮನೆ ಮನೆಗೂ ಪತ್ರಿಕೆ ಹಂಚಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದಾಯಿತು. ಪಿಯುಸಿ ಓದುತ್ತಲೇ ಕಂಪ್ಯೂಟರ್‌ ಕಲಿಕಾ ಕೇಂದ್ರದಲ್ಲಿ ಸಹಾಯಕನ ಕೆಲಸ. ವರ್ಷ ಕಳೆಯುವುದರಲ್ಲೇ ಸಚಿನ್‌ ಆ ಕಲಿಕಾ ಕೇಂದ್ರದ ತರಬೇತುದಾರನಾದರು. ಪಿಯುಸಿ ಬಳಿಕ ವಿಜ್ಞಾನ ಪದವಿಗೆ ಸೇರಿದ ಸಚಿನ್‌ ಆ ಕೆಲಸ ಬಿಟ್ಟು ಟ್ರಾವೆಲ್ಸ್‌ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಸಚಿನ್‌ ಜೀವನದ ದಿಕ್ಕು ಬದಲಾಗಿದ್ದೇ ಈ ಹಂತದಲ್ಲಿ. ಪದವಿ ಪೂರೈಸುವ ವೇಳೆಗೆ ಟ್ರಾವೆಲ್ಸ್‌ ಕಂಪೆನಿ ಕೆಲಸದ ವೈಖರಿಯನ್ನು ತಿಳಿದುಕೊಂಡರು.ಪದವಿ ಮುಗಿದ ಬಳಿಕ ಉನ್ನತ ವ್ಯಾಸಂಗಕ್ಕೆ ಹೋಗದೆ ಸಚಿನ್‌ ತಾನು ಉಳಿದುಕೊಂಡಿದ್ದ ಚಿಕ್ಕ ಕೊಠಡಿಯಲ್ಲಿ ‘ಕ್ಲಿಯರ್‌ ಕಾರ್‌ ರೆಂಟಲ್‌’ (ಸಿಸಿಆರ್‌) ಕಂಪೆನಿ ಆರಂಭಿಸಿದರು. ಕಂಪೆನಿಗೆ ‘ಸ್ಥಿರ ದೂರವಾಣಿಯೇ ಬಂಡವಾಳ. ಒಂದು ನಯಾ ಪೈಸೆಯನ್ನೂ ಸಿಸಿಆರ್‌ಗೆ ತೊಡಗಿಸಿರಲಿಲ್ಲ. ಹೀಗೆ ಸಣ್ಣದಾಗಿ ಆರಂಭವಾದ ಸಿಸಿಆರ್‌ ಇಂದು ದೇಶದ 250 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಟ್ರಾವೆಲ್‌ ಏಜೆನ್ಸಿಯಲ್ಲಿ ಕೆಲಸ ಮಾಡಿದ ಅನುಭವ ಮತ್ತು ಗೆಳೆಯರ ಸಹಕಾರ ಸಚಿನ್‌ ಯಶಸ್ವಿಯಾಗಲು ಮೂಲ ಕಾರಣ. ಗೆಳೆಯರ ನೆರವಿನಿಂದ   ಗ್ರಾಹಕರನ್ನು ಸೇರಿಸುತ್ತಿದ್ದರು. ಬೇರೆ ಕಂಪೆನಿಗಳ ಕಾರುಗಳನ್ನು ಬುಕ್‌ ಮಾಡಿ  ಸೇವೆ ಒದಗಿಸುತ್ತಿದ್ದರು. ಇದಕ್ಕೆ ಖರ್ಚಾಗುತ್ತಿದ್ದದ್ದು ಒಂದು ಫೋನ್‌ ಕರೆ ಮಾತ್ರ. ಮಾಡುವ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡಿದರೆ ಸೋಲು ಕನಸಿನಲ್ಲೂ ಸುಳಿಯುವುದಿಲ್ಲ ಎಂಬುದಕ್ಕೆ ಸಚಿನ್‌ ಸಾಕ್ಷಿ.

