ಮಂಗಳವಾರ, ಮೇ 18, 2021
24 °C

ಬರ: ಪ್ರತಿ ಕ್ಷೇತ್ರಕ್ಕೂ 30 ಲಕ್ಷ - ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬರಪೀಡಿತ ಪ್ರದೇಶಳಲ್ಲಿ ಕುಡಿಯುವ ನೀರು ಪೂರೈಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ 30 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ತಲಾ 30 ಲಕ್ಷ ರೂ. ಬಿಡುಗಡೆ ಮಾಡಲಾಗುವುದು~ ಎಂದು ಸಿಎಂ ಡಿ.ವಿ.ಸದಾನಂದ ಗೌಡ ತಿಳಿಸಿದರು.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರ ತಂಡಗಳ ಜೊತೆ ಗುರುವಾರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಸಭೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಬರ ಪರಿಸ್ಥಿತಿ ಎದುರಿಸುತ್ತಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಲಾ ರೂ 30 ಲಕ್ಷ ಹೆಚ್ಚುವರಿ ಅನುದಾನ ಬಿಡುಗಡೆಗೆ ತಕ್ಷಣವೇ ಆದೇಶ ಹೊರಡಿಸಲಾಗುವುದು. ಹೊಸ ಕೊಳವೆಬಾವಿ ಕೊರೆಯುವುದು ಮತ್ತು ನೀರು ಪೂರೈಕೆ ಪಂಪ್‌ಗಳ ದುರಸ್ತಿಗೆ ಈ ಹಣ ಒದಗಿಸಲಾಗುವುದು~ ಎಂದರು.`ಬರದ ಪರಿಣಾಮ ಮೇವು ಸಂಗ್ರಹ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇವು ಸಾಗಣೆ ವೆಚ್ಚ ಸೇರಿದಂತೆ ಶೇ 50ರಷ್ಟು ಸಹಾಯಧನ ಒದಗಿಸಲಾಗುವುದು. ಪಶು ಆಹಾರಕ್ಕೂ ಸಹಾಯಧನ ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು~ ಎಂದರು.ಇದೇ 19ರಂದು ನಡೆಯುವ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ನಂತರ ಪ್ರಧಾನಮಂತ್ರಿಯವರ ಸಚಿವಾಲಯವನ್ನು ಸಂಪರ್ಕಿಸಿ ದಿನಾಂಕ ನಿಗದಿಪಡಿಸಿಕೊಂಡು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲಾಗುವುದು. ಬರ ಪರಿಹಾರಕ್ಕಾಗಿ 2,606 ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.

 

ಕೇಂದ್ರ ಸರ್ಕಾರ ಈವರೆಗೆ ರೂ 182 ಕೋಟಿ ಬಿಡುಗಡೆ ಮಾಡಿದೆ. ಸರ್ವಪಕ್ಷ ನಿಯೋಗದಲ್ಲಿ ತೆರಳಿದ ಸಂದರ್ಭದಲ್ಲಿ ಇತ್ತೀಚಿನ ಮಾಹಿತಿ ಆಧರಿಸಿ ಪರಿಷ್ಕೃತ ಮನವಿ ಸಲ್ಲಿಸಲಾಗುವುದು ಎಂದರು. ಸರ್ವ ಪಕ್ಷ ನಿಯೋಗವನ್ನು ಇದೇ 21 ಅಥವಾ 23ರಂದು ದೆಹಲಿಗೆ ಕರೆದೊಯ್ಯುವ ಇಂಗಿತ ಅವರು ವ್ಯಕ್ತಪಡಿಸಿದ್ದಾರೆ.`ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶದ ಜನರಿಗೆ ಕುಡಿಯುವ ನೀರು ಪೂರೈಕೆಗೆ ಕೊಯ್ನಾ ಅಣೆಕಟ್ಟೆಯಿಂದ ನೀರು ಒದಗಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ ಕೋರಿಕೆಗೆ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. 1.9 ಟಿಎಂಸಿ ನೀರು ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರ ಒಪ್ಪಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರನ್ನು ಅಭಿನಂದಿಸುತ್ತೇನೆ~ ಎಂದರು.ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತು ಎಸ್.ಸುರೇಶ್‌ಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಚಿವರು, ಬರಪೀಡಿತ ಪ್ರದೇಶಗಳಲ್ಲಿನ ವಾಸ್ತವಿಕ ಚಿತ್ರಣ ಕುರಿತು ವರದಿ ಸಲ್ಲಿಸಿದರು. ವಾರದ ಬಳಿಕ ಮತ್ತೆ ಅಂತಿಮ ವರದಿ ಸಲ್ಲಿಸುವುದಾಗಿ  ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.