ಮಂಗಳವಾರ, ಏಪ್ರಿಲ್ 13, 2021
32 °C

ಬರಡು ನೆಲದಲ್ಲಿ ಬಂಪರ್ ಬಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಾಡಾಗಿದ್ದ ಭೂಮಿಯಲ್ಲೂ ಕೃಷಿ ಮಾಡಿ ಯಶಸ್ವಿಯಾಗಬಹುದು ಎನ್ನುವುದಕ್ಕೆ ರೈತರೊಬ್ಬರ ಯಶೋಗಾಥೆ ಇಲ್ಲಿದೆ.ಸತತ 34 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಟಿ. ಚಿದಾನಂದರೆಡ್ಡಿ(63) ಅವರಿಗೆ, ಮುಂದೇನು ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದಾಗ ಕೈಬೀಸಿ ಕರೆದದ್ದು ಕೃಷಿ.ಚಿತ್ರದುರ್ಗ ತಾಲ್ಲೂಕಿನ ಕುರುಮರಡಿಕೆರೆಯಲ್ಲಿ ಪಾಳು ಬಿದ್ದ, ಗುಂಡಿಗಳು ಹಾಗೂ ಕೊರಕಲುಗಳಿಂದ ಕೂಡಿದ್ದ 3 ಎಕರೆ 27 ಗುಂಟೆ ಜಮೀನನ್ನು ಖರೀದಿಸಿದ ಚಿದಾನಂದ ರೆಡ್ಡಿ ಅವರು, ಅಲ್ಲಿ, ಇಲ್ಲಿ ನೋಡಿದ್ದ ಅನುಭವದ ಆಧಾರದ ಮೇಲೆಯೇ ಸ್ವತಃ ಕೃಷಿಯನ್ನು ಕೈಗೆತ್ತಿಕೊಂಡರು. ಬೆಂಗಾಡು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಲು ಹಗಲಿರುಳು ಶ್ರಮಿಸಿದರು.ಮೊದಲು ಭೂಮಿಯನ್ನು ಸಮತಟ್ಟು ಮಾಡಿಸಿ, ಕೆಂಪುಮಣ್ಣಿನ ಭೂಮಿಗೆ ಸುಮಾರು 10 ಲೋಡ್ ಕಪ್ಪುಮಣ್ಣು ಮತ್ತು 5 ಲೋಡ್ ಕೊಟ್ಟಿಗೆ ಗೊಬ್ಬರ ಹಾಕಿದರು. ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಿ ಹನಿ ನೀರಾವರಿ ಪದ್ಧತಿ ಅಳವಡಿಸಿದರು.ನಂತರ ಸುಮಾರು ಒಂದೂವರೆ ಎಕರೆಯಲ್ಲಿ ‘ಪಚ್ಚ ಬಾಳೆ’ ಬೆಳೆಯಲು ಆರಂಭಿಸಿದರು. ಸ್ನೇಹಿತರ ಮಾರ್ಗದರ್ಶನವೂ ಇದಕ್ಕೆ ಸಾಥ್ ದೊರೆಯಿತು. ಮೊದಲನೇ ಸಲ 800 ಗೊನೆಗಳ ಫಲ ದೊರೆಯಿತು. 1 ಗೊನೆಯಲ್ಲೇ ಸುಮಾರು 200 ಹಣ್ಣುಗಳಿದ್ದು, 40ರಿಂದ 50 ಕೆಜಿ ತೂಕದ ಫಸಲು ದೊರೆಯಿತು. ದಾಖಲೆಯ ಪ್ರಮಾಣದಲ್ಲಿ ಬಾಳೆ ಇಳುವರಿ ದೊರೆತಿರುವುದು ಚಿದಾನಂದರೆಡ್ಡಿ ಅವರಿಗೆ ಸಂತಸ ಮೂಡಿಸಿದೆ. ಪರಿಶ್ರಮಪಟ್ಟು ದುಡಿದರೆ ನಿರೀಕ್ಷೆಗೂ ಮೀರಿ ಫಲ ದೊರೆಯುತ್ತದೆ ಎನ್ನುವ ನಂಬಿಕೆ ಅವರದ್ದು.‘ಮೊದಲ ಬಾರಿ ಬಾಳೆ ಬೆಳೆಗೆ 39 ಸಾವಿರ ರೂ ಖರ್ಚಿಗೆ 96 ಸಾವಿರ ಆದಾಯ ದೊರೆಯಿತು. ಎರಡನೇ ಬೆಳೆಗೆ 2.5 ಲಕ್ಷ ಆದಾಯ ದೊರೆಯುವ ನಿರೀಕ್ಷೆಯಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಬಗ್ಗೆ ಗಮನವನ್ನೇ ನೀಡಲಿಲ್ಲ. ನಾಲ್ಕಾರು ಸಾಲುಗಳಿಗೆ ಮಾತ್ರ ಪೊಟ್ಯಾಷ್ ಹಾಕಿದ್ದೆ. ಪೊಲೀಸ್ ಇಲಾಖೆಯಲ್ಲಿದ್ದಾಗ ಕೃಷಿ ಚಟುವಟಿಕೆಗಳ ಬಗ್ಗೆ ಯಾವುದೇ ರೀತಿ ಅನುಭವ ಇರಲಿಲ್ಲ. ಇದೆಲ್ಲವೂ ಹೊಸತನ’ ಎಂದು ಚಿದಾನಂದರೆಡ್ಡಿ ಕೃಷಿಯಲ್ಲಿನ ಅನುಭಗಳನ್ನು ಹಂಚಿಕೊಳ್ಳುತ್ತಾರೆ.ಜಮೀನಿನಲ್ಲಿ ಬಾಳೆ ಜತೆ ಈರುಳ್ಳಿ, ಅಡಿಕೆಯನ್ನು ಸಹ ಬೆಳೆಯುತ್ತಿದ್ದಾರೆ. ಮಿಶ್ರ ಬೆಳೆಗಳ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ‘ಕೃಷಿ ಲಾಭದಾಯಕ ಎನ್ನುವುದು ನನ್ನ ನಂಬಿಕೆ. ಅಲ್ಪ ಬಂಡವಾಳ, ಪರಿಶ್ರಮ ಮತ್ತು ಆಸಕ್ತಿ ಮುಖ್ಯ’ ಎನ್ನುತ್ತಾರೆ ಚಿದಾನಂದರೆಡ್ಡಿ. ಹಾನಿಯಿಂದ ತತ್ತರಿಸಿ ಕೃಷಿಯಿಂದ ವಿಮುಖರಾಗುತ್ತಿರುವ ಈ ದಿನಗಳಲ್ಲಿ ಚಿದಾನಂದ ರೆಡ್ಡಿ ಅವರು ಕೃಷಿಯೂ ಲಾಭದಾಯಕವಾಗಬಲ್ಲದು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಜತೆಗೆ ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಮಾರ್ಗದರ್ಶಕರಾಗುತ್ತಿದ್ದಾರೆ.  ಚಿದಾನಂದರೆಡ್ಡಿ ಅವರ ಮೊಬೈಲ್: 9448422872

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.