ಶುಕ್ರವಾರ, ಫೆಬ್ರವರಿ 26, 2021
20 °C

ಬದ್ರಿ ಕ್ಯಾಮೆರಾಕ್ಕೆ ಹೊಸ ಕಣ್ಣು!

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

ಬದ್ರಿ ಕ್ಯಾಮೆರಾಕ್ಕೆ ಹೊಸ ಕಣ್ಣು!

ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಿಲ್ ಫೋಟೊಗ್ರಾಫರ್ ಆಗಿ ಕೆಲಸ ಮಾಡಿದ್ದ ಎಸ್. ಬದ್ರಿನಾಥ್ ಈಗ ಸಿನಿಮಾ ನಿರ್ದೇಶಕ! ಅವರ ಚೊಚ್ಚಿಲ ನಿರ್ದೇಶನದ ಮೊದಲ ಚಿತ್ರ ‘1944’ ಇಂದು ತೆರೆಗೆ ಬರುತ್ತಿದೆ.ಎನ್.ಎಸ್. ರಾವ್ ಬರೆದ ‘ರೊಟ್ಟಿ ಋಣ’ ನಾಟಕವನ್ನು  ಬದ್ರಿನಾಥ್ ತಮ್ಮ ಮೊದಲ ಚಿತ್ರದ ನಿರ್ದೇಶನಕ್ಕೆ ಆಯ್ದುಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಈ ನಾಟಕ ಅನೇಕ ಪ್ರದರ್ಶನಗಳನ್ನು ಕಂಡಿದೆ. ಕಥೆಯಲ್ಲಿರುವ ಗಟ್ಟಿತನವೇ ಈ ನಾಟಕವನ್ನು ಸಿನಿಮಾ ಮಾಡಲು ಮುಖ್ಯವಾದ ಕಾರಣವಂತೆ. ಕಥೆಯಲ್ಲಿ ದೇಶಭಕ್ತಿಯ ಜೊತೆಗೆ ಮಾತೃಭಕ್ತಿಯೂ ಇರುವುದನ್ನು ನಿರ್ದೇಶಕರು ಗುರ್ತಿಸಿದ್ದಾರೆ.ಒಳ್ಳೆಯ ಕಥೆಯ ಜೊತೆಗೆ ಸಿನಿಮಾಪ್ರೀತಿಯ ನಿರ್ಮಾಪಕರೂ ಸಿಕ್ಕ ಸಂಭ್ರಮ ಅವರದು. ‘ಕಾಲ ಎಷ್ಟೇ ಬದಲಾದರೂ ಮನುಷ್ಯನ ಭಾವನೆಗಳು ಬದಲಾಗುವುದಿಲ್ಲ. ಹಸಿವು, ನೋವು, ನಗು, ಚಳಿ ಇದಕ್ಕೆಲ್ಲ ಭಾಷೆ ಇಲ್ಲ. ಹಾಗಾಗಿ ನಾನು ಹಳೆಯದಾದರೂ ಇದೇ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಅವರು.

ಸಿಹಿಕಹಿ ಸಂಕಲನ

ಮೊದಲ ನಿರ್ದೇಶನದ ಅನುಭವದಲ್ಲಿ ಬದ್ರಿನಾಥ್ ಒಂದಷ್ಟು ಸವಾಲುಗಳನ್ನು ಎದುರಿಸಿದ್ದರೂ ಸಮಸ್ಯೆಗಿಂತಲೂ ಹೆಚ್ಚಾಗಿ ಸಂತಸವನ್ನು ಅವರು ಅನುಭವಿಸಿದ್ದಾರೆ. ‘ರೊಟ್ಟಿ ಋಣ’ ಸ್ವಾತಂತ್ರ್ಯ ಪೂರ್ವದ ಕಥೆ. ಹಾಗಾಗಿ ಆ ಕಾಲಘಟ್ಟವನ್ನು ಪರದೆಯ ಮೇಲೆ ತೋರಿಸಲು ಅವರು ಸಾಕಷ್ಟು ಅಧ್ಯಯನ ಮಾಡಬೇಕಿತ್ತು. ಸೂಕ್ತ ಸ್ಥಳಗಳನ್ನು ಹುಡಕಬೇಕಿತ್ತು.ಚಿತ್ರೀಕರಣ ಸ್ಥಳದಲ್ಲಿ ವಿದ್ಯುತ್ ಕಂಬಗಳು, ಟಾರ್ ರಸ್ತೆಗಳು ಇರುವಂತಿಲ್ಲ. ಹಾಗಾಗಿ ಕಾಡಿನ ಅಂಚಿನ ಮನೆಗಳನ್ನೇ ಹುಡುಕಬೇಕಾಯ್ತು. ಆ ಮನೆಗಳಲ್ಲಿ ಸ್ವಿಚ್ ಬೋರ್ಡ್‌ಗಳು ಕಾಣುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ ಆ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತುಗಳನ್ನು ಹೊಂದಿಸಬೇಕಿತ್ತು.‘ನಾಟಕದಲ್ಲಾದರೆ ದೃಶ್ಯಗಳಲ್ಲಿ ಬಳಸುವ ಪ್ರಾಪರ್ಟಿಯ ಮೇಲೆ ಅಷ್ಟೊಂದು ಗಮನ ನೀಡಬೇಕಿಲ್ಲ. ಸಿನಿಮಾದಲ್ಲಿ ಹಾಗಾಗುವುದಿಲ್ಲ. ಪ್ರತಿಯೊಂದು ವಿವರದ ಮೇಲೂ ಸೂಕ್ಷ್ಮವಾಗಿ ಕೆಲಸ ಮಾಡಬೇಕಾಗುತ್ತದೆ’ ಎನ್ನುತ್ತಾರೆ ಅವರು. ಕಥೆ ನಡೆಯುವ ಸಂದರ್ಭದಲ್ಲಿ ಭಾರತದ ಬಾವುಟದ ಸ್ವರೂಪ ಈಗಿನಂತೆ ಇರಲಿಲ್ಲ ಎನ್ನುವಂಥ ಸೂಕ್ಷ್ಮ ಅಂಶದತ್ತಲೂ ಅವರು ಗಮನಹರಿಸಿದ್ದಾರೆ.ಹಿಗ್ಗಿದ ಕಥೆ

