ಭಾನುವಾರ, ಏಪ್ರಿಲ್ 18, 2021
23 °C

ಬರದ ಜಿಲ್ಲೆ ಘೋಷಣೆಗೆ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಶಿವಮೊಗ್ಗವನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಎಸ್. ಈಶ್ವರಪ್ಪ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ಜಿಲ್ಲೆಯಲ್ಲಿನ ಮಳೆ- ಬೆಳೆ ಪ್ರಗತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದರೆ ಶೇಕಡಾ 100ರಷ್ಟು ಬರ ಪರಿಸ್ಥಿತಿ ಇದೆ. ಆದರೆ, ಸರ್ಕಾರದ ನಿಯಮಾವಳಿ ಪ್ರಕಾರ ಬರಪೀಡಿತ ಜಿಲ್ಲೆ ಎಂದು ಘೋಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಶೀಘ್ರ ಕ್ರಮ ಅನುಸರಿಸಬೇಕು ಎಂದರು.ಶಿವಮೊಗ್ಗ ಮಲೆನಾಡು ಪ್ರದೇಶ ಆಗಿರುವುದರಿಂದ ಬೇರೆ ಜಿಲ್ಲೆಗೆ ಅನುಸರಿಸುವ ಮಾನದಂಡದ ಬಗ್ಗೆ ಅನುಕರಣೆ ಬೇಡ. ಜಿಲ್ಲೆಯಲ್ಲಿ ಗಂಭೀರ ಸ್ಥಿತಿಗಳು ಇದ್ದು, ಬರ ರೂಪ ನೀಡಲು ಅನುಸರಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳು ತುರ್ತು ಚಿಂತನೆ ನಡೆಸುವಂತೆ ಈಶ್ವರಪ್ಪ ಸೂಚಿಸಿದರು.ತುಂಗಾನದಿ ಎಂದೂ ಬರಿದಾದ ಉದಾಹರಣೆ ಇಲ್ಲ. ಆದರೆ, ಇದೀಗ ತೀರಾ ಆತಂಕ ಸ್ಥಿತಿ ಇದೆ. ಶಿವಮೊಗ್ಗ ಬರಪೀಡಿತ ಜಿಲ್ಲೆಯಾಗಿ ಘೋಷಣೆ ಆಗದಿದ್ದರೆ ರೈತರಿಗೆ ಅನ್ಯಾಯವಾದಂತಾಗುತ್ತದೆ ಎಂದರು.ಭದ್ರಾ ಜಲಾಶಯದ ಅಚ್ಚುಕಟ್ಟುದಾರರ ಜಮೀನುಗಳಿಗೆ ನೀರು ನೀಡುವ ದೃಷ್ಟಿಯಿಂದ ನೀರು ಬಿಡುಗಡೆ ಮಾಡಬೇಕಿದೆ. ನೀರು ಶೇಖರಣೆ ಮಟ್ಟ ಹಾಗೂ ಸಂಗ್ರಹಣೆ ನಿಯಮವನ್ನು ವಿಶೇಷ ಪರಿಸ್ಥಿತಿಗಾಗಿ ಸಡಿಲಿಸಿ, ಅನುಕೂಲ ಮಾಡಬೇಕಿದೆ ಎಂದು ತಿಳಿಸಿದರು.ನಿಧಿ ಬಳಕೆಗೆ ಸೂಚನೆ

ಬರ ಪರಿಸ್ಥಿತಿ ಎದುರಾಗಿರುವುದರಿಂದ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಬರಪರಿಹಾರ ನಿಧಿಯ ಹಣವನ್ನು ಕೂಡಲೇ ಬಿಡುಗಡೆ ಮಾಡಿ ವಿಶೇಷ ಸಂದರ್ಭವಾದ್ದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸದ್ಭಳಕೆ ಮಾಡಿಕೊಳ್ಳುವಂತೆ ಉಪಮುಖ್ಯಮಂತ್ರಿ ಈಶ್ವರಪ್ಪ ಸೂಚಿಸಿದರು.ಅಲ್ಲದೇ, ಕುಡಿಯುವ ನೀರಿನ ಯೋಜನೆಗಳಿಗಾಗಿ ವಿದ್ಯುತ್ ಸಂಪರ್ಕದ ಸಮಸ್ಯೆ ಇದ್ದರೆ ಕೂಡಲೇ ಬಗೆಹರಿಸಬೇಕು ಎಂದರು.   ವಿಸ್ತರಣೆಗೆ ಕ್ರಮ: ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಅವರು ನೀಡಿದ ಮನವಿಗೆ ಸ್ಪಂದಿಸಿದ ಈಶ್ವರಪ್ಪ ಅವರು, ಸಾಲಗಾರ ರೈತರಿಗೆ ಬೆಳೆ ವಿಮೆ ಪಾವತಿಸಲು ಜುಲೈ 20 ಕಡೆಯ ದಿನವಾಗಿದ್ದು, ಅದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಾಲಗಾರ ಅಲ್ಲದ ರೈತ ಬೆಳೆವಿಮೆ ಕಟ್ಟಲು ಜೂನ್ 30 ಕೊನೆಯ ದಿನಾಂಕವಾಗಿದ್ದು, ಬಹುತೇಕ ರೈತರು ವಿಮೆ ಸೌಲಭ್ಯ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.10 ದಿನದ ಒಳಗೆ ವರದಿ

 ಶಿವಮೊಗ್ಗ ಜಿಲ್ಲೆಯಲ್ಲಿ ಬರಪರಿಸ್ಥಿತಿ ಉದ್ಭವಿಸಿದ್ದು, ಬರ ಪೀಡಿತ ಜಿಲ್ಲೆ ಘೋಷಣೆ ಸಂಬಂಧ ವಸ್ತುಸ್ಥಿತಿ ವರದಿಯನ್ನು 10 ದಿನಗಳ ಒಳಗಾಗಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ತಿಳಿಸಿದರು.

ಅಲ್ಲದೇ, ಮಳೆ ಅಭಾವದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳ ಬಿತ್ತನೆ ಸಂಬಂಧ ರೈತರಿಗೆ ಮಾಹಿತಿ ನೀಡುವುದು ಹಾಗೂ ಈ ಕುರಿತು ಪೂರ್ವ ತಯಾರಿ ಮಾಡಿಕೊಂಡಿರುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್‌ಗುಪ್ತ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.