ಭಾನುವಾರ, ಜೂನ್ 13, 2021
21 °C

ಬನ್ನಿಕಟ್ಟಿ: ನೀರಿಲ್ಲದೇ ಖಾಲಿ ತೊಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಬೇಸಗೆ ಪೂರ್ತಿ ಆವರಿಸುವ ಮುನ್ನವೇ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ನಗರಸಭೆ ಲೆಕ್ಕಾಚಾರದ ಪ್ರಕಾರ ವಿವಿಧ ವಾರ್ಡ್‌ಗಳಿಗೆ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಬೇಕು. ಆದರೆ, ವಾರಕ್ಕೊಮ್ಮೆ ಬಂದರೆ ಅದೇ ಹೆಚ್ಚು ಎಂದು ನಾಗರಿಕರು ನಿಟ್ಟುಸಿರು ಬಿಡುತ್ತಿದ್ದಾರೆ.ನಗರಕ್ಕೆ 24 ಗಂಟೆಯೂ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ದೊರಕಿ ವರ್ಷ ಸಮೀಪಿಸುತ್ತಾ ಬಂದರೂ ಇನ್ನೂ ಅದು ಸಮರ್ಪಕವಾಗಿ ಜಾರಿಯಾಗಿಲ್ಲ.ನಗರದ ಬನ್ನಿಕಟ್ಟಿ ಪ್ರದೇಶದ ಕಥೆಯೂ ಭಿನ್ನವಾಗಿಲ್ಲ. ಇಲ್ಲಿ ನೀರು ಸರಬರಾಜು ವ್ಯವಸ್ಥೆಯ ದೋಷದಿಂದ ಕೆಲವೆಡೆ ನಾಲ್ಕು ದಿನಗಳಿಗೊಮ್ಮೆ ಹಲವು ಬೀದಿಗಳಿಗೆ 8 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಒಮ್ಮೆ ತೊಟ್ಟಿ ತುಂಬಿಸಿಟ್ಟರೆ ಕೆಲವು ದಿನ ಕಳೆಯಬಹುದು. ಆದರೆ, ತೊಟ್ಟಿ ಇಲ್ಲದ ಬಡವರೇನು ಮಾಡಬೇಕು ಎಂಬುದು ಇಲ್ಲಿನವರ ಪ್ರಶ್ನೆ.ಬನ್ನಿಕಟ್ಟಿ, ಇಂದ್ರಕೀಲ ನಗರ, ಗಾಂಧಿನಗರ, ಗೊಂದಲಿಗರ ಕೇರಿ, ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದವರೆಗೆ ಇದೇ ಸಮಸ್ಯೆಯಿದೆ.ಬನ್ನಿಕಟ್ಟಿ ಅತ್ತ ಮಧ್ಯಮ ವರ್ಗದವರದ್ದೂ ಅಲ್ಲದ, ಇತ್ತ ಕೊಳೆಗೇರಿಯೂ ಅಲ್ಲದ ಪ್ರದೇಶ. ಗುಡಿಸಲು, ಜೋಪಡಿಗಳಂಥ ಮನೆಗಳಲ್ಲಿ ವಾಸಿಸುವ ಸಾವಿರಾರು ಮಂದಿ ಇಲ್ಲಿದ್ದಾರೆ. ಕೂಲಿ ಮಾಡಿ ಬದುಕುವ ಅವರಿಗೆ ನಗರಸಭೆಯ ನೀರು ಅವೇಳೆಯಲ್ಲಿ ಬಂದರೆ ಹಿಡಿಯುವುದೆಂತು? ಎಂಬುದು ಇಲ್ಲಿನ ನಿವಾಸಿ ಮಂಜುಳಮ್ಮ ಅವರ ಪ್ರಶ್ನೆ.ಬನ್ನಿಕಟ್ಟಿ ಹಿಂಭಾಗದ ಗುಡ್ಡದ ಮೇಲೆ ಇಲ್ಲಿನ ಆರು ವಾರ್ಡ್‌ಗಳಿಗೆ ನೀರು ಪೂರೈಸುವ 15 ಸಾವಿರ ಲೀಟರ್‌ ಸಾಮರ್ಥ್ಯದ ಸಂಗ್ರಹ ತೊಟ್ಟಿಯಿದೆ. ಮುಖ್ಯ ಪೈಪ್‌ಲೈನ್‌ ಇಲ್ಲಿಂದಲೇ ಸಾಗುತ್ತದೆ. ಹಾಗಿದ್ದರೂ ಇಲ್ಲಿನವರಿಗೇ ನೀರು ಇಲ್ಲ ಎನ್ನುತ್ತಾರೆ ಈ ಪ್ರದೇಶದ ನಿವಾಸಿ ಸುರೇಶ.ಈ ಪ್ರದೇಶದಲ್ಲಿ ಒಂದೆರಡು ಕೈಪಂಪ್‌ ಅಳವಡಿಸಿದ ಕೊಳವೆ ಬಾವಿಗಳಿವೆ. ಅದನ್ನು ಜಗ್ಗಾಡಿದರೆ ಒಂದಿಷ್ಟು ನೀರು ಬರುತ್ತದೆ. ಅದೂ ಶುದ್ಧ ಎಂಬ ಖಾತ್ರಿಯಿಲ್ಲ. ಬೆಟ್ಟದ ಬಂಡೆಯ ಆಸರೆಯಲ್ಲೇ ಮನೆ ಕಟ್ಟಿಕೊಂಡಿರುವ ಬಡ, ಹಿಂದುಳಿದ ವರ್ಗದ ಮಂದಿ ಇದನ್ನೇ ನಂಬಿಕೊಂಡಿದ್ದಾರೆ. ನಗರಸಭೆ ಆಡಳಿತ  ಪ್ರಗತಿಯನ್ನು ಕೇವಲ ಅಂಕಿ ಅಂಶಗಳಲ್ಲಷ್ಟೇ ತೋರಿಸಿ ಕೈತೊಳೆದುಕೊಳ್ಳುತ್ತಿದೆ ಎಂಬುದು ನಾಗರಿಕರ ಆರೋಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.