‘ರೊಟ್ಟಿ ಋಣ’ ಮೂಲ ನಾಟಕ ಇರುವುದು ಕೇವಲ ನಲವತ್ತು ನಿಮಿಷಗಳ ಕಾಲ. ಅದನ್ನು ಸಿನಿಮಾಕ್ಕಾಗಿ ಒಂದೂ ಮುಕ್ಕಾಲು ಗಂಟೆಗೆ ಹಿಗ್ಗಿಸಲಾಗಿದೆ. ಹೀಗೆ ಹಿಗ್ಗಿಸುವಾಗ ಅನವಶ್ಯಕವಾಗಿ ಏನೇನಾದರೂ ತುರುಕಿದರೆ ಕಥೆಗೆ ಅಪಚಾರ ಮಾಡಿದಂತೆ.ಹಾಗಾಗಿ ಮೂರು ತಿಂಗಳು ಕೂತು ಕಥೆಯನ್ನು ಮತ್ತೆ ಬರೆಯಲಾಗಿದೆ. ಕಥೆಗೆ ಧಕ್ಕೆಯಾಗದಂತೆ ಉಪಕಥೆಗಳನ್ನು ಸೇರಿಸಲು ಮೂರು ನಾಲ್ಕು ಬಾರಿ ತಿದ್ದಿ ಬರೆದಿದ್ದಾರೆ. ಸುಮ್ಮನೇ ಬಂದು ಹೋಗುವ ಪಾತ್ರಗಳಿಗೂ ಸೂಕ್ತ ಹಿನ್ನೆಲೆಯನ್ನು ಕಟ್ಟಿಕೊಡಲಾಗಿದೆ.ಒಬ್ಬ ನಾಯಕಿಯನ್ನು ಮತ್ತು ಒಂದು ದೇಶಭಕ್ತಿ ಗೀತೆಯನ್ನೂ ಕಥೆಯೊಳಗೆ ಸೇರಿಸಿಕೊಳ್ಳಲಾಗಿದೆ. ಬ್ರಿಟಿಷರ ದೌರ್ಜನ್ಯ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ತಾಯಿ ಮಗನ ಸಂಬಂಧದ ಭಾವುಕ ಸನ್ನಿವೇಶಗಳು ನಾಟಕದ ಜೀವಾಳವಂತೆ.ಎನ್.ಎಸ್. ರಾವ್ ಬರೆದಿರುವ ‘ರೊಟ್ಟಿ ಋಣ’ ನಾಟಕವನ್ನು ಬದ್ರಿನಾಥ್‌ ಅವರಿಗೆ ಪರಿಚಯಿಸಿದ್ದು ಮತ್ತೊಬ್ಬ ನಿರ್ದೇಶಕ ಎ.ಆರ್. ಬಾಬು. ಅಂದಹಾಗೆ, ಬಾಬು ಅವರೇ ಈ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ ಅವರಿಗೆ ಅನಾರೋಗ್ಯವಿದ್ದ ಕಾರಣ ಆ ಅವಕಾಶ ಬದ್ರಿ ಅವರಿಗೆ ಸಿಕ್ಕಿತು.ಬದ್ರಿನಾಥ್ ಮಂಡ್ಯದವರು. ನಾಟಕ ಇರುವುದು ಉತ್ತರ ಕರ್ನಾಟಕದ ಭಾಷೆಯಲ್ಲಿ. ಹಾಗಾಗಿ ಉತ್ತರ ಕರ್ನಾಟಕದ ನಾಟಕಕಾರ ವೀರೇಶ್ ಬೆಳಗಾಂಪೇಟೆ ಎನ್ನುವವರಿಂದ ಸಂಭಾಷಣೆ ಬರೆಸಿದ್ದಾರೆ.ಛಾಯಾಗ್ರಹಣದಿಂದ ನಿರ್ದೇಶಕನಾಗಿ ಬದಲಾಗುವಲ್ಲಿನ ಬದಲಾವಣೆಯನ್ನು ಗುರ್ತಿಸುವ ಬದ್ರಿ ಅವರು, ‘ಆರ್ಥಿಕವಾಗಿ ಸ್ವಲ್ಪ ಕಷ್ಟವಾಗುತ್ತದೆ’ ಎನ್ನುತ್ತಾರೆ. ಛಾಯಾಗ್ರಾಹಕನಾಗಿ ಒಂದು ನಿಗದಿತ ಆದಾಯ ಇರುತ್ತದೆ.ಆದರೆ ನಿರ್ದೇಶಕನಾಗಿ, ಸಿನಿಮಾ ಬಿಡುಗಡೆ ಆಗುವುದು ತಡವಾದರೆ ಇಲ್ಲೂ ಇಲ್ಲ, ಅಲ್ಲೂ ಇಲ್ಲ ಎಂಬ ಪರಿಸ್ಥಿತಿ ಉಂಟಾಗುತ್ತದೆ ಎಂಬ ಅನುಭವ ಅವರದ್ದು. ಏನಿದ್ದರೂ ವೃತ್ತಿ ಬದುಕಿನಲ್ಲಿ ಕೊಂಚ ಮೇಲೆ ಬಂದಿದ್ದೇನೆ ಎಂಬ ಸಮಾಧಾನ ಅವರಿಗಿದೆ.ನಿರ್ದೇಶನದ ಕಲಿಕೆ

ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಸುನೀಲ್‌ಕುಮಾರ್ ದೇಸಾಯಿ, ಉಪೇಂದ್ರ, ಓಂಪ್ರಕಾಶ್ ರಾವ್ ಹೀಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರಿಗೆ ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಬದ್ರಿನಾಥ್ ಅವರ ಮನಸಿನಲ್ಲಿ ಯಾರಾದರೂ ನಿರ್ಮಾಪಕರು ಸಿಕ್ಕರೆ ಒಂದು ಸಿನಿಮಾ ನಿರ್ದೇಶಿಸಬೇಕು ಎಂಬ ಹಂಬಲ ಮೊದಲಿನಿಂದಲೂ ಇತ್ತು.ಹಾಗಂತ ಅನುಭವವೇ ಇಲ್ಲದೇ ನಿರ್ದೇಶನಕ್ಕೆ ಮುಂದಾಗಿ ತನ್ನನ್ನೇ ನಂಬಿ ಹಣ ಹೂಡುವ ನಿರ್ಮಾಪಕನನ್ನು ಇಕ್ಕಟ್ಟಿಗೆ ಸಿಕ್ಕಿಸುವಂತಾಗಬಾರದು ಎಂಬ ಎಚ್ಚರವೂ ಇತ್ತು. ಹಾಗಾಗಿ ಅವರು ಛಾಯಾಗ್ರಹಣದೊಂದಿಗೆ ನಿರ್ದೇಶನದ ಪಾಠಗಳನ್ನೂ ಕಲಿಯುತ್ತ ಬಂದರು.ಛಾಯಾಗ್ರಹಣದ ಕೆಲಸ ಮುಗಿಯುತ್ತಿದ್ದಂತೆಯೇ ಪಕ್ಕದಲ್ಲೇ ನಿಂತು ಚಿತ್ರೀಕರಣವನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸವನ್ನು ಬೆಳೆಸಿಕೊಂಡರು. ಹೇಗೆ ಮಾಡಿದರೆ ದೃಶ್ಯವೊಂದು ಚೆನ್ನಾಗಿ ಮೂಡುತ್ತದೆ, ಈ ದೃಶ್ಯವನ್ನು ಹೇಗೆ ನಿರ್ದೇಶನ ಮಾಡಬಹುದು ಎಂದು ಪರ್ಯಾಯ ಚಿಂತನೆಗಳನ್ನು ತಮ್ಮೊಳಗೇ ಮಾಡಿಕೊಳ್ಳುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.