ಭಾನುವಾರ, ಮೇ 16, 2021
23 °C

ಬರ ಅಧ್ಯಯನ: ಕಾಟಾಚಾರದ ಸಿಎಂ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಗಲಿಬಿಲಿ, ಸಾರ್ವಜನಿಕರ ನೂಕುನುಗ್ಗಲು ನಡುವೆ ಜಿಲ್ಲೆಯ ಬರಪರಿಸ್ಥಿತಿಯನ್ನು ಕಾಟಾಚಾರಕ್ಕೆ ಎನ್ನುವಂತೆ ಭಾನುವಾರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪರಿಶೀಲಿಸುವ ಪ್ರಯತ್ನ ಮಾಡಿದರು.ಜಿಲ್ಲೆಯ ಹಿರಿಯೂರಿಗೆ ಸಂಜೆ 4ಕ್ಕೆ ಹೆಲಿಕಾಪ್ಟರ್‌ನಲ್ಲಿ ಬೆಳಗಾವಿಯಿಂದ ಆಗಮಿಸಿದ ಅವರು,  ಎರಡು ಗೋಶಾಲೆಗೆ ಅವಸರದಲ್ಲಿ ಭೇಟಿ ನೀಡಿ, ಹರಿಯಬ್ಬೆ ಗ್ರಾ.ಪಂ. ಆವರಣದಲ್ಲಿ ಬರಪರಿಸ್ಥಿತಿ ಕುರಿತು ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಿ 5.15ಕ್ಕೆ ಅಲ್ಲಿಂದಲೇ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದರು.

ಮೊದಲು ಹಿರಿಯೂರು ಪಟ್ಟಣ ಎಪಿಎಂಸಿ ಆವರಣದಲ್ಲಿ ಗೋಶಾಲೆಗೆ ಭೇಟಿ ನೀಡಿದರು.ನಂತರ ಮುಖ್ಯಮಂತ್ರಿಗಳ ದಂಡು ಹರಿಯಬ್ಬೆಯತ್ತ ಪ್ರಯಾಣ ಬೆಳೆಸಿತು. ಮಾರ್ಗದಲ್ಲಿ ಟಿ. ಗೊಲ್ಲಹಳ್ಳಿಯ ಗೋಶಾಲೆ ಮತ್ತು ತೋಪಿನಗೊಲ್ಲಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಂಗುಸುವಳ್ಳಿಯಲ್ಲಿ ದಾರಿ ಪಕ್ಕದಲ್ಲಿದ್ದ ಕಿರು ನೀರು ಸರಬರಾಜು ಯೋಜನೆಗೂ ಚಾಲನೆ ನೀಡಿ ಸಮಯ ವ್ಯರ್ಥ ಮಾಡಿದರು. ಇದಕ್ಕೂ ಮುನ್ನ ಅಬ್ಬಿನಹೊಳೆ ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ನೀಡಿದಾಗ ಅಧಿಕಾರಿಗಳು ತಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಗಳ ಸುರಿಮಳೆಗೈದರು.ನಂತರ ಹರಿಯಬ್ಬೆ ಗ್ರಾ.ಪಂ. ಕಚೇರಿ ಆವರಣದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸದಾನಂದಗೌಡ ಅವರು, ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಪ್ರತಿ 15 ದಿನಕ್ಕೊಮ್ಮೆ ಕಾರ್ಯಪಡೆ ಸಭೆ ಮಾಡಬೇಕು. ಮೇವಿನ ಕೊರತೆ ನೀಗಿಸಲು ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಿಂದ ಪೂರೈಸಲು ಕ್ರಮಕೈಗೊಳ್ಳಲಾಗುವುದು. ಇನ್ನೂ ಕುಡಿಯುವ ನೀರಿನ ಕೊರತೆ ನೀಗಿಸಲು ಹಳೇ ಕೊಳವೆಬಾವಿಗಳಿಗೆ ಪುನಶ್ಚೇತನ ನೀಡಬೇಕು. ಬರಪರಿಸ್ಥಿತಿ ನೀಗಿಸಲು ಪ್ರತಿ ತಾಲ್ಲೂಕಿಗೆ ರೂ 30 ಲಕ್ಷ ನೀಡಲಾಗಿದ್ದು, ರಾಜ್ಯಕ್ಕೆ ರೂ 49 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.ವಿದ್ಯುತ್ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಟ್ಯಾಂಕರ್‌ಗಳಿಗೆ ನೀರು ತುಂಬಿಸಲು ಬಾಡಿಗೆ ಜನರೇಟರ್‌ಗಳನ್ನು ಪಡೆಯಬೇಕು. ಅದರ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ನೋಡಲ್ ಅಧಿಕಾರಿಗಳು ವಾರಕ್ಕೊಮ್ಮೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಸಿಇಒಗೆ ವರದಿ ಸಲ್ಲಿಸಬೇಕು. ಗೋವುಗಳು ಕಸಾಯಿಖಾನೆಗೆ ಹೋಗುವುದನ್ನು ಪೊಲೀಸರು ತಡೆಯಬೇಕು. ಈ ಬಗ್ಗೆ ತಮಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.ಪಿಎಲ್‌ಡಿ ಬ್ಯಾಂಕ್ ಅಧಿಕಾರಿಗಳು ಸಾಲಕ್ಕಾಗಿ ರೈತರ ಯಾವುದೇ ವಸ್ತುಗಳನ್ನು ಜಫ್ತಿ ಮಾಡಬಾರದು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿಯಮಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.