www.clearcarrental.com

ಪ್ರಶಾಂತ್‌ ಕುಲಕರ್ಣಿ

ಆ ಯುವಕನಿಗೆ ಪಾನಿಪುರಿ ಅಂದರೆ ಅತೀವ ಪ್ರೀತಿ. ಇನ್ಫೋಸಿಸ್‌ನಲ್ಲಿ ಕೆಲಸ. ಒಮ್ಮೆ ಬೀದಿ ಬದಿಯಲ್ಲಿ ಪಾನಿಪುರಿ ತಿಂದು ಹೊಟ್ಟೆ ಕೆಡಿಸಿಕೊಂಡು 15 ದಿನ ರಜೆ ಹಾಕಿದ್ದರು. ರಜೆಯ ಬಳಿಕ ಆ ಯುವಕ ಮತ್ತೆ ಕಚೇರಿಗೆ ಹೋಗಲಿಲ್ಲ. ಬದಲಾಗಿ ‘ಚಟರ್ ಪಟರ್’ ಎಂಬ ಬ್ರ್ಯಾಂಡೆಡ್‌ ಪಾನಿಪುರಿ ತಯಾರಕ ಕಂಪೆನಿಯನ್ನು ಕಟ್ಟಿದ ಯಶಸ್ವಿ ಕಥೆ ಇದು.ಪ್ರಶಾಂತ್‌ ಕುಲಕರ್ಣಿ ಮಧ್ಯಪ್ರದೇಶದ ಇಂದೋರ್‌ನವರು. ಎಂಬಿಎ ಪದವೀಧರನಾಗಿದ್ದ ಪ್ರಶಾಂತ್‌ಗೆ ಕೈ ತುಂಬಾ ಸಂಬಳ ಬರುವ ಕೆಲಸ. ಬಾಯಿ ಚಪಲಕ್ಕೆ ಬೀದಿ ಬದಿಗಳಲ್ಲಿ ಸಿಗುವ ಪಾನಿಪುರಿ ತಿನ್ನುವ ಖಯಾಲಿ. ಹೊಟ್ಟೆ ಕೆಡಿಸಿಕೊಂಡು ವಿಶ್ರಾಂತಿ ಪಡೆಯುವಾಗ ಹೊಳೆದದ್ದು ‘ಚಟರ್ ಪಟರ್’.ಕೆಲಸ ಬಿಟ್ಟ ಮೇಲೆ ಪ್ರಶಾಂತ್‌ ‘ಗಫ್‌ಗಫ್‌’ ಎಂಬ ರೆಡಿಮೇಡ್‌ ಪಾನಿಪುರಿ ತಿನಿಸನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಆದರೆ ಈ ವ್ಯವಹಾರ ಕೈಹಿಡಿಯಲಿಲ್ಲ. ಜನರಿಗೆ ಆಗತಾನೆ ತಯಾರಿಸಿದ ಬಿಸಿಬಿಸಿ ಪಾನಿಪುರಿ ಬೇಕಾಗಿತ್ತು. ಇದನ್ನು ಅರಿತ ಪ್ರಶಾಂತ್‌ ಇಂದೋರ್‌ನಲ್ಲಿ ‘ಚಟರ್ ಪಟರ್’ ಹೆಸರಿನಲ್ಲಿ ಮೊದಲ ಪಾನಿಪುರಿ ಅಂಗಡಿ ಆರಂಭಿಸಿದರು. ರುಚಿ, ಶುಚಿ ಮತ್ತು ಗುಣಮಟ್ಟದ  ತಿನಿಸನ್ನು ನೀಡಿದ್ದರಿಂದ ಚಟರ್ ಪಟರ್ ಸಹಜವಾಗಿಯೇ ಗ್ರಾಹಕರನ್ನು ಸೆಳೆಯಿತು. ಇಂದು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ರಾಜಸ್ತಾನ, ಕರ್ನಾಟಕದಲ್ಲಿ ಚಟರ್ ಪಟರ್ ಪಾನಿಪುರಿ ಬಾರಿ ಪ್ರಸಿದ್ಧ.150ಕ್ಕೂ ಹೆಚ್ಚು ವಿಧದ ಪಾನಿಪುರಿ ತಿನಿಸುಗಳು ಇಲ್ಲಿ ಲಭ್ಯ. ಭಾರತ ಮಾತ್ರವಲ್ಲದೆ ಏಷ್ಯಾ ಮತ್ತು ಯುರೋಪ್‌ ದೇಶಗಳಲ್ಲೂ ಚಟರ್ ಪಟರ್ ಜನಪ್ರಿಯತೆ ಪಡೆದಿದೆ.  ಪ್ರಸ್ತುತ ವಾರ್ಷಿಕ 15 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. 2018ರ ವೇಳೆಗೆ ಸುಮಾರು 100ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಪ್ರಶಾಂತ್‌.

