ಗುರುವಾರ , ಮೇ 13, 2021
19 °C

ಬರ: ನಿರಂತರ ನಿಗಾ ವಹಿಸಲು ಸಿಎಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬರ ನಿರ್ವಹಣೆ ಕಾರ್ಯದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ಮಾಡುತ್ತಿರುವ ಕೆಲಸ ಕಾರ್ಯಗಳು ತಮಗೆ ತೃಪ್ತಿ ತಂದಿದೆಯಾದರೂ ಬೇಸಿಗೆಯ ಉಳಿದ ಅವಧಿಯ ಬರ ನೀಗಲು ಸತತ ನಿಗಾ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಬರ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬರ ಕಾಮಗಾರಿಗಳ ಹೊಣೆಗಾರಿಕೆ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿ ಸತತ ಜನ ಸಂಪರ್ಕದಲ್ಲಿದ್ದು, ಕಾರ್ಯ ನಿರ್ವಹಿಸ ಬೇಕು ಎಂದರು.  ಕೇಂದ್ರ ಸರ್ಕಾರದ ನಿಸರ್ಗ ಪ್ರಕೋಪ ನಿಧಿ ಅನುದಾನದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶ ವಿಲ್ಲ. ಆದ್ದರಿಂದ ರಾಜ್ಯ ಸರ್ಕಾರದಿಂದ ರಾಜ್ಯದಾದ್ಯಂತ ಬರ ಪ್ರದೇಶದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆಯಿಸಲು 45 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.ಇದರಲ್ಲಿ ಪ್ರತಿ ತಾಲ್ಲೂಕಿಗೆ 30 ಲಕ್ಷ ರೂಪಾಯಿ ಲಭ್ಯವಾಗಲಿದೆ.  ಈ ಹಣದಲ್ಲಿ ಹೊಸ ಕೊಳವೆ ಬಾವಿ ಕೊರೆದು ಜನರಿಗೆ ಸಕಾಲಕ್ಕೆ ನೀರು ಪೂರೈಸಬೇಕು ಎಂದು ಸೂಚಿಸಿದರು.ತಾಲ್ಲೂಕು ಮಟ್ಟದ ಟಾಸ್ಕ್‌ಫೋರ್ಸ್‌ನಲ್ಲಿ ತಹಶೀಲ್ದಾರರು ಕಾಲಕಾಲಕ್ಕೆ ಶಾಸಕರ ಜತೆ ಸಮಾಲೋಚಿಸಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಪ್ರತಿ ಮೂರು ಗ್ರಾಮ ಪಂಚಾಯತಿ ಗೊಬ್ಬರಂತೆ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಯನ್ನು ನೇಮಿಸಿ ರುವುದು ಶ್ಲಾಘನೀಯ. ಗ್ರಾಮ ಮಟ್ಟದಿಂದ ಹಿಡಿದು ತಾಲ್ಲೂಕು ಹಾಗೂ  ಜಿಲ್ಲಾ ಮಟ್ಟದವರೆಗೆ ಬರ ನಿರ್ವಹಣೆ ಕಾರ್ಯ ನಿರಂತರವಾಗಿದ್ದು, ಸಮನ್ವಯದಿಂದ ಸಾಗಬೇಕು ಎಂದು ಸಲಹೆ ಮಾಡಿದರು.ವಿದ್ಯುತ್ ಅಥವಾ ನೀರು ಪೂರೈಕೆಯಂತಹ ಕಾಮಗಾರಿಗಳಲ್ಲಿ ಎರಡರಿಂದ ಮೂರು ಇಲಾಖೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ  ಈ ಇಲಾಖೆಗಳಲ್ಲಿ ಸಮನ್ವಯದ ಅಗತ್ಯವಿದೆ. ಯಾವುದೇ ಹಂತದಲ್ಲಿ ಸಮನ್ವಯ ಕೊರತೆಯಿಂದ ಬಂದ ಕೆಲಸ ಕಾರ್ಯಗಳು ವಿಳಂಬವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡು ವುದಿಲ್ಲ ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೆಸ್ಕಾಂ ಅಧಿಕಾರಿಗಳು ಜಿಲ್ಲಾ ಮಟ್ಟದ ಸಭೆಗಳಿಗೆ ಹಾಜರಾಗದೇ ಕರ್ತವ್ಯ ಲೋಪವೆಸಗುತ್ತಿರುವುದು ಮಾಮೂಲಾಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರ್ರಿಯಿಸಿದ ಮುಖ್ಯಮಂತ್ರಿಗಳು ವಿದ್ಯುತ್ ಪೂರೈಕೆಯಂತಹ ಮಹತ್ವದ ಕಾರ್ಯನಿರ್ವಹಿಸುವ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ದಕ್ಷತೆ ತೋರಬೇಕು ಎಂದು ಸಲಹೆ ನೀಡಿದರು. ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದ ಹೆಸ್ಕಾಂನ ಕಾರ್ಯಪಾಲಕ ಅಧಿಕಾರಿಗಳು ಜಿಲ್ಲೆಯ 7 ಕಡೆಗಳಲ್ಲಿ 63 ಕೆ.ವಿ ಯ ಹಾಗೂ 100 ಕೆ.ವಿಯ ಟ್ರಾನ್ಸ್‌ಫಾರ್ಮರ್‌ಗಳು ಎಲ್ಲೆಲ್ಲಿ ಸುಟ್ಟಿವೆ ಎಂಬುದರರ ಬಗ್ಗೆ ನಿಖರ ಮಾಹಿತಿ ನೀಡದಾದಾಗ ಮುಖ್ಯ ಮಂತ್ರಿಗಳು, ಅಧಿಕಾರಿಗಳು ಯಾರೇ ಆಗಲಿ ಮುಖ್ಯಮಂತ್ರಿಗಳ ಸಭೆಗೆ ಬರಬೇಕಾದರೆ ಅಗತ್ಯ ಮಾಹಿತಿ ತರಬೇಕು. ಕನಿಷ್ಠ ಮತ್ತು ಅಗತ್ಯ ಮಾಹಿತಿ ಇಲ್ಲವೆಂದರೆ ಹೇಗೆ?  ಎಂದು ಖಾರವಾಗಿ ಪ್ರಶ್ನಿಸಿದರು.ಸಭೆಯಲ್ಲಿ ಭಾಗವಹಿಸದಿರುವ ಹೆಸ್ಕಾಂನ ತಾಲ್ಲೂಕು ಮಟ್ಟದ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.  ಸಭೆಗೆ ಹಾಜರಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಕಾರಣ ಕೇಳಿ ನೋಟೀಸು ಜಾರಿ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸ್ಥಾವರಗಳಿಗೆ ನೀರು ಒದಗಿಸಲು ವಿದ್ಯುತ್ ಪೂರೈಕೆಗೆ ಅಗತ್ಯವಿರುವ ಟಾನ್ಸ್‌ಫಾರ್ಮರ್‌ಗಳ ಪೂರೈಕೆ ಸಂಬಂಧದಲ್ಲಿ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ತಾವು ಚರ್ಚಿಸಿದ್ದು, ಪ್ರತಿ ಜಿಲ್ಲೆಗೆ 20 ರಿಂದ 30 ಟ್ರಾನ್ಸ್‌ಫಾರ್ಮರ್‌ಗಳು ಸಧ್ಯದಲ್ಲಿಯೇ ಲಭ್ಯವಾಗಲಿವೆ. ಹೆಸ್ಕಾಂ ಅಧಿಕಾರಿಗಳು ಸಕಾಲಕ್ಕೆ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ, ಬರದ ಬೇಗೆಯಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಕುಡಿಯುವ ನೀರು ಸಿಗುವಂತೆ ಕ್ರಮ ಕೈಕೊಳ್ಳಬೇಕು ಎಂದು ಸೂಚಿಸಿದರು. ನಗರ ಪ್ರದೇಶದ ನೀರು ಪೂರೈಕೆ ಕಾಮಗಾರಿಗಳು ಅದು ಮುಖ್ಯವಾಗಿ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಜಿಲ್ಲಾಧಿಕಾರಿಗಳು ಮೂರು ದಿನಗಳೊಳಗಾಗಿ ನಗರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ನಗರದ ಕುಡಿಯುವ ನೀರಿನ ಕಾಮಗಾರಿಗಾಗಿ ಸರ್ಕಾರ ನೀಡಿರುವ 15 ಕೋಟಿ ರೂಪಾಯಿ ಗಳಿಗೆ ಅಂದಾಜು ಪತ್ರಿಕೆ ತಯಾರಿಸಿ ಕೂಡಲೇ ಸರ್ಕಾರಕ್ಕೆ  ಕಳುಹಿಸುವಂತೆ ಮುಖ್ಯಮಂತ್ರಿ ಸದಾನಂದ  ಗೌಡ ಅವರು ಸೂಚಿಸಿದರು.ಬರ ಘೋಷಣೆಯಾಗಿರುವ ಪ್ರದೇಶಗಳಲ್ಲಿನ ಜನರಿಗೆ ಹೊಸ ಪಡಿತರ ಚೀಟಿ ಇದುವರೆಗೆ ನೀಡಿಲ್ಲದರೆ, ಅವರ ಹಳೇ ಪಡಿತರ ಚೀಟಿಯನ್ನೇ ಪರಿಗಣಿಸಿ ತುರ್ತು ಸಂದರ್ಭವೆಂದು ಪಡಿತರ ನೀಡಲು ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿಗಳು ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೇಸಿಗೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸದಂತೆ ನೋಡಿ ಕೊಳ್ಳಲು ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಔಷಧಗಳೊಂದಿಗೆ  ಪರಿಸ್ಥಿತಿ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.

 

ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರು ಜಿಲ್ಲೆಯ ಬರ ಸಂಬಂಧದ ಮಾಹಿತಿ ಮತ್ತು ಕೈಕೊಂಡ ಕ್ರಮಗಳನ್ನು ವಿವರಿಸಿ, ಭೂ ಕಂದಾಯ ಮನ್ನಾಕ್ಕೆ ಮಾಹಿತಿ ಸಿದ್ಧಪಡಿಸಲಾಗಿದೆ. ಪ್ಲೋರೈಡ್‌ಯುಕ್ತ ನೀರಿರುವ ಗ್ರಾಮಗಳನ್ನು ಗುರುತಿಸಿ ಜಲ ಶುದ್ಧೀಕರಣ ಘಟಕಗಳನ್ನು 40 ಕಡೆಗಳಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.  

ಜಿಲ್ಲಾ ಪಂಚಾಯಿತಿ ಸಿಇಓ ವೀರಣ್ಣ ತುರಮರಿ ಉದ್ಯೋಗ ಖಾತ್ರಿ ಮಾಹಿತಿ ನೀಡಿದರು.ಸಚಿವ ಎಂ.ಗೋವಿಂದಕಾರಜೋಳ, ಶಾಸಕರಾದ ಸಿ.ಸಿ. ಪಾಟೀಲ, ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ , ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮದನಗೋಪಾಲ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ಉಪಾಧ್ಯಕ್ಷೆ  ಶಾಂತವ್ವ ದಂಡಿನ , ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರೇಗೌಡ ಮತ್ತಿತರು ಹಾಜರಿದ್ದರು.ಕೆರೆ ಪರಿಶೀಲನೆ

ಸವಣೂರ: ನಗರದ ಕೆರೆಯ ಅಂಗಳ ದಲ್ಲಿ ಮಂಗಳವಾರ ಬರ ಪರಿಶೀಲನೆ ಎಂಬ `ದಂಡ~ಯಾತ್ರೆ  ಕೈಗೊಂಡ ರಾಜ್ಯ ಸರ್ಕಾರದ ಸಚಿವರ ತಂಡ, ಕಾಟಾಚಾರದ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಿತು. ಅಧಿಕಾರಿಗಳ ಒಂದು ಕೆಲಸದ ದಿನವನ್ನೂ ಹಾಳುಗೆಡವಿತು.ಸಚಿವ ಜಗದೀಶ ಶೆಟ್ಟರ, ಸಿ.ಎಂ. ಉದಾಸಿ ನೇತೃತ್ವದ ತಂಡ ನೇರವಾಗಿ ಮೋತಿ ತಲಾಬ ಕೆರೆಯ ಅಂಗಳಕ್ಕೆ ಭೇಟಿ ನೀಡಿತು. ಅಧಿಕಾರಿಗಳೊಂದಿಗೆ ಅನುದಾನದ ಆಯ- ವ್ಯಯದ ಬಗ್ಗೆ ವಿಚಾರಿಸಿಕೊಂಡು, ಐದು ನಿಮಿಷಗಳಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸಿತು.ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಬರಲಾಗದೆ-ಬಿಡಲಾಗದೇ ಬಂದಂತೆ ಇದ್ದ ತಂಡಕ್ಕೆ, ಸಮಯದ ಬರವೇ ಮುಖ್ಯವಾಗಿತ್ತು. ಅಧ್ಯಯನ ತಂಡ ಸವಣೂರಿಗೆ ಬರಲಿಕ್ಕಿಲ್ಲ ಎಂಬ ಅಧಿ ಕಾರಿಗಳ ನಂಬಿಕೆಯನ್ನು ಹುಸಿಗೊಳಿ ಸಿತು. ಗ್ರಾಮಗಳ ಭೇಟಿ ಕಾರ್ಯ ಕ್ರಮವನ್ನು ಕೈ ಬಿಟ್ಟಿತು.  ಸಂಪೂರ್ಣ ಕ್ಷೇತ್ರದ ಅಧ್ಯಯನಕ್ಕೆ ಮುಂಚಿತ ವಾಗಿಯೇ ಕೇವಲ ಒಂದು ಗಂಟೆಯ ಕಾಲಾವಧಿ ನಿಗದಿಯಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.