ಶನಿವಾರ, ಮೇ 15, 2021
25 °C

ಬರಿದಾದ `ಜರಡಿ'

-ಕೊಂಡ್ಲಹಳ್ಳಿ ಟಿ.ರಾಮಚಂದ್ರಪ್ಪ . Updated:

ಅಕ್ಷರ ಗಾತ್ರ : | |

ಬರಿದಾದ `ಜರಡಿ'

ಗ ಎಲ್ಲವೂ ರೆಡಿಮೇಡ್. ಸಿದ್ಧವಸ್ತ್ರಗಳಂತೆ ಈಗ ಸಿದ್ಧ ಆಹಾರಗಳೂ ಸುಲಭದಲ್ಲಿ (ಬೆಲೆ ಹೆಚ್ಚಾದರೂ!) ಕೈಗೆಟುಕುತ್ತವೆ. ಗೃಹ ಬಳಕೆಯ ವಸ್ತುಗಳಲ್ಲಿ ಹಲವಾರು ನವೀನ ಶೈಲಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಎಲ್ಲವೂ ಯಾಂತ್ರೀಕರಣ. ಇದರಿಂದ ಕೈಯಲ್ಲಿ ವಸ್ತು ಸಿದ್ಧಪಡಿಸುವವರ ಬದುಕು ಮಾತ್ರ ದುಸ್ತರ.ಇಂಥದ್ದೇ ಪರಿಸ್ಥಿತಿ ಈಗ `ಜರಡಿ'ಯದ್ದು. ಜರಡಿ ಎಂದರೆ ಎಷ್ಟು ಮಂದಿಗೆ ತಾನೇ ಗೊತ್ತು? ಧಾನ್ಯಗಳನ್ನು ಹಸನು ಮಾಡಲು ಬಳಸುವ ಜರಡಿಗೂ ಈಗ ಆಧುನಿಕ ಸ್ಪರ್ಶ. ಯಂತ್ರಗಳಿಂದ ಶುದ್ಧವಾಗಿ ಬರುವ ಕಾಳು-ಕಡಿ ಈಗ ಮಾರುಕಟ್ಟೆಯಲ್ಲಿ ಲಭ್ಯ. ಇದರಿಂದ ಜರಡಿ ಮಾಡುವುದನ್ನೇ ನಂಬಿ ಬದುಕುತ್ತಿರುವವರ ಬದುಕು ಮೂರಾಬಟ್ಟೆ. ಇಂಥವರಲ್ಲಿ ಒಬ್ಬರು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿಯ ಗೊಲ್ಲರ ಸಮುದಾಯದ ರಾಮಾಂಜನೆಯಪ್ಪ.ನಾಲ್ಕು ಮಕ್ಕಳ ಅಪ್ಪ ಇವರು. ಎಂಟು ಸದಸ್ಯರ ತುಂಬು ಕುಟುಂಬ. ಹಳ್ಳಿ-ಹಳ್ಳಿಗಳಲ್ಲಿ ಬೀದಿ ಬೀದಿಗಳಲ್ಲಿ ಸುತ್ತಿ ವ್ಯಾಪಾರ ಮಾಡಿದರೇನೇ ಇವರ ಸಂಸಾರ ಸಾಗುವುದು. ಜನರು ಕೊಡುವ ತಗಡಿನ ಡಬ್ಬಗಳಿಂದ ಈ ಜರಡಿಯನ್ನು ತಯಾರಿಸಿ ಅದಕ್ಕೆ ಕೂಲಿ ಪಡೆಯುವುದು ಇವರ ಕೆಲಸ. ಕೊಡಲು ಡಬ್ಬಿ ಇಲ್ಲದವರು ಇವರು ರೆಡಿಮಾಡಿ ಇಟ್ಟುಕೊಂಡ ಜರಡಿ ಒಯ್ಯುತ್ತಾರೆ. ಇದರಿಂದ ಸಿಗುವ ಮೂರ‌್ನಾಲ್ಕು ಕಾಸಿನಿಂದಲೇ ಈ ಅಪ್ಪನ ಸಂಸಾರ ಸಾಗಬೇಕು.`ಇಲ್ಲಿಯವರೆಗೆ ಇರಲು ಸರಿಯಾದ ಸೂರು ಇಲ್ಲದಿದ್ದರೂ ಸಂಸಾರ ಹಾಗೂ ಹೀಗೂ ಸಾಗುತ್ತಿತ್ತು. ಆದರೆ ಈಗ ಹಳ್ಳಿ-ಹಳ್ಳಿಗಳ ಸುತ್ತಿದರೂ ಜರಡಿ ಮಾರಾಟ ಆಗುವುದೇ ಇಲ್ಲ. ವಾರಕ್ಕೆ 300 ರೂಪಾಯಿ ಸಿಕ್ಕರೇ ಅದೇ ಸ್ವರ್ಗ. ಸುತ್ತಲಿನ ಊರುಗಳಲ್ಲಿ ನಡೆಯುವ ವಾರದ ಸಂತೆಗಳಿಗೆ ಹೋದರೂ ಕಾಸು ದಕ್ಕುವುದಿಲ್ಲ. ಈಗ ಎಲ್ಲೆಲ್ಲೂ ಸ್ಟೀಲ್ ಜರಡಿ ಬಂದಿದ್ದರೆ, ದೊಡ್ಡ ದೊಡ್ಡ ಅಂಗಡಿಗಳಲ್ಲಿ ಶುಚಿಗೊಳಿಸಿದ ಧಾನ್ಯ ಸಿಗುತ್ತದೆ. ಇದರಿಂದ ನಮ್ಮನ್ನು ಕೇಳುವವರೇ ಇಲ್ಲ' ಎನ್ನುತ್ತಾರೆ ರಾಮಾಂಜನೆಯಪ್ಪ.ಗೊಲ್ಲರ ಸಮುದಾಯದ ಕುಲಕಸುಬು ಇದು. ಈ ಕೆಲಸ ಬಿಟ್ಟು ಇವರಿಗೆ ಬೇರೆ ಏನು ಕೆಲಸವೂ ಬಾರದು. ತುತ್ತು ಅನ್ನಕ್ಕಾಗಿ ಪರದಾಡುವ ಇವರ ಮಕ್ಕಳಿಗೆ ಶಾಲೆ, ಶಿಕ್ಷಣ ಮರೀಚಿಕೆ. ಜನಪ್ರತಿನಿಧಿಗಳು, ಸರ್ಕಾರ ತಮ್ಮತ್ತ ಸ್ವಲ್ಪ ಗಮನ ಹರಿಸಿದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬಹುದು ಎನ್ನುವ ಆಸೆ ರಾಮಾಂಜನೆಯಪ್ಪನವರಂಥ ಹಲ ಅಪ್ಪಂದಿರಿಗೆ.

-ಕೊಂಡ್ಲಹಳ್ಳಿ ಟಿ.ರಾಮಚಂದ್ರಪ್ಪ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.