www.chatarpatar.in

ವರುಣ್‌ ಚಂದ್ರನ್‌

ಅಜ್ಜಿ ಬಂಗಾರದ ಬಳೆಗಳನ್ನು ಕೊಟ್ಟು ಅರಸಿ ಬೆಂಗಳೂರಿಗೆ ಕಳುಹಿಸಿದಾಗ ನನ್ನ ಕಂಗಳು ತುಂಬಿ ಬರಲಿಲ್ಲ! ಬದಲಾಗಿ ಸಾಧಿಸುವ ಛಲ ಮತ್ತು ಹೋರಾಟದ ಕೆಚ್ಚು ಕಣ್ಣುಗಳನ್ನು ಅವರಿಸಿತ್ತು.ನಾನು ವರುಣ್‌ ಚಂದ್ರ. ಕೇರಳದ ಕೊಲ್ಲಂ ಜಿಲ್ಲೆಯ ಪದಂ ನನ್ನ ಹುಟ್ಟೂರು. ಅಪ್ಪ ಬಡ ರೈತ. ಕಷ್ಟದಲ್ಲೇ ನನ್ನನ್ನು ಚೆನ್ನಾಗಿ ಓದಿಸಬೇಕು ಎಂಬುದು ಅವರ ಹಂಬಲವಾಗಿತ್ತು. ಅವರ ಕನಸಿನಂತೆ ನಾನು ಚೆನ್ನಾಗಿಯೇ ಓದುತ್ತಿದ್ದೆ. ಸರ್ಕಾರದ ಶಿಷ್ಯವೇತನ ಪಡೆದು ಕಾಲೇಜಿಗೆ ಸೇರಿದೆ. ನನಗೆ ಫುಟ್‌ಬಾಲ್‌ ಅಂದರೆ ಹೆಚ್ಚು ಪ್ರೀತಿ. ವಿಶ್ವವಿದ್ಯಾಲಯ ಮಟ್ಟದ ಮತ್ತು ಕೇರಳ ರಾಜ್ಯ ಯುವ ಫುಟ್‌ಬಾಲ್‌ ತಂಡದ ಸದಸ್ಯನಾಗಿದ್ದೆ.  ಫುಟ್‌ ಬಾಲ್‌ ಅಭ್ಯಾಸದಲ್ಲಿ ನಿರತನಾಗಿದ್ದಾಗ ಗಾಯಗೊಂಡು ಮನೆಗೆ ಬಂದೆ. ಮನೆಯ ಅರ್ಥಿಕ ಪರಿಸ್ಥಿತಿ ಅಪ್ಪನ ಕನಸಿನ ಶಿಕ್ಷಣ ಮತ್ತು ನನ್ನಾಸೆಯ ಫುಟ್‌ಬಾಲ್ ಆಟವನ್ನೇ ಬಲಿ ಪಡೆಯಿತು.ಬೆಂಗಳೂರಿಗೆ ಬಂದ ಕೂಡಲೇ ಸ್ಪೋಕನ್‌ ಇಂಗ್ಲಿಷ್‌ ತರಗತಿಗೆ ಸೇರಿಕೊಂಡ ಆರು ತಿಂಗಳಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಕಲಿತೆ. ನಂತರ ಇಂಟರ್‌ನೆಟ್‌ ಕೆಫೆಗಳಲ್ಲಿ ಸಾಫ್ಟ್‌ವೇರ್‌ ಡಿಕೋಡಿಂಗ್‌ ಬಗ್ಗೆ ತಿಳಿದುಕೊಂಡೆ. 2008ರಲ್ಲಿ ಸಿಂಗಪುರದಲ್ಲಿನ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಅಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಸ್ವಂತವಾಗಿ ‘ಕಾರ್ಪೊರೇಟ್‌ 360’ ಡಿಕೋಡಿಂಗ್‌ ಸಾಫ್ಟ್‌ವೇರ್‌ ಕಂಪೆನಿ ಆರಂಭಿಸಿದೆ. ಕೇವಲ ನಾಲ್ಕೇ ವರ್ಷಗಳಲ್ಲಿ  ಕಂಪೆನಿ ಅಭೂತಪೂರ್ವವಾಗಿ ಬೆಳೆಯಿತು.ಇಂದು ನಾಲ್ಕು ಖಂಡಗಳಿಗೂ ವ್ಯಾಪಿಸಿರುವ 360 ಕಂಪೆನಿ ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಬೆಂಗಳೂರಿನಲ್ಲಿದ್ದಾಗ ಸಿಎನ್‌ಎನ್‌ ಸುದ್ದಿವಾಹಿನಿಯಲ್ಲಿ ಅಮೆರಿಕದ ಖ್ಯಾತ ನಟಿ ಮತ್ತು ನಿರ್ಮಾಪಕಿ ಜೂಲಿಯಾ ರಾಬರ್ಟ್ಸ್‌ ಅವರ ಸಂದರ್ಶನ ವೀಕ್ಷಿಸಿದ್ದೆ. ಅದರಲ್ಲಿ ‘ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು’ ಎಂದು ಅವರು ಹೇಳಿದ್ದರು. ಈ ಮಾತು ನನ್ನ ಯಶಸ್ಸಿಗೆ ಸ್ಫೂರ್ತಿಯಾಯಿತು.

www.corporate360.us